ಬೇನೆ, ಬ್ಯಾಸರಿಕೆಗಾಗಿ ಸಣ್ಣ ನಾಲ್ಕು ಗುಳಿಗೆಗಳು!

Update: 2023-06-30 06:16 GMT

ಕಳೆದ ವರ್ಷ ಕೋಲ್ಕತಾದಲ್ಲಿ ಅನೌಪಚಾರಿಕವಾಗಿ ರೋಗಿಗಳನ್ನು ಉಪಚರಿಸುವ ಚಿಕಿತ್ಸಕರನ್ನು (Informal Medical Practitoners-IMP) ಮುಖ್ಯವಾಹಿನಿಗೆ ಕರೆತರುವ ಕ್ರಮ ಜಾರಿಗೊಳಿಸಲಾಯಿತು. ಅಲ್ಲಿಯ ತನಕ ಕ್ವಾಕ್‌ಸ್-ನಕಲಿ ವೈದ್ಯರು ಎಂದು ಕರೆಯಲ್ಪಡುತ್ತಿದ್ದವರಿಗೆ ಇದೊಂದು ಅನಿರೀಕ್ಷಿತ ಗೌರವ ಪ್ರದಾನ. ಪರಿವರ್ತನೆಗೊಂಡ ಕುಖ್ಯಾತ ರೌಡಿಯನ್ನು ಪೊಲೀಸ್ ಇನ್ಫಾರ್ಮರ್ ಆಗಿ, ಅರಣ್ಯಗಳ್ಳರನ್ನು ಕಾಡು ಕಾಯಲು, ಪಶು-ಪಕ್ಷಿಗಳ ಕಳ್ಳಬೇಟೆ ಆಡುವವರನ್ನು ವನ್ಯ ಜೀವಿ ಸಂರಕ್ಷಕರಾಗಿ ನೇಮಿಸಿಕೊಳ್ಳುವ ತಂತ್ರ ನೆನಪಾಗುತ್ತದೆ. ಹಾಗೆ ನೋಡಿದರೆ ನಕಲಿ ವೈದ್ಯರ ಚಿಕಿತ್ಸೆಯಿಂದ ಆಗುವ ‘ಅನಾಹುತ’ಗಳ ಕುರಿತು ಕಾಳಜಿಯುಕ್ತ ಬಿಸಿ ಬಿಸಿ ಚರ್ಚೆಗಳು ಅಕಾಡಮಿಕ್ ವಲಯದಲ್ಲಿ ನಡೆದು, ಸದ್ದು ಮಾಡಿ ಸುಮ್ಮನಾಗುತ್ತವೆಯೆ ಹೊರತು ಅವರಿಂದ ಏನಾದರೂ ಪ್ರಯೋಜನ ಹೊಂದುವ ಜನ ಈ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ.

ಕೊಯ್ಯುವ, ಕತ್ತರಿಸುವ, ಅನಸ್ತೇಷಿಯಾ, ನಂಜುನಿವಾರಕಗಳಿಲ್ಲದ ಭೀಕರ ವಿಧಾನಗಳನ್ನು ಅನುಸರಿಸುವ ಬಾಬಾಗಳ ‘ಮಹಿಮೆ ಚಿಕಿತ್ಸೆ’ಗಳೂ ಈ ಅವಜ್ಞೆಯ ಮಬ್ಬಿನಲ್ಲಿ ಕೆಲ ವೇಳೆ ನಡೆದುಹೋಗುತ್ತವೆ. ಆದರೆ ಅವು, ಅದೃಷ್ಟವಶಾತ್, ಅಲ್ಲೊಂದು, ಇಲ್ಲೊಂದು. ಸಮುದಾಯದ ಪ್ರಾಥಮಿಕ ಆರೋಗ್ಯ ಘಟಕಗಳು ಗ್ರಾಮ, ಪಟ್ಟಣ, ನಗರಗಳೆಂಬ ಭೇದವಿಲ್ಲದೆ ವೈದ್ಯರಿಲ್ಲದೆ ಖಾಲಿ ಹೊಡೆಯುತ್ತಿವೆ. ಮಹಾನಗರಗಳ ಬಡಾವಣೆಗಳಲ್ಲಿ ಇರುವವೆಲ್ಲ ಮಲ್ಟಿ ಸ್ಪೆಷಾಲಿಟಿ ಕೇಂದ್ರಗಳೇ. ಸಣ್ಣ, ಪುಟ್ಟ ನೋವು-ನೆಗಡಿ-ಕೆಮ್ಮು-ಅಜೀರ್ಣ-ಜ್ವರಗಳಿಗೆ ಔಷಧ ಸಿಗುತ್ತಿದ್ದ ಖಾಸಗಿ ವೈದ್ಯರ ಕ್ಲಿನಿಕ್‌ಗಳನ್ನು ದುರ್ಬೀನು ಇಟ್ಟುಕೊಂಡು ಹುಡುಕಬೇಕಾದ ಸನ್ನಿವೇಶ. ಸೂಕ್ತ ಮಾರ್ಗದರ್ಶನದಲ್ಲಿ ತರಬೇತುಗೊಂಡ ಐಎಂಪಿಗಳು ಶೇ.54ರಷ್ಟು ಈ ಕೊರತೆ ತುಂಬಬಲ್ಲರು ಎನ್ನುವುದು ಅವರನ್ನು ಮುಖ್ಯವಾಹಿನಿಗೆ ತರಲು ನೀಡಲಾಗಿರುವ ಕಾರಣ.

ಪಾರಂಪರಿಕ ಮನೆವೈದ್ಯ, ಪರ್ಯಾಯ ಚಿಕಿತ್ಸೆ ಪದ್ಧತಿ, ಮದ್ದು ನೀಡುವುದನ್ನು ವಂಶಪಾರಂಪರ್ಯವಾಗಿ ಅನುಸರಿಸುವ ನಾಟಿ ವೈದ್ಯರು-ಪಂಡಿತರು ದೇಶದ ಯಾವ ಮೂಲೆ ಹುಡುಕಿದರೂ ಸಿಗುವ ಭಾರತದಲ್ಲಿ ಇಂತಹದೊಂದು ವಿವೇಚನೆಯಿಂದ ಕೂಡಿದ ತೆರೆದ ಮನೋಭಾವ ಮೂಡುವುದು ಅಪೇಕ್ಷಣೀಯ ಎನ್ನುವ ಹಾಗೆ ಸದ್ಯದ ಪರಿಸ್ಥಿತಿಯೂ ಇದೆ: ದೇಹದ ರಕ್ಷಣಾ ವ್ಯವಸ್ಥೆಗೆ ತಿರುಗಿಬೀಳುವ ‘ಆಟೋಇಮ್ಯೂನ್’ ಬೇನೆಗಳು, ಜೀವನಪದ್ಧತಿಯಿಂದ ತಲೆದೋರುವ ಆರೋಗ್ಯ ಸಮಸ್ಯೆಗಳು, ಹೊಸ ಹೊಸ ವೈರಾಣು, ಬ್ಯಾಕ್ಟೀರಿಯಾಗಳು ವೈದ್ಯಕೀಯ ರಂಗಕ್ಕೆ ಎಸೆಯುವ ಸವಾಲುಗಳು...ಸರಕಾರ, ಪರಿಣತರು, ಜನಸಾಮಾನ್ಯರೆಲ್ಲರಲ್ಲಿ ಪರ್ಯಾಯ ಚಿಕಿತ್ಸಾ ಪದ್ದತಿಗಳ ಕುರಿತು ಜಾಗೃತಿ ಬೆಳೆಸುತ್ತಿವೆ.

ಈ ದಿಕ್ಕಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಕೇಂದ್ರಸರಕಾರ ಮೊದಲ ಬಾರಿಗೆ ಪರ್ಯಾಯ ಚಿಕಿತ್ಸೆ ಪದ್ಧತಿಗಳನ್ನೆಲ್ಲ (ಆಯುರ್ವೇದ, ಯೋಗ-ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ AYUSH) ಒಂದೆಡೆ ತಂದು ಅದಕ್ಕೊಂದು ಸಚಿವಾಲಯ ಪ್ರದಾನ ಮಾಡಿದೆ. ಗೋಳೀಕರಣಗೊಂಡ ವಿಶ್ವದಲ್ಲಿ ಭಾರತದ ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಅಮೆರಿಕದಲ್ಲಿ, ಚೀನಾದ ಆಕ್ಯುಪಂಕ್ಚರ್, ಆಕ್ಯುಪ್ರೆಶರ್ ಪಾಕಿಸ್ತಾನದ-ಮೆಕ್ಸಿಕೋಗಳಲ್ಲಿ, ಜರ್ಮನಿಯ ಹೋಮಿಯೋಪತಿ ಭಾರತ-ಶ್ರೀಲಂಕಾಗಳಲ್ಲಿ ಹರಡಿಹೋಗಿರುವುದೂ ಪರಿಗಣಿಸಬೇಕಾದ ವಿದ್ಯಮಾನ.

ಬಣ್ಣ, ವಾಸನೆ, ರುಚಿ, ಕಂಪು, ತಂಪು ಇತ್ಯಾದಿ ಗುಣಗಳಿಂದ ತನ್ನ ಔಷಧಗಳಿಗೆ ಒಂದು ನಂಬಿಕಾರ್ಹತೆ ತಂದುಕೊಡುವ ಆಯುರ್ವೇದದಂತೆ ಹೋಮಿಯೋಪತಿಯಲ್ಲಿ ಔಷಧಗಳು ಇಲ್ಲ. ಹಾಗಾಗಿ 200 ವರ್ಷಗಳಿಗೂ ಹಿಂದಿನ ಈ ಪರ್ಯಾಯ ಪದ್ಧತಿಗೆ ಇಂದಿಗೂ ವಾಗ್ವಾದಗಳಲ್ಲಿ ಕೇಂದ್ರ ಸ್ಥಾನ. ‘‘ಅವು ಕೇವಲ ಸಕ್ಕರೆ ಗುಳಿಗೆಗಳು, ರೋಗಿಗೆ ಅತ್ಯಗತ್ಯವಾದ ‘ಮನೋಸಾಂತ್ವನ-ಪ್ಲಾಸಿಬೊ ಇಫೆಕ್ಟ್’ ನೀಡುತ್ತವೆ; ತ್ವರಿತ-ತಾತ್ಕಾಲಿಕ ಪರಿಹಾರ ನೀಡುವ ಸ್ಟಿರಾಯ್ಡಿಗಳನ್ನು ಗುಳಿಗೆ ರೂಪದಲ್ಲಿ ಸೇವಿಸುವಂತೆ ಮಾಡಿ ಅದ್ಭುತ ಪರಿಣಾಮ ಸಾಧಿಸುತ್ತಾರೆ’’ ಇತ್ಯಾದಿ ಕಪೋಲಕಲ್ಪಿತ ದೋಷಾರೋಪಣೆ ಹರಿಯಬಿಟ್ಟಂತೆ ಪರಿಣತ ಹೋಮಿಯೋ ವೈದ್ಯರಿಂದ ಅವನ್ನು ಉಗ್ರವಾಗಿ ಖಂಡಿಸುವ ಕೆಲಸವೂ ಆಗುತ್ತಿರುತ್ತದೆ.

ಪತ್ರಿಕೆ, ನಿಯುಕಾಲಿಕೆಗಳಲ್ಲಿ ನಿಯಮಿತವಾಗಿ ಈ ಪರ-ವಿರೋಧ ವಿಚಾರಧಾರೆ ಪ್ರಕಟಗೊಳ್ಳುವುದು ಒಂದು ಸಾಮಾನ್ಯ ಸಂಗತಿ. ಆದರೆ, ಹೋಮಿಯೋಪತಿಯ ಪಿತಾಮಹ ಡಾ. ಹಾನಿಮನ್, ಈ ಚಿಕಿತ್ಸಾ ಪದ್ಧತಿಯ ಮೂಲ ಸಿದ್ಧಾಂತವಾದ ""law of similars” (ಕಾಯಿಲೆಯ ಗುಣಲಕ್ಷಣ ಉಂಟುಮಾಡುವ ವಸ್ತುವೇ ಅದಕ್ಕೆ ಔಷಧ ಎನ್ನುವ) ಕಂಡುಹಿಡಿದ ಮೇಲೆ ವರ್ಷಗಟ್ಟಲೆ ಅದನ್ನು ಬೆಂಬೆತ್ತಿದ್ದು, ಸಂಪುಟಗಳಲ್ಲಿ ಎಚ್ಚರಿಕೆಯಿಂದ ದಾಖಲಿಸಿ ಇಟ್ಟಿರುವುದು ಮಾತ್ರ ಅಲ್ಲಗಳೆಯಲು ಬಾರದ ಪುರಾವೆ. ವಂಶವಾಹಿಗಳ ಮೇರು ಸಂಶೋಧನೆ ಮಾಡಿದ ಪಾದ್ರಿ ಗ್ರೆಗರಿ ಮೆಂಡಲ್, ಜೀವವಿಕಾಸದ ಥಿಯರಿ ಲೋಕದ ಮುಂದಿಟ್ಟ ಚಾರ್ಲ್ಸ್ ಡಾರ್ವಿನ್, ಲಸಿಕೆ ಪ್ರಯೋಗಕ್ಕೆ ತನ್ನನ್ನು ತಾನೇ ಒಡ್ಡಿಕೊಂಡ ಲೂಯಿ ಪ್ಯಾಶ್ಚರ್ ಕಥಾನಕಗಳನ್ನು ಓದುವಾಗ ಉಂಟಾಗುವಷ್ಟೇ ಬೆರಗು-ಧನ್ಯತೆ ಹಾನಿಮನ್ ವೃತ್ತಾಂತ ಓದುವಾಗಲೂ ಆಗುತ್ತದೆ.
``The Materia Medica”, “The Repertory” ಮತ್ತು "The Organon” ಹೋಮಿಯೋಪತಿ ವೈದ್ಯಗ್ರಂಥಗಳು. ಸತತ 50 ವರ್ಷ ಕೈಗೊಂಡ ಚಿಕಿತ್ಸಾ ಪ್ರಯೋಗಗಳನ್ನು ವ್ಯವಸ್ಥಿತವಾಗಿ, ಎಚ್ಚರಿಕೆಯಿಂದ, ವಸ್ತುನಿಷ್ಠವಾಗಿ ದಾಖಲಿಸಿರುವ ಸಂಪುಟ ಆರ್ಗನನ್, ಇಂದಿಗೂ ಹೋಮಿಯೋಪತಿ ವೈದ್ಯರು ಚಾಚೂತಪ್ಪದೆ ಅನುಸರಿಸುವ ಆಧಾರಗ್ರಂಥ. ಸಸ್ಯ, ಪ್ರಾಣಿ, ಖನಿಜ ಹಾಗೂ ಇನ್ನಿತರ ನೈಸರ್ಗಿಕ ವಸ್ತುಗಳಿಂದ ಪ್ರತ್ಯೇಕಿಸಿದ ಔಷಧಗಳನ್ನು ಅತ್ಯಂತ ದುರ್ಬಲ ದ್ರಾವಣ ಮಾಡಿ, ಸೂಕ್ಷ್ಮ ಪ್ರಮಾಣದಲ್ಲಿ ನೀಡುವುದು ಹೋಮಿಯೋಪತಿ ವಿಧಾನ. ದುರ್ಬಲ ಮಾಡುತ್ತ ಹೋದ ಹಾಗೆಯೇ ಔಷಧದ ಪರಿಣಾಮ ತೀವ್ರವಾಗುತ್ತದೆ ಎನ್ನುವುದು ಇದರ ಹಿಂದಿರುವ ಪ್ರತಿಪಾದನೆ. ಆದರೆ, ಗರಿಷ್ಠ ಮಟ್ಟದ ದುರ್ಬಲೀಕರಣದಲ್ಲಿ ಮೂಲ ವಸ್ತುವಿನ ಒಂದೇ ಒಂದು ಪರಮಾಣು ಸಹ ಉಳಿಯದೇ ಹೋಗಬಹುದು; ಆಗ ಕಾಯಿಲೆ ವಾಸಿ ಮಾಡಿದ್ದು ಆ ಗೊತ್ತಾದ ಮೂಲವಸ್ತು ಎಂದು ಕರಾರುವಾಕ್ಕಾಗಿ ಹೇಳುವುದು ಹೇಗೆ ಸಾಧ್ಯ ಎಂಬ ಆಕ್ಷೇಪವನ್ನು ಅದು ಎದುರಿಸುತ್ತದೆ. ಮಾನವ ದೇಹದಲ್ಲಿ ಅನೇಕ ನಿಯಂತ್ರಣಗಳ ಜವಾಬ್ದಾರಿ ಹೊತ್ತಿರುವ ಚೋದಕಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಗೊಂಡರೂ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುವ ನಿದರ್ಶನವನ್ನು ಮೈಕ್ರೊ ಡೋಸಸ್-ಸೂಕ್ಷ್ಮ ಪ್ರಮಾಣದ ನೀಡಿಕೆ ಬೆಂಬಲಿಸಲು ನೀಡಲಾಗುತ್ತದೆ.

ಕೀಟಗಳ ಜಗತ್ತಿನಲ್ಲಿ, ಒಂದೇ ಒಂದು ‘ಫೀರೋಮೋನ್’ (ಚೋದಕಗಳಂತೆಯೇ ಇವು) ಪರಮಾಣು, ಮೈಲಿಗಟ್ಟಲೆ ದೂರ ಇರುವ ಇನ್ನೊಂದು ಕೀಟವನ್ನು ಆಕರ್ಷಿಸಲು ಸಾಧ್ಯವಾಗುವುದು ಸಹ ನೆನಪಿಸಿಕೊಳ್ಳಬಹುದಾದ ಇನ್ನೊಂದು ನಮೂನೆ. ‘‘ಕಾಯಿಲೆಗೆ ಗುರಿ ಇಟ್ಟು ಬಾಣ ಬಿಟ್ಟಂತಹ ಪರಿಹಾರ ಸಿಗುತ್ತದೆ. ಆದರೆ ಹೇಗೆ ಎಂದು ಗೊತ್ತಾಗುವುದಿಲ್ಲ. ಹಾಗೆಂದು ಹೋಮಿಯೋಪತಿ ಔಷಧ ಸೇವನೆ ಕೈಬಿಡಬೇಕೆ?’’ ಎನ್ನುತ್ತಾರೆ, ಅದರಿಂದ ಪ್ರಯೋಜನ ಹೊಂದಿದ ಮಂದಿ. ಇದು ‘ಸಂಯುಕ್ತ ವಿಧಾನ’ಗಳ ಕಾಲಮಾನ. ಬಹುತ್ವವನ್ನು ಎಲ್ಲ ಕ್ಷೇತ್ರಗಳಲ್ಲಿ ಆರೋಗ್ಯಕರವಾಗಿ ಆರಾಧಿಸುವ ಜಾಯಮಾನ. ಅಂದಮೇಲೆ ಹೋಮಿಯೋಪತಿಗೆ ಏಕೆ ಸ್ವಯಂ ನಿಷೇಧ ಹಾಕಿಕೊಳ್ಳಬೇಕು? ಅತ್ಯಂತ ಸಮರ್ಪಕವಾಗಿ ಅದರಿಂದ ಕೆಲ ಕಾಯಿಲೆಗಳು ವಾಸಿಯಾದರೆ ಯಾರಿಗೆ ಬೇಡ? ಎಲ್ಲ ಸಮಾಜಗಳೂ, ತಮಗೆ ಒಗ್ಗುವ ಮುಖ್ಯವಾಹಿನಿಯ ವೈದ್ಯಕೀಯದೊಂದಿಗೆ, ಪಾರಂಪರಿಕ ಪರ್ಯಾಯ ಕ್ರಮಗಳನ್ನು ಬೆರೆಸಿಟ್ಟುಕೊಂಡು ಯುಕ್ತವಾಗಿ ಬಳಸುವುದು ಸದ್ಯದ ಅಗತ್ಯ ಎಂಬುದೂ ಒಂದು ಯೋಚನೆ.

ಹಾಗೆ ನಮ್ಮಲ್ಲಿ ಪ್ರತಿಷ್ಠಿತ ಹೋಮಿಯೋಪತಿ ಸಂಸ್ಥೆಗಳಿಗೆ, ಅತ್ಯಂತ ಜನಪ್ರಿಯರಾದ ಹೋಮಿಯೋ ವೈದ್ಯರಿಗೆ ಕೊರತೆಯೇನೂ ಇಲ್ಲ. ಆದರೂ ಜನಜೀವನದೊಂದಿಗೆ, ಒಂದು ಒಪ್ಪಿತ ಸಾಂಸ್ಕೃತಿಕ ಸಂಗತಿ-ವಿಧಾನವಾಗಿ ಅದಿನ್ನೂ ಮಿಳಿತಗೊಂಡಿಲ್ಲ. ಶೀತ-ನೆಗಡಿ-ಕೆಮ್ಮು, ವಾಂತಿ, ಮಲಬದ್ಧತೆ, ಸೋರಿಯಾಸಿಸ್, ಎಜೀಮ, ಅಲರ್ಜಿಯನ್ನೊಳಗೊಂಡ ಚರ್ಮವ್ಯಾಧಿಗಳು, ಕೀಲುನೋವು, ಮೂಳೆ ನೋವು ಮುಂತಾದವುಗಳಿಗೆ ಸುಲಭ ಪರಿಹಾರವನ್ನು ಅದರಿಂದ ಪಡೆಯಬಹುದು ಎನ್ನುವುದು ಸಾಮಾನ್ಯ ಜ್ಞಾನವಾಗಿ ಜನಜನಿತವಾಗಿಲ್ಲ. ಅದನ್ನು ಏನಿದ್ದರೂ, ಪಶ್ಚಿಮ ಬಂಗಾಳದಲ್ಲೇ ಟ್ರೇಸ್ ಮಾಡಬೇಕು. ಹೇಳಿಕೇಳಿ, ತಾಯ್ನಿಡಿಗಿಂತ ಸದಾ ಒಂದು ಹೆಜ್ಜೆ ಮುಂದಿರುವ ಸುಧಾರಣಾ ವಾದಿ ಎಂಬ ಪ್ರತಿಷ್ಠೆ ಗಳಿಸಿಕೊಂಡಿರುವ ರಾಜ್ಯವಲ್ಲವೆ? ಬಿಮಲ್‌ಮಿತ್ರರ ‘ಸಾಹೇಬ್ ಬೀಬಿ ಔರ್ ಗುಲಾಮ್’ ಕೃತಿಯಲ್ಲಿ ‘ಬ್ರಾಹ್ಮೊ’ ಪಂಥದ ಅನಾವರಣವಾದರೆ ಇತ್ತೀಚಿನ ‘ಪಿಕು’ ಸಿನೆಮಾದಲ್ಲಿ ಹೋಮಿಯೋಪತಿಯ ಒಂದು ಝಲಕ್! ಸಾಹೇಬ್ ಬೀಬಿಯಲ್ಲಿ ವಹೀದಾ ರೆಹಮಾನ್ ಜವಾ ಪಾತ್ರಧಾರಿ-ತಂದೆ ವಯೋಮಾನದಿಂದ ಜರ್ಜರಿತನಾದ ಒಬ್ಬ ಬ್ರಾಹ್ಮೊ.

ಆತ ನಡೆಸುವ ‘ಮೋಹಿನಿ ಸಿಂಧೂರ’ದ ಕಾರ್ಖಾನೆ ನಷ್ಟದ ಹಾದಿಯಲ್ಲಿದೆ. ಮೋಹಿನಿ ಸಿಂಧೂರದ ‘ಮಹಿಮೆ’ಯೂ ಇಳಿಮುಖವಾಗುತ್ತ ಸಾಗಿದೆ. ಒಂದು ಕಲಾಕೃತಿ ನೀಡುವ ಈ ಉಲ್ಲೇಖಗಳು ಅನ್ಯ ಭಾಷೆಯ ಓದುಗರಿಗೆ ಸ್ವಲ್ಪದರಲ್ಲಿ ದೊಡ್ಡ ಚಿತ್ರ ಬಿಡಿಸುತ್ತವೆ. ‘ಪಿಕು’ನಲ್ಲಿ ಮಗಳನ್ನು ತುಂಬ ಗೋಳುಹುಯ್ದುಕೊಳ್ಳುವ ಹಾಗೂ ತನ್ನದೇ ಆದ ರೀತಿಯಲ್ಲಿ ಪ್ರೀತಿಸುವ ಘಾಟಿ ವೃದ್ಧನ ಪಾತ್ರದಲ್ಲಿ ಅಮಿತಾಭ್ ಇದ್ದಾರೆ. ತಂದೆ ಮಾಡುವ ಕಿರಿಕಿರಿಗೆ ಖುಷಿಯಿಂದ ತಲೆ ಕೊಡುವ ಹೃದಯವಂತ ಮಗಳಾಗಿ ದೀಪಿಕಾ. ಪಾಪ! ಊಟದ ಬಿಡುವಿನಲ್ಲಿ ಮರೆಯದೆ ಫೋನ್ ಮಾಡಿ ತನ್ನ ಬಾಬಾನ ಮಲಬದ್ಧತೆ ಈ ರೀತಿಯಾಗಿದೆ ಎಂದು ವರ್ಣಿಸಿ, ‘ಬ್ರಯೋನಿಯಾ’ ಕೊಡಲೆ ಎಂದು ಡಾ. ಶ್ರೀವಾಸ್ತವರನ್ನು ಕೇಳುತ್ತಲಿದ್ದರೆ, ಜತೆ ಕೊಡಲು ಬಂದ ಸಹೋದ್ಯೋಗಿ-ಗೆಳೆಯ ಟೇಬಲ್ ಬಿಟ್ಟು ಎದ್ದೇಳುತ್ತಾನೆ. ಬ್ರಯೋನಿಯಾ ಒಂದು ಹೋಮಿಯೋಪತಿ ಔಷಧಿ. ಅವನು ಊಟ ಬಿಟ್ಟು ಎದ್ದುದರ ರಹಸ್ಯ ಭೇದಿಸಲು ಸಿನೆಮಾ ನೋಡಿ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News