ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ಮೂವರ ಅಪರಾಧ ಸಾಬೀತು
ಪುಣೆ, ಮೇ 8: 2009ರಲ್ಲಿ ನಡೆದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮೂವರು ವ್ಯಕ್ತಿಗಳನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯವೊಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣದ ಕುರಿತ ವಾದ ವಿವಾದ ಮಂಗಳವಾರ ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ಈ ಮೂವರು ವ್ಯಕ್ತಿಗಳಾದ ಯೋಗೇಶ್ ರಾವತ್, ಮಹೇಶ್ ಠಾಕುರ್ ಮತ್ತು ವಿಶ್ವಾಸ್ ಕದಮ್ ಅವರು ದರೋಡೆ, ಕ್ರಿಮಿನಲ್ ಒಳಸಂಚು ಮತ್ತು ಹತರಾದ ವ್ಯಕ್ತಿಯ ಬಳಿಯಿದ್ದ ಸೊತ್ತುಗಳನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣದಲ್ಲೂ ಅಪರಾಧಿಗಳಾಗಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಎಲ್.ಎಲ್.ಯೆಂಕಾರ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಖರಾಡಿಯ ಐಟಿ ಸಂಸ್ಥೆಯೊಂದರ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ 28ರ ಹರೆಯದ ಯುವತಿ 2009ರ ಅಕ್ಟೋಬರ್ 7ರಂದು ಮನೆಗೆ ಮರಳಲು ಬಸ್‌ಗಾಗಿ ಕಾಯುತ್ತಿದ್ದವಳು ನಾಪತ್ತೆಯಾಗಿದ್ದಳು.
ಎರಡು ದಿನದ ಬಳಿಕ ಈಕೆಯ ಮೃತದೇಹ ಝರೆವಾಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈಕೆಯನ್ನು ಕಾರಿನಲ್ಲಿ ಅಪಹರಿಸಿದ್ದ ತಂಡವೊಂದು ಕಾರಿನಲ್ಲೇ ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಈಕೆಯ ಬಳಿಯಿದ್ದ ಎಟಿಎಂನಿಂದ ಹಣ ಪಡೆದಿತ್ತು. ನಂತರ ಈಕೆಯನ್ನು ಥಳಿಸಿ ಕೊಲೆಗೈಯಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿತ್ತು. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು ಬಂಧಿತರಲ್ಲಿ ಓರ್ವನಾಗಿದ್ದ ರಾಜೇಶ್ ಚೌಧರಿ ಮಾಫಿ ಸಾಕ್ಷಿದಾರನಾಗಲು ಒಪ್ಪಿದ್ದು ಈತನನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಸುಮಾರು 37 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ಸಂದರ್ಭ ಯೋಗೇಶ್ ರಾವತ್‌ನನ್ನು ಸಸ್ಸೂನ್ ಆಸ್ಪತ್ರೆಗೆ 2011ರ ಸೆ.17ರಂದು ವೈದ್ಯಕೀಯ ತಪಾಸಣೆಗೆಂದು ಕರೆದೊಯ್ಯುವ ವೇಳೆ ಈತ ತಪ್ಪಿಸಿಕೊಂಡಿದ್ದ. 20 ತಿಂಗಳ ಬಳಿಕ ಈತನನ್ನು ಮತ್ತೆ ಬಂಧಿಸಲಾಗಿತ್ತು.