ಐಟಿ ಕ್ಷೇತ್ರಕ್ಕೆ ಸವಾಲಾದ ವೀಸಾ ಅನಿಶ್ಚಿತತೆ: ಇನ್ಫೋಸಿಸ್ ಸಹಸಂಸ್ಥಾಪಕ ಕ್ರಿಸ್ ಗೋಪಾಲ್‌ಕೃಷ್ಣನ್ ಕಳವಳ
ಹೈದರಾಬಾದ್, ಎ.4: ವೀಸಾ ಕ್ಷೇತ್ರದಲ್ಲಿನ ಅನಿಶ್ಚಿತತೆಯು 2017-18ರ ಸಾಲಿನಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ವಲಯವು ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆಯೆಂದು, ಇನ್ಫೋಸಿಸ್‌ನ ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಓ ಕ್ರಿಸ್ ಗೋಪಾಲಕೃಷ್ಣನ್ ತಿಳಿಸಿದ್ದಾರೆ.
ನೂತನ ಹಣಕಾಸು ವರ್ಷೆದಲ್ಲಿ ದೇಶದ ಮಾಹಿತಿ ತಂತ್ರಜ್ಞಾನ ವಲಯದ ಪ್ರಗತಿ ಸಾಧ್ಯತೆಗಳ ಕುರಿತು ಮಂಗಳವಾರ ಹೈದರಾಬಾದ್‌ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಅಮೆರಿಕದಲ್ಲಿ ಉದ್ಭವವಾಗಿರುವ ವೀಸಾ ಅನಿಶ್ಚಿತತೆಯ ಕಾರಣದಿಂದಾಗಿ ಐಟಿ ಕ್ಷೇತ್ರಕ್ಕೆ ಸವಾಲೆದುರಾಗಿದೆ ಎಂದರು. ವೀಸಾ ಸಮಸ್ಯೆಯನ್ನು ಹೊರತುಪಡಿಸಿ ಭಾರತೀಯ ಐಟಿರಂಗದಲ್ಲಿ ಈ ವರ್ಷ ಬೇರೇನೂ ವ್ಯತ್ಯಾಸ ತನಗೆ ಕಾಣುತ್ತಿಲ್ಲ ಎಂದು ಗೋಪಾಲಕೃಷ್ಣನ್ ತಿಳಿಸಿದರು.
‘‘ ಒಂದು ವೇಳೆ ಜಾಗತಿಕ ಒಟ್ಟು ಆಂತರಿಕ ಉತ್ಪನ್ನವು ಶೇ.2-3ರಷ್ಟು ಬೆಳವಣಿಗೆ ಸಾಧಿಸಿದಲ್ಲಿ, ಐಟಿ ರಂಗದಲ್ಲಿ ಜಾಗತಿಕ ಮಟ್ಟದ ಹೂಡಿಕೆ ಕೂಡಾ ಶೇ.3-5ರಷ್ಟು ಬೆಳವಣಿಗೆಯನ್ನು ಕಾಣಲಿದೆ. ಭಾರತೀಯ ಮಾಹಿತಿ ತಂತ್ರಜ್ಞಾನ ವಲಯವು ಅದಕ್ಕಿಂತಲೂ ಅಧಿಕ ಅಂದರೆ ಶೇ. 4-5ರಷ್ಟು ಬೆಳೆಯಲಿದೆ. ಹೀಗಾಗಿ 2017-18ರ ಸಾಲಿನಲ್ಲಿ ಭಾರತೀಯ ಐಟಿ ಉದ್ಯಮದಲ್ಲಿು ಶೇ.9-10ರಷ್ಟು ಬೆಳವಣಿಗೆಯಾಗಲಿದೆಯೆಂದರು.
2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಐಟಿ ಉದ್ಯಮದ ಬೆಳವಣಿಗೆ ದರವನ್ನು ಶೂನ್ಯಕ್ಕಿಳಿಸಿದ್ದ ಬಗ್ಗೆ ಗಮನಸೆಳೆದ ಅವರು ಪ್ರಸಕ್ತ ಹಣಕಾಸು ವರ್ಷವು ಐಟಿ ಉದ್ಯಮಕ್ಕೆ ಅತ್ಯಂತ ಸವಾಲಿನದ್ದಾಗಿದೆ ಎಂದು ಅಭಿಪ್ರಾಯಿಸಿದರು.. ಡಿಜಿಟಲೀಕರಣದ ಯುಗದಲ್ಲಿ ಭಾರತೀಯ ಕಂಪೆನಿಗಳು ಆ ದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿದ್ದು, ನೂತನ ಸಂಸ್ಥೆಗಳು ಕೂಡಾ ರೂಪುಗೊಳ್ಳುತ್ತಿವೆ ಎಂದರು. ಗ್ರಾಹಕರು ಹಾಗೂ ಕೈಗಾರಿಕೆಯು ಕೆಲವು ನೂತನ ತಂತ್ರಜ್ಞಾನಗಳ ಮೇಲೆ ತಮ್ಮ ಹೂಡಿಕೆಯನ್ನು ಹೆಚ್ಚಿಸಿವೆಯೆಂದು ಗೋಪಾಲಕೃಷ್ಣನ್ ತಿಳಿಸಿದರು.