ಜಾನುವಾರು ಕಳ್ಳರೆಂಬ ಶಂಕೆಯಲ್ಲಿ ಇಬ್ಬರ ಥಳಿಸಿ ಹತ್ಯೆ
ಗುವಾಹಟಿ, ಎ.30: ಜಾನುವಾರು ಕಳ್ಳರೆಂಬ ಶಂಕೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಅಸ್ಸಾಂನ ನಗಾವ್ ಜಿಲ್ಲೆಯಲ್ಲಿ ನಡೆದಿದೆ. 20ರಿಂದ 25ರ ಹರೆಯದ ಇಬ್ಬರು ವ್ಯಕ್ತಿಗಳನ್ನು ಜಾನುವಾರು ಕಳ್ಳತನ ಮಾಡುವವರು ಎಂದು ಶಂಕಿಸಿದ ಗ್ರಾಮಸ್ಥರ ಗುಂಪೊಂದು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಇವರನ್ನು ಸುಮಾರು 1.5 ಕಿ.ಮೀ. ದೂರ ಅಟ್ಟಿಸಿಕೊಂಡು ಬಂದಿದೆ. ಕೈಗೆ ಸಿಕ್ಕ ಇಬ್ಬರನ್ನೂ ಮಾರಣಾಂತಿಕವಾಗಿ ಥಳಿಸಿದೆ. ತೀವ್ರ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಇಬ್ಬರು ವ್ಯಕ್ತಿಗಳು ಹೊಲದಲ್ಲಿದ್ದ ಜಾನುವಾರುಗಳನ್ನು ಕದ್ದೊಯ್ಯಲು ಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ಮಾಹಿತಿ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಲಾಗಿದೆ. ಮೃತಪಟ್ಟವರ ಮನೆಯವರು ದೂರು ದಾಖಲಿಸಿದ್ದು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.