ಶವದ ದಫನ್ ಅಥವಾ ದಹನ...ಯಾವುದು ಒಳ್ಳೆಯದು..?
ಹೊಸದಿಲ್ಲಿ,ಎ.6: ಸಿಬಿಎಸ್‌ಇ 12ನೇ ತರಗತಿಯ ಜೀವಶಾಸ್ತ್ರ ಪ್ರಶ್ನೆಪತ್ರಿಕೆ ಸಾಕಷ್ಟು ಕಠಿಣವಾಗಿತ್ತು ಎನ್ನುವುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ. ಆದರೆ ಶವಸಂಸ್ಕಾರ ವಿಧಾನಗಳ ಕುರಿತು ಕೇಳಲಾಗಿದ್ದ ಪ್ರಶ್ನೆಯೊಂದರಿಂದಾಗಿ ಜನರೀಗ ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನೇ ಪ್ರಶ್ನಿಸುವಂತಾಗಿದೆ.
ಪ್ರಶ್ನೆಪತ್ರಿಕೆಯ ‘ಡಿ’ ವಿಭಾಗದಡಿ ಕೇಳಲಾಗಿದ್ದ ಪ್ರಶ್ನೆ ವಾಯುಮಾಲಿನ್ಯವನ್ನು ಆಧರಿಸಿದ್ದು, ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮಾನವರ ಮರಣದ ನಂತರ ಶವಗಳನ್ನು ದಫನ್ ಮಾಡಬೇಕೇ ಅಥವಾ ದಹಿಸಬೇಕೇ ಎಂಬ ಕುರಿತು ವಾದಗಳನ್ನು ಸಮರ್ಥಿಸುವಂತೆ ವಿದ್ಯಾರ್ಥಿಗಳನ್ನು ಕೇಳಲಾಗಿತ್ತು.
ಈ ಪ್ರಶ್ನೆಗೂ ಜೀವಶಾಸ್ತ್ರಕ್ಕೂ ಏನು ಸಂಬಂಧ? ಶವಗಳನ್ನು ದಹಿಸುವುದಕ್ಕಿಂತ ಅವುಗಳನ್ನು ದಫನ್ ಮಾಡುವುದನ್ನು ಸಿಬಿಎಸ್‌ಇ ಉತ್ತೇಜಿಸುತ್ತಿದೆಯೇ ಎಂದು ಅಲೋಕ್ ಭಟ್ ಎನ್ನುವವರು ಪ್ರಶ್ನಿಸಿದರು. ಅವರು ಟ್ವಿಟರ್‌ನಲ್ಲಿ ಈ ಪ್ರಶ್ನೆಪತ್ರಿಕೆಯನ್ನು ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಆದರೆ ವಾಯುಮಾಲಿನ್ಯ ಜೀವಶಾಸ್ತ್ರ ಪಠ್ಯಕ್ರಮದ ಭಾಗವಾಗಿದೆ ಎಂದು ಶಿಕ್ಷಕರು ಹೇಳಿದ್ದಾರೆ. ಪ್ರಶ್ನೆಪತ್ರಿಕೆಯಲ್ಲಿನ ಹೆಚ್ಚಿನ ಪ್ರಶ್ನೆಗಳನ್ನು ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಆಯ್ದುಕೊಳ್ಳಲಾಗಿತ್ತು ಎಂದಿದ್ದಾರೆ.