ಐರಿಷ್ ಪ್ರಧಾನಿಯಾಗಿ ಭಾರತೀಯ ಮೂಲದ ’ಗೇ’ ಮಿನಿಸ್ಟರ್
ಲಂಡನ್, ಜೂ.3: ಐರ್ಲೆಂಡ್‌ನ ಮೊಟ್ಟಮೊದಲ ಸಲಿಂಗಕಾಮಿ ಸಚಿವರೆಂದೇ ಖ್ಯಾತರಾದ, ಮುಂಬೈ ಸಂಜಾತ ವೈದ್ಯರ ಪುತ್ರ ಲಿಯೋ ವರಾದ್ಕರ್ ಐರ್ಲೆಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಏಷ್ಯನ್ ಮೂಲದ ವ್ಯಕ್ತಿಯೊಬ್ಬರು ಈ ಕೆಥೊಲಿಕ್ ದೇಶದ ಪ್ರಧಾನಿಯಾಗುತ್ತಿರುವುದು ಇದೇ ಮೊದಲು.
38 ವರ್ಷದ ವರಾದ್ಕರ್ ದೇಶದ ಇತಿಹಾಸದಲ್ಲೇ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಈಗಾಗಲೇ ಚುನಾಯಿತರಾಗಿರುವ ಅವರ ಆಯ್ಕೆಯನ್ನು ಐರ್ಲೆಂಡ್ ಪಾರ್ಲಿಮೆಂಟ್ ಅನುಮೋದಿಸಬೇಕಿದೆ. ವರಾದ್ಕರ್ ಅವರು ವಿಶ್ವದ ಕಿರಿಯ ಪ್ರಧಾನಿಗಳಲ್ಲಿ ಒಬ್ಬರಾಗಲಿದ್ದಾರೆ. ಆಡಳಿತಾರೂಢ ಫೈನ್‌ಗೇಲ್ ಪಕ್ಷದಿಂದ ಅವರು ಪ್ರಧಾನಿಯಾಗಿ ನಿಯೋಜಿತರಾಗಿದ್ದಾರೆ.
ಮುಂಬೈನ ಅಶೋಕ್ ವರಾದ್ಕರ್ 1960ರ ದಶಕದಲ್ಲಿ ಬ್ರಿಟನ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾಗ, ತಮ್ಮ ಭಾವಿಪತ್ನಿ ಹಾಗೂ ನರ್ಸ್ ಮಿರಿಯಂ ಅವರನ್ನು ಭೇಟಿಯಾಗಿದ್ದರು. ಈ ದಂಪತಿಯ ಕೊನೆಯ ಪುತ್ರ ಲಿಯೋ ವರಾದ್ಕರ್ 2007ರಲ್ಲಿ ರಾಜಕೀಯಕ್ಕೆ ಸೇರುವ ಮುನ್ನ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. 2015ರಲ್ಲಿ ಮೊಟ್ಟಮೊದಲ ಬಾರಿಗೆ ಸಲಿಂಗಕಾಮಿ ಎಂದು ಮುಕ್ತವಾಗಿ ಹೇಳಿಕೊಂಡಿದ್ದರು. ಆರು ವರ್ಷ ಪ್ರಧಾನಿಯಾಗಿದ್ದ ಎಂಡಾ ಕೆನ್ನಿ ಈ ವಾರ ಪದತ್ಯಾಗ ಮಾಡಿದ್ದರಿಂದ ಪಕ್ಷ ಹಾಗೂ ಸಚಿವರಲ್ಲಿ ಅಪಾರ ಬೆಂಬಲ ಹೊಂದಿದ್ದ ವರಾದ್ಕರ್ ನೂತನ ಪ್ರಧಾನಿಯಾಗಿ ಆಯ್ಕೆಯಾದರು. ಸಂಸದರಲ್ಲಿ ಶೇಕಡ 60ರಷ್ಟು ಬೆಂಬಲದೊಂದಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸಾಂಪ್ರದಾಯಿಕ ಐರ್ಲೆಂಡ್ ಸಮಾಜದಲ್ಲಿ 1993ರವರೆಗೂ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು. 1996ರವರೆಗೂ ಇಲ್ಲಿ ವಿಚ್ಛೇದನಕ್ಕೆ ಅವಕಾಶ ಇರಲಿಲ್ಲ. 2015ರಲ್ಲಿ ಸಲಿಂಗ ವಿವಾಹಕ್ಕೆ ಐರ್ಲೆಂಡ್ ಪಾರ್ಲಿಮೆಂಟ್ ಒಪ್ಪಿಗೆ ನೀಡಿತ್ತು. ವರಾದ್ಕರ್ ಅವರು ಮ್ಯಾಥ್ಯೂ ಬರ್ರೆಟ್ ಎಂಬ ವೈದ್ಯರ ಜತೆ ಸಂಬಂಧ ಹೊಂದಿದ್ದಾರೆ.