ಭಾರತೀಯ ಕ್ರಿಕೆಟಿಗರ ಹಿಪೋಕ್ರಸಿ

Update: 2017-06-04 08:40 GMT

ಭಾರತೀಯ ಕ್ರಿಕೆಟ್‌ನ ಆಡಳಿತ, ಮಾಜಿ-ಹಾಲಿ ಆಟಗಾರರ ಸ್ವಹಿತಾಸಕ್ತ್ತಿಗಳ ಮುಸುಕಿನ ಗುದ್ದಾಟ, ಸ್ವಾರ್ಥ, ಲಾಭಬಡುಕತನಗಳೆಲ್ಲಾ ಧಾರವಾಹಿಯಂತೆ ಒಂದೊಂದಾಗಿ ಹೊರಬೀಳುತ್ತಿವೆ.

ಬಿಸಿಸಿಐನ ಹಲವು ವರ್ಷಗಳ ದುರಾಡಳಿತವನ್ನೆಲ್ಲಾ ನೋಡಿದ ಮೇಲೆ ಸುಪ್ರಿಂ ಕೋರ್ಟ್ ಹಿಂದೆ ಇದ್ದವರನ್ನೆಲ್ಲಾ ಹೊರ ಕಳುಹಿಸಿ ತಾನೇ ಒಂದು ತಾತ್ಕಾಲಿಕ ಆಡಳಿತ ಮಂಡಳಿ ರಚಿಸಿತ್ತು. ಖ್ಯಾತ ಇತಿಹಾಸಕಾರ ಹಾಗೂ ಕ್ರೀಡಾ ಲೇಖಕ ರಾಮಚಂದ್ರ ಗುಹಾ ಅದರ ಸದಸ್ಯರಲ್ಲಿ ಒಬ್ಬರಾಗಿದ್ದರು. ಈಗ ಗುಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂಟು ಪುಟಗಳ ಒಂದು ದೀರ್ಘ ಪತ್ರ ಬರೆದು ಹೊರ ನಡೆದಿದ್ದಾರೆ.

ಅವರ ಆಕ್ಷೇಪಣೆಗಳ ಸಾರಾಂಶವೇನೆಂಬುದು ಈಗ ಕ್ರಿಕೆಟ್ ಆಸಕ್ತರೆಲ್ಲರಿಗೂ ಗೊತ್ತಾಗಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಈಗ ಖ್ಯಾತಿಯ, ಹಣದ ಮದ ನೆತ್ತಿಗೇರಿರುವುದು ಕಾಣುತ್ತಿದೆ. ಧೋನಿಗೂ ಕೆಲಕಾಲ ಇದೇ ಪ್ರವೃತ್ತಿ ಇತ್ತು. ನಮ್ಮ ಕ್ರಿಕೆಟ್ ಟೀಂನ ಸ್ಟಾರ್ ಆಟಗಾರರಾಗಿದ್ದವರೆಲ್ಲಾ ಒಂದಲ್ಲಾ ಒಂದು ಕಾಲದಲ್ಲಿ ಇಡೀ ತಂಡವನ್ನು ಮಾತ್ರವಲ್ಲ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯನ್ನೂ ಆಯ್ಕೆ ಸಮಿತಿಯನ್ನು ತಮ್ಮಿಚ್ಛೆಯಂತೆ ಕುಣಿಸಿಕೊಂಡೇ ಬಂದಿದ್ದಾರೆ.

ಈ ಕೆಟ್ಟ ಪಾಳೇಗಾರಿಕೆ ಪ್ರವೃತ್ತಿಯನ್ನು ಢಾಳಾಗಿ ಕಾಣುವಂತೆ ಅನೇಕ ವರ್ಷ ಪ್ರದರ್ಶಿಸಿದವರು ಸುನೀಲ್ ಮನೋಹರ್ ಗಾವಸ್ಕರ್. ಗವಾಸ್ಕರ್ ಆಡುತ್ತಿದ್ದಾಗ, ಅತಿ ಹೆಚ್ಚು ರನ್‌ಗಳು ಸೆಂಚುರಿಗಳ ದಾಖಲೆಗಳನ್ನು ಮಾಡಿದಾಗ ಆತ ಅಕ್ಷರಶಃ ಭಾರತೀಯ ಕ್ರಿಕೆಟ್ ಅನ್ನು ತನ್ನ ಲೆಗ್‌ಪ್ಯಾಡ್-ಹ್ಯಾಂಡ್‌ಗ್ಲೌಸ್‌ನ ಮಟ್ಟಿಕ್ಕಿಳಿಸಿದ್ದ. ಆತನ ಮಾತು ಮೀರುವ ದಿಟ್ಟತನವನ್ನು ಆಯ್ಕೆ ಸಮಿತಿಯ ಆಡಳಿತ ಮಂಡಳಿಯ ಯಾರೂ ತೋರಿಸುತ್ತಿರಲಿಲ್ಲ.

ನಮ್ಮ ಕ್ರಿಕೆಟ್ ಪರಂಪರೆಯ ಸಜ್ಜನ ಆಟಗಾರರಲ್ಲಿ ಒಬ್ಬರಾಗಿರುವ ಕಪಿಲ್ ದೇವ್ ನಿಖಾಂಜೆಯ ಯಶಸ್ಸು-ಕೀರ್ತಿಯನ್ನು ನೋಡಿ ಸಹಿಸಲಾರದೆ ಒಮ್ಮೆ ಗಾವಸ್ಕರ್ ‘‘ಕಪಿಲ್ ದೇವ್‌ಗೆ ಸರಿಯಾಗಿ ಇಂಗ್ಲಿಷ್ ಮಾತಾಡಲು ಬರಲ್ಲ’’ ಎಂದು ಹೇಳಿಕೆ ನೀಡಿ ತನ್ನ ಅಹಂಕಾರ ತೋರಿಸಿದ್ದ.

ಮುಹಮ್ಮದ್ ಅಝರುದ್ದೀನ್ ಒಬ್ಬ ಮುಸಲ್ಮಾನ ಹಾಗೂ ಮಿಡಲ್ ಕ್ಲಾಸಿನಿಂದ ಬಂದವರೆಂಬ ಕಾರಣಕ್ಕೆ ಅವರ ಬ್ಯಾಟಿಂಗ್ ಪ್ರತಿಭೆಯನ್ನು ಬದಿಗಿರಿಸಿ ಅಸಹನೆಯ ಮಾತುಗಳನ್ನು ಇತರ ಮೇಲ್ಜಾತಿಯ ಶ್ರೀಮಂತ ವರ್ಗದ ಕ್ರಿಕೆಟಿಗರೇ ಹೇಳುತ್ತಿದ್ದರು.

ಅಝರುದ್ದೀನ್ ಹೈದರಾಬಾದಿನ ರಣಜಿ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾದಾಗ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬಂದಿದ್ದರಂತೆ.

ಕರ್ನಾಟಕದ ರಣಜಿ ಕ್ರಿಕೆಟ್ ಆಟಗಾರನೊಬ್ಬ ಒಮ್ಮೆ ಅಝರುದ್ದೀನ್ ಬಗ್ಗೆ ನನ್ನೊಂದಿಗೆ ಮಾತನಾಡುವಾಗ

‘‘ಸೈಕಲ್‌ನಲ್ಲಿ ಓಡಾಡುತ್ತಿದ್ದವನನ್ನು (ಅಝರ್) ಇಂಡಿಯನ್ ಕ್ರಿಕೆಟ್ ಟೀಂಗೆ ತಗೊಂಡಿದ್ದಾರೆ’’ ಅಂತ ಗೇಲಿ ಮಾತು ಆಡಿದ್ದ. ಅಝರ್ ಒಂದು ಕಾಲದಲ್ಲಿ ಸೈಕಲ್‌ನಲ್ಲಿ ಓಡಾಡಿದ್ದರೆ ಅದರಿಂದ ಈ ಮೂರ್ಖನಿಗಾದ ತೊಂದರೆ ಏನೆಂಬುದು ನನಗೆ ಅರ್ಥವಾಗಿರಲಿಲ್ಲ.

ಬಹುಶಃ ಆತನ ಮಾತಿನ ಸಾರಾಂಶ ಏನೆಂದರೆ ಭಾರತೀಯ ಕ್ರಿಕೆಟ್ ಶ್ರೀಮಂತ ವರ್ಗದವರಿಗೆ ಮೀಸಲೆಂಬ ನಂಬಿಕೆ ಇದ್ದಿರಬೇಕು.

ಈಗ ಕಪಿಲ್ ದೇವ್, ಅಝರುದ್ದೀನ್ ಮುಂತಾದವರೆಲ್ಲಾ ಕ್ರಿಕೆಟ್ ಅಂಗಳದ ಯಾವೊಂದು ವಿಭಾಗದಲ್ಲೂ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲಾಗಿದೆ.

ಕ್ರಿಕೆಟ್ ಆಡಿ ನಿವೃತ್ತರಾದವರೆಲ್ಲಾ ಕೋಚ್, ಅಂಪೈರ್, ಕಾಮೆಂಟರೇಟರ್‌ಗಳಾಗಿ ಅಲ್ಲೇ ಪುನರಾವತಾರ ಎತ್ತುತ್ತಾ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಆಡುವುದನ್ನು ಹೊರತು ಪಡಿಸಿ ಬಹುತೇಕ ಉಳಿದೆಲ್ಲಾ ವಿಭಾಗಗಳಲ್ಲೂ ಇವರೇ ಕಿಕ್ಕಿರಿದು ತುಂಬಿಕೊಂಡಿದ್ದಾರೆ. ಇನ್ನು ನಮ್ಮ ಹಾಲಿ ಆಟಗಾರರೇನೂ ಕಡಿಮೆ ಇಲ್ಲ. ಒಂದು ಕಡೆ ಭಾರತೀಯ ಕ್ರಿಕೆಟ್ ಟೀಂನಲ್ಲೂ ಆಡುತ್ತಾ, ಮತ್ತೊಂದೆಡೆ ಐಪಿಎಲ್‌ನಲ್ಲೂ ಆಟಗಾರರಾಗಿ, ಕೋಚ್‌ಗಳಾಗಿ, ಟೀಂ ಮ್ಯಾನೇಜರ್‌ಗಳಾಗಿ ಜಾಹೀರಾತು ಮಾಡೆಲ್‌ಗಳಾಗಿ ಡಬಲ್ ರೋಲ್, ತ್ರಿಬಲ್ ರೋಲ್ ಮಾಡುತ್ತಾ ಕ್ರಿಕೆಟ್ ಎಂಬ ಹಣದ ಅಣೆಕಟ್ಟಿನಿಂದ ತಂತಮ್ಮ ಪಾಲಿನ ಹಣದ ದೊಡ್ಡ ಕಾಲುವೆಗಳನ್ನೇ ತೋಡಿಕೊಳ್ಳುತ್ತಿದ್ದಾರೆ.

ದಿನಬೆಳಗಾದರೆ ‘‘ನಾನು ದೇಶಕ್ಕಾಗಿ ಕ್ರಿಕೆಟ್ ಆಡುತ್ತೇನೆ’’ ಎಂದು ಹೇಳುತ್ತಾರಾದರೂ ನಮ್ಮ ದೇಶದ ಜನರಿಗೆ ಒಂಬತ್ತು ಸಾವಿರ ಕೋಟಿ ರೂಪಾಯಿ ಮೋಸ ಮಾಡಿ ದೇಶ ಬಿಟ್ಟು ಓಡಿ ಹೋಗಿರುವ ವಿಜಯ್ ಮಲ್ಯರ ‘ರಾಯಲ್ ಚಾಲೆಂಜರ್ಸ್‌’ ತಂಡ ಸೇರಿ ಆಡಲು ಇವರೆಂದೂ ನಾಚಿಕೆ ಪಡುವುದಿಲ್ಲ. ಇವರು ಜಾಹೀರಾತು ನೀಡುವ ಬಹುತೇಕ ಬ್ರಾಂಡ್‌ಗಳು ವಿದೇಶಿ ಆಗಿದ್ದಾಗಲೂ ಇವರ ದೇಶಪ್ರೇಮದ ಬೊಗಳೆ ಮಾತುಗಳು ನಿಲ್ಲುವುದಿಲ್ಲ.

ಇದೆಲ್ಲ ಹಿಪಾಕ್ರಸಿಗಳ ಪ್ರತಿರೂಪದಂತಿರುವ ಕ್ಯಾಪ್ಟನ್ ವಿರಾಟ್ ಕೋಹ್ಲಿ ಈಗ ಭಾರತೀಯ ಕ್ರಿಕೆಟ್‌ನ ಸರ್ವಾಧಿಕಾರಿಯಾಗಲು ಬಯಸುತ್ತಿದ್ದಾನೆ. ಈ ಕೋಹ್ಲಿಯ ಹಿಂದೆ ಬೆಂಬಲವಾಗಿ ಅನೇಕ ಬಹುರಾಷ್ಟ್ರೀಯ ಕ್ರೀಡಾ ಕಂಪೆನಿಗಳು, ಆಟದ ವ್ಯಾಪಾರಿ ಲಾಬಿಗಳಿವೆ. ಸದ್ಯಕ್ಕೆ ಟೀಂ ಕೋಚ್ ಆಗಿರುವ ದುರಾಸೆಯ ಅನಿಲ್ ಕುಂಬ್ಳೆಯವರನ್ನು ತೆಗೆದು ಆ ಜಾಗಕ್ಕೆ ಬಾಯಿಬಡುಕ ವೀರೇಂದ್ರ ಸೆಹ್ವಾಗ್‌ನನ್ನು ತಂದು ಕೂರಿಸುವ ಪ್ರಯತ್ನ ನಡೆಯುತ್ತಿದೆ. ಸೆಹ್ವಾಗ್ ಎಂತಾ ಅವಿವೇಕಿ ಎಂದರೆ ಆತನಿಗೆ ಕ್ರಿಕೆಟ್ ಆಟಕ್ಕೂ, ರಾಜಕಾರಣಕ್ಕೂ ಇರುವ ಪ್ರಾಥಮಿಕ ವ್ಯತ್ಯಾಸವೂ ತಿಳಿದಿಲ್ಲ.

ಭಾರತೀಯ ಕ್ರಿಕೆಟ್‌ನಲ್ಲಿ ವೃತ್ತಿಪರತೆಯ ಕೊರತೆ ತುಂಬಿತುಳುಕುತ್ತಿದೆ. ಅಂತಲ್ಲಿ ಸಣ್ಣತನ, ಸ್ವಜನ ಪಕ್ಷಪಾತ, ಸ್ವಾರ್ಥ ಮುಂತಾದವೆಲ್ಲಾ ವಿಜೃಂಭಿಸುತ್ತಿರುತ್ತವೆ.

ರಾಮಚಂದ್ರ ಗುಹಾರವರ ಪತ್ರ ಈಗ ನಮ್ಮ ಹಾಲಿ-ಮಾಜಿ ಕ್ರಿಕೆಟಿಗರ ಮೇಲೆ ಒಂದು ಬೌನ್ಸರ್‌ನಂತೆ ಬಿದ್ದಿದೆ. ಗುಹಾರವರ ಪ್ರಶ್ನೆ ಗಳಿಗೆ-ಆಕ್ಷೇಪಣೆಗಳಿಗೆ ಸರಿಯಾದ ಉತ್ತರ ನೀಡುವಷ್ಟು ನೈತಿಕತೆಯನ್ನು ನಮ್ಮ ಬಹುತೇಕ ಆಟಗಾರರು ಉಳಿಸಿಕೊಂಡಿಲ್ಲ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News