ಉದ್ಘಾಟನಾ ಫಲಕದಲ್ಲಿ ಹೆಸರಿನ ಬಗ್ಗೆ ಸಚಿವನಿಂದ ರಾದ್ಧಾಂತದ ಬಳಿಕ ಪಂಜಾಬ್ ಸಿಎಂ ಮಾಡಿದ್ದೇನು ಗೊತ್ತೇ...?

Update: 2017-04-15 12:05 GMT

ಚಂಡಿಗಡ.ಎ.15: ಪಂಜಾಬಿನ ಸಚಿವ ಹಾಗೂ ನಭಾ ಕ್ಷೇತ್ರದ ಶಾಸಕ ಸಾಧು ಸಿಂಗ್ ಧರಮಸೋಟ್ ಅವರು ತನ್ನ ಸ್ವಕ್ಷೇತ್ರದಲ್ಲಿಯ ಶಾಲೆಯೊಂದರಲ್ಲಿ ಉದ್ಘಾಟನಾ ಫಲಕದಲ್ಲಿ ತನ್ನ ಹೆಸರನ್ನು ಮೂರನೇ ಸ್ಥಾನದಲ್ಲಿ ಉಲ್ಲೇಖಿಸಿರುವದಕ್ಕೆ ಕೆಂಡಾಮಂಡಲ ಗೊಂಡು ಶಾಲಾ ಮುಖ್ಯೋಪಾಧ್ಯಾಯಿನಿಯನ್ನು ತೀವ್ರ ತರಾಟೆಗೆತ್ತಿಕೊಂಡು ಕೆಲಸದಿಂದ ಅಮಾನತು ಮಾಡುವುದಾಗಿ ಬೆದರಿಕೆಯೊಡ್ಡುತ್ತಿರುವ ವೀಡಿಯೋ ಶುಕ್ರವಾರ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಶಿಲಾನ್ಯಾಸ ಮತ್ತು ಉದ್ಘಾಟನಾ ಫಲಕಗಳ ಮೇಲೆ ಸಚಿವರು ಮತ್ತು ಶಾಸಕರು ಸೇರಿದಂತೆ ಸರಕಾರಿ ಗಣ್ಯರ ಹೆಸರುಗಳ ಸೇರ್ಪಡೆಯನ್ನು ನಿಷೇಧಿಸಿದ್ದಾರೆ.

ನಭಾದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು,•ಅಲ್ಲಿಯ ಉದ್ಘಾಟನಾ ಸಮಾರಂಭದಲ್ಲಿ ಸಾಧು ಸಿಂಗ್ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಉದ್ಘಾಟನಾ ಫಲಕದಲ್ಲಿ•ಸಿಂಗ್ ಹೆಸರು ಮೂರನೇ ಸ್ಥಾನದಲ್ಲಿದ್ದನ್ನು ಕಂಡ ಯಾರೋ ಅವರ ಕಿವಿ ಕಚ್ಚಿದ್ದರು. ತನ್ನ ಹೆಸರು ಮೊದಲ ಸ್ಥಾನದಲ್ಲಿ ಇಲ್ಲದ್ದನ್ನು ಕಂಡು ಕೆಂಡಾಮಂಡಲಗೊಂಡ ಸಿಂಗ್ ಮುಖ್ಯೋಪಾಧ್ಯಾಯಿನಿಯನ್ನು ವಾಚಾಮಗೋಚರವಾಗಿ ಬೈದು,ಮುಖ್ಯ ಅತಿಥಿ ಎಂದರೆ ಅರ್ಥ ಗೊತ್ತಿದೆಯೇ ಎಂದು ಪ್ರಶ್ನಿಸಿ ಅಮಾನತು ಮಾಡುವುದಾಗಿ ಬೆದರಿಕೆಯೊಡ್ಡಿದ್ದರು.

ಗಮನಿಸಬೇಕಾದ ವಿಷಯವೆಂದರೆ ಶಾಲೆಯಲ್ಲಿನ ಕಟ್ಟಡ ಯೋಜನೆಗೆ ಖಾಸಗಿ ಟ್ರಸ್ಟ್‌ವೊಂದು ಆರ್ಥಿಕ ನೆರವು ಒದಗಿಸಿತ್ತು. ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದಿದ್ದ ಮೊದಲ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು,ಸಚಿವರು ಮತ್ತು ಶಾಸಕರು ಯಾವುದೇ ಶಿಲಾನ್ಯಾಸ ಅಥವಾ ಉದ್ಘಾಟನೆಯನ್ನು ನೆರವೇರಿಸುವಂತಿಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲಾಗಿತ್ತು.

ನಭಾ ಪ್ರಹಸನ ಬೆಳಿಕಿಗೆ ಬಂದ ಬಳಿಕ ಅಮರಿಂದರ್ ಅವರು,ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ನಮ್ರತೆಯನ್ನು ಪ್ರದರ್ಶಿಸುವಂತೆ ತನ್ನ ಸಂಪುಟ ಸಹೋದ್ಯೋಗಿಗಳನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಅಥವಾ ಸಚಿವರು,ಶಾಸಕರು ಅಥವಾ ಇತರ ಅಧಿಕಾರಿಗಳು ಉದ್ಘಾಟಿಸಿರುವ ಎಲ್ಲ ಯೋಜನೆಗಳು ಮತ್ತು ಕಾರ್ಯಕ್ರಮಗಳು ಈಗಿನಿಂದ ಪಂಜಾಬಿನ ಜನತೆಗೆ ಅರ್ಪಣೆಯಾಗುತ್ತವೆ ಎಂದು ಅವರು ಹೇಳಿದ್ದಾರೆ.

ಸಚಿವರು,ನಾಯಕರು ಅಥವಾ ಸರಕಾರಿ ಅಧಿಕಾರಿಗಳು ಶಿಲಾನ್ಯಾಸ ಅಥವಾ ಉದ್ಘಾಟನೆಗಳನ್ನು ನೆರವೇರಿಸಲು ನಿರ್ಬಂಧವಿಲ್ಲದಿದ್ದರೂ,ಮುಖ್ಯಮಂತ್ರಿಗಳ ಸ್ಪಷ್ಟ ಆದೇಶದಂತೆ ಸಂಬಂಧಿಸಿದ ಫಲಕಗಳಲ್ಲಿ•ಅವರ ಹೆಸರುಗಳನ್ನು ಕೆತ್ತುವುದನ್ನು•ತಕ್ಷಣದಿಂದ ನಿಷೇಧಿಸಲಾಗಿದೆ ಎಂದು ಸರಕಾರಿ ವಕ್ತಾರರೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News