ಲಸಿಕೆ ವಿರೋಧಿ ಚಳವಳಿಗಾರ ರಾಬರ್ಟ್ ಎಫ್ ಕೆನಡಿ ಅಮೆರಿಕದ ಹೊಸ ಆರೋಗ್ಯ ಕಾರ್ಯದರ್ಶಿ
ವಾಷಿಂಗ್ಟನ್: ಅಮೆರಿಕದ ಲಸಿಕೆ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಿರಿಯ ಮುಖಂಡ ರಾಬರ್ಟ್ ಎಫ್ ಕೆನಡಿ ಜ್ಯೂನಿಯರ್ ಅವರನ್ನು ಆರೋಗ್ಯ ಮತ್ತು ಮಾನವೀಯ ಸೇವೆಗಳ ವಿಭಾಗದ ಕಾರ್ಯದರ್ಶಿಯಾಗಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿದ್ದಾರೆ.
ಸಾರ್ವಜನಿಕ ಆರೋಗ್ಯದ ಬಗೆಗಿನ ಆರ್ ಕೆಎಫ್ ನಿಲುವುಗಳನ್ನು ಅಪಾಯಕಾರಿ ಎಂದು ವಿಶ್ಲೇಷಿಸಲಾಗುತ್ತಿದ್ದು, ಇವರಿಗೆ ಔಷಧಿ, ಲಸಿಕೆ ಮತ್ತು ಆಹಾರ ಸುರಕ್ಷತೆ, ವೈದ್ಯಕೀಯ ಸಂಶೋಧನೆ ಹಾಗೂ ಸಾಮಾಜಿಕ ಸುರಕ್ಷಾ ಜಾಲ ಕಾರ್ಯಕ್ರಮಗಳ ಉಸ್ತುವಾರಿ ಹೊಣೆ ನೀಡಲಾಗಿದೆ.
ಟ್ರುತ್ ಸೋಶಿಯಲ್ ನಲ್ಲಿ ಈ ವಿಷಯವನ್ನು ಟ್ರಂಪ್ ಪ್ರಕಟಿಸಿದ್ದಾರೆ. ಸಾರ್ವಜನಿಕ ಆರೋಗ್ಯ ವಿಚಾರಕ್ಕೆ ಬಂದರೆ ಸುಧೀರ್ಘ ಕಾಲದಿಂದಲೂ ಕಪಟ, ತಪ್ಪು ಮಾಹಿತಿ ಹಾಗೂ ಮಾಹಿತಿ ಕೊರತೆಯಲ್ಲಿ ತೊಡಗಿದ ಕೈಗಾರಿಕಾ ಆಹಾರ ಸಂಕೀರ್ಣಗಳು ಮತ್ತು ಡ್ರಗ್ ಕಂಪನಿಗಳಿಂದ ಅಮೆರಿಕ ಜರ್ಜರಿತವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಕೆನಡಿ ಈ ತೀವ್ರತರ ಕಾಯಿಲೆಯ ಸಾಂಕ್ರಾಮಿಕವನ್ನು ಕೊನೆಗೊಳಿಸಿ, ಅಮೆರಿಕ ಮತ್ತೆ ಸರ್ವಶ್ರೇಷ್ಠ ಹಾಗೂ ಆರೋಗ್ಯವಂತವಾಗಲು ನೆರವಾಗಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಘೋಷಣೆ ಬೆನ್ನಲ್ಲೇ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕೆನಡಿ, "ನಿಮ್ಮ ನಾಯಕತ್ವ ಹಾಗೂ ಸಾಹಸಕ್ಕೆ ಧನ್ಯವಾದಗಳು. ಅಮೆರಿಕವನ್ನು ಮತ್ತೆ ಆರೋಗ್ಯವಂತವನ್ನಾಗಿ ಮಾಡುವ ನಿಮ್ಮ ದೂರದೃಷ್ಟಿಯನ್ನು ಮುನ್ನಡೆಸುವ ಬದ್ಧತೆ ನನ್ನದು. ತೀವ್ರತರ ಕಾಯಿಲೆ ಸಾಂಕ್ರಾಮಿಕವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ವಿಜ್ಞಾನ, ಔಷಧ, ಉದ್ಯಮ ಮತ್ತು ಸರ್ಕಾರಕ್ಕೆ ಸರ್ವಶ್ರೇಷ್ಠ ಪ್ರತಿಭೆಗಳನ್ನು ತರುವ ಅಪೂರ್ವ ಅವಕಾಶ ಇದು" ಎಂದು ಹೇಳಿದ್ದಾರೆ.