ನನ್ನ-ಜಬ್ಬಾರ್ ನ ಉಪವಾಸ ಮತ್ತು ಕ್ರಿಶ್ಚಿಯನ್ ಮಾಸ್ಟರರ ಕ್ರಿಸ್ಮಸ್ ಕೇಕ್
ಈಗಲೂ ಸರಿಯಾಗಿ ನೆನಪಿದೆ ನನಗೆ. ಅದು ನಾನು 6ನೆ ತರಗತಿಯಲ್ಲಿ ಕಲಿಯುತ್ತಿದ್ದ ಸಮಯ. ಮಕ್ಕಳಾಟಿಕೆಯು ಪರಮಾವಧಿಯಲ್ಲಿರುವಾಗ ಮಾಡುವ ತುಂಟತನ, ಪೆದ್ದುತನ, ಗಂಭೀರವಲ್ಲದ ಕೆಲವೊಂದು ತಪ್ಪುಗಳು ಈಗಲೂ ನಗು ತರಿಸುವಂತಹ, ನೆನೆದರೆ ಬಾಲ್ಯ ಕಳೆದೇ ಹೋಯಿತಲ್ವ ಎಂಬ ಕೊರಗು ಕಾಡುವ ಎಂದಿಗೂ ಮಾಯದ ಮಧುರ ನೆನಪುಗಳವು.
ಆ ಸಮಯದಲ್ಲಿ ರಮಝಾನ್ ಅಂದರೆ ಮಕ್ಕಳಿಗೆಲ್ಲ ಅತೀವ ಖುಷಿ, ಅತ್ತಾಳ(ಸಹರಿ)ಕ್ಕೆ ಎದ್ದು ಊಟ ಮಾಡುವುದೆಂದರೆ ಒಂದು ಪುಳಕ. ಮನೆಯವರಿಗಿಂತ ಬೇಗನೇ ಎದ್ದು, ಎಲ್ಲರನ್ನು ಎಬ್ಬಿಸುವ ಚತುರತೆ ಎಲ್ಲವೂ ಇತಿಹಾಸ. ಜಬ್ಬಾರ್ ನನ್ನ ಮಾವನ ಮಗ, ಮಾನಸಿಕವಾಗಿ ಸದೃಢವಾಗದ ಗಟ್ಟಿ ಮೈಕಟ್ಟು!. ಊರಲ್ಲಿ ಎಲ್ಲಾ ಭಾಂಧವರಿಗೂ ಆತ ಅಚ್ಚು ಮೆಚ್ಚು, ಆ ವರ್ಷ ಡಿಸೆಂಬರ್ ತಿಂಗಳಲ್ಲಿ ರಮಝಾನ್ ಬಂದಿದ್ದರಿಂದ ಶಾಲೆಗೆ ಮೂರು ದಿನ ರಜೆ ಇತ್ತು. ಶಾಲೆಗೆ ಸರಿಯಾಗಿ ಹೋಗುತ್ತಿದ್ದವನಲ್ಲ ಅವನು. ನಮ್ಮೂರಿನ ಕ್ರಿಶ್ಚಿಯನ್ ಮಾಸ್ಟರ ತೋಟದಲ್ಲಿ ಅಡಿಕೆ ಹೆಕ್ಕುವ, ಕಳೆ ಕೊಯ್ಯುವ ಸಣ್ಣ ಪುಟ್ಟ ಕೆಲಸಕ್ಕೆ ಹೋಗುತ್ತಿದ್ದು, ಆ ಮನೆಯವರಿಗೂ ಆಪ್ತನಾಗಿದ್ದ.
ಶಾಲೆಗೆ ರಜೆ ಇರುವುದರಿಂದ ಅವನು ಹೋಗುವ ಮಾಸ್ಟರ ಮನೆಗೆ ಆ ದಿನ ನನ್ನನ್ನೂ ಕರೆದುಕೊಂಡು ಹೋಗಿದ್ದ. ಕ್ರಿಸ್ಮಸ್ ಹಬ್ಬದ ಕೇಕ್, ಕೆಲವು ಸಿಹಿತಿಂಡಿಗಳು ನಮಗೆ ಪ್ರೀತಿಯಿಂದ ಆ ಮನೆಯವರು ನೀಡಿದರು. "ಉಪವಾಸ ಇದ್ದರೆ ತೊರೆದ ನಂತರ ತಿನ್ನಿ" ಎಂದು ಹೇಳಿದರು.. ಆ ಕೇಕ್, ತಿಂಡಿಗಳನ್ನು ನೋಡುವಾಗಲೇ ಬಾಯಿ ನೀರೂರಿಯಾಗಿತ್ತು. ಆಸೆಯನ್ನು ತಡೆಯಲಾಗದ ನಾವು ಅವರ ಎದುರು ತಿನ್ನುವುದು ಸರಿಯಲ್ಲ ಎಂದು ಯಾರೂ ಇಲ್ಲದ ಜಾಗಕ್ಕೆ ತೆರಳಿ ಕೇಕ್ ಮತ್ತು ತಿಂಡಿಗಳನ್ನು ತಿಂದೆವು. ಅಲ್ಲೇ ತೋಟಕ್ಕೆ ಹೋಗುವ ಸಣ್ಣ ತೋಡಿನ ನೀರಿನಿಂದ ಬಾಯಿ ತೊಳೆದು ಮೆಲ್ಲನೆ ಮನೆ ಸೇರಿ ಉಪವಾಸವನ್ನು ಪೂರ್ತಿಗೊಳಿಸಿದೆವು. ಇಫ್ತಾರ್ ಬಳಿಕ ಮನೆಯಲ್ಲಿ ಈ ಬಗ್ಗೆ ಹೇಳಿದ್ದು, ಒಂದೇ ಸಮನೆ ಎಲ್ಲರೂ ನಕ್ಕು, ಮನೆಯವರಿಂದ ಬುದ್ದಿವಾದ ಹೇಳಿಸಿಕೊಂಡದ್ದೂ ಆಯಿತು. ಆದರೆ ಬುದ್ಧಿವಾದ ಕಿವಿಗೆ ಬೀಳದಿದ್ದರೂ ತೋಟದಲ್ಲಿ ಕದ್ದು ಮುಚ್ಚಿ ತಿನ್ನುವಾಗಿನ ಅವಸರ, ಅಂಜಿಕೆ, ಆ ಸಮಯದ ನಮ್ಮೊಳಗಿನ ತುಂಟತನ ಎಲ್ಲ ನೆನೆದು ಈಗಲೂ ರಮಝಾನ್ ಬಂದಾಗ ಆ ಘಟನೆ ಮತ್ತು ಜಬ್ಬಾರ್ ನೆನಪಾಗುತ್ತಾನೆ. ದುರದೃಷ್ಟವಶಾತ್ ಅವನು ಅನಾರೋಗ್ಯದಿಂದ ನಮ್ಮನ್ನಗಲಿದ್ದಾನೆ.