ಸಿಬಿಇಸಿಗೆ ಮರುನಾಮಕರಣ

Update: 2017-03-25 15:54 GMT

ಹೊಸದಿಲ್ಲಿ,ಮಾ.25: ಸರಕು ಹಾಗೂ ಸೇವಾತೆರಿಗೆ (ಜಿಎಸ್‌ಟಿ) ಜುಲೈ 1ರಿಂದ ಜಾರಿಯಾಗುವುದಕ್ಕೆ ಪೂರ್ವಭಾವಿಯಾಗಿ, ಪರೋಕ್ಷ ತೆರಿಗೆಗಳ ಸರ್ವೋನ್ನತ ನೀತಿ ನಿರೂಪಣಾ ಸಂಸ್ಥೆಯಾದ ಸಿಬಿಇಸಿಯನ್ನು ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಎಂದು ಮರುನಾಮಕರಣಗೊಳಿಸಲಾಗಿದೆ.

‘‘ಕೇಂದ್ರೀಯ ಅಬಕಾರಿ ಹಾಗೂ ಕಸ್ಟಮ್ಸ್ (ಸಿಬಿಇಸಿ) ಮಂಡಳಿಯನ್ನು ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಎಂದು ಮರುನಾಮಕರಣಗೊಳಿಸಿರುವುದಾಗಿ ವಿತ್ತಸಚಿವಾಲಯವು ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಜಿಎಸ್‌ಟಿಗೆ ಸಂಬಂಧಿಸಿ ಕೇಂದ್ರ ಸರಕಾರವು ನೀತಿಗಳನ್ನು ರೂಪಿಸುವಲ್ಲಿ ಸಿಬಿಐಸಿ ನೆರವಾಗಲಿದೆ ಹಾಗೂ ಜಿಎಸ್‌ಟಿ ಜಾರಿಯ ಮೇಲ್ವಿಚಾರಣೆ ವಹಿಸಲಿದೆಯೆಂದು ಹೇಳಿಕೆ ತಿಳಿಸಿದೆ. ಕಪ್ಪು ಹಣ ಹಾಗೂ ತೆರಿಗೆ ವಂಚನೆಯ ವಿರುದ್ಧ ಕೇಂದ್ರ ಸರಕಾರ ನಡೆಸುತ್ತಿರುವ ಹೋರಾಟದಲ್ಲಿ ಸಿಬಿಇಸಿಯು ಪ್ರಮುಖ ದಳವಾಗಿ ಕಾರ್ಯನಿರ್ವಹಿಸಲಿದೆಯೆಂದು

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಿಎಸ್‌ಟಿ ತೆರಿಗೆ ಸುಧಾರಣೆಯು ತೆರಿಗೆ ವಂಚನೆಗೆ ಕಡಿವಾಣ ಹಾಕುವ ಹಾಗೂ ಸಾಮಾಗ್ರಿಗಳು ಕಡಿಮೆ ದರದಲ್ಲಿ ದೊರೆಯುವಂತೆ ಮಾಡಲಿದ್ದು, ದೇಶದ ಈಗಿನ ಜಿಡಿಪಿ ಬೆಳವಣಿಗೆಯನ್ನು ಶೇ.2ರಷ್ಟು ಅಧಿಕಗೊಳಿಸುವುದೆಂದು ನಿರೀಕ್ಷಿಸಲಾಗಿದೆ. ಜಿಎಸ್‌ಟಿ ಜಾರಿಗೊಂಡ ಬಳಿಕ ಅಬಕಾರಿ, ಸೇವಾ ತೆರಿಗೆ, ವ್ಯಾಟ್ ಹಾಗೂ ಇತರ ಸ್ಥಳೀಯ ತೆರಿಗೆಗಳು ಏಕೀಕೃತಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News