ನಕ್ಸಲರ ವಿರುದ್ಧ ಆಕ್ರಮಣಕಾರಿ ಧೋರಣೆ ಅಗತ್ಯ: ರಾಜನಾಥ್ ಸಿಂಗ್

Update: 2017-05-08 13:59 GMT

ಹೊಸದಿಲ್ಲಿ, ಮೇ 8: ನಕ್ಸಲರು ದಾಳಿ ನಡೆಸಿದ ಬಳಿಕ ಪ್ರತಿದಾಳಿ ನಡೆಸಬೇಕೇ ಅಥವಾ ನಾವೇ ಮೊದಲು ದಾಳಿ ನಡೆಸಬೇಕೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಹಿಂದಿನ ಘಟನೆಗಳಿಂದ ಪಾಠ ಕಲಿತು ನಮ್ಮ ನಡೆಯಲ್ಲಿ ಆಕ್ರಮಣಕಾರಿ ಧೋರಣೆ ತೋರುವ ಅಗತ್ಯವಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 ನಕ್ಸಲ್ ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯೋಚನೆ, ವ್ಯೆಹದ ನಿರ್ಧಾರ, ಪಡೆಗಳ ನಿಯೋಜನೆ, ಕಾರ್ಯಾಚರಣೆ, ರಸ್ತೆ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯ- ಹೀಗೆ ಎಲ್ಲದರಲ್ಲೂ ಆಕ್ರಮಣಕಾರಿ ಮನೋಭಾವ ಅಗತ್ಯ ಎಂದು ತಿಳಿಸಿದರು.

  ನಕ್ಸಲರ ಶರಣಾಗತಿ ಪ್ರಮಾಣ ಹೆಚ್ಚುತ್ತಿದ್ದು ಹೀಗೆ ಶರಣಾಗತರಾದ ನಕ್ಸಲರು ಒದಗಿಸುವ ಮಾಹಿತಿಯಿಂದ ಏನಾದರೂ ಪ್ರಯೋಜನವಾಗುತ್ತಿದೆಯೇ ಎಂಬುದನ್ನು ಪರಿಗಣಿಸುವ ಅಗತ್ಯವಿದೆ . 2014ರಿಂದ ನಕ್ಸಲರ ಶರಣಾಗತಿ ಪ್ರಕರಣ ಹೆಚ್ಚಿದೆ . ಅಲ್ಲದೆ ಹಲವಾರು ಪ್ರಮುಖ ನಕ್ಸಲ್ ನಾಯಕರನ್ನು ಹತ್ಯೆ ಮಾಡಲಾಗಿದೆ. ಶರಣಾಗುವ ನಕ್ಸಲರ ಸಂಖ್ಯೆಯಲ್ಲಿ ಹೆಚ್ಚಳವಾದರೂ , ಇವರಿಂದ ದೊರಕಿದ ಮಾಹಿತಿಯಿಂದ ಎಷ್ಟರ ಮಟ್ಟಿನ ಪ್ರಯೋಜನವಾಗಿದೆ ಎಂಬುದನ್ನೂ ಪರಿಗಣಿಸಬೇಕು ಎಂದರು.

  ಎಲ್ಲಾ ಗುಪ್ತಚರ ದಳಗಳು ಮತ್ತು ಭದ್ರತಾ ಪಡೆಗಳು ಸ್ಥಳೀಯರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಅಗತ್ಯವಿದೆ . ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಹೋಲಿಸಿದರೆ ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ತಾಂತ್ರಿಕ ಗುಪ್ತಚರ ವ್ಯವಸ್ಥೆ ಕನಿಷ್ಠ ಮಟ್ಟದಲ್ಲಿದೆ. ಇಲ್ಲಿ ಶೇ.20ರಷ್ಟು ಭಾಗ ಮಾತ್ರ ಸೂಕ್ತ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಸುಕ್ಮಾದಂತಹ ಜಿಲ್ಲೆಯಲ್ಲಿ ಈ ಪ್ರಮಾಣ ಕೇವಲ ಶೇ.4ರಷ್ಟು ಆಗಿದ್ದು ಕಡಿಮೆ ಸಂಪರ್ಕ ವ್ಯವಸ್ಥೆ ಹೊಂದಿರುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಯೋಜನೆಯ ಮೂಲಕ ಸಂಪರ್ಕ ವ್ಯವಸ್ಥೆಯನ್ನು ಉತ್ತರಗೊಳಿಸಬೇಕು ಎಂದು ಸಿಂಗ್ ತಿಳಿಸಿದರು.

  ನಕ್ಸಲರ ಪ್ರಾಭಲ್ಯವಿರುವ ಕ್ಷೇತ್ರಗಳಲ್ಲಿ ಛಾಯಾ ಗುಪ್ತಚರ ಅಧಿಕಾರಿಗಳನ್ನು ನಿಯೋಜಿಸುವ ಅಗತ್ಯವಿದೆ. ಗುಪ್ತಚರ ಮಾಹಿತಿಗಳನ್ನು ವಿನಿಮಯಗೊಳಿಸಲು ಮತ್ತು ಬಳಸಿಕೊಳ್ಳಲು ನೆರವಾಗುವಂತೆ ರಾಜ್ಯ ಪೊಲೀಸ್ ಪಡೆ ಮತ್ತು ಕೇಂದ್ರೀಯ ಭದ್ರತಾ ಪಡೆಗಳ ಮಧ್ಯೆ ಸೂಕ್ತ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಬೇಕಿದೆ ಎಂದ ರಾಜನಾಥ್ ಸಿಂಗ್, ತೀರಾ ರಕ್ಷಣಾತ್ಮಕ ನಡೆ ಆಕ್ರಮಣ ನಡೆಸುವ ಸಾಮರ್ಥ್ಯವನ್ನು ಕುಂದಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News