ರಾಜಸ್ಥಾನದ ಪಠ್ಯಪುಸ್ತಕಗಳಿಗೆ ಕೇಸರೀಕರಣ ಭಾಗ್ಯ!
11ನೆ ತರಗತಿಯ ರಾಜಕೀಯ ಶಾಸ್ತ್ರ ಇದರಲ್ಲಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದವರು ಬಂಡವಾಳಶಾಹಿಗಳು ಮತ್ತು ಮೇಲ್ಮಧ್ಯಮ ವರ್ಗಗಳು ಎಂದು ಹೇಳುವುದರೊಂದಿಗೆ ‘‘ಅದು ಬ್ರಿಟಿಷ್ ಸಾಮ್ರಾಜ್ಯದ ಕೈಗೂಸಾಗಿತ್ತು’’ ಎಂದು ಬಣ್ಣಿಸಲಾಗಿದೆ.
10ನೆ ತರಗತಿಯ ಸಮಾಜವಿಜ್ಞಾನ
ಈ ಪಠ್ಯಪುಸ್ತಕದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಕುರಿತು ಒಂದು ಅಧ್ಯಾಯ ಇದೆ. ಅದರಲ್ಲಿ ‘‘ಕಾಂಗ್ರೆಸ್ ಪಕ್ಷದ ಬೆಳವಣಿಗೆಯ ಪ್ರಥಮ ಹಂತದಲ್ಲಿ ನಾಯಕರಾಗಿದ್ದವರೆಂದರೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲಾಗದ ಮಧ್ಯಮ ವರ್ಗದ ಶ್ರೀಮಂತ ಬುದ್ಧಿಜೀವಿಗಳು. ಈ ಉದಾರವಾದಿಗಳು ಬ್ರಿಟಿಷ್ ಆಡಳಿತವನ್ನು ಶಾಂತಿ ಸುವ್ಯವಸ್ಥೆಯ ಸಂಕೇತವೆಂದು ಪರಿಗಣಿಸಿದರು. ಅದಿಲ್ಲವಾದಲ್ಲಿ ದೇಶದಲ್ಲಿ ಅವ್ಯವಸ್ಥೆ ಉಂಟಾಗಲಿದೆ ಎಂದು ಭಯಪಟ್ಟರು. ಆದುದರಿಂದ ಅವರು ಬ್ರಿಟಿಷ್ ಆಡಳಿತದ ಪರವಾಗಿ ಪ್ರಚಾರ ನಡೆಸಿದರು. ಆ ಮೂಲಕ ಅದನ್ನು ಬಲಪಡಿಸಲು ಮುಂದಾದರು. ಆ ಹಂತದಲ್ಲಿ ಅವರು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಲೇ ಇಲ್ಲ’’ ಎಂದು ಬರೆಯಲಾಗಿದೆ. ಗಮನಾರ್ಹವಾಗಿ ಸಾವರ್ಕರ್ ವಿಷಯಕ್ಕೆ ತುಂಬಾ ಸ್ಥಳಾವಕಾಶ ನೀಡಲಾಗಿದೆ.
‘ವೀರ’ ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ‘ಆಜೀವ ತ್ಯಾಗಗಳು ವರ್ಣನಾತೀತ’ ಎಂದು ಬಣ್ಣಿಸಲಾಗಿದೆ. ಮಾತ್ರವಲ್ಲ, ‘‘ಎರಡೆರಡು ಬಾರಿ ಜೀವಾವಧಿ ಶಿಕ್ಷೆಗೊಳಗಾದ ಸಾವರ್ಕರ್, ದೇಶ ವಿಭಜನೆಯನ್ನು ತಡೆಯಲು ಅವಿಶ್ರಾಂತವಾಗಿ ದುಡಿದ ಏಕೈಕ ಕ್ರಾಂತಿಕಾರಿ’’ ಎನ್ನಲಾಗಿದೆ.
ಜವಹರ್‌ಲಾಲ್ ನೆಹರೂರನ್ನು ಮೂಲೆಗೊತ್ತಲಾಗಿದೆ. ಅಸಹಕಾರ, ನಾಗರಿಕ ಅವಿಧೇಯತೆ, ಕ್ವಿಟ್ ಇಂಡಿಯ ಚಳವಳಿಗಳನ್ನು ವಿವರಿಸುವ ಸಂದರ್ಭದಲ್ಲಿ ಈ ಎಲ್ಲಾ ಚಳವಳಿಗಳ ರೂವಾರಿಯಾದ ಗಾಂಧಿಯ ಬಗ್ಗೆ ತೀರ ಚಿಕ್ಕದಾಗಿ ಬರೆಯಲಾಗಿದೆ. ಗಮನಾರ್ಹವಾಗಿ ಎಲ್ಲೂ ಗಾಂಧಿ ಹತ್ಯೆಯ ಉಲ್ಲೇಖವೇ ಇಲ್ಲ.
10ನೆ ತರಗತಿಯ ದೈಹಿಕ ಮತ್ತು ಆರೋಗ್ಯ ಶಿಕ್ಷಣ
ಇದರಲ್ಲಿ ಮಾಂಸಾಹಾರದಿಂದ ಶರೀರಕ್ಕೆ ಹಾನಿಯಾಗುತ್ತದೆ ಎಂದು ಬೋಧಿಸಲಾಗಿದೆ. ಪಠ್ಯಪುಸ್ತಕದ ಹಿಂದಿನ ಆವೃತ್ತಿಯಲ್ಲಾದರೆ ಕೊಬ್ಬು, ಪ್ರೊಟೀನ್ ಮತ್ತು ಮಿನರಲ್‌ಗಳ ಮೂಲಗಳು ಯಾವುವು ಎಂಬ ಪಟ್ಟಿಯಲ್ಲಿ ಮಾಂಸ ಉತ್ಪನ್ನಗಳೂ ಇದ್ದವು. ಆದರೆ ನೂತನ ಪರಿಷ್ಕೃತ ಆವೃತ್ತಿಯಲ್ಲಿ ಮಾಂಸ ಉತ್ಪನ್ನಗಳಿಗೆ ಖೊಕ್ ನೀಡಲಾಗಿದ್ದು ಕೇವಲ ಮೊಟ್ಟೆಯನ್ನಷ್ಟೇ ಉಳಿಸಿಕೊಳ್ಳಲಾಗಿದೆ. ಇದಲ್ಲದೆ ‘ಯಾವ ಹೊತ್ತಿನಲ್ಲಿ ತಿನ್ನಬೇಕು’, ‘ಊಟಕ್ಕೆ ಮೊದಲು ಯಾವ ಮಂತ್ರವನ್ನು ಜಪಿಸಬೇಕು’, ‘ಪಾಶ್ಚಿಮಾತ್ಯ ಸಂಸ್ಕೃತಿ ಹೇಗೆ ನಮ್ಮ ಕುಟುಂಬಗಳನ್ನು ಒಡೆಯುತ್ತಿದೆ’ ಮತ್ತು ‘ಹೊಸ ಪೀಳಿಗೆಯಲ್ಲಿ ಸಂಸ್ಕಾರದ ಕೊರತೆಗೆ ಕಾರಣವಾಗಿದೆ’ ಎಂಬ ವಿಷಯಗಳ ಮೇಲೆ ಸವಿಸ್ತಾರವಾಗಿ ಬರೆಯಲಾಗಿದೆ.
10ನೆ ತರಗತಿಯ ಇಂಗ್ಲಿಷ್ ಪಠ್ಯ ಗೋಲ್ಡನ್ ರೇಸ್
ಈ ಪುಸ್ತಕದಲ್ಲಿ ಭಾರತೀಯ ಕವಿ ತೋರು ದತ್ತ್ ಬರೆದ ಪದ್ಯವೊಂದಿದೆ. ಅದರ ಹೆಸರು ‘ಕಮಲ’. ಅದು ಕಮಲವನ್ನು ಭಾರತದ ದೇವ, ದೇವಿಯರ ಅಚ್ಚುಮೆಚ್ಚಿನ ಹೂವು ಎಂಬುದಾಗಿ ಚಿತ್ರಿಸುತ್ತದೆ. ಕಮಲದ ಗೆಲುವನ್ನು ಭಾರತೀಯ ಸಂಸ್ಕೃತಿಯ ಗೆಲುವು ಎಂದು ಬಣ್ಣಿಸುತ್ತದೆ.
ಪದ್ಮಶ್ರೀ, ಪದ್ಮಭೂಷಣ ಇತ್ಯಾದಿ ಅನೇಕ ಪ್ರಶಸ್ತಿಗಳಿಗೆ ಕಮಲದ ಹೆಸರಿಡಲಾಗಿರುವ ವಿಚಾರವನ್ನು ಅರುಹುತ್ತದೆ. ಗುಲಾಬಿ, ಕಮಲ ಮತ್ತು ನೈದಿಲೆ ಹೂವುಗಳು ಯಾರು ಹೆಚ್ಚು ಸುಂದರಿ ಎಂಬ ವಿಷಯದಲ್ಲಿ ಜಗಳಾಡಿಕೊಂಡಾಗ ಆ ಸೌಂದರ್ಯ ಸ್ಪರ್ಧೆಯ ಕೊನೆಯಲ್ಲಿ ಸಸ್ಯ ದೇವಿ ಕಮಲವನ್ನು ಅತ್ಯುಚ್ಚ ಸೌಂದರ್ಯದ ಹೂವನ್ನಾಗಿ ಆರಿಸುತ್ತಾಳೆಂದು ಕವಿ ಹೇಳುತ್ತಾನೆ. ಅಧ್ಯಾಯದ ಕೊನೆಯಲ್ಲಿ ನೀಡಲಾಗಿರುವ ಪ್ರಶ್ನೆಯೊಂದು ಹೀಗಿದೆ: ‘‘ಭಾರತೀಯ ಸಮಾಜ ಕಮಲವನ್ನು ಹೇಗೆ ಸಾಂಸ್ಕೃತಿಕ ಲಾಂಛನವಾಗಿ ಪರಿಗಣಿಸುತ್ತದೆ?’’ ಅಂದಹಾಗೆ ನಮಗೆಲ್ಲರಿಗೂ ತಿಳಿದಿರುವಂತೆ ಕಮಲ ಬಿಜೆಪಿಯ ಚುನಾವಣಾ ಚಿಹ್ನೆಯಾಗಿದೆ!
‘ನೆರೆಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ’ ಎಂಬ ಅಧ್ಯಾಯದಲ್ಲಿ ಪ್ರಧಾನಿ ಮೋದಿಯ ಪಾಕಿಸ್ತಾನ, ಚೀನಾ, ನೇಪಾಳ ಭೇಟಿಗಳ ಕುರಿತು ಹೇಳಲಾಗಿದೆ. ಪಾಕಿಸ್ತಾನವನ್ನು ವಿಶೇಷವಾಗಿ ಉಲ್ಲೇಖಿಸಲಾಗಿರುವ ಚೀನಾ, ನೇಪಾಳ ಜೊತೆಗಿನ ಒಪ್ಪಂದಗಳನ್ನೂ ಪಠ್ಯದಲ್ಲಿ ಸೇರಿಸಲಾಗಿದೆ.
‘ಪಾಕಿಸ್ತಾನದ ಜತೆ ಮೋದಿ ಸರಕಾರದ ಸಂಬಂಧಗಳು’ ಎಂಬ ತಲೆಬರಹದ ಲೇಖನದಲ್ಲಿ ಮೋದಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನಿ ಪ್ರಧಾನಿ ನವಾಝ್ ಷರೀಫ್‌ರನ್ನು ಆಹ್ವಾನಿಸಿರುವುದು, 18ನೆ ಸಾರ್ಕ್ ಸಮ್ಮೇಳನದಲ್ಲಿ ಅವರಿಬ್ಬರ ನಡುವೆ ಮಾತುಕತೆ ನಡೆಯದಿರುವುದು, ಮೋದಿ ಬಲೂಚಿಸ್ಥಾನದಲ್ಲಿನ ಮಾನವಹಕ್ಕುಗಳ ಬಗ್ಗೆ ಮಾತಾಡಿರುವುದು, ಷರೀಫ್ ಹುಟ್ಟುಹಬ್ಬಕ್ಕೆ ಲಾಹೋರಿಗೆ ಅಚ್ಚರಿಯ ಭೇಟಿ ನೀಡಿರುವುದು, ಪಠಾಣ್‌ಕೋಟ್ ದಾಳಿ, ಉಗ್ರರ ಉರಿ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತದ ಸೇನೆಯಿಂದ ಸರ್ಜಿಕಲ್ ದಾಳಿ ಇವೇ ಮುಂತಾದ ಹಲವು ವಿಷಯಗಳನ್ನು ಒಳಗೊಳ್ಳಲಾಗಿದೆ.
ಭಯೋತ್ಪಾದನೆ ಕುರಿತ ಅಧ್ಯಾಯದಲ್ಲಿ ಮಾಧ್ಯಮಗಳ ವರದಿಗಾರಿಕೆಯ ಬಗ್ಗೆ ಬಹಳಷ್ಟು ಬರೆಯಲಾಗಿದ್ದು ಅಗತ್ಯಕ್ಕಿಂತ ಜಾಸ್ತಿ ವರದಿ ಮಾಡುವುದರ ಪರಿಣಾಮಗಳೇನೆಂದು ತಿಳಿಸಲಾಗಿದೆ. ‘‘ಮಾಧ್ಯಮಗಳು ಕಾಶ್ಮೀರ ಮತ್ತು ಪಂಜಾಬಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿರೂಪಿಸುವ ರೀತಿ ರೂಢ ಮಾದರಿಯದು. ಇದು ಉಗ್ರರ ವಿರುದ್ಧ ದ್ವೇಷ ಹುಟ್ಟುಹಾಕುವ ಬದಲು ಅವರ ಕುರಿತು ಸಹನೆಯ ಭಾವನೆಯನ್ನು ಉಂಟುಮಾಡುತ್ತದೆ. ಇದರಿಂದ ಭಯೋತ್ಪಾದನೆ ಇನ್ನಷ್ಟು ಬೆಳೆಯುತ್ತದೆ. ಅತಿಯಾದ ವರದಿ ಹಿಂಸೆಯನ್ನು ಇನ್ನಷ್ಟು ಆಕರ್ಷಣೀಯವಾಗಿಸುತ್ತದೆ; ಉಗ್ರಗಾಮಿ ಸಂಘಟನೆಗಳನ್ನು ಹುಟ್ಟುಹಾಕಲು ಉತ್ತೇಜನ ನೀಡುತ್ತದೆ; ಆಡಳಿತದ ಕಾರ್ಯಕ್ಷಮತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ; ಮಾಧ್ಯಮಗಳ ಜನಪ್ರಿಯತೆ ಹೆಚ್ಚುತ್ತದೆ. ಪರಿಣಾಮವಾಗಿ ಭಯೋತ್ಪಾದಕ ಗುಂಪುಗಳು ಚಾನೆಲ್‌ಗಳನ್ನು ನಿಯಂತ್ರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು.’’ (ಮೋದಿ ಸರಕಾರ ಎನ್‌ಡಿಟಿವಿ ವಾಹಿನಿ ಮೇಲೆ ನಡೆಸಿದ ಗದಾಪ್ರಹಾರ ನೆನಪಿಸಿಕೊಳ್ಳಿ. ಎನ್‌ಡಿಟಿವಿ ಹಿಂದಿ ವಾಹಿನಿಯ ಪ್ರಸಾರ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಿದೆ ಎಂದು ಆರೋಪಿಸಿ ಅದರ ಮೇಲೆ ಒಂದು ದಿನದ ನಿಷೇಧ ಹೇರಲು ಪ್ರಯತ್ನಿಸಲಾಯಿತು)
ಭಾರತದ ಆರ್ಥಿಕತೆ ಕುರಿತ ಅಧ್ಯಾಯದಲ್ಲಿ ‘‘ಸ್ವದೇಶಿ ಉತ್ಪನ್ನಗಳು ರಾಷ್ಟ್ರಾಭಿಮಾನವನ್ನು ಹೆಚ್ಚಿಸುತ್ತವೆ. ರಾಷ್ಟ್ರೀಯವಾದ ದೇಶದ ಅಭಿವೃದ್ಧಿಗಾಗಿರುವ ಒಂದು ಪರಿಣಾಮಕಾರಿ ಅಂಶ’’ ಎಂದು ಬರೆಯಲಾಗಿದೆ. ಸ್ವದೇಶಿ ಸರಕುಗಳ ಪಟ್ಟಿಯಲ್ಲಿ ಟಾಟಾ, ಗೋದ್ರೆಜ್, ಅಮುಲ್, ಹೀರೊ, ಬಜಾಜ್ ಜೊತೆ ಪತಂಜಲಿ ಉತ್ಪನ್ನಗಳನ್ನೂ ಸೇರಿಸಲಾಗಿದೆ.
ವಿವಾದಗಳ ಕುರಿತು ಮೌನ
ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ನೋಟು ರದ್ದತಿ, ಪ್ಯಾರಿಸ್ ಒಪ್ಪಂದಗಳಂತಹ ಇತ್ತೀಚಿನ ವಿದ್ಯಮಾನಗಳನ್ನು ಉಲ್ಲೇಖಿಸಲಾಗಿದೆ. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಅದಕ್ಕೆ ಕಾರಣವಾದ ಘಟನೆಗಳ ಬಗ್ಗೆ ಬರೆಯಲಾಗಿಲ್ಲ. ರಾಜಕೀಯ ಶಾಸ್ತ್ರ ಪಠ್ಯದಲ್ಲಿರುವ ಜಾತೀಯತೆ ಮತ್ತು ಕೋಮುವಾದ ಎಂಬ ಅಧ್ಯಾಯದಲ್ಲಿಯೂ ಗಾಂಧಿ ಹತ್ಯೆ, 2002ರ ಗುಜರಾತ್ ದಂಗೆಗಳು, ಗೋರಕ್ಷಕ ದಳಗಳ ಪುಂಡಾಟಿಕೆ, ಗೋಮಾಂಸ ನಿಷೇಧ, ದಾದ್ರಿಯಲ್ಲಿ ಕಾನೂನುಬಾಹಿರ ಗುಂಪುಗಳು ನಡೆಸಿದ ಕೊಲೆ, ಪ್ರಮುಖ ಲೇಖಕರು ಆರಂಭಿಸಿದ ಪ್ರಶಸ್ತಿ ವಾಪಸಾತಿ ಚಳವಳಿ ಮುಂತಾದ ವಿಷಯಗಳನ್ನು ಉಲ್ಲೇಖಿಸಲಾಗಿಲ್ಲ.
ವಿಶ್ವವಿದ್ಯಾನಿಲಯದ ಪಠ್ಯಪುಸ್ತಕಗಳು
ರಾಜಸ್ಥಾನ ವಿಶ್ವವಿದ್ಯಾನಿಲಯದ ಕೆಲವೊಂದು ಪಠ್ಯಪುಸ್ತಕಗಳು ಸಹಿತ ಕೇಸರೀಕರಣಕ್ಕೆ ಒಳಗಾಗಿವೆ. ವಾಣಿಜ್ಯ ವಿಭಾಗದಲ್ಲಿ ವಿದೇಶಿ ಲೇಖಕರನ್ನು ಬಹಿಷ್ಕರಿಸಿ ಗೀತೆಯನ್ನು ಸೇರಿಸಲಾಗಿದೆ. ಇತಿಹಾಸ ವಿಭಾಗದಲ್ಲಿ ಸೇರ್ಪಡೆಯಾಗಿರುವ ‘ಮಹಾರಾಣಾ ಪ್ರತಾಪ್ ಮತ್ತು ಹಳದೀಘಾಟಿ ಯುದ್ಧ’ ಎಂಬ ಪುಸ್ತಕದಲ್ಲಿ ಸತ್ಯಾಂಶಗಳಿಗೆ ವಿರುದ್ಧವಾಗಿ ಆತ 1576ರಲ್ಲಿ ಅಕ್ಬರನನ್ನು ಸೋಲಿಸಿದ ಎನ್ನಲಾಗಿದೆ.
ಪಠ್ಯಪುಸ್ತಕಗಳಲ್ಲಿ ಮಾಡಲಾದ ತಿದ್ದುಪಡಿ, ಸೇರ್ಪಡೆಗಳ ಕುರಿತು ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರ ಪ್ರತಿಕ್ರಿಯೆ ಹೀಗಿದೆ: ‘‘ಹಿಂದಿನ ಪಠ್ಯಪುಸ್ತಕಗಳು ಭಾರತ ಮತ್ತು ರಾಜಸ್ಥಾನಗಳಿಗಿಂತಲೂ ಜಗತ್ತಿನ ಆಗುಹೋಗುಗಳಿಗೇ ಹೆಚ್ಚು ಆದ್ಯತೆ ನೀಡಿದ್ದವು. ಆದುದರಿಂದ ನಮ್ಮ ಮಕ್ಕಳು ಹಿಂದುಳಿಯಬಾರದು ಎನ್ನುವ ಕಾರಣಕ್ಕಾಗಿ ಕೇವಲ ಸಮಾಜವಿಜ್ಞಾನ ಪಠ್ಯಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ......ಸಿಲಬಸ್‌ನ ಶೇ. 70ರಷ್ಟನ್ನು ಬದಲಾಯಿಸದೆ ಹಾಗೇ ಉಳಿಸಿಕೊಳ್ಳಲಾಗಿದೆ.’’
ಆದರೆ ರಾಜಸ್ಥಾನ ವಿಶ್ವವಿದ್ಯಾನಿಲಯದ ಪ್ರೊ. ರಾಜೀವ್ ಗುಪ್ತಾ ಪ್ರಕಾರ ‘‘ರಾಜಸ್ಥಾನದ ಪಠ್ಯಪುಸ್ತಕಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ನೇರವಾಗಿ ಕೇಸರಿ ಸಿದ್ಧಾಂತವನ್ನು ತುರುಕಿರುವುದು ದಿಲ್ಲಿಯಲ್ಲಿ ಮೋದಿ ಸರಕಾರದ ಕಾರುಬಾರು ಪ್ರಾರಂಭವಾದ ನಂತರ. ಬದಲಾವಣೆಗಳನ್ನು ಮಾಡಿರುವುದು ಭಾರತದ ಮೇಲೆ ಹೆಚ್ಚು ಕೇಂದ್ರೀಕರಿಸುವ ಸಲುವಾಗಿ ಎಂದು ಮಂಡಳಿಯ ಅಧ್ಯಕ್ಷರು ಹೇಳಿದ್ದಾರೆ. ಆದರೆ ವಾಸ್ತವ ತೀರಾ ಭಿನ್ನವಿದೆ. ಗಮನಾರ್ಹವಾಗಿ ನೂತನ ಪಠ್ಯಪುಸ್ತಕಗಳಲ್ಲಿ ಮೋದಿ ಸರಕಾರದ ಉಪಕ್ರಮಗಳನ್ನು ಧನಾತ್ಮಕ ಬೆಳಕಿನಲ್ಲಿ ತೋರಿಸಲಾಗಿದೆ. ಆದರೆ ವಿವಾದಾತ್ಮಕ ವಿಷಯಗಳನ್ನು ಕೈಬಿಡಲಾಗಿದೆ. ಗಾಂಧಿ ಹತ್ಯೆ, 2002ರ ಗುಜರಾತ್ ನರಮೇಧದ ವಿಷಯಗಳು ಕೂಡಾ ನಾಪತ್ತೆಯಾಗಿವೆ. ಇದು ಸಮ್ಮತಿ ಉತ್ಪಾದನೆಯ ಸ್ಪಷ್ಟ ನಿದರ್ಶನವಾಗಿದೆ.’’
ಈ ಸಂದರ್ಭದಲ್ಲಿ ಕರ್ನಾಟಕದ ವಿದ್ಯಮಾನಗಳನ್ನೂ ಸ್ವಲ್ಪಮೆಲುಕು ಹಾಕಬೇಕಾಗಿದೆ. ಇಲ್ಲಿ ಬಿಜೆಪಿ ಸರಕಾರ ಇದ್ದಾಗ ಪಠ್ಯಪುಸ್ತಕಗಳ ಕೇಸರೀಕರಣ ನಡೆದಿರುವುದನ್ನು ಜ್ಞಾಪಿಸಿಕೊಳ್ಳಬೇಕಾಗಿದೆ. ನಂತರದ ಚುನಾವಣೆಗಳಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬರಗೂರು ರಾಮಚಂದ್ರಪ್ಪರ ನೇತೃತ್ವದಲ್ಲಿ ಹಳೆಯ, ಕೇಸರೀಕರಣಗೊಂಡ ಪಠ್ಯಪುಸ್ತಕಗಳನ್ನೇನೋ ಸರಿಪಡಿಸಲಾಗಿದೆ. ಆದರೆ ಪ್ರಸಕ್ತ ವರ್ಷದಿಂದ ಚಾಲ್ತಿಗೆ ಬಂದಿರುವ ಈ ಹೊಸ ಪಠ್ಯಪುಸ್ತಕಗಳ ಭವಿಷ್ಯ ಅನಿಶ್ಚಿತವಾಗಿದೆ. ಏಕೆಂದರೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಗಳಲ್ಲಿ ಬಿಜೆಪಿ ಎಲ್ಲಾದರೂ ಗೆದ್ದಿತೆಂದಾದರೆ ಪರಿಷ್ಕೃತ ಪಠ್ಯಗಳೆಲ್ಲವೂ ಕಸದ ಬುಟ್ಟಿ ಸೇರಲಿರುವುದು ನಿಶ್ಚಿತ.
(ಆಧಾರ: thewire.inನಲ್ಲಿ ಶ್ರುತಿ ಜೈನ್; ಡೆಕ್ಕನ್ ಹೆರಾಲ್ಡ್‌ನಲ್ಲಿ ತಬೀನಾ ಅಂಜುಂ ಲೇಖನಗಳು)