ನಾಝಿ ಹೆಜ್ಜೆ: ಬುದ್ಧಿವಂತ ಶಿಶುಗಳ ಸೃಷ್ಟಿ?!

Update: 2017-05-11 19:00 GMT

ತಮ್ಮ ಅನುಕೂಲಕ್ಕೆ ತಕ್ಕ ಶಿಶುಗಳನ್ನು ನಿರೀಕ್ಷಿತ ದಂಪತಿಗಳು ಪಡೆಯುವಂತೆ ಮಾಡುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ‘ಆರೋಗ್ಯ ಭಾರತಿ’ ಎಂಬ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಬಹಿರಂಗಪಡಿಸಿದ್ದಾರೆ. ಅಂದರೆ ಎತ್ತರದ, ಸುಂದರ ಹಾಗೂ ಸ್ಮಾರ್ಟ್ ಬೇಬಿಗಳನ್ನು ತಯಾರು ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಹೇಳಿದೆ.

ಆಹಾರಪದ್ಧತಿ, ಆಯುರ್ವೇದ ಔಷಧ ಹಾಗೂ ಇತರ ಪದ್ಧತಿಗಳನ್ನು ಒಳಗೊಂಡ ಈ ಪದ್ಧತಿಯಿಂದ ಇಂಥ ಸುಮಾರು 450 ಶಿಶುಗಳನ್ನು ಸೃಷ್ಟಿಸುವ ಯೋಜನೆ ಇದಾಗಿದೆ. ಸಾವಿರಾರು ಇಂಥ ಶಿಶುಗಳನ್ನು 2020ರೊಳಗೆ ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದು ಕಾರ್ಯಕರ್ತರು ಸ್ಪಷ್ಟಪಡಿಸುತ್ತಾರೆ.

‘‘ಈ ಪೋಷಕರು ಕಡಿಮೆ ಐಕ್ಯೂ ಹೊಂದಿ, ಕಡಿಮೆ ಶೈಕ್ಷಣಿಕ ಹಿನ್ನೆಲೆ ಇದ್ದರೂ ಅವರ ಮಕ್ಕಳು ತೀರಾ ಪ್ರತಿಭಾವಂತರಾಗಿರುತ್ತಾರೆ. ಸಮರ್ಪಕ ವಿಧಿವಿಧಾನಗಳನ್ನು ಅನುಸರಿಸಿದರೆ, ಕಡುಬಣ್ಣದ ಮತ್ತು ಕಡಿಮೆ ಎತ್ತರದ ಪೋಷಕರ ಶಿಶುಗಳು ತೀರಾ ಗೌರವರ್ಣ ಹೊಂದಿರುತ್ತಾರೆ ಮತ್ತು ಎತ್ತರದವರಾಗಿರುತ್ತಾರೆ’’ ಎಂದು ಗುಂಪಿನ ರಾಷ್ಟ್ರೀಯ ಸಂಚಾಲಕ ಹಿತೇಶ್ ಜಾನಿ ಹೇಳಿದ್ದಾರೆ.

ಜಾನಿ ಹೇಳುವಂತೆ ಈ ಯೋಜನೆಯಲ್ಲಿ ಗರ್ಭಿಣಿಯರಾಗುವ ಮುನ್ನ ಪ್ರತಿಯೊಂದು ಶಕ್ತಿವಾಹಿನಿಗಳ ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತಿದೆ. ಜತೆಗೆ ಮಂತ್ರಪಠಣ ಹಾಗೂ ಅಧಿಕ ಕ್ಯಾಲ್ಸಿಯಂ ಹಾಗೂ ವಿಟಮಿನ್ ‘ಎ’ ಹೊಂದಿರುವ ಸೂಕ್ತ ಆಹಾರವನ್ನು ಶಿಶುಗಳಿಗೆ ನೀಡಲಾಗುತ್ತದೆ.

ಇದು ಆರೆಸ್ಸೆಸ್‌ನ ಆರೋಗ್ಯ ವಿಭಾಗ ಎಂದು ಪತ್ರಿಕೆ ಹೇಳಿದೆ. ಆದರೆ ಆರೋಗ್ಯ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಗೌತಮ್ ಹೇಳುವಂತೆ, ‘‘ಇದು ಆರೆಸ್ಸೆಸ್‌ನ ಸಿದ್ಧಾಂತದಿಂದ ಸ್ಫೂರ್ತಿ ಪಡೆದಿದೆಯೇ ವಿನಃ ಅಧಿಕೃತವಾಗಿ ಸಂಬಂಧ ಹೊಂದಿಲ್ಲ.’’ ಆರೋಗ್ಯ ಭಾರತಿ ವೆಬ್‌ಸೈಟ್ ಅನ್ವಯ, ಸಮಾಜದ ಆರೋಗ್ಯದಲ್ಲಿ ಆಸಕ್ತಿ ಇರುವ ಸೇವಾ ಮನೋಭಾವದ ಜನರನ್ನು ಹೊಂದಿರುವ ಸ್ವಯಂಸೇವಾ ಸಂಸ್ಥೆ.

‘‘ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಇಂಥ ಪ್ರತಿಭಾವಂತ ಶಿಶುಗಳನ್ನು ಉತ್ಪಾದಿಸುವ ದಂಪತಿಗಳಿಗೆ ಏರ್ಪಡಿಸಿದ್ದ ಸಲಹಾ ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರಯತ್ನ ಮಾಡಿದರು. ಆದರೆ ಸಂಘಟನೆ ಅದಕ್ಕೆ ಅವಕಾಶ ನೀಡಲಿಲ್ಲ’’ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.

‘‘ಇದು ಅವೈಜ್ಞಾನಿಕ. ಇದು ಮುಂದುವರಿಯಬಾರದು’’ ಎಂದು ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಅನನ್ಯಾ ಚಟರ್ಜಿ ಹೇಳುತ್ತಾರೆ. ಆದರೆ ಈ ಅಭಿಪ್ರಾಯ ರಾಜಕೀಯ ಪ್ರೇರಿತ ಎನ್ನುವುದು ಕಂಪೆನಿಯ ಪ್ರತಿವಾದ.

ಪಶ್ಚಿಮ ಬಂಗಾಳ ಹೈಕೋರ್ಟ್‌ನಲ್ಲಿ ಆಯೋಗ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಯೋಜಿತ ಕಾರ್ಯಕ್ರಮದ ಸಂಪೂರ್ಣ ವಿವರ, ಕಾರ್ಯಕಲಾಪಗಳ ವೀಡಿಯೊ ಮತ್ತು ಅಫಿದಾವಿತ್ ಸಲ್ಲಿಸುವಂತೆ ಸಂಘಟನೆಗೆ ಸೂಚಿಸಿದೆ.

ವಾಸ್ತವವಾಗಿ ಈ ಯೋಜನೆ ದಶಕದ ಹಿಂದೆಯೇ ಆರಂಭವಾಗಿದ್ದು, ಭಾರತದ ಹಲವು ರಾಜ್ಯಗಳಿಗೆ ಹಬ್ಬಿದೆ. ಜರ್ಮನಿಯಲ್ಲಿ ಸುಮಾರು 40 ವರ್ಷಗಳ ಹಿಂದೆ ಭೇಟಿ ಮಾಡಿದ್ದ ಮಹಿಳೆಯೊಬ್ಬರಿಂದ ಸ್ಫೂರ್ತಿ ಪಡೆದ ಯೋಜನೆ ಇದು ಎನ್ನುವುದು ಆರೆಸ್ಸೆಸ್ ಮುಖಂಡರ ಹೇಳಿಕೆ. ಈ ಮಹಿಳೆ ಎರಡನೆ ಮಹಾಯುದ್ಧದ ಬಳಿಕ ಮರು-ಜನಸಂಖ್ಯೆ ಹೆಚ್ಚಿಸುವ ಪ್ರಯತ್ನಕ್ಕಾಗಿ ಆರಂಭಿಸಿದ ’ಸಿಗ್ನೇಚರ್ ಚಿಲ್ಡ್ರನ್’ ತತ್ವಗಳ ಆಧರಿತ ಕಾರ್ಯಕ್ರಮ ಇದು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವಿವರಿಸಿದೆ.ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಮರ್ಶಕರೊಬ್ಬರು ಗರ್ಭವನ್ನು ರೂಪಾಂತರಿಸುವುದು ನಾಝಿ ತಂತ್ರ ಎಂದು ಬಣ್ಣಿಸಿದ್ದಾರೆ.

ಆರೆಸ್ಸೆಸ್ 1925ರಲ್ಲಿ ಆರಂಭವಾದದ್ದು ಹಿಂದೂ ಹಕ್ಕುಗಳ ಪ್ರತಿಪಾದನೆಗೆ. ಕಾಲಾನುಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಬಹುತೇಕ ಯಶಸ್ವಿ ಸಂಪ್ರದಾಯವಾದಿ ರಾಜಕಾರಣಿಗಳ ಉದಯಕ್ಕೆ ಇದು ವೇದಿಕೆಯಾಯಿತು. ಇದರ ಕೆಲ ಮಂದಿ ಸಂಸ್ಥಾಪಕರು ನಾಝಿವಾದ ಮತ್ತು ಫ್ಯಾಶಿಸಂನ ಸಮಗ್ರತ್ವ ಚಳವಳಿಯನ್ನು ಸಮರ್ಥಿಸಿಕೊಂಡಿದ್ದರು ಎಂದು ಚಿಂತಕರು ಹೇಳುತ್ತಾರೆ.

ಮೂಲ ಆರೆಸ್ಸೆಸ್ ಮುಖಂಡರು ಅಡಾಲ್ಫ್ ಹಿಟ್ಲರ್ ಮತ್ತು ಥರ್ಡ್ ರೀಚ್‌ನಂಥ ಜನಾಂಗೀಯ ವಿಷಯಗಳಿಗೆ ರಾಜಕೀಯ ಮುದ್ರೆ ಒತ್ತುವ ಮುಖಂಡರ ನಿಲುವನ್ನು ಅನುಸರಿಸಿದರು ಎಂದು ಅಂಶುಕಾಂತ ಚಕ್ರವರ್ತಿ ‘ಡೈಲಿ ಒ’ ಎಂಬ ವೆಬ್‌ಸೈಟ್‌ನಲ್ಲಿ ಹೇಳಿದ್ದಾರೆ. ಇಂದು ಕೂಡಾ ಜನಾಂಗೀಯವಾಗಿ ಪರಿಶುದ್ಧ ದೇಶಕ್ಕೆ ಅಥವಾ ಸ್ವಚ್ಛ ಜನಾಂಗೀಯ ಹಿನ್ನೆಲೆಯ ವ್ಯಕ್ತಿಗಳನ್ನು ರೂಪಿಸುವ ಯೋಜನೆ ಆರೆಸ್ಸೆಸ್ ಸಿದ್ಧಾಂತಕ್ಕೆ ಆಪ್ಯಾಯಮಾನವಾಗುತ್ತದೆ.

Writer - ವಿಸ್ಮಯ

contributor

Editor - ವಿಸ್ಮಯ

contributor

Similar News