16 ವರ್ಷ ಜೈಲಲ್ಲಿ ಕಳೆದ ಪಿಎಚ್‌ಡಿ ವಿದ್ವಾಂಸರಿಗೆ ಪರಿಹಾರ ನೀಡಲು ಆದಿತ್ಯನಾಥ್ ಸರಕಾರಕ್ಕೆ ಆದೇಶ

Update: 2017-05-24 05:36 GMT

ಲಕ್ನೋ, ಮೇ 24: ಸಾಬರಮತಿ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿ 16 ವರ್ಷಗಳ ಜೈಲುವಾಸ ಅನುಭವಿಸಿ ಕೊನೆಗೆ ನಿರಪರಾಧಿ ಎಂದು ಸಾಬೀತಾದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ, ವಿದ್ವಾಂಸ ಗುಲ್ಝಾರ್  ಅಹ್ಮದ್ ವಾನಿ ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆದಿತ್ಯನಾಥ್ ಸರಕಾರಕ್ಕೆ ಬಾರಾಬಂಕಿ ನ್ಯಾಯಾಲಯ ಸೂಚನೆ ನೀಡಿದೆ.

ವಾನಿ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಜೈಲಿನಲ್ಲಿ ಕಳೆದ ಹದಿನಾರು ವರ್ಷಗಳ ಸರಾಸರಿ ಆದಾಯವನ್ನು ಲೆಕ್ಕ ಹಾಕಿ ಪರಿಹಾರ ಮೊತ್ತವನ್ನು ನೀಡುವಂತೆ ಆದಿತ್ಯನಾಥ್ ಸರಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಅರೇಬಿಕ್ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದ ವಾನಿ ಅವರನ್ನು 2001ರ ಜುಲೈ 30ರಂದು ದಿಲ್ಲಿಯಲ್ಲಿ ಬಂಧಿಸಲಾಗಿತ್ತು. ರಾಜ್ಯ ಬೊಕ್ಕಸಕ್ಕೆ ಆಗಿರುವ ಹಾನಿಗೆ ರಾಜ್ಯ ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಆದ್ದರಿಂದ ಸರಕಾರ ಇದರ ಹೊಣೆ ಹೊರಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಗುಲ್ಝಾರ್  ಅಹ್ಮದ್ ವಾನಿಯವರ ವಿರುದ್ಧ ತನಿಖೆ ನಡೆಸಲು ತನಿಖಾಧಿಕಾರಿಗಳು ಅನುಮತಿ ಪಡೆದಿರಲಿಲ್ಲ. ತಮ್ಮ ಕರ್ತವ್ಯ ವ್ಯಾಪ್ತಿಯನ್ನು ಮೀರಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ವಾನಿಯವರ ದೈಹಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿ, ಅವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ನ್ಯಾಯಾಲಯ ಆಕ್ಷೇಪಿಸಿದೆ.

ವಾನಿ ಹಾಗೂ ಮುಹಮ್ಮದ್ ಅಬ್ದುಲ್ ಮೊಬೀನ್ ಅವರನ್ನು ಸಬರಮತಿ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ತನಿಖಾ ನ್ಯಾಯಾಲಯ ಆರೋಪಮುಕ್ತಗೊಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ಇವರು ರೈಲು ಸ್ಫೋಟಕ್ಕೆ ಸಂಚು ರೂಪಿಸಿದ ಸಂಬಂಧ ಯಾವ ಪುರಾವೆಯನ್ನೂ ತನಿಖಾಧಿಕಾರಿಗಳು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News