‘ಖಲಿಸ್ತಾನಿ ಬೆಂಬಲಿಗ ’ ಕೆನಡಾದ ರಕ್ಷಣಾ ಸಚಿವರನ್ನು ನಾನು ಭೇಟಿಯಾಗುವುದಿಲ್ಲ: ಅಮರಿಂದರ್ ಸಿಂಗ್
ಚಂಡಿಗಡ,ಎ.13: ಕೆನಡಾದ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಅವರನ್ನು ‘ಖಲಿಸ್ತಾನಿ ಬೆಂಬಲಿಗ ’ ಎಂದು ಇಂದಿಲ್ಲಿ ಬಣ್ಣಿಸಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಈ ತಿಂಗಳ ಉತ್ತರಾರ್ಧದಲ್ಲಿ ಭಾರತಕ್ಕೆ ಆಗಮಿಸಲಿರುವ ಅವರನ್ನು ತಾನು ಭೇಟಿಯಾಗುವುದಿಲ್ಲ ಎಂದು ಹೇಳಿದರು.
ಖಾಸಗಿ ಟಿವಿ ವಾಹಿನಿಯ ಕಾರ್ಯಕ್ರಮವೊಂದರಲಿ ಪಾಲ್ಗೊಂಡಿದ್ದ ಸಿಂಗ್, ಸಜ್ಜನ್ ಅವರ ತಂದೆ ಕೂಡ ಖಲಿಸ್ತಾನಿ ಬೆಂಬಲಿಗರಾಗಿದ್ದರು ಎಂದು ಆರೋಪಿಸಿದರಲ್ಲದೆ, ವಾಸ್ತವದಲ್ಲಿ ಕೆನಡಾದ ಜಸ್ಟಿನ್ ಟ್ರುಡೇವ್ ಅವರ ಸರಕಾರದ ಐವರು ಸಚಿವರು ಖಲಿಸ್ತಾನಿ ಬೆಂಬಲಿಗರಾಗಿದ್ದಾರೆ ಮತ್ತು ಅವರೊಂದಿಗೆ ಯಾವದೇ ನಂಟು ಹೊಂದಲು ತಾನು ಬಯಸಿಲ್ಲ ಎಂದರು.
ಬೀಫ್ ನಿಷೇಧ ಕುರಿತಂತೆ ಅವರು, ಜನರು ತಾವು ಬಯಸಿದ್ದನ್ನು ತಿನ್ನುವ ಹಕ್ಕು ಹೊಂದಿದ್ದಾರೆ ಮತ್ತು ಅದಕ್ಕೆ ಅವರಿಗೆ ಅವಕಾಶವಿರಬೇಕು ಎಂದರು.
ತಾನು ಪಾಕಿಸ್ತಾನಿ ಕಲಾವಿದರ ವಿರುದ್ಧ ನಿಷೇಧದ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದ ಸಿಂಗ್, ಅವರನ್ನು ಪಂಜಾಬ್‌ಗೆ ಆಮಂತ್ರಿಸುವುದು ತನಗೆ ಸಂತಸದ ವಿಷಯವಾಗಿದೆ ಮತ್ತು ಪಾಕಿಸ್ತಾನಕ್ಕೆ ಇನ್ನೊಮ್ಮೆ ಭೇಟಿ ನೀಡಲು ತಾನು ಇಷ್ಟಪಡುತ್ತೇನೆ ಎಂದು ಹೇಳಿದರು.
ಚೀನಾದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರವನ್ನು ಆಗ್ರಹಿಸಿದ ಅವರು, ಪಾಕಿಸ್ತಾನ ದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಗೆಳೆತನವನ್ನು ಬೆಳೆಸಲು ಇದು ಸಕಾಲವಾಗಿದೆ ಎಂದರು.
ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಉಪಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದುರುದ್ದೇಶಪೂರಿತ ಪ್ರಯತ್ನಗಳನ್ನು ನಡೆಸುತ್ತಿವೆ ಎಂದ ಸಿಂಗ್, ಅವರಿಗೆ ಇನ್ನೊಂದು ಅವಕಾಶ ನೀಡುವಂತೆ ಜನತೆಯನ್ನು ಆಗ್ರಹಿಸಿದರು.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಪ್ ಕಾಂಗ್ರೆಸ್‌ಗೆ ಸವಾಲೊಡ್ಡಿತ್ತು ಎನ್ನುವುದನ್ನು ಒಪ್ಪಿಕೊಂಡ ಅವರು, ಪಂಜಾಬಿ ವ್ಯಕ್ತಿಯನ್ನು ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯನ್ನಾಗಿ ಬಿಂಬಿಸುವಲ್ಲಿ ವೈಫಲ್ಯವು ಅದಕ್ಕೆ ತುಂಬ ದುಬಾರಿಯಾಗಿ ಪರಿಣಮಿಸಿತು. ಆಪ್ ತನ್ನ ಕಾರ್ಯ ನಿರ್ವಹಣೆಯ ಶೈಲಿಯನ್ನು ಬದಲಿಸಿಕೊಳ್ಳದಿದ್ದರೆ ಅದಕ್ಕೆ ಭವಿಷ್ಯವಿಲ್ಲ ಎಂದರು.