ಪಕ್ಷದ ಚಿಹ್ನೆಗಾಗಿ ಎಐಎಡಿಎಂಕೆ ಎರಡು ಬಣಗಳ ಪೈಪೋಟಿ

Update: 2017-03-23 05:28 GMT

  ಚೆನ್ನೈ, ಮಾ.23: ಪಕ್ಷದ ಚಿಹ್ನೆಯನ್ನು ತಮ್ಮದಾಗಿಸಿಕೊಳ್ಳಲು ಎಐಎಡಿಎಂಕೆಯ ಎರಡು ಬಣಗಳು ಪೈಪೋಟಿಯಲ್ಲಿ ತೊಡಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ತಟಸ್ಥ ನಿಲುವು ತಾಳಿದೆ. ಆಯೋಗದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಎರಡು ಬಣಗಳು ‘ಎರಡು ಎಲೆ’ಗಳಿರುವ ಪಕ್ಷದ ಚಿಹ್ನೆ ಹಿಂಪಡೆಯಲು ಎಲ್ಲ ಪ್ರಯತ್ನ ನಡೆಸಲು ನಿರ್ಧರಿಸಿವೆ.

‘‘ನಾನು ಚುನಾವಣಾ ಆಯೋಗದಿಂದ ಇಂತಹ ತೀರ್ಮಾನವನ್ನು ನಿರೀಕ್ಷಿಸಿರಲಿಲ್ಲ. ನಾನು ಆರ್‌ಕೆ ನಗರ ಉಪ ಚುನಾವಣೆಯನ್ನು ಗೆದ್ದೇ ತೀರುತ್ತೇನೆ. ಈ ಮೂಲಕ ಚುನಾವಣಾ ಚಿಹ್ನೆಯನ್ನು ಹಿಂದಕ್ಕೆ ಪಡೆಯುತ್ತೇನೆ’’ ಎಂದು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಹೇಳಿದ್ದಾರೆ.

‘‘ಚುನಾವಣಾ ಆಯೋಗಕ್ಕೆ ಬಲವಾದ ಸಾಕ್ಷಾಧಾರಗಳನ್ನು ಸಲ್ಲಿಸಿದರೂ ತನ್ನ ಪಕ್ಷಕ್ಕೆ ಚಿಹ್ನೆ ಪಡೆಯಲು ಸಾಧ್ಯವಾಗದೇ ಇರುವುದಕ್ಕೆ ತುಂಬಾ ಬೇಸರವಾಗಿದೆ. ನಾವು ಪಕ್ಷದ ಚಿಹ್ನೆ ಪಡೆದೇ ತೀರುತ್ತೇವೆ’’ ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹೇಳಿದ್ದಾರೆ.

  ‘‘ನಾವು ಎಲ್ಲ ಸಂಬಂಧಿತ ದಾಖಲೆ ಚುನಾವಣಾ ಆಯೋಗಕ್ಕೆ ನೀಡಿದ್ದರೂ ಚುನಾವಣಾ ಸಮಿತಿಯಿಂದ ಇಂತಹ ತೀರ್ಪು ನಿರೀಕ್ಷಿಸಿರಲಿಲ್ಲ. ಪಕ್ಷದ ಕಾರ್ಯಕರ್ತರು ಈ ಹಿಂದೆಯೂ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದರು. ನಾವು ಒಗ್ಗಟ್ಟಾಗಿದ್ದು, ಉಪ ಚುನಾವಣೆಯನ್ನು ಗೆಲ್ಲುತ್ತೇವೆ. ಈ ಮೂಲಕ ಪಕ್ಷದ ಎರಡು ಎಲೆಗಳಿರುವ ಚಿಹ್ನೆಯನ್ನು ವಾಪಸ್ ಪಡೆಯುತ್ತೇವೆ. ಅಮ್ಮಾ(ಜೆ.ಜಯಲಲಿತಾ) ಬೆಂಬಲಿಗರು ನಮ್ಮ ಜೊತೆಗಿದ್ದಾರೆ. ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ’’ ಎಂದು ಜೈಲುಪಾಲಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾರ ಅಳಿಯ ದಿನಕರನ್ ಹೇಳಿದ್ದಾರೆ.

 ಓ. ಪನ್ನೀರ್ ಸೆಲ್ವಂ ಬಣ ತಮಗೇ ಪಕ್ಷದ ಚಿಹ್ನೆ ನೀಡಬೇಕೆಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ ಹಿನ್ನೆಲೆಯಲ್ಲಿ ಚುನಾವಣಾ ಕಮಿಶನ್ ಯಾವ ಬಣಕ್ಕೂ ಚಿಹ್ನೆಯನ್ನು ನೀಡದೇ ತಟಸ್ಥ ನಿಲುವು ತಾಳಿದೆ.

ಫೆ.7 ರಂದು ಶಶಿಕಲಾ ವಿರುದ್ಧ ಬಂಡಾಯ ಎದ್ದಿರುವ ಪನ್ನೀರ್‌ಸೆಲ್ವಂ ಹಾಗೂ ಅವರ ಕೆಲವು ಬೆಂಬಲಿಗರನ್ನು ಎಐಎಡಿಎಂಕೆಯಿಂದ ಶಶಿಕಲಾ ಉಚ್ಚಾಟಿಸಿದ್ದರು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ಆಯ್ಕೆಯನ್ನು ಚುನಾವಣಾ ಆಯೋಗದ ಮುಂದೆ ಪನ್ನೀರ್ ಸೆಲ್ವಂ ಬಣ ಪ್ರಶ್ನಿಸಿತ್ತು.

ಸೆಲ್ವಂ ಬಣ ಎಪ್ರಿಲ್ 12 ರಂದು ಆರ್.ಕೆ. ನಗರ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ದಿನಕರನ್ ವಿರುದ್ಧ ಇ.ಮಧುಸೂದನನ್‌ರನ್ನು ಕಣಕ್ಕಿಳಿಸಿದೆ. ಮಾಜಿ ಸಿಎಂ ಜಯಲಲಿತಾ ನಿಧನದ ಬಳಿಕ ಆರ್‌ಕೆ ನಗರ ಕ್ಷೇತ್ರ ತೆರವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News