ಸರಕಾರಿ ಆಸ್ಪತ್ರೆಗಳ ಚೇತರಿಕೆ ಯಾವಾಗ?
ಮುಂದಿನ ದಿನಗಳಲ್ಲಿ ಎಲ್ಲಾ ಸರಕಾರಿ ಯೋಜನೆಗಳನ್ನು ಖಾಸಗಿ ಪ್ರತಿಷ್ಠಿತ ಆಸ್ಪತ್ರೆಗಳ ಸುಪರ್ದಿಗೆ ಒಪ್ಪಿಸಿ, ಸರಕಾರ ಕೈಕಟ್ಟಿ ಕೂತರೆ ಅಚ್ಚರಿಪಡಬೇಕಿಲ್ಲ. ಯಶಸ್ವಿನಿ ಯೋಜನೆಗೆ ಖರ್ಚು ಮಾಡುವ ಹಣವನ್ನೇ ಸದ್ಬಳಕೆ ಮಾಡಿಕೊಂಡು ಸಾರ್ವಜನಿಕ ಆಸ್ಪತ್ರೆಯನ್ನೇ ಇನ್ನಷ್ಟು ಸದೃಢಗೊಳಿಸಲು ಸರಕಾರ ಯಾಕೆ ಚಿಂತನೆ ಮಾಡಬಾರದು? ಸರಕಾರಿ ಆಸ್ಪತ್ರೆಯಲ್ಲೇ ಯಾಕೆ ಉತ್ತಮ ಚಿಕಿತ್ಸೆ ಕೊಡಿಸಬಾರದು?
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಫಾಮಿದಾ ಎಂಬವರು ಪತಿ ಅಮೀರ್ ಸಾಬ್ ಅವರನ್ನು ಸ್ಕಾನಿಂಗ್‌ಗಾಗಿ ನೆಲದ ಮೇಲೆ ಎಳೆದುಕೊಂಡು ಹೋದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಧ್ಯಮದಲ್ಲಿ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆದಿದ್ದು, ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮಹಿಳೆಯು ಸ್ಕಾನಿಂಗ್ ಕೇಂದ್ರದವರೆಗೆ ಪತಿಯನ್ನು ಎಳೆದೊಯ್ಯಲು ಸಾಧ್ಯವೇ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದರೆ, ಈ ಅವಸ್ಥೆ ಕಂಡು ತುಂಬಾ ನೋವಾಗುತ್ತದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ. ‘‘ಛೇ ಛೇ ಇಂತಹ ಸಮಸ್ಯೆಯೇ ಆಸ್ಪತ್ರೆಯಲ್ಲಿ ಇಲ್ಲ’’ ಎಂದು ಮತ್ತೊಬ್ಬ ಸಚಿವ ಕಾಗೋಡ ತಿಮ್ಮಪ್ಪ ಘಟನೆಗೆ ಬೇರೆಯದ್ದೇ ವ್ಯಾಖ್ಯಾನ ನೀಡಿದರೆ, ನೋಡುನೋಡುತ್ತಿದ್ದಂತೆ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ಸೇವೆಯಿಂದ ಅಮಾನತು ಆಗುತ್ತಾರೆ. ಘಟನೆ ಕುರಿತು ಹಲವು ರೀತಿಯ ಅಭಿಪ್ರಾಯಗಳಿದ್ದು, ಸತ್ಯಾಂಶ ಸಂಪೂರ್ಣವಾಗಿ ಬೆಳಕಿಗೆ ಬರಬೇಕಿದೆ.
ಆದರೆ ಇದೇ ನೆಪದಲ್ಲಿ ರಾಜ್ಯದ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ನಡೆಸಿದರೆ, ಹಲವು ಅಂಶಗಳು ಅಚ್ಚರಿ ಮೂಡಿ ಸುತ್ತವೆ. ಖಾಸಗಿ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಸಮಾನವಾಗಿ ಸಾರ್ವಜನಿಕ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವುದೇ ಗುರಿಯೆಂದು ಒಂದೆಡೆ ಸರಕಾರ ಹೇಳಿದರೆ, ಮತ್ತೊಂದೆಡೆ ಅವೇ ಸಾರ್ವಜನಿಕ ಆಸ್ಪತ್ರೆಗಳು ಅನುದಾನದ ಕೊರತೆ ಮತ್ತು ಅಗತ್ಯ ಸೌಕರ್ಯ ಇಲ್ಲದೇ ಸೊರಗಿದಂತೆ ಕಾಣುತ್ತವೆ. ಅತೀ ಕಡಿಮೆ ದರದಲ್ಲಿ ರೋಗಿಗಳು ಸರಕಾರಿ ಆಸ್ಪತ್ರೆಯಲ್ಲಿನ ಅತ್ಯಾಧುನಿಕ ಸಾಧನಗಳಿಂದ ಚಿಕಿತ್ಸೆ ಪಡೆಯಬಹುದು ಎಂದು ಅತ್ತ ಸಚಿವರು ಹೇಳುವುದೇ ತಡ, ಇತ್ತ ರೋಗಿಗಳನ್ನು ತಮ್ಮ ಕಡೆ ಸೆಳೆದುಕೊಳ್ಳುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಖಾಸಗಿ ಆಸ್ಪತ್ರೆಗಳು ತೊಡಗುತ್ತವೆ. ಇದು ನಿನ್ನೆ- ಮೊನ್ನೆಯಿಂದಲ್ಲ, ಹಲವು ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಒಟ್ಟಾರೆ ಆರೋಗ್ಯ ಅವ್ಯವಸ್ಥೆಯ ಮಧ್ಯೆ ನರಳುವುದು ಮತ್ತು ಬಲಿಯಾಗುವುದು ರೋಗಿಗಳು.
ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಅಷ್ಟೇ ಅಲ್ಲ, ಅಗತ್ಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ನೇಮಕಗೊಂಡಿಲ್ಲ. ನೇಮಕಗೊಂಡವರು ಜಿಲ್ಲಾ ಕೇಂದ್ರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಸಿದ್ಧರಿಲ್ಲ. ಕೆಲಸಕ್ಕೆ ಹಾಜರಾದ ಎರಡು-ಮೂರು ತಿಂಗಳಲ್ಲಿ ರಾಜೀನಾಮೆ ನೀಡುವ ಕೆಲವರು ಬೆಂಗಳೂರು ಅಥವಾ ಮುಂಬೈನಂತಹ ಮಹಾನಗರಗಳಲ್ಲಿ ಸ್ವಂತ ಕ್ಲಿನಿಕ್ ಅಥವಾ ಬೃಹತ್ ಆಸ್ಪತ್ರೆ ಆರಂಭಿಸುತ್ತಾರೆ. ಜಿಲ್ಲಾ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಸಲುವಾಗಿ ವೈದ್ಯಕೀಯ ಪದವಿ ಗಳಿಸಿಲ್ಲ ಎನ್ನುವ ಅವರು, ‘‘ವೈದ್ಯನಾಗಲು ಮಾಡಿದ ಖರ್ಚುವೆಚ್ಚವನ್ನು ವಾಪಸ್ ಪಡೆದುಕೊಳ್ಳುವುದು ಬೇಡವೇ? ನಾವೂ ಬದುಕುವುದು ಬೇಡವೇ’’ ಎಂದು ಮುಲಾಜಿಲ್ಲದೆ ಹೇಳುತ್ತಾರೆ.
ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ನಗರಪ್ರದೇಶದವರು ಉತ್ತಮ ಸೌಕರ್ಯಗಳನ್ನು ಹೊಂದಿದ್ದು, ಗ್ರಾಮೀಣ ಪ್ರದೇಶದವರು ಆರೋಗ್ಯ ರಕ್ಷಿಸಿಕೊಳ್ಳಲು ಕನಿಷ್ಠ ಸೌಕರ್ಯವೂ ಹೊಂದಿಲ್ಲ ಎಂಬುದನ್ನು ಅವರು ಮರೆತು ಬಿಡುತ್ತಾರೆ. ‘‘ವೈದ್ಯರೇ ಕಣ್ಣೆದುರಿನ ದೇವರು. ಅವರ ಕೈಗುಣದಿಂದ ರೋಗವೆಲ್ಲ ಪರಿಹಾರ’’ ಎಂದು ನಂಬುವ ಗ್ರಾಮಸ್ಥರ ಆಶಾಭಾವವನ್ನೇ ನುಚ್ಚುನೂರು ಮಾಡುತ್ತಾರೆ.
ಇದೇ ಜಾಡನ್ನು ಹಿಡಿದು ಸಾಗಿದರೆ, ಸುಲಭವಾಗಿ ಉತ್ತರ ಸಿಗದ ಹಲವು ಪ್ರಶ್ನೆಗಳು ಕಾಡುತ್ತವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಯೋಜನೆಗಳಿಗೆಂದೇ ಮೀಸಲಿಡಲಾಗುವ ಕೋಟ್ಯಂತರ ರೂ. ಅನುದಾನ ಸದ್ಬಳಕೆಯಾಗದೇ ಎಲ್ಲಿ ಕಾಣೆಯಾಗುತ್ತದೆ? ಮೂಲಸೌಕರ್ಯ ಒದಗಿಸಿರುವ ಕುರಿತು ಸರಕಾರಗಳು ಹೆಮ್ಮೆಯಿಂದ ಹೇಳಿಕೊಂಡರೂ ಕೆಲ ಆಸ್ಪತ್ರೆಗಳಲ್ಲಿ ಯಾಕೆ ನೀರು ಪೂರೈಕೆ, ಶೌಚಾಲಯ ಮತ್ತು ಇನ್ನಿತರ ಸೌಕರ್ಯಗಳು ಸಮರ್ಪಕವಾಗಿ ಇರುವುದಿಲ್ಲ? ಅಳವಡಿಕೆಯಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ರೂ. ವೆಚ್ಚದ ಅತ್ಯಾಧುನಿಕ ಸಾಧನಗಳು ಸೂಕ್ತ ನಿರ್ವಹಿಣೆಯಿಲ್ಲದೇ ಹೇಗೆ ಕೆಡುತ್ತವೆ? ಸಿಬ್ಬಂದಿ ಲಂಚ ಕೇಳಿದರೆ, ತಕ್ಷಣವೇ ವೈದ್ಯಾಧಿಕಾರಿಗಳ ಗಮನಕ್ಕೆ ತನ್ನಿ ಎಂಬ ಪುಟ್ಟ ಫಲಕ ಅಂಟಿಸಲಾಗಿದ್ದರೂ ಆಸ್ಪತ್ರೆಯಲ್ಲಿ ಅತೀ ಹೆಚ್ಚಿನ ಭ್ರಷ್ಟಾಚಾರವಿದೆ ಎಂಬ ಆರೋಪ ಯಾಕೆ ಕೇಳಿ ಬರುತ್ತದೆ? ಸರಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಸಂಬಳ ಪಡೆದು, ಪುನಃ ಅದೇ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಅಥವಾ ತಮ್ಮದೇ ಸ್ವಂತ ಕ್ಲಿನಿಕ್‌ನಲ್ಲಿ ದುಡಿಯುವುದು ಯಾಕೆ? ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವುದಾಗಿ ಹೇಳುವ ವೈದ್ಯಕೀಯ ವಿದ್ಯಾರ್ಥಿಗಳು ಯಾಕೆ ತಕ್ಷಣವೇ ಬದಲಾಗುತ್ತಾರೆ?
ರಾಜ್ಯದಲ್ಲಿ 50ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು ಪ್ರತೀ ವರ್ಷ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವೈದ್ಯರಾಗಿ ಪ್ರಮಾಣ ಸ್ವೀಕರಿಸುತ್ತಾರೆ. ಎಂತಹ ಕಷ್ಟನಷ್ಟವಿರಲಿ, ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಥಮ ಆದ್ಯತೆ ನೀಡುವುದಾಗಿ ಹೇಳುತ್ತಾರೆ. ಅವರು ಹೇಳಿದಂತೆ ಎಲ್ಲವೂ ನಿರೀಕ್ಷೆಯಂತೆ ನೆರವೇರಿದ್ದರೆ, ಈ ವೇಳೆಗೆ ಇಡೀ ರಾಜ್ಯವು ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಹೊಂದಿರಬೇಕಿತ್ತು. ನಗರಪ್ರದೇಶದಲ್ಲಿ ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೇವೆ ಲಭ್ಯವಿದೆ ಎಂದು ಹೇಳಿಕೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಬೃಹತ್ ಕಟ್ಟಡಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಅಲ್ಲಿ ಅಗತ್ಯವಿದ್ದಷ್ಟು ವೈದ್ಯರಿಲ್ಲ. ಬಹುತೇಕ ಕಡೆ ಹಿರಿಯ ಶುಶ್ರೂಷಕಿಯರೇ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ. 24 ಗಂಟೆ ಹೆರಿಗೆ ಸೌಲಭ್ಯ ಇರುವ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಸರಿಗೆ ಮಾತ್ರ ಪಲಕ ಅಳವಡಿಸಲಾಗಿದೆ ಹೊರತು ಅಲ್ಲಿ ಗರ್ಭಿಣಿಯರು ಅಥವಾ ಬಾಣಂತಿಯರು ದಾಖಲಾಗಲು ಅವಕಾಶವಿಲ್ಲ. ಕಾರಣ, ಹೆರಿಗೆ ಶಸ್ತ್ರಚಿಕಿತ್ಸೆ ಮಾಡಬಲ್ಲ ವೈದ್ಯರಿಲ್ಲ. ಅನಿವಾರ್ಯವಾಗಿ ಅವರು ಜಿಲ್ಲಾ ಅಥವಾ ನಗರದ ಆಸ್ಪತ್ರೆಗೆ ತೆರಳಬೇಕು.
ಎರಡು ವರ್ಷ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂದು ಸರಕಾರ ನೋಟಿಸ್ ಹೊರಡಿಸಿದರೂ ವೈದ್ಯರು ಗಂಭೀರವಾಗಿ ಪರಿಗಣಿಸುವುದಿಲ್ಲ. ದಂಡ ವಿಧಿಸುವ ಕುರಿತು ಸರಕಾರ ಎಚ್ಚರಿಕೆ ನೀಡಿದರೆ, ವೈದ್ಯರು ಎಷ್ಟಾದರೂ ದಂಡ ಕಟ್ಟಲು ಸಿದ್ಧರಾಗುತ್ತಾರೆ ಹೊರತು ಗ್ರಾಮಗಳಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಅದಕ್ಕೆ ಅವರು ಅವರದ್ದೇ ಆದ ಕಾರಣಗಳನ್ನು ನೀಡುತ್ತಾರೆ. ಸೌಕರ್ಯಗಳ ಕೊರತೆಯಿರುವ ಗ್ರಾಮೀಣ ಅಥವಾ ಪಟ್ಟಣ ಪ್ರದೇಶಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಚಿಕಿತ್ಸೆ ವೇಳೆ ಅವಘಡ ಸಂಭವಿಸಿ, ರೋಗಿ ಸಾವನ್ನ ಪ್ಪಿದರೆ ಅವರ ಸಂಬಂಧಿಕರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಒಂದು ವೇಳೆ ಹಲ್ಲೆ ನಡೆಸಿದರೆ, ಅಲ್ಲಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.
ಆಸ್ಪತ್ರೆ ಸಮೀಪದಲ್ಲೇ ಸೂಕ್ತ ವಸತಿ ವ್ಯವಸ್ಥೆ ಜೊತೆಗೆ ಕೆಲ ಮೂಲಸೌಕರ್ಯ ಒದಗಿಸಿದರೆ, ಅಲ್ಲಿ ತಂಗುವುದರ ಬಗ್ಗೆ ಚಿಂತನೆ ಮಾಡಬಹುದೇ ಹೊರತು ಇಲ್ಲದಿದ್ದರೆ ಅಲ್ಲಿ ಇರಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಅದೆಷ್ಟೋ ವೈದ್ಯರು ಇದ್ಯಾವುದನ್ನು ಲೆಕ್ಕಿಸದೇ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದೇ ಪರಮ ಗುರಿಯೆಂದು ಭಾವಿಸಿದ್ದಾರೆ. ಸರಕಾರಿ ವೇತನ ಮತ್ತು ಸೌಲಭ್ಯಕ್ಕೆ ಮಾತ್ರ ಸೇವೆ ಸಲ್ಲಿಸುತ್ತಿರುವ ಅಂತಹ ವೈದ್ಯರು ರೋಗಿಗಳು ಮತ್ತು ಅವರ ಸಂಬಂಧಿಕರ ಪ್ರೀತಿಪಾತ್ರರಾಗುತ್ತಾರೆ.
ವೈದ್ಯರದ್ದು ಈ ಕತೆಯಾದರೆ, ಆರೋಗ್ಯ ಕ್ಷೇತ್ರದಲ್ಲಿ ಕಂಡರೂ ಕಾಣಿಸದ ಮಾಫಿಯಾವೊಂದು ಸದಾ ಜಾಗೃತವಾಗಿದೆ. ಸರಕಾರಿ ಆಸ್ಪತ್ರೆಗಳನ್ನು ಸಂಪೂರ್ಣ ಮುಚ್ಚಿ ಹಾಕಿ, ಖಾಸಗಿ ಆಸ್ಪತ್ರೆಗಳದ್ದೇ ಆರ್ಭಟ ನಡೆಸುವ ಹುನ್ನಾರ ಸದ್ದಿಲ್ಲದೇ ನಡೆಯುತ್ತಿದೆ. ರಾಜಕೀಯ ಕ್ಷೇತ್ರದಲ್ಲಿನ ಬಹುತೇಕ ಪ್ರಭಾವಿ ವ್ಯಕ್ತಿಗಳು ತಮ್ಮದೇ ಆದ ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಪ್ರವೇಶಾತಿ ಸೇರಿದಂತೆ ಬೇರೆ ಬೇರೆ ಸ್ವರೂಪದಲ್ಲಿ ಕೋಟ್ಯಂತರ ರೂ. ಆದಾಯ ಗಳಿಸುತ್ತಾರೆ. ಸಭೆ, ಸಮಾರಂಭಗಳಲ್ಲಿ ಅವರು, ‘‘ಸರಕಾರಿ ಆಸ್ಪತ್ರೆಗಳನ್ನು ಉಳಿಸಿ, ಬೆಳೆಸಬೇಕು.
ರೋಗಿಗಳಿಗೆ ಅತ್ಯುತ್ತಮ ಸೇವೆ ದೊರೆಯಬೇಕು. ಸರಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ಸಿಗಬೇಕು’’ ಎಂದು ಹಾಡಿಹೊಗಳುತ್ತಾರೆ. ಆದರೆ ಮನದಲ್ಲೇ ತಮ್ಮ ವೈದ್ಯಕೀಯ ಕಾಲೇಜು ಅಥವಾ ಬೃಹತ್ ಆಸ್ಪತ್ರೆಗೆ ಧಕ್ಕೆಯಾಗುವುದೋ ಎಂಬ ಪುಟ್ಟ ಆತಂಕವೂ ಅವರಿಗೆ ಕಾಡುತ್ತದೆ. ತೋರಿಕೆಗೆ ಮಾತ್ರವೇ ಸರಕಾರಿ ಆಸ್ಪತ್ರೆಯತ್ತ ಕಾಳಜಿ ವ್ಯಕ್ತಪಡಿಸುವ ಅವರು ತಮ್ಮ ಕಾಲೇಜು ಅಥವಾ ಆಸ್ಪತ್ರೆ ಉಳಿಸಿಕೊಳ್ಳಲು ಏನನ್ನೂ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಾರೆ.
ಖಾಸಗಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಯಶಸ್ವಿನಿ ಮತ್ತು ಇನ್ನಿತರ ಯೋಜನೆ ಜಾರಿಗೊಳಿಸುವುದರ ಹಿಂದೆ ಇಂತಹದ್ದೇ ಷಡ್ಯಂತ್ರವಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ. ಯಶಸ್ವಿನಿ ಯೋಜನೆ ಹೊಂದಿರುವ ನೆಪದಲ್ಲಿ ಬಹುತೇಕ ರೋಗಿಗಳು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಹೋಗಲು ಇಷ್ಟಪಡುತ್ತಾರೆ ಹೊರತು ಸರಕಾರಿ ಆಸ್ಪತ್ರೆಗಳತ್ತ ಮುಖ ಕೂಡ ಹಾಕುವುದಿಲ್ಲ. ಯಶಸ್ವಿನಿ ಯೋಜನೆಯಡಿ ದೊಡ್ಡ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುವಾಗ, ಸರಕಾರಿ ಆಸ್ಪತ್ರೆಗೆ ಯಾಕೆ ಹೋಗಬೇಕು ಎಂದು ಅವರು ಪ್ರಶ್ನಿಸುತ್ತಾರೆ.
ಮುಂದಿನ ದಿನಗಳಲ್ಲಿ ಎಲ್ಲಾ ಸರಕಾರಿ ಯೋಜನೆಗಳನ್ನು ಖಾಸಗಿ ಪ್ರತಿಷ್ಠಿತ ಆಸ್ಪತ್ರೆಗಳ ಸುಪರ್ದಿಗೆ ಒಪ್ಪಿಸಿ, ಸರಕಾರ ಕೈಕಟ್ಟಿ ಕೂತರೆ ಅಚ್ಚರಿಪಡಬೇಕಿಲ್ಲ. ಯಶಸ್ವಿನಿ ಯೋಜನೆಗೆ ಖರ್ಚು ಮಾಡುವ ಹಣವನ್ನೇ ಸದ್ಬಳಕೆ ಮಾಡಿಕೊಂಡು ಸಾರ್ವಜನಿಕ ಆಸ್ಪತ್ರೆಯನ್ನೇ ಇನ್ನಷ್ಟು ಸದೃಢಗೊಳಿಸಲು ಸರಕಾರ ಯಾಕೆ ಚಿಂತನೆ ಮಾಡಬಾರದು? ಸರಕಾರಿ ಆಸ್ಪತ್ರೆಯಲ್ಲೇ ಯಾಕೆ ಉತ್ತಮ ಚಿಕಿತ್ಸೆ ಕೊಡಿಸಬಾರದು?
ದೇಶದಲ್ಲಿ ಈಗಲೂ ಕೋಟ್ಯಂತರ ಜನರಿಗೆ ಮೂರು ಹೊತ್ತಿನ ಊಟ ಸಿಗುತ್ತಿಲ್ಲ. ಹಸಿವಿನಿಂದ ನರಳುತ್ತಿರುವ ಜನರ ಸಂಖ್ಯೆ ಸಾಕಷ್ಟು ಇದೆ. ಅಂತಹವರು ಊಟ ಸಿಗುವುದಿರಲಿ, ಅನಾರೋಗ್ಯಕ್ಕೀಡಾದರೆ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾ ಗುವುದಿಲ್ಲ. ಅಂಥವರ ಹಿತದೃಷ್ಟಿಯಿಂದಾದರೂ ಸರಕಾರಿ ಆಸ್ಪತ್ರೆಗಳು ಕೊಂಚ ಬೇಗನೇ ಚೇತರಿಸಿಕೊಳ್ಳಬೇಕು. ಸಂಕಷ್ಟದ ಮಧ್ಯೆ ಬದುಕುವ ಭರವಸೆಯೊಂದಿಗೆ ಬರುವ ರೋಗಿಗಳಲ್ಲಿ ಆಸ್ಪತ್ರೆಗಳು ಆತ್ಮವಿಶ್ವಾಸ ತುಂಬಬೇಕು. ಸರಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕಟುಕರಲ್ಲ, ಅವರು ಕಾಳಜಿ, ಕಳಕಳಿಯುಳ್ಳವರು ಮತ್ತು ಪ್ರೀತಿಪಾತ್ರರು ಎಂಬ ನಂಬಿ, ಭಾವನೆ ಜನರಲ್ಲಿ ಮೂಡಬೇಕು.