ಬೆಂಗಳೂರು ಗರಿಷ್ಠ ಮರೆಗುಳಿ ನಗರ: ಸಮೀಕ್ಷೆಯ ವರದಿಯಲ್ಲಿ ಉಲ್ಲೇಖ
ಕೋಲ್ಕತಾ, ಎ.1: ಬೆಂಗಳೂರು ಅತ್ಯಂತ ಹೆಚ್ಚು ಮರೆಗುಳಿ ನಗರ ಹಾಗೂ ಕೋಲ್ಕತಾ ಅತೀ ಕಡಿಮೆ ಮರೆಗುಳಿ ನಗರ ಎಂದು ಉಬೆರ್ ಟ್ಯಾಕ್ಸಿ ಸರ್ವಿಸ್ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ದೇಶದಲ್ಲಿ ಉಬೆರ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆಗಿಂದಾಗ್ಗೆ ಕಳೆದುಹೋಗುವ ಮತ್ತು ವಿಸ್ಮಯಕಾರಿಯಾಗಿ ದೊರೆತ ವಸ್ತುಗಳ ಬಗ್ಗೆ ವಿವರ ಹೊಂದಿರುವ ಸೂಚಕ ಪಟ್ಟಿಯೊಂದನ್ನು ಉಬೆರ್ ಸಂಸ್ಥೆ ಸಿದ್ದಪಡಿಸಿದೆ.
ಶನಿವಾರ, ಶುಕ್ರವಾರ ಮತ್ತು ರವಿವಾರ ತಾವು ಪ್ರಯಾಣದ ವೇಳೆ ವಸ್ತುಗಳನ್ನು ಕಳೆದುಕೊಳ್ಳುವ ಸಂದರ್ಭ ಹೆಚ್ಚು . ಡಿ.31, ಡಿ.11, ಡಿ.27, ಡಿ.12 ಮತ್ತು ನವೆಂಬರ್ 27 ಅತ್ಯಂತ ಮರೆಗುಳಿ ದಿನ ಎಂದು ಪ್ರಯಾಣಿಕರು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಉಬೆರ್ ಕಾರುಗಳಲ್ಲಿ ಪ್ರಯಾಣಿಸುವ ಸಂದರ್ಭ ಮರೆತುಹೋದ ವಿಶಿಷ್ಟ ವಸ್ತುಗಳ ಪಟ್ಟಿಯಲ್ಲಿ 15 ಲಕ್ಷ ರೂ. ಮೊತ್ತದ ಚೆಕ್, ಕೀ ಬೋರ್ಡ್, ನಾಯಿಮರಿ, ಬೆಲೆಬಾಳುವ ವಾಚ್, ದುಬಾರಿ ಪಾದರಕ್ಷೆ, ಮದ್ಯದ ಬಾಟಲಿಗಳು, ಕ್ಯಾಬೇಜ್, ದಿನಸಿ ಸಾಮಾಗ್ರಿ ಇರುವ ಚೀಲ, ಬ್ಯಾಟ್ ಸೇರಿವೆ. ಫೋನ್, ರಿಂಗ್, ಕೀ, ವ್ಯಾಲೆಟ್, ಹ್ಯಾಟ್, ಬ್ಯಾಗ್, ಲೈಸೆನ್ಸ್, ಗುರುತು ಚೀಟಿ, ಚಾರ್ಜರ್, ಕೂಲಿಂಗ್ ಗ್ಲಾಸ್ ಇವನ್ನು ಪ್ರಯಾಣಿಕರು ಕಾರಿನಲ್ಲೇ ಬಿಟ್ಟು ಹೋಗುವುದು ಸಾಮಾನ್ಯ ಘಟನೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.