ಗಟ್ಟಿಮುಟ್ಟು ಪಂಜರದಲಿ ಗರಿಗೆದರಬಹುದೆ ಪಕ್ಷಿ?
ಒಡ್ಡು ಒಡೆದ ಜಲಾಶಯದಂತೆ ಧುಮ್ಮಿಕ್ಕುತ್ತದೆ ಅವರ ಕೋಪ, ಆಕ್ರೋಶ. ಎಲ್ಲ ಇಪ್ಪತ್ತರ ಆಸುಪಾಸಿನ ತರುಣಿಯರು. ಬುದ್ಧಿವಂತಿಕೆಯಿಂದ ಬೆಳಗುವ ಮುಖಗಳು. ಟ್ರೆಂಡಿಯಾಗಿರುವ ಉಡುಗೆ-ತೊಡುಗೆ ತೊಟ್ಟಿದ್ದಾರೆ. ಯೋಚನೆಗಳನ್ನು ಲೀಲಾಜಾಲವಾಗಿ ಮಾತಿಗಿಳಿಸುವ ಸಾಮರ್ಥ್ಯ...ಕೆಲ ವಿನೋದಪ್ರಿಯರು, ಪ್ರಾಣಹೋಗುವಂತಹ ವಿಷಯಗಳ ಆಸುಪಾಸಿನಲ್ಲೇ ಇರುವ ತಮಾಷೆಯನ್ನೂ ಪಟಕ್ಕನೆ ಆಡಿ ಸಭೆಯನ್ನು ನಗಿಸುತ್ತಾರೆ. ಅವರ ಅಡ್ಡ, ಅಸಡ್ಡಾಳ ಯೋಚನೆಗೆ ಭಲೆ ಎಂದುಕೊಳ್ಳುತ್ತಿದ್ದರೂ, ಚರ್ಚೆ ಹೇಗೆ ಮುಕ್ತಾಯಗೊಳ್ಳುತ್ತದೆ ಎಂದು ನಮಗೆ ಗೊತ್ತು. ಯಾವುದೆಲ್ಲ ಅಂಶಗಳು ಮರುಕಳಿಸುತ್ತವೆ, ಅವಕ್ಕೆ ಇರುವ ಸಿದ್ಧ ಉತ್ತರಗಳು ಏನು? ಅದೂ ಗೊತ್ತು. ನಾನು ಹೇಳುತ್ತಿರುವುದು, ಯುವ ವಿದ್ಯಾರ್ಥಿಗಳ ಅದರಲ್ಲೂ ವಿದ್ಯಾರ್ಥಿನಿಯರ ಸ್ವಾತಂತ್ರ್ಯಹರಣ ಕುರಿತ ಮಾಧ್ಯಮ ಚರ್ಚೆ ಬಗ್ಗೆ ಎಂದು ನಿಮಗಾಗಲೇ ಗೊತ್ತಾಗಿರಬೇಕು: ಮುಕ್ತವಾಗಿ ಓಡಾಡಲು, ಪ್ರಾಜೆಕ್ಟ್‌ಗಳಲ್ಲಿ ಸಂಜೆ ದಾಟಿದರೂ ಕೆಲಸ ಮಾಡುತ್ತ ಉಳಿಯಲು, ಹಾಸ್ಟೆಲ್ ಕೋಣೆಗಳಲ್ಲಿ ಬೇಕಾದಷ್ಟು ದೀಪ ಉರಿಸಲು, ಮೊಬೈಲ್‌ನಲ್ಲಿ ಮಾತನಾಡಲು, ಇಂಟರ್‌ನೆಟ್ ಬಳಸಲು ಶಿಸ್ತಿನ ನೆಪದಲ್ಲಿ ಅವರಿಗೆ ಒಡ್ಡಲಾಗುವ ಅಡೆ-ತಡೆಗಳು ಎಷ್ಟು ಕಿರಿಕಿರಿಯವು ಎಂದು ತಿಳಿಯಲು ಅದನ್ನು ಆಲಿಸಬೇಕು.
‘‘ಅಯ್ಯೋ ನಮ್ಮ ಹಾಸ್ಟೆಲ್ ಸೆಕ್ಯುರಿಟಿ ಕುರಿತು ಏನು ಕೇಳ್ತೀರಾ?...ಕಬ್ಬಿಣದ ಹಲವು ಬಾಗಿಲು, ಗ್ರಿಲ್, ಬೀಗ ಇತ್ಯಾದಿ ಒಳಗೊಂಡು, ಒಳ್ಳೇ ಪಂಜರದಂತಿದೆ. ದುಷ್ಕರ್ಮಿಗಳಿಂದ ನಮ್ಮನ್ನು ಕಾಪಾಡಲು ಇರುವ ಇಷ್ಟೆಲ್ಲ ವ್ಯವಸ್ಥೆ, ಅಕಸ್ಮಾತ್ ಭೂಕಂಪ ಆದರೆ, ಬೆಂಕಿ ಅನಾಹುತ ಸಂಭವಿಸಿದರೆ, ಓಡಿ ತಪ್ಪಿಸಿಕೊಳ್ಳಲೂ ಬಲಿಷ್ಠ ತಡೆಯೇ’’ ಎಂದು ಒಬ್ಬ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿನಿ ತನ್ನ ಚಿಂತೆ ಮುಂದಿಟ್ಟಾಗ ಉಳಿದವರು ‘‘ಹೌದಲ್ಲವೇ?’’ ಎಂದು ಹೊಳೆಯಿಸಿಕೊಂಡು ಆಕೆಯನ್ನು ಅನುಮೋದಿಸಿದರು. ಇದರಿಂದ ಸಂಜ್ಞೆ ಪಡೆದ ಮತ್ತೊಬ್ಬ ಹುಡುಗಿ, ‘‘ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ತಾರುಣ್ಯದಲ್ಲಿ ಪಿ.ಜಿ./ಹಾಸ್ಟೆಲ್ ಒಡೆಯರು/ವಾರ್ಡನ್‌ಗಳ ಕಣ್ಗಾವಲಲ್ಲಿ, ವಿವಾಹಿತರಾದ ಮೇಲೆ ಪತಿ ನೀಡುವ ಸುರಕ್ಷೆಯಲ್ಲಿ ನಾವು, ಈ ಯುಗದಲ್ಲೂ ಇರಬೇಕು ಎಂಬ ನಿಬಂಧನೆ ಎಷ್ಟು ಲಜ್ಜೆ ತರುವಂತಹದು’’ ಎಂದು ಮನುವಿನ ಆಣತಿಯನ್ನು ಸೂಕ್ತ ತಿದ್ದುಪಡಿಯೊಂದಿಗೆ ಉಲ್ಲೇಖಿಸಿ ಕಿಡಿ ಕಾರಿದಳು.
ನಂತರ ಅವರೆಲ್ಲ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿನಿಲಯಗಳಲ್ಲಿ ಮುಖಕ್ಕೆ ರಾಚುವ ತಾರತಮ್ಯ ಧೋರಣೆ ಇರುವುದನ್ನು ಕೋಪೋದ್ರಿಕ್ತರಾಗಿ ವಿವರಿಸಿದರು. ಉದ್ಯೋಗ ಗಳಿಸಿಕೊಳ್ಳಲು ಹೆಚ್ಚಿನ ಅರ್ಹತೆ ನೀಡುವ ಕ್ಷೇತ್ರಕಾರ್ಯದಲ್ಲಿ ತೊಡಗಿದ್ದಾಗ ಹಾಸ್ಟೆಲ್ ಸಮಯ ಮೀರಿಹೋಯಿತು, ಆದರೆ ಮರಳಿದ ಮೇಲೆ ಆದದ್ದೇನು ಎಂದು ಹೇಳಿ ಕ್ಷಮೆ ಕೇಳಿದರೂ ಒಳಗೆ ಬಿಟ್ಟುಕೊಳ್ಳದೆ, ರಾತ್ರಿ ಕಳೆಯಲು ಸ್ವಂತ ವ್ಯವಸ್ಥೆ ಮಾಡಿಕೊಳ್ಳುವಂತಹ ಸ್ಥಿತಿಗೆ ತನ್ನನ್ನು ದೂಡಿದರು ಎಂದ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿನಿ ‘‘ಯಾವ ಸೀಮೆ ರಕ್ಷಣೆ ಇದು?’’ ಎಂದಾಗ ಅಪ್ರತಿಭಗೊಳ್ಳುವ ಸರದಿ ವೀಕ್ಷಕರಾಗಿತ್ತು. ‘‘ಹುಡುಗರ ಹಾಸ್ಟೆಲ್‌ನಲ್ಲಿ ನಮಗಿಂತ ಹೆಚ್ಚು ಸಮಯ ಮೊಬೈಲ್ ದೂರವಾಣಿ ಬಳಸಲು, ವೈಫೈ ಸೌಲಭ್ಯ ಹೊಂದಲು ಅವಕಾಶ ಇದೆ; ತಾವು ಯಾವುದಾದರೂ ತುರ್ತು ಸನ್ನಿವೇಶದಲ್ಲಿ ಹಾಗೆ ಮಾಡಿದರೆ, ಕರೆದು ವಿಚಾರಣೆ ನಡೆಸಿ, ಸಾರ್ವಜನಿಕವಾಗಿ ಅವಮಾನಿಸಲಾಗುತ್ತದೆ’’ ಎಂದು ಒಬ್ಬ ವಿದ್ಯಾರ್ಥಿನಿ ವಿವರಿಸಿದಾಗ ಆಕೆ ಅನುಭವಿಸಿದ ಹೀನಾಯ ಸ್ಥಿತಿ ಸಭಿಕರನ್ನು ತಾಕುವಂತಿತ್ತು.
ರಾಮ್‌ಜಾಸ್ ಹೆಸರಿನ ದಿಲ್ಲಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣಕ್ಕೆ, ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಮರ್ ಖಾಲಿದ್ ಎಂಬ ಸಂಶೋಧನಾರ್ಥಿಯನ್ನು ಆಹ್ವಾನಿಸಿದ್ದೇ ನೆಪವಾಗಿ ಎರಡು ಭಿನ್ನ ತಾತ್ವಿಕ ನಿಲುವಿನ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆಯಿತು. ದಿಲ್ಲಿಯ ಬಹುತೇಕ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆ ನಂತರ ಅದನ್ನು ಸೇರಿಕೊಂಡರೂ, ತಮಗೆ ಆ ಹೋರಾಟದಲ್ಲಿ ಭಾಗವಹಿಸಲು ನಿಷೇಧ ಇತ್ತು. ಇದರಿಂದ ತಮ್ಮದು (ಬನಾರಸ್ ಹಿಂದೂ ಯೂನಿವರ್ಸಿಟಿ) ಸಾಕಷ್ಟು ಸಾಂಪ್ರದಾಯಿಕತೆ ಬೆಂಬಲಿಸುವ ವಿಶ್ವವಿದ್ಯಾನಿಲಯ ಎಂಬುದು ಜಾಹೀರಾದಂತೆ ಅಲ್ಲವೇ? ‘ರಾಷ್ಟ್ರೀಯತೆ’ಯ ಹೆಸರು ಹೇಳಿ ವಿಚಾರ ಸ್ವಾತಂತ್ರ್ಯವನ್ನು ಕಸಿಯಬಹುದೇ? ಎಂಬ ಅಳಲಿನಿಂದ ಆರಂಭಗೊಂಡ ಚರ್ಚೆ ಹೀಗೆ ಸಣ್ಣಪುಟ್ಟದು ಸೇರಿದಂತೆ ಯುವತಿಯರ ಮುಕ್ತ ನಡೆ-ನುಡಿ ಹತ್ತಿಕ್ಕುವ ವಾತಾವರಣ ಉಸಿರುಗಟ್ಟಿಸುವಷ್ಟು ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೀಡುಬಿಟ್ಟಿರುವುದನ್ನು ತೆರೆದಿಟ್ಟಿತು.
ತಾವು ಏನು ಮಾತಾಡುತ್ತಿದ್ದೇವೆ ಎಂಬ ಕುರಿತು ವಿದ್ಯಾರ್ಥಿನಿಯರಿಗೆ ಸ್ಪಷ್ಟತೆ ಇತ್ತು. ಕೂದಲಿಗೆ ಕತ್ತರಿ ಹಾಕಕೂಡದು, ಇಂಥ ಉಡುಪು ಧರಿಸಕೂಡದು ಇತ್ಯಾದಿ ನಿಷೇಧಗಳು ತುಂಬಿರುವ ತಮ್ಮ ತಮ್ಮ ಕೌಟುಂಬಿಕ ವಾತಾವರಣದಲ್ಲಿ ಅವೆಲ್ಲವನ್ನೂ ಧಿಕ್ಕರಿಸಿ, ಸಾಂಕೇತಿಕವಾಗಿಯೇ ಆಗಲಿ ತಮ್ಮನ್ನು ತಾವು ಮುಕ್ತಗೊಳಿಸಿ ಕೊಂಡವರಿಗೆ ಸಾರ್ವಜನಿಕವಾಗಿಯೂ ಅಂಥದೊಂದು ಹಿತಕರ ಹವಾಮಾನ ಅತ್ಯಗತ್ಯವಾಗಿ ಬೇಕಾಗಿದೆ. ಅದರ ಕೊರತೆ ಒಬ್ಬ ಸ್ವತಂತ್ರ ದೇಶದ ವಯಸ್ಕ ಪ್ರಜೆ ಆಗಿರುವ ತಮ್ಮ ಅಸ್ತಿತ್ವವನ್ನೇ ಹೇಗೆ ಅಣಕಿಸುತ್ತಿದೆ ಎಂಬ ದುಗುಡ ಕುತ್ತಿಗೆ ತನಕ ತುಂಬಿದೆ. ಮುಕ್ತ ಚಲನವಲನ ಹಗಲಾಗಲೀ, ರಾತ್ರಿ ವೇಳೆಯಲ್ಲಾಗಲೀ ತಮ್ಮ ಓದು, ಸಂಶೋಧನೆ, ಸವಾಲಿನ ವೃತ್ತಿಗಳಿಗೆ ಬೇಕೇಬೇಕು ಎಂಬುದನ್ನು ಅವರು ಚೀರಿ ಹೇಳುತ್ತಿದ್ದಾರೆ. ಆದರೆ, ಸಭೆಯಲ್ಲಿ ಕುಳಿತು ಅವರನ್ನು ಆಲಿಸುವ ಶಿಕ್ಷಕ-ಶಿಕ್ಷಕಿ, ಪ್ರಾಧ್ಯಾಪಕ-ಡೀನ್‌ಗಳದ್ದು ಅದೇ ಹಳೇ ರಾಗ. ‘‘ಕ್ಯಾಂಪಸ್‌ನಿಂದ ಮೂರು ಕಿ.ಮೀ. ದೂರ ಇರುವ ಲೈಬ್ರರಿಗೆ ಹದಿನೇಳು-ಹದಿನೆಂಟು ವರುಷದ ಹುಡುಗಿಯರನ್ನು ರಾತ್ರಿ ವೇಳೆ ಕಳುಹಿಸುವುದು ಹೇಗೆ? ಅವರ ಸುರಕ್ಷೆ ನಮ್ಮ ಜವಾಬ್ದಾರಿಯಲ್ಲವೇ? ಇಲ್ಲೇ ಇರುವ ಗ್ರಂಥಾಲಯದಲ್ಲಿ ಓದಲಿ’’ ಎಂಬ ಸವೆದುಹೋದ ಸಬೂಬು ಒಬ್ಬ ಮೇಡಂನಿಂದ ಬಂತು.
ತಕ್ಷಣ ಮತ್ತೂ ಸವಕಲಾದ ವಸ್ತುಸ್ಥಿತಿ (ಅಂದರೆ ಹುಡುಗಿಯರು ತಡರಾತ್ರಿಯ ತನಕ ಬೀದಿಗಳಲ್ಲಿದ್ದರೆ ಆಗುವ ಅನಾಹುತಗಳು ಎಂದು ಅರ್ಥೈಸಿ ಕೊಳ್ಳಬೇಕು) ಉತ್ತೇಜನಕಾರಿಯಾಗಿಲ್ಲದೇ ಇರುವಾಗ ಕಲ್ಲನ್ನು ಗುದ್ದಿ ಕೈ ನೋಯಿಸಿಕೊಳ್ಳುವ ತರಹ, ದಡ್ಡತನ ಪ್ರದರ್ಶಿಸಬಹುದೆ ಎಂಬ ವಾದ ಚಾಲನೆ ಪಡೆದುಕೊಂಡಿತು. ಆಯಿತಿನ್ನು ಡಿಸ್ಕಷನ್‌ಗೆ ಡೆಡ್ ಎಂಡ್! ಮಹಾತ್ಮ ಗಾಂಧಿ ಗ್ರಹಿಸಿದ ‘‘ನಡು ರಾತ್ರಿಯಲ್ಲೂ ಮಹಿಳೆಯರು ಮುಕ್ತವಾಗಿ ಓಡಾಡುವ ಸಾಧ್ಯತೆ’’ ಈಗಿನ ರಾಜಕೀಯ ನೇತಾರ, ಸಿದ್ಧ-ಪ್ರಸಿದ್ಧ ವಿಚಾರವಂತರೂ ಸೇರಿದಂತೆ ಬಹುತೇಕರಿಂದ ಅನುಮೋದಿಸಲ್ಪಡದೇ ಇರುವುದಂತೂ ಅತ್ಯಂತ ದಾರುಣ, ಬೌದ್ಧಿಕ ದಾರಿದ್ರ್ಯ ಬಿಂಬಿಸುವ ಸಂಗತಿ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ವೇಳೆ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಈ ಜನ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವೆ/ಅಲ್ಲವೆ ಎಂಬ ಚರ್ಚೆಯಾಗಿಸಿ ಹಳಿ ತಪ್ಪಿಸಿದ್ದಂತೂ ಘೋರ. ತಮ್ಮ ಮಗಳೂ ಪಾರ್ಟಿಗೆ ಹೋಗಿದ್ದಳು; ಸುರಕ್ಷಿತವಾಗಿ ಹಿಂದಿರುಗಿದಳು...
ದೌರ್ಜನ್ಯ ನಡೆದ ವೇಳೆ ಹಾಗೂ ಜನರಿಲ್ಲದ ಪರಿಸರ ಮುಖ್ಯವಾಗಿ ಅದಕ್ಕೆ ಕಾರಣವಾಯಿತೇ ಹೊರತು ಬೆಂಗಳೂರು ಮಹಿಳಾಸ್ನೇಹಿ ಅಲ್ಲ ಎಂಬುದರಿಂದಲ್ಲ ಮುಂತಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೆಂಗಳೂರು ಪ್ರೇಮ ಹರಿಯಬಿಟ್ಟವರು ಸಾರ್ವಜನಿಕ ಬುದ್ಧಿಜೀವಿಗಳೂ ಆಗಿದ್ದೊಂದು ದುರದೃಷ್ಟ. ಅಪರಾತ್ರಿಯ ವೇಳೆ ಹುಡುಗರಾಗಲೀ, ಹುಡುಗಿಯರಾಗಲೀ ಸಾಕಷ್ಟು ಸುರಕ್ಷಿತವಾಗಿ ಸಂಚರಿಸಬೇಕು; ಹಾಗಿಲ್ಲದೇ ಹೋದಾಗ, ದರೋಡೆ, ದುರಾಕ್ರಮಣ, ಲೈಂಗಿಕ ದೌರ್ಜನ್ಯಗಳನ್ನು ಆಹ್ವಾನಿಸಿದಂತೆ ಎಂಬ ವಾಸ್ತವವನ್ನು ಮುಂದೆ ಮಾಡಿ, ಪರಿಹಾರೋಪಾಯಗಳ ಕಡೆ ಯೋಚಿಸದೆ ತಟಸ್ಥರಾಗುವುದು ಗೋಸುಂಬೆತನ.
ಪ್ರಸ್ತುತ ನಮ್ಮಲ್ಲಿ ಜಗಮೊಂಡಾಗಿ ಬೇರುಬಿಟ್ಟಿರುವ ಪಿತೃಪ್ರಧಾನ ವ್ಯವಸ್ಥೆಯಲ್ಲಿ ನಿರಪೇಕ್ಷ (ಸಂಪೂರ್ಣ) ಸ್ತ್ರೀ ಸ್ವಾತಂತ್ರ್ಯ ಎಷ್ಟೊಂದು ಅನೂರ್ಜಿತ ಎಂದು ವಿವರಿಸಲು, ‘‘ಗಂಡಸರೇ ತುಂಬಿರುವ ಆ ಬೇಕರಿಗೆ ಹೋಗಿ ಏನಾದರೂ ಕೊಂಡುತರುವುದು ನಿನಗೆ ಸಾಧ್ಯವೇ?’’ ಎಂಬ ಕ್ಷುದ್ರ ಉದಾಹರಣೆಯನ್ನು ಒಮ್ಮೆ ತನ್ನ ಪ್ರಾಧ್ಯಾಪಕರು ಬಳಸಿದ್ದನ್ನು ನನ್ನ ಗೆಳತಿ ತೀವ್ರ ವಿಷಾದದಿಂದ ನೆನಪಿಸಿಕೊಳ್ಳುತ್ತಾಳೆ. ಯಾಕಾಗಬಾರದು? ನಾನು ನೋಡಿದ ಒಂದು ವಿದೇಶಿ ಸಿನೆಮಾದಲ್ಲಿ, ತಡರಾತ್ರಿಯಲ್ಲಿ ಬಸ್ ತಪ್ಪಿಸಿಕೊಂಡ ಒಬ್ಬಂಟಿ ತರುಣಿ, ಜೂಜಿನ ಅಡ್ಡೆ, ಕುಡಿತದ ಸ್ಥಳವೂ ಆಗಿರುವ ಒಂದು ಛತ್ರಕ್ಕೆ ಹೋಗಿ ರೂಮು ಹಿಡಿಯುತ್ತಾಳೆ. ಗಂಡಸರಿಂದ ತುಂಬಿದ್ದ ಆ ಜಾಗದಲ್ಲಿ ಆಕೆ ಅದನ್ನು ಅತ್ಯಂತ ಸ್ವಾಭಾವಿಕವಾಗಿ ಮಾಡುತ್ತಾಳೆ. ಯಾರ ನೋಟ, ಗಮನವೂ ಆಕೆಯನ್ನು ಕಿತ್ತು ತಿನ್ನುವುದಿಲ್ಲ ಎಂದು ಉತ್ಕಂಠಿತಳಾಗಿ ವಿವರಿಸುತ್ತಾಳೆ.
ಮಹಿಳೆಯರ ಕ್ಷೇಮಕ್ಕಾಗಿ ಅವರನ್ನು ಮುಚ್ಚಿಡುವುದು, ಪಂಜರದಲ್ಲಿ ಕೂಡಿಹಾಕುವುದು, ಪುರುಷರು ಬೆಂಕಿಯೆಂದೂ, ಸ್ತ್ರೀಯರು ಬೆಣ್ಣೆಯೆಂದೂ ಹೋಲಿಸುವುದು, ‘‘ಚಾಕು ಸೌತೆಯ ಮೇಲೆ ಬಿದ್ದರೂ, ಇಲ್ಲವೇ ಸೌತೆ ಚಾಕುವಿನ ಮೇಲೆ ಬಿದ್ದರೂ ಹಾನಿ, ಸೌತೆಕಾಯಿಗೇ’’ ಎಂಬ ಮಾರ್ಮಿಕ ವಿವರಣೆ ನೀಡಿ ಬಾಯಿಮುಚ್ಚಿಸುವುದು ಎಷ್ಟೊಂದು ಪುರಾತನ, ಅಶಿಕ್ಷಿತ, ಅನಾಗರಿಕ ಹಾಗೂ ಸಂಕುಚಿತವಾಗಿ ನಮ್ಮ ಹೆಣ್ಣುಮಕ್ಕಳಿಗೆ ಕಾಣುತ್ತದೆ ಎಂಬ ಅರಿವೇ ಇಲ್ಲದೆ ಇಂತಹ ಮಡ್ಡುತನವನ್ನು ಪ್ರಭೃತಿಗಳು ಹೊರಹಾಕುತ್ತಿರುತ್ತಾರೆ. ಜಾಗೃತವಾಗಿರುವ ಲೈಂಗಿಕತೆಯಿಂದ ಸದಾಕಾಲ(?!) ಪೀಡಿತರಾಗಿರುವ, ಹಾಗೂ ಅದರ ಪೂರೈಕೆಗೆ ಯಾವುದಾದರೂ ಮಟ್ಟಕ್ಕೆ ಇಳಿಯುವ ಸ್ಥಿತಿಯಲ್ಲಿ ಕೆಲ ಯುವಕರು ಇರುತ್ತಾರೆ. ಅವರ ಮುಂದೆ ತರುಣಿಯರು ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವುದೇ ಅನಾಹುತಕ್ಕೆ ಕಾರಣ ಎಂದು ವರಲುವವರನ್ನು ಯುವತಿಯರು ಹಾಗಿರಲಿ, ಯುವಕರು ಧಿಗ್ಗನೆದ್ದು ಸುಮ್ಮನಿರಿಸಬೇಕು; ಅಷ್ಟು ಆಘಾತಕಾರಿಯಾಗಿದೆ, ಅವರ ಈ ಆದಿಮ ಸಿದ್ಧಾಂತ. ಬದಲಾಗಿ, ತನ್ನ ಈ ಕ್ಷಣಿಕ ವರ್ತನೆ ಭವಿಷ್ಯಕ್ಕೆ ಎಷ್ಟು ಮಾರಕ, ಸುತ್ತಲಿನ ನಾಗರಿಕ ಪರಿಸರ, ಕಾನೂನು-ಕಟ್ಟುಪಾಡುಗಳನ್ನು ಅವಗಣಿಸಿದರೆ ಆಗುವ ಶಿಕ್ಷೆ, ಮರಳಿ ಬರಲಾಗದ ಪಾತಾಳಕ್ಕೆ ತಾನು ಇಳಿಯುವುದು ಇವೆಲ್ಲ ಅಪರಾಧಿಯ ಯೋಚನೆಯ ಭಾಗವಾಗಲು ಏನು ಮಾಡಬೇಕು ಎಂಬ ಕಡೆ ಅವರು ಗಮನ ಕೇಂದ್ರೀಕರಿಸಿದರೆ ಒಳಿತು. ನಿಸರ್ಗದ ಚಿತಾವಣೆ ಇದು ಎಂದು ಪ್ರಕೃತಿಯನ್ನೂ ವಾದಕ್ಕೆ ಎಳತರುವವರನ್ನು ಕಾಡುಪಾಲು ಮಾಡಿದರಷ್ಟೇ ಚಿಂತನೆ ಸ್ವಸ್ಥವಾಗಿ ನಡೆಯಲು ಸಾಧ್ಯ.
ಅದೆಷ್ಟೇ ಚಿಂತಿಸಿ, ಆಯೋಗ ರಚಿಸಿ, ವರದಿ ತಯಾರುಮಾಡಿ, ಕಾನೂನು ಕಠಿಣಗೊಳಿಸಿದರೂ ಹೆಣ್ಣಿನ ಮೇಲೆ ಅಪರಾಧಗಳು ಘಟಿಸುತ್ತವೆ. ಕಾದುಕೊಂಡಿದ್ದಂತೆ, ಮೇಲೆ ಹೇಳಿದಂತಹ ಪ್ರತಿಗಾಮಿ ಧೋರಣೆಗಳು ಆಗೆಲ್ಲ ಬಾಲ ಬಿಚ್ಚುತ್ತಿರುತ್ತವೆ. ತರುಣಿಯರೂ ಅಷ್ಟೇ ತ್ವರಿತವಾಗಿ, ತೀವ್ರತೆಯಿಂದ ಇವುಗಳಿಗೆ ಸಿಡಿಯುತ್ತಾರೆ. ಪಾಲಕರು, ಸಹೋದರರು, ಇನ್ನಿತರ ಪುರುಷ ಸಂಬಂಧಿಗಳು, ವಿಚಾರವಾದಿ ಗೆಳೆಯರು, ಗಂಡು ಬಾಸ್ ಇತ್ಯಾದಿ ಹತ್ತಿರದ ವರ್ತುಲದವರಿರಲಿ ಅಥವಾ ಹೊರ ಆವರಣದ ಪೊಲೀಸ್ ಅಧಿಕಾರಿ, ರಾಜಕೀಯ ನೇತಾರ, ಧಾರ್ಮಿಕ ಗುರು ಮುಂತಾದವರಾಗಿರಲಿ... ಈ ಬಗೆಯ ವಿಷಕಾರಿ ಯೋಚನೆ ಪ್ರಕಟಗೊಂಡಾಗಲೆಲ್ಲ ಮಿಂಚಿನ ವೇಗದಲ್ಲಿ ಸಂಘಟಿತರಾಗಿ ಪ್ರತಿಭಟಿಸುತ್ತಾರೆ. ಮಾಧ್ಯಮಗಳಲ್ಲಿ ಬಿರುಗಾಳಿ ಏಳುತ್ತದೆ.
ನಿರಂತರ, ವೈಯಕ್ತಿಕ ನೆಲೆಯ, ಆದರೆ ಸಾರ್ವಜನಿಕವಾಗಿ ಜಾಗೃತಿ ವಿಸ್ತರಿಸುವ, ಖಾಸಗಿಯಾದ ಹೋರಾಟಕ್ಕೆ ಇವೆಲ್ಲ ಸಹಾಯಕ. ಸಂಕ್ರಮಣ ಸ್ಥಿತಿಯಲ್ಲಿರುವ ಗಂಡು-ಹೆಣ್ಣಿನ ಸಂಬಂಧ, ಸಾರ್ವಜನಿಕ ವಾಗಿ ಅದರ ಅಭಿವ್ಯಕ್ತಿ ಇತ್ಯಾದಿ ಸಂಕೀರ್ಣ ವಿಷಯಗಳಲ್ಲಿ ರಾಜ್ಯಾಡಳಿತ ಅಥವಾ ರಾಜ್ಯ ಅತೀ ಉತ್ಸಾಹ ತೋರಿದರೆ ಆಭಾಸ ಅಡಿಗಡಿಗೆ ಎದುರಾಗ ಬಹುದು. ಖಾಸಗಿತನ ಕಾಪಾಡಿಕೊಳ್ಳುವ ಮೂಲಭೂತ ಸಂಕಷ್ಟ ಪ್ರಜೆಗಳಿಗೆ ಎದುರಾಗಬಹುದು...ಇದೆಲ್ಲ ನೆನಪಾಗುತ್ತಿರುವುದಕ್ಕೆ ಕಾರಣ, ಆ್ಯಂಟಿ ರೋಮಿಯೋ ಸ್ಕ್ವಾಡ್ ಎಂಬ ಉತ್ತರ ಪ್ರದೇಶದ ನೂತನ ಅನ್ವೇಷಣೆ! ಶೇಕ್‌ಸ್ಪಿಯರ್ ಸೃಷ್ಟಿ, ಪಾಪದ ಅಮರ ಪ್ರೇಮಿ ರೋಮಿಯೋ ಹೆಸರ್ಯಾಕೆ ಇದಕ್ಕೆ ಎಂದ್ಯಾರೋ ಬಾಯಿಗೆ ಕೈ ಅಡ್ಡ ಹಿಡಿದು ನುಡಿದಿದ್ದಾರೆ! ಹೌದಲ್ಲವೇ?