ಪುಸ್ತಕ ಮತ್ತು ನವಿಲುಗರಿ- ಕೆಂಡಗಳಾಗಿರುವ ಮೊಗ್ಗುಗಳು
ಪುಸ್ತಕ ಮತ್ತು ನವಿಲುಗರಿ ಮುಂಬೈಯಲ್ಲಿ ನೆಲೆಸಿರುವ ಕವಯಿತ್ರಿ ಗಿರಿಜಾಶಾಸ್ತ್ರಿಯವರ ಎರಡನೆಯ ಕಥಾ ಸಂಕಲನ. ಈ ಹಿಂದೆ ಇವರು ಪ್ರಕಟಿಸಿರುವ ‘ಹೆಣ್ಣೊಬ್ಬಳ ಧ್ವನಿ’ ಕವನಸಂಕಲನವೂ ಈ ಕವಯಿತ್ರಿಯ ವಿಭಿನ್ನಧ್ವನಿಯನ್ನು ಪರಿಚಯಿಸಿತ್ತು. ಕುಕ್ಕರ್‌ನೊಳಗೆ ಕುದಿಯುತ್ತಿರುವ ಹೆಣ್ಣಿನ ಭಾವನೆಯನ್ನು ಅವರು ಹಲವು ಹೊಸತನಗಳ ಜೊತೆಗೆ ಆ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದರು. ಅದರ ಎರಡನೆಯ ಭಾಗ ದಂತಿದೆ ‘ಪುಸ್ತಕ ಮತ್ತು ನವಿಲುಗರಿ’.
ಮುನ್ನ್ನುಡಿಯಲ್ಲಿ ಲೇಖಕ ಜಿ. ರಾಜಶೇಖರ್ ಕೃತಿಯ ಕುರಿತಂತೆ ಹೀಗೆ ಬರೆಯುತ್ತಾರೆ ‘‘....ವಸ್ತುವಿಗೆ ಸಂಬಂಧಿಸಿದಂತೆ ಪ್ರಸ್ತುತ ಸಂಕಲನದಲ್ಲಿ ಕಾಣುವ ವೈವಿಧ್ಯ ವಿಸ್ಮಯವುಂಟು ಮಾಡುತ್ತದೆ. ಕವಯಿತ್ರಿಯ ತಾಯಿ, ಅಜ್ಜಿ, ಮುತ್ತಜ್ಜಿಯ ನೆನಪು, ಸದ್ಯಕ್ಕೆ ಅವರು ನೆಲೆಸಿರುವ ಮುಂಬೈ ಮಹಾನಗರಿಯ ಧಾವಂತ, ಬಹುತೇಕ ಎಲ್ಲರಿಗೂ ಎದುರಾಗುವ ದಾಂಪತ್ಯದ ಬಿಕ್ಕಟ್ಟು, ಕಾಮಪ್ರೇಮದ ಹತಾಶೆ, ನಡುವಯಸ್ಸಿನ ತಲ್ಲಣ-ಹೀಗೆ ಬಗೆ ಬಗೆಯ ಸಂಗತಿಗಳನ್ನು ಅವರು ನಿರೂಪಿಸುತ್ತಾರೆ..’’
ಕವಿತೆಯ ಪ್ರತಿಸಾಲುಗಳು ಆಳದಲ್ಲಿ ಪ್ರತಿಭಟನೆಯನ್ನು ಬಚ್ಚಿಟ್ಟುಕೊಳ್ಳುತ್ತಲೇ, ತನ್ನ ಬದುಕನ್ನು ಹಿಡಿದಿಟ್ಟುಕೊಳ್ಳುವ ವ್ಯಾಮೋಹಗಳಿಂದ ಕಳಚಿಕೊಳ್ಳುವುದಿಲ್ಲ. ಹೆಚ್ಚಿನ ಕನ್ನಡದ ಕವಯಿತ್ರಿಯರಂತೆಯೇ ಇಲ್ಲಿಯೂ ಲೇಖಕಿ ತಮ್ಮ ಆತ್ಮ ಸಂಗಾತವನ್ನು ಅರುಹುವಾಗ ‘ಅಕ್ಕ’ನ ಮೊರೆ ಹೋಗುತ್ತಾರೆ. ಆತ್ಮವಿಹೀನವಾದ ವಿಷಮ ಕೂಟದ ಸಮಕಾಲೀನ ದಾಂಪತ್ಯವನ್ನು ನಿರೂಪಿಸುವುದಕ್ಕೆ ಅವರು ಚೆನ್ನಮಲ್ಲಿಕಾರ್ಜುನನ್ನು ಆಶ್ರಯಿಸುತ್ತಾರೆ. ‘‘ಅಚ್ಚಿನಿಂದ ಮಚ್ಚುಗ ಮೆಲ್ಲಗೆ ಹೊರಬಿದ್ದು
ಕಾಲು ತಲೆ ಬೇರ್ಪಟ್ಟವು
ಹೋರಿದ ಹಗಲಿರುಳುಗಳು ನೆತ್ತರ ಹೊಂಡಗಳಾದವು
ವನವನದ ಮೊಗ್ಗುಗಳೆಲ್ಲ ಕೆಂಡಗಳಾದವು
ಚೆನ್ನ ಕರಗಿಬಿಟ್ಟ
ಮಲ್ಲಿಗೆ ಬಾಡಿಹೋಯಿತು...’’
ಎನ್ನುವ ಭೀಕರ ಸೌಂದರ್ಯದ ರೂಪಗಳು ಆತ್ಮಸಂಗಾತವಿಲ್ಲದೆ ಹೆಣೆದುಕೊಂಡ ಶರೀರಗಳ ದುರಂತವನ್ನು ಹೇಳುತ್ತದೆ. ಹೊರಟು ಹೋದ ಕವಿತೆಯಲ್ಲಿ ಬರುವ ‘ಹಿಮ್ಮೆಟ್ಟಿದ ಕೋಮಲ ಪಾದ/ಹತ್ತೆಂಟು ಬಳೆ ಚೂರಿನ ಕೆಂಪು’ ಕೊಡುವ ವಿಷಾದದ ಛಾಯೆ ಎಲ್ಲ ಕವಿತೆಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಸುಳಿಯುತ್ತದೆ. ಅನಂತಮೂರ್ತಿಯವರು ಹೇಳುವಂತೆ ‘‘ಇವರ ಪದ್ಯಗಳು ಆಪ್ತ ವ್ಯಾಕ್ಯಗಳಂತೆ ತಟ್ಟುತ್ತವೆ. ಸಾಮಾಜಿಕ/ವೈಯಕ್ತಿಕ ಇತ್ಯಾದಿ ವಿಂಗಡನೆ ಮಾಡಲು ಬಾರದಂತೆ ನಮಗೆ ನಾವು ಸತ್ಯವಾಗಿ ವೌನವಾಗಿ ಹೇಳಿಕೊಳ್ಳುವ ಮಾತುಗಳಂತೆ ಇವರ ಕವಿತೆಗಳು ಇರುತ್ತವೆ....’’.
ಅಭಿನವ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂ.