ಪಶ್ಚಿಮಘಟ್ಟದಲ್ಲಿ ಮರಏಡಿ ಪತ್ತೆ !
ಹೊಸದಿಲ್ಲಿ, ಎ.10: ಜೀವನಪರ್ಯಂತ ಮರದಲ್ಲೇ ವಾಸಿಸುವ ವಿಶಿಷ್ಟ ತಳಿಯ ಏಡಿಯೊಂದನ್ನು ವಿಜ್ಞಾನಿಗಳ ತಂಡವೊಂದು ಭಾರತದಲ್ಲೇ ಪ್ರಪ್ರಥಮ ಬಾರಿಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪತ್ತೆಹಚ್ಚಿದ್ದಾರೆ. ಸಿಹಿನೀರ ಏಡಿಗಳ ಸಂಕುಲದ ಬಗ್ಗೆ ಕೇರಳದಲ್ಲಿ ಎರಡು ವರ್ಷಗಳ ಕಾಲ ನಡೆಸಲಾದ ಸಮೀಕ್ಷೆಯ ಸಂದರ್ಭದಲ್ಲಿ ಮರಏಡಿ ಪತ್ತೆಯಾಗಿದೆ. ಕೇರಳದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವಾಸಿಸುವ ಕಣಿ ಬುಡಕಟ್ಟು ಜನರು, ತಾವು ಉದ್ದನೆಯ ಕಾಲುಗಳ ಮರಎಡಿಗಳನ್ನು ಕಂಡಿರುವ ಬಗ್ಗೆ ಅಧ್ಯಯನ ತಂಡಕ್ಕೆ ತಿಳಿಸಿದ್ದರು.
ಈ ಏಡಿಗಳನ್ನು ಹಿಡಿಯಲು ಆರಂಭದಲ್ಲಿ ನಡೆಸಲಾದ ಪ್ರಯತ್ನಗಳು ವಿಫಲವಾದರೂ 2016ರ ಸೆಪ್ಟೆಂಬರ್ 5ರಂದು ಭಾರತ-ಸಿಂಗಾಪುರ ಸಂಶೋಧಕರ ತಂಡವೊಂದು ಈ ಹೆಣ್ಣು ಮರಏಡಿಯನ್ನು ಹಿಡಿಯಲು ಸಫಲವಾಯಿತು. ಆನಂತರ ತಂಡವು ದೊಡ್ಜ ಗಾತ್ರದ ಗಂಡು ಮರಏಡಿಯನ್ನು ಕೂಡಾ ಹಿಡಿದಿದ್ದರು.ಈ ವಿಶಿಷ್ಟ ಮರಏಡಿಯನ್ನು ಗುರುತಿಸಲು ಕಣಿ ಬುಡಕಟ್ಟು ಜನರು ನೆರವಾದ ಕಾರಣಕ್ಕೆ ಅದಕ್ಕೆ ಕಣಿ ಮರಂಜಾಡು ಎಂದು ಹೆಸರಿಡಲಾಗಿದೆ.
ಎರಡೂ ಏಡಿಗಳನ್ನು ಕೇರಳ ವಿವಿಯ ಜಲ ಜೀವಶಾಸ್ತ್ರ ಹಾಗೂ ಮೀನುಗಾರಿಕೆ ವಿಭಾಗದ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಪಶ್ಚಿಮ ಘಟ್ಟ ಶ್ರೇಣಿಯ ಜೀವವೈವಿಧ್ಯತಾಣಗಳ ಸಂರಕ್ಷಣೆಯ ದೃಷ್ಟಿಯಿಂದ ಈ ಅಪರೂಪದ ಮರಏಡಿಗಳ ಶೋಧವು ಮಹತ್ವದ್ದಾಗಿಯೆಂದು ಅಧ್ಯಯನ ತಂಡ ತಿಳಿಸಿದೆ.
ಜಗತ್ತಿನಲ್ಲಿ ಈವರೆಗೆ ಮರ ಏರುವ ಏಡಿಗಳ ಕೇವಲ ಮೂರು ತಳಿಗಳು ಅಸ್ತಿತ್ವದಲ್ಲಿವೆಯೆಂದು ನಂಬಲಾಗಿತ್ತು. ಶ್ರೀಲಂಕಾ, ಮಡಗಾಸ್ಕರ್ ಹಾಗೂ ಬೊರ್ನಿಯೊಗಳಲ್ಲಿ ಅವು ಈ ಹಿಂದೆ ಪತ್ತೆಯಾಗಿದ್ದವು. ಭಾರತದಲ್ಲಿ ಪತ್ತೆಯಾಗಿರುವ ಮರ ಏರುವ ಏಡಿಯು ನಾಲ್ಕನೆ ತಳಿಯದ್ದಾಗಿದೆಯೆಂದು ಕೇರಳದ ವಿವಿಯ ವಿಜ್ಞಾನಿ ಅಪ್ಪುಕಟ್ಟನಾಯರ್ ಬಿಜು ಕುಮಾರ್ ತಿಳಿಸಿದ್ದಾರೆ.