ರಾಜಸ್ಥಾನದ ಪಠ್ಯಪುಸ್ತಕಗಳಿಗೆ ಕೇಸರೀಕರಣ ಭಾಗ್ಯ!

Update: 2017-06-26 18:58 GMT

ಭಾಗ-1

1925ನೆ ಇಸವಿಯಲ್ಲಿ ಸ್ಥಾಪನೆಯಾದ ಸಂದರ್ಭದಲ್ಲಿ ಆರೆಸ್ಸೆಸ್‌ನ ಪ್ರಮುಖ ನಾಯಕರು ಒಂದು ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದ್ದರು. ಮುಂದಿನ ನೂರು ವರ್ಷಗಳೊಳಗಾಗಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ನಿರ್ಣಯ ಅದಾಗಿತ್ತು. ಆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸ್ಥಾಪಿತ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ರಹಸ್ಯ ಕಾರ್ಯಾಚರಣೆಗಳನ್ನು ದೇಶಾದ್ಯಂತ ಪ್ರಾರಂಭಿಸಲಾಯಿತು. ಸ್ವಾತಂತ್ರ್ಯದ ನಂತರವೂ ಮುಂದುವರಿದ ಈ ಚಟುವಟಿಕೆಗಳಲ್ಲಿ ಕೋಮು ಸಂಘರ್ಷಗಳ ಮೂಲಕ ಸಮಾಜದ ಧ್ರುವೀಕರಣ; ಇತಿಹಾಸದ ತಿರುಚುವಿಕೆ; ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮ, ಸರಕಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ, ಸೇನೆ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಆರೆಸ್ಸೆಸ್ಸಿಗರ ತೂರಿಸುವಿಕೆ ಇತ್ಯಾದಿಗಳು ಸೇರಿವೆ. ಪಠ್ಯಪುಸ್ತಕಗಳ ಕೇಸರೀಕರಣವೂ ಇದೇ ಚಟುವಟಿಕೆಗಳ ಪ್ರಮುಖ ಅಂಶಗಳಲ್ಲೊಂದಾಗಿದ್ದು ಅದರ ಉದ್ದೇಶ ಮುಂದಿನ ಪೀಳಿಗೆಗಳ ಮಿದುಳನ್ನು ತೊಳೆದು ಕೇಸರಿ ಸಿದ್ಧಾಂತವನ್ನು ಒಪ್ಪಿಕೊಳ್ಳುವಂತೆ ಮಾಡುವುದಾಗಿದೆ. ಇದಕ್ಕೆ ಪೂರಕವಾಗಿ ಶಾಲೆ ಕಾಲೇಜುಗಳ ಶಿಕ್ಷಕ, ಶಿಕ್ಷಕಿಯರಾಗಿ, ಪಠ್ಯಪುಸ್ತಕ ರಚನಾ ಸಮಿತಿಗಳ ಸದಸ್ಯರಾಗಿ ಸಾಕಷ್ಟು ಸಂಖ್ಯೆಯ ಆರೆಸ್ಸೆಸ್ಸಿಗರು ಅಥವಾ ಹಿಂದೂತ್ವ ಸಿದ್ಧಾಂತದ ಬೆಂಬಲಿಗರನ್ನು ತುಂಬಲಾಗಿದೆ.

ಶಿಕ್ಷಣಕ್ಷೇತ್ರದ ಕೇಸರೀಕರಣ
2014ರಲ್ಲಿ ಕೇಂದ್ರದಲ್ಲಿ ಮೋದಿ ಸರಕಾರದ ಆಡಳಿತ ಶುರುವಾದ ನಂತರದಲ್ಲಿ ಆರೆಸ್ಸೆಸ್‌ನ ಪ್ರಯತ್ನಗಳಿಗೆ ಆನೆಯ ಬಲ, ಚಿರತೆಯ ವೇಗ ಬಂದಿದೆ. ಅದೀಗ ತನ್ನ ಅಜೆಂಡಾವನ್ನು ಜಾರಿಗೊಳಿಸಲು ಎಲ್ಲಿಲ್ಲದ ಹುಮ್ಮಸ್ಸಿನಿಂದ ಶ್ರಮಿಸುತ್ತಿದೆ. ಈ ಕೇಸರಿವಾದಿಗಳು ಶಾಲೆಗಳಲ್ಲಿ ಮತ್ತು ಶಾಖೆಗಳಲ್ಲಿ ಸುಲಭದಲ್ಲಿ ಪ್ರಭಾವಕ್ಕೊಳಗಾಗುವ ಮಕ್ಕಳಿಗೆ ಅವೈಜ್ಞಾನಿಕ ವಿಚಾರಗಳನ್ನು ಕಲಿಸುವುದರೊಂದಿಗೆ ಅವರ ಮನಸ್ಸಿನಲ್ಲಿ ತಮ್ಮ ವಿನಾಶಕಾರಿ ಸಿದ್ಧಾಂತವನ್ನು ಬಿತ್ತುತ್ತಿದ್ದಾರೆ. ಭಾರತದ ಜಾತ್ಯತೀತ ಪರಂಪರೆಯನ್ನು ನಾಶಪಡಿಸುತ್ತಿದ್ದಾರೆ. ಆ ಮೂಲಕ ಮಕ್ಕಳ ಮತ್ತು ದೇಶದ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಬಿಜೆಪಿ ಆಡಳಿತವಿರುವ ಜಾರ್ಖಂಡ, ಛತ್ತೀಸ್‌ಗಡ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಶಾಲಾ ಪಠ್ಯಪುಸ್ತಕಗಳು ಈಗಾಗಲೇ ಪೂರ್ತಿ ಕೇಸರೀಕರಣಕ್ಕೆ ತುತ್ತಾಗಿವೆ. ಇದೀಗ ರಾಜಸ್ಥಾನದ ಸರದಿ. ರಾಜಸ್ಥಾನದಲ್ಲಿ ಶಾಲಾ ಯೂನಿಫಾರಂನ ಬಣ್ಣವನ್ನು ಸಮೇತ ಬದಲಾಯಿಸಿ ಆರೆಸ್ಸೆಸ್ ಯೂನಿಫಾರಂನ ಬಣ್ಣಕ್ಕೆ ಸಮೀಪವಿರುವಂತೆ ಮಾಡಲಾಗಿದೆ!

ರಾಜಸ್ಥಾನದಲ್ಲಿ ಪಠ್ಯಪುಸ್ತಕಗಳ ಕೇಸರೀಕರಣ
ರಾಜಸ್ಥಾನದಲ್ಲಿ ಪಠ್ಯಪುಸ್ತಕಗಳ ರಚನೆ ಮತ್ತು ಕಾಲಕಾಲಕ್ಕೆ ಅವುಗಳ ಪರಿಷ್ಕರಣೆಯ ಜವಾಬ್ದಾರಿಯನ್ನು ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಕಾಯ್ದೆ 1957ರ ಅಡಿಯಲ್ಲಿ ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿ ಸ್ಥಾಪಿಸುವ ಸಮಿತಿಯೊಂದಕ್ಕೆ ವಹಿಸಲಾಗುತ್ತದೆ. ಈ ಬಾರಿ ಪರಿಷ್ಕರಣೆಗೊಳಗಾಗಿರುವ 10ನೆ ಮತ್ತು 12ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಮೋದಿ ಸರಕಾರದ ಅರ್ಥಾತ್ ಆರೆಸ್ಸೆಸ್‌ನ ಕೈವಾಡವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಈ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿರುವ ಹೊಸ ಅಧ್ಯಾಯಗಳು ಯಾವುವೆಂದು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ. ಹೊಸ ಅಧ್ಯಾಯಗಳು ಮೋದಿ ಸರಕಾರದ ಉಪಕ್ರಮಗಳಾದ ನೋಟು ರದ್ದತಿ, ಮೇಕ್ ಇನ್ ಇಂಡಿಯ, ಮಾಂಸಾಹಾರದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು, ಉಗ್ರಗಾಮಿ ಚಟುವಟಿಕೆಗಳ ಕುರಿತು ಮಾಧ್ಯಮಗಳ ವರದಿಗಾರಿಕೆ, ಪ್ರಧಾನಿಯ ವಿದೇಶ ಭೇಟಿಗಳು, ನಗದುರಹಿತ ವಹಿವಾಟು, ನೀತಿ ಆಯೋಗ, 16ನೆ ಲೋಕಸಭಾ ಚುನಾವಣೆಗಳು, ಸ್ವಚ್ಛ ಭಾರತ ಅಭಿಯಾನ, ಪ್ಯಾರಿಸ್ ಒಪ್ಪಂದ ಮೊದಲಾದ ವಿಷಯಗಳ ಕುರಿತಾಗಿವೆ! ಅಧ್ಯಾಯಗಳ ಕೊನೆಯಲ್ಲಿರುವ ಪ್ರಶ್ನೆಗಳು ಕೂಡಾ ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಪ್ರೋತ್ಸಾಹಿಸುವ ರೀತಿಯಲ್ಲಿಲ್ಲ. ವಿದ್ಯಾರ್ಥಿಗಳಿಗೆ ಈ ಉಪಕ್ರಮಗಳ ಮತ್ತೊಂದು ಮಗ್ಗುಲನ್ನು ಪ್ರಶ್ನಿಸಲು ಯಾವುದೇ ಅವಕಾಶವನ್ನು ಒದಗಿಸಲಾಗಿಲ್ಲ. ಹೊಸದಾಗಿ ಸೇರ್ಪಡೆಯಾಗಿರುವ ಪ್ರಶ್ನೆಗಳನ್ನು ಕೊಂಚ ನೋಡಿ:
* ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆಯನ್ನು ರಚಿಸಿದವರಾರು?
* ಪ್ರಧಾನಿ ಮೋದಿಯವರು ಪಾಕಿಸ್ಥಾನದ ಜೊತೆ ಸಂಬಂಧಗಳನ್ನು ಸುಧಾರಿಸಲು ಏನೆಲ್ಲ ಮಾಡಿದ್ದಾರೆ?
* ಪ್ರಧಾನಿ ಮೋದಿಯವರು ತಮ್ಮ ನೇಪಾಳ ಭೇಟಿಯ ಸಂದರ್ಭದಲ್ಲಿ ನೇಪಾಳಕ್ಕೆ ಯಾವ ರೀತಿ ಭರವಸೆ ನೀಡಿದರು?
* ನೋಟು ರದ್ದತಿಯನ್ನು ಯಾತಕ್ಕೋಸ್ಕರ ಜಾರಿಗೊಳಿಸಲಾಯಿತು?
* ಮೋದಿ ಸರಕಾರದ ನಾಲ್ಕು ಅಭಿವೃದ್ಧಿ ಯೋಜನೆಗಳನ್ನು ಹೆಸರಿಸಿ.
* ಸಾವರ್ಕರರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿರುವ ಕೊಡುಗೆಗಳೇನು?
  
12ನೆ ತರಗತಿಯ ರಾಜಕೀಯ ಶಾಸ್ತ್ರ ಪಠ್ಯಪುಸ್ತಕ
ಭ್ರಷ್ಟಾಚಾರ ಕುರಿತ ಅಧ್ಯಾಯದಲ್ಲಿ ನೋಟು ರದ್ದತಿಯ ಕ್ರಮವನ್ನು ವಿವರಿಸಿರುವುದು ಹೀಗೆ: ‘‘ಅರ್ಥಶಾಸ್ತ್ರದ ಚರಿತ್ರೆಯಲ್ಲಿ ಅದನ್ನು ‘ಕಪ್ಪುಹಣದ ನಿರ್ಮೂಲನ’ ಎಂದು ತಿಳಿಯಲಾಗಿದೆ. ಅದು ಕಪ್ಪುಹಣವನ್ನು ಮರಳಿ ಪಡೆಯಲು, ಭ್ರಷ್ಟಾಚಾರದ ವಿರುದ್ಧ ಹೋರಾಡಲು, ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ಪೂರೈಕೆಯನ್ನು ನಿಲ್ಲಿಸಲು, ಚುನಾವಣೆಗಳಲ್ಲಿ ಕಪ್ಪುಹಣ ಬಳಕೆಯನ್ನು ತಡೆಗಟ್ಟಲು ಕೇಂದ್ರ ಸರಕಾರ ಕೈಗೊಂಡ ಚಾರಿತ್ರಿಕ ನಿರ್ಧಾರ.’’ ಆದರೆ ಇಡೀ ಪಠ್ಯಪುಸ್ತಕದಲ್ಲಿ ಎಲ್ಲೂ ನೋಟು ರದ್ದತಿಯಿಂದ ಹಠಾತ್ತಾಗಿ ನಗದಿನ ಕೊರತೆ ಉಂಟಾಗಿ ಜನ ಅನುಭವಿಸಿದ ಬವಣೆಗಳ ಬಗ್ಗೆ, ಪ್ರಧಾನವಾಗಿ ನಗದು ವ್ಯವಹಾರಗಳೇ ನಡೆಯುವ ಅನೌಪಚಾರಿಕ ವಲಯದ ಮೇಲಾದ ಪರಿಣಾಮಗಳ ಬಗ್ಗೆ, ಬೇಡಿಕೆ ಕಡಿಮೆಯಾಗಿರುವ ಬಗ್ಗೆ, ಇನ್ನಿತರ ಋಣಾತ್ಮಕ ಪರಿಣಾಮಗಳ ಬಗ್ಗೆ ಒಂದೇ ಒಂದು ವಾಕ್ಯವೂ ಇಲ್ಲ.

ಈ ಬಾರಿ ಪರಿಷ್ಕರಣೆಗೊಳಗಾಗಿರುವ 10ನೆ ಮತ್ತು 12ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಮೋದಿ ಸರಕಾರದ ಅರ್ಥಾತ್ ಆರೆಸ್ಸೆಸ್‌ನ ಕೈವಾಡವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಈ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿರುವ ಹೊಸ ಅಧ್ಯಾಯಗಳು ಯಾವುವೆಂದು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News