ಹಿಂದೂ ಸ್ತ್ರೀಯರ ಉನ್ನತಿ ಮತ್ತು ಅವನತಿ: ಯಾರು ಹೊಣೆಗಾರರು?

Update: 2017-07-06 18:36 GMT

‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರ ‘‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್ ಲೇಖನದ ಅನುವಾದವಿದು


ಬ್ರಹ್ಮಚರ್ಯೆಯನ್ನು ಕಾಪಾಡಿಕೊಳ್ಳುವ ಬಗೆಗೆ ಬುದ್ಧನ ನಿಲುವು ತುದಿಮುಟ್ಟಿದುದಾಗಿತ್ತೆಂಬುದೂ ಅಷ್ಟೇ ನಿಜ. ಅವನ ಮಾತುಗಳಲ್ಲಿ ಹೇಳುವುದಾದರೆ: ‘‘ಸ್ತ್ರೀಯರು ಬ್ರಹ್ಮಚರ್ಯೆಯ ಜೀವನವನ್ನು ಕಲಂಕಿತಗೊಳಿಸಲು ಕಾರಣರಾಗಬಲ್ಲರು’’. ಎಂಬ ಬಗೆಗೆ ಬುದ್ಧನು ತುಂಬ ಜಾಗರೂಕನಾಗಿದ್ದನು. ಆದರೆ ಅವನು ಎಂಥ ಉಪದೇಶವನ್ನು ಮಾಡಿದನು? ಸ್ತ್ರೀಯರೊಡನೆಯ ಎಲ್ಲ ಬಗೆಯ ಸಂಬಂಧಗಳನ್ನು ಹರಿದೊಗೆಯಬೇಕೆಂದು ಬುದ್ಧನು ಭಿಕ್ಕುಗಳಿಗೆ ಉಪದೇಶ ಮಾಡಿದ್ದಾನೆ? ಇಲ್ಲವೇ ಇಲ್ಲ. ಅವನು ಇಂಥ ಯಾವುದೇ ಬಗೆಯ ಬಂಧನವನ್ನು ಹೇರಲಿಲ್ಲ. ಬದಲು ಸ್ತ್ರೀಯನ್ನು ಕಂಡಾಗಲೆಲ್ಲಾ ಆಯಾ ವ್ಯಕ್ತಿಗನುಸರಿಸಿ ಅವಳನ್ನು ಅಮ್ಮ, ಸೋದರಿ ಹಾಗೂ ಮಗಳೆಂದು ಭಾವಿಸಬೇಕೆಂದು ಅವನು ಭಿಕ್ಕುಗಳಿಗೆ ಹೇಳಿದನು.

ಸ್ತ್ರೀಯರು ಭಿಕ್ಕು ಸಂಘವನ್ನು ಪ್ರವೇಶಿಸುವುದು ಹಾಗೂ ಅವರು ತಮ್ಮ ಸಂಘವನ್ನು ಕಟ್ಟುವುದಕ್ಕೆ ಬುದ್ಧನ ವಿರೋಧವಿತ್ತು. (ಕೊಟ್ಟಕೊನೆಗೆ ಅವನು ಅಪ್ಪಣೆ ನೀಡಿದನು.) ಅವನ ವಿರೋಧಕರು, ಅವನು ಭಿಕ್ಕು ಸಂಘಕ್ಕಿಂತ ಭಿಕ್ಕುಣಿ ಸಂಘಕ್ಕೆ ಕೆಳಮಟ್ಟದ ಸ್ಥಾನವನ್ನು ನೀಡಿದನೆಂಬ ಆಪಾದನೆಯ ಆಧಾರವನ್ನು ಪಡೆದುಕೊಳ್ಳುತ್ತಾರೆ. ಇದೇ ಎರಡನೆಯ ಕಾರಣವಾಗಿರುವ ಸಾಧ್ಯತೆ ಹೆಚ್ಚು.

ಇಲ್ಲಿ ಮತ್ತೆ ಈ ಪರಿಸ್ಥಿತಿಯನ್ನು ವಿಶ್ಲೇಷಿಸುವುದು ಅಗತ್ಯದ್ದು. ಪರಿವ್ರಜೆಯರನ್ನು ತೆಗೆದುಕೊಳ್ಳಬೇಕೆಂಬ ಮಹಾ ಪ್ರಜಾಪತಿಯ ಬೇಡಿಕೆಯನ್ನು ಬುದ್ಧನು ವಿರೋಧಿಸಿದ್ದೇಕೆ? ಸ್ತ್ರೀಯರು ಕೆಳವರ್ಗದವರು. ಅವರ ಪ್ರವೇಶದಿಂದ ಜನರ ಮನಗಳಲ್ಲಿ ಭಿಕ್ಕು ಸಂಘದ ಮಟ್ಟವು ಇಳಿಮುಖವಾದಿತೆಂದು ಬುದ್ಧನು ಭಾವಿಸುತ್ತಿದ್ದುದರಿಂದ ಅವನು ಅದನ್ನು ವಿರೋಧಿಸಿದನೆ? ಇಲ್ಲವೇ, ಸ್ತ್ರೀಯರು ಬುದ್ಧನ ತತ್ವಜ್ಞಾನ ಹಾಗೂ ಧಮ್ಮೋಪದೇಶಗಳನ್ನು ಆಚರಿಸಲು ಬೌದ್ಧಿಕ ಹಾಗೂ ನೈತಿಕ ದೃಷ್ಟಿಗಳಿಂದ ಅಸಮರ್ಥರು ಎಂಬ ಅಭಿಪ್ರಾಯವನ್ನು ಅವನು ಹೊಂದಿದ್ದ ಕಾರಣ ಅವನು ಅದನ್ನು ವಿರೋಧಿಸಿದನೆ? ಬುದ್ಧನ ಚರ್ಚೆಯ ಕಾಲದ ಬಗೆಗಿನ ಸ್ವಲ್ಪ ಮಟ್ಟಿನ ಕಠೋರವಾದ ಈ ನಿಲುವನ್ನು ಗಮನಿಸಿದರೆ, ಆನಂದನೇ ಎರಡು ಪ್ರಶ್ನೆಗಳ ಪೈಕಿ ಎರಡನೆಯ ಪ್ರಶ್ನೆಯನ್ನು ಬುದ್ಧನಿಗೆ ಖಂಡಿತ ಕೇಳಿದನಲ್ಲದೆ ಬುದ್ಧನು ಸಂದೇಹ ಇಲ್ಲವೇ ವಾದಕ್ಕೆ ಆಸ್ಪದವಿರಕೂಡದೆಂದು ಬಗೆದು ಸಂದೇಹಕ್ಕೆ ಎಡೆಯಿಲ್ಲದಂತೆ ಅದಕ್ಕೆ ಉತ್ತರವನ್ನು ನೀಡಿದನು.

ಸ್ತ್ರೀಯರು ತನ್ನ ತತ್ವಜ್ಞಾನ ಹಾಗೂ ಧರ್ಮೋಪದೇಶಗಳನ್ನು ಅರ್ಥಮಾಡಿಕೊಳ್ಳಲು ಸಂಪೂರ್ಣವಾಗಿ ಸಮರ್ಥರಿದ್ದು, ಪರಿವ್ರಜ್ಯೆಯನ್ನು ಪಡೆದುಕೊಳ್ಳ ಬೇಕೆನ್ನುವ ಅವರ ಬೇಡಿಕೆಯನ್ನು ವಿರೋಧಿಸಲು ಇದು ಕಾರಣವಲ್ಲ ಎಂದು ಬುದ್ಧನು ಹೇಳಿದನು. ಇದರಿಂದ, ಪುರುಷನ ತುಲನೆಯ ಇಲ್ಲಿ ಸ್ತ್ರೀಯು ಬೌದ್ಧಿಕವಾಗಿ ಇಲ್ಲವೇ ನೈತಿಕವಾಗಿ ಕಡಿಮೆ ಮಟ್ಟದವಳೆಂಬ ನಿಲುವು ಬುದ್ಧನದ್ದಾಗಿರಲಿಲ್ಲ ಎಂಬ ಸಂಗತಿಯು ಸ್ಪಷ್ಟವಾಗುತ್ತದೆ. ಅವರ ಮಟ್ಟವು ಕಡಿಮೆಯಾದ ಕಾರಣ ಅವರು ಸಂಘದ ಪ್ರತಿಷ್ಠೆಗೆ ಕುಂದು ತರುವರೆಂಬ ಭಯದಿಂದ ಅವನು ಅವರ ಪ್ರವೇಶವನ್ನು ವಿರೋಧಿಸಿದನೆನ್ನುವ ವಾದದಲ್ಲಿ ಯಾವುದೇ ಹುರುಳಿಲ್ಲ. ಅವನ ಅಭಿಪ್ರಾಯವು ಇದೇ ಬಗೆಯದಾಗಿದ್ದರೆ ಅವನೆಂದಿಗೂ ಅವರಿಗೆ ಸಂಘಕ್ಕೆ ಪ್ರವೇಶವನ್ನು ನೀಡುತ್ತಿರಲಿಲ್ಲ. ಅವನು ಭಿಕ್ಕು ಸಂಘದ ತುಲನೆಯಲ್ಲಿ ಭಿಕ್ಕುಣಿಯರ ಸಂಘಕ್ಕೆ ಕೆಳಸ್ಥಾನವನ್ನು ನೀಡಿದನೆಂಬ ವಾದಕ್ಕೆ ಉತ್ತರ ಹೀಗಿದೆ:

ಈ ವ್ಯವಸ್ಥೆಯ ಹಿಂದೆ ಯಾವುದೇ ಶ್ರೇಷ್ಠತೆ ಇಲ್ಲವೆ ಕನಿಷ್ಠತೆಯ ವಿಚಾರವಿರದೆ ಪೂರ್ತಿಯಾಗಿ ವ್ಯಾವಹಾರಿಕ ನಿಲುವು ಇದಾಗಿತ್ತು. ಬುದ್ಧನು ಸ್ತ್ರೀಗೆ ಪರಿವ್ರಾಜಕಿಯೆಂದು ಪ್ರವೇಶವನ್ನು ನೀಡುವಾಗ ಎರಡು ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಸ್ತ್ರೀಯರಿಗೆ ಹಾಗೂ ಪುರುಷರಿಗೆ ಒಂದೇ ಸಂಘವಿರಬೇಕೇ? ಅವನು ಎರಡು ಸಂಘಗಳಿರಬೇಕೆಂದು ತೀರ್ಮಾನಿಸಿದನು. ಪುರುಷರನ್ನು ಹಾಗೂ ಸ್ತ್ರೀಯರನ್ನು ಒಟ್ಟಿಗೆ ಇರಿಸಿದರೆ ಬ್ರಹ್ಮಚರ್ಯೆಯ ನಿಯಮ ಪೂರ್ತಿ ಹಾಳಾಗುವುದೆಂದು ಅವನು ಭಯಪಡುತ್ತಿದ್ದನು. ಹೀಗಾಗಿ ಸ್ತ್ರೀಯರಿಗೆ ಪ್ರವೇಶವನ್ನು ನೀಡುವ ಸಂದರ್ಭದಲ್ಲಿ ತನ್ನ ಅಭಿಪ್ರಾಯವನ್ನು ಬಳಸಿಕೊಳ್ಳಬೇಕೆಂದು ಅನ್ನಿಸಿ ಸ್ತ್ರೀ-ಪುರುಷರಿಗೆ ಎರಡು ಬೇರೆ ಬೇರೆಯಾದ ಸಂಘಗಳಿರತಕ್ಕದ್ದು ಹಾಗೂ ಅವುಗಳ ನಡುವೆ ವೇಗನಿರೋಧಕಗಳಿರತಕ್ಕದೆಂಬ ನಿಲುವನ್ನು ತಳೆದನು. ಎರಡು ಪ್ರತ್ಯೇಕ ಸಂಘಗಳನ್ನು ನಿರ್ಮಿಸಲು ತೀರ್ಮಾನಿಸಿದ ತರುವಾಯ ಅವನು ಇನ್ನೊಂದು ಪ್ರಶ್ನೆಯನ್ನು ಎದುರಿಸಬೇಕಾಯಿತು. ಅಂದರೆ, ಸ್ತ್ರೀ ಹಾಗೂ ಪುರುಷರ ಸ್ವತಂತ್ರವಾದ ಸಂಘಗಳು ತಯಾರಾದ ಬಳಿಕ ಅವೆರಡರ ನಡುವೆ ಯಾವುದೇ ಬಗೆಯ ಒಳಸಂಬಂಧವು ಇರಬೇಕೆ, ಬೇಡವೇ? ಎನ್ನ್ನುವುದು.

ಮೊದಲನೆಯ ಪ್ರಶ್ನೆಗೆ, ಸ್ತ್ರೀಯರ ಸಂಘವು ಪುರುಷರ ಸಂಘದಿಂದ ಬೇರೆಯಾಗಿರತಕ್ಕದ್ದು, ಅದರ ಹೊರತು ಎರಡನೆಯ ತೀರ್ಮಾನ ಸಾಧ್ಯವಿರಲಿಲ್ಲ. ಇಬ್ಬರಿಗೂ ಅನಿವಾರ್ಯವಾದ ಬ್ರಹ್ಮಚರ್ಯೆಯ ನಿಯಮಗಳ ಅನಿವಾರ್ಯವಾದ ನಿಷ್ಪತ್ತಿ ಇದಾಗಿತ್ತು. ಪುರುಷರು ಹಾಗೂ ಸ್ತ್ರೀಯರ ಜೀವನದಲ್ಲಿ ಹುಟ್ಟು ನೈಸರ್ಗಿಕವಾದ ವಿಷಯ ವಾಸನೆಯ ಸ್ಥಾನವು ಅದೆಷ್ಟು ಪ್ರಭಾವಿಯಾದುದು ಎಂಬುದರ ಅರಿವು ಬುದ್ಧನಿಗಿತ್ತು. ಬುದ್ಧನ ಮಾತುಗಳನ್ನೇ ಬಳಸಿಕೊಳ್ಳುವುದಾದರೆ, ಈ ವಾಸನೆಯು ಪುರುಷನನ್ನು ಸ್ತ್ರೀಯ ಹಾಗೂ ಸ್ತ್ರೀಯನ್ನು ಪುರುಷನ ದಾಸ್ಯದತ್ತ ಎಳೆಯುತ್ತದೆ. ಈ ಪ್ರಭಾವಕ್ಕೆ ಸ್ವಲ್ಪ ಅವಕಾಶವನ್ನು ನೀಡಿದರೂ ಸಾಕು, ಬ್ರಹ್ಮಚರ್ಯೆಯ ನಿಯಮವು ಕ್ಷಣಮಾತ್ರವೂ ಅಸ್ತ್ತಿತ್ವದಲ್ಲಿ ಉಳಿಯಲಾರದು. ಬ್ರಹ್ಮಚರ್ಯೆಯ ನಿಯಮಗಳನ್ನು ಕಾಪಾಡಲೆಂದು ಅವನು ಎರಡು ಸಂಘಗಳನ್ನು ಬೇರೆ ಬೇರೆಯಾಗಿ ಯೋಜಿಸಬೇಕಾಯಿತು.

ಎರಡನೆಯ ಪ್ರಶ್ನೆಯನ್ನು ಕುರಿತು ಯೋಚಿಸಲಾಗಿ, ಬುದ್ಧನು ಮಾಡಿದ ತೀರ್ಮಾನಕ್ಕಿಂತ ಬೇರೆ ತೀರ್ಮಾನ ಸಾಧ್ಯವಿತ್ತೆ? ಅವನ ಧರ್ಮವನ್ನು ಸ್ವೀಕರಿಸಿದ ಸ್ತ್ರೀಯರು ಅಪಕ್ವರಾಗಿದ್ದರು. ಅವರಿಗೆ ಧರ್ಮದ ತತ್ವಜ್ಞಾನವನ್ನು ಕಲಿಸುವುದು ಹಾಗೂ ಅವರಿಗೆ ಸಂಘದ ನಿಯಮಗಳ ಬಗೆಗೆ ತರಬೇತುಗೊಳಿಸುವುದು ಆವಶ್ಯಕವಾಗಿತ್ತು. ಯಾರು ಈ ಹೊಣೆಯನ್ನು ಹೊರಬಲ್ಲವರಾಗಿದ್ದರು? ಅವನು ಬೇರಾರಿಗೆ ಈ ಹೊಣೆಯನ್ನು ಒಪ್ಪಿಸಲು ಸಾಧ್ಯವಿತ್ತು ? ಅವನ ಸಂಘದ ಪುರುಷ ಭಿಕ್ಕುಗಳನ್ನು ಬಿಟ್ಟು ಬೇರಾರಿಗಲ್ಲ. ಏಕೆಂದರೆ ಅವರಿಗೆ ಧರ್ಮ ತತ್ವಜ್ಞಾನವನ್ನು ಕಲಿಸಿ, ಸಂಘದ ನಿಯಮಗಳ ಬಗೆಗೆ ತರಬೇತಿಯನ್ನು ನೀಡಿ, ಅವರನ್ನು ಮೊದಲು ತಯಾರಿಸಲಾಗಿತ್ತು. ಹೀಗಾಗಿ ಅವನು ಇದನ್ನೇ ಮಾಡಿದನು. ಭಿಕ್ಕುಣಿಯರ ತರಬೇತಿಯ ಹೊಣೆಯನ್ನು ಭಿಕ್ಕುಗಳಿಗೆ ಒಪ್ಪಿಸುವಾಗ ಯಾವ ಬಗೆಯ ನಂಟನ್ನು ಅವರಲ್ಲಿ ನಿಶ್ಚಿತಗೊಳಿಸಲಾಯಿತೆನ್ನುವ ಮಹತ್ವದ ಪ್ರಶ್ನೆಯನ್ನು ಕೇಳುವುದು ಆವಶ್ಯಕ.

ಅದರ ಹೊರತು ಭಿಕ್ಕು ಸಂಘಕ್ಕಿಂತ ಭಿಕ್ಕುಣಿ ಸಂಘವು ಕೆಳ ಮಟ್ಟದಲ್ಲಿರುವ ಸಂಗತಿಯನ್ನು ವಿವರಿಸಲಾಗದು. ಈ ಪ್ರಶ್ನೆಯ ನೇರ ಉತ್ತರ ಹೀಗಿದೆ: ಭಿಕ್ಕುಣಿಯರನ್ನು ತರಬೇತುಗೊಳಿಸುವ ಹೊಣೆಯನ್ನು ಭಿಕ್ಕುಗಳಿಗೆ ಒಪ್ಪಿಸಿದ್ದರಿಂದ ಅವರ ನಂಟು ಶಿಕ್ಷಕ ಹಾಗೂ ವಿದ್ಯಾರ್ಥಿಗಳಂತಾಯಿತು. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಂಟಿನಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಬಗೆಗಿನ ಕೆಲವು ಅಧಿಕಾರಗಳು ಹಾಗೂ ವಿದ್ಯಾರ್ಥಿಗಳು ಶಿಕ್ಷಕರ ಬಗೆಗೆ ಕೆಲವು ಅಧೀನತೆ ಹಾಗೂ ಕೆಳಮಟ್ಟದ ನಿಲುವನ್ನು ತಳೆಯುವುದನ್ನು ಒಳಗೊಂಡಿಲ್ಲವೇ? ಬುದ್ಧನು ಇದನ್ನು ಬಿಟ್ಟು ಬೇರೇನನ್ನು ಮಾಡಿದನು?

 ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಪಾದ್ರಿ ಹಾಗೂ ಮಾದ್ರಿಗಳ ನಡುವಿನ ನಂಟನ್ನು ಹೋಲಿಸಿ ನೋಡುವುದು ಅನುಕೂಲದ್ದು. ಮಾದ್ರಿಯರು ಪಾದ್ರಿಗಳಿಗಿಂತ ಕೆಳಮಟ್ಟದಲ್ಲಿಲವೇ? ಹೌದು, ಅವರಿರುವುದೇ ಹಾಗೆ? ಇದರಿಂದ ಕ್ರಿಸ್ತ ಧರ್ಮವು ಸ್ತ್ರೀಯರನ್ನು ಪುರುಷರಿಗಿಂತ ಕಡಿಮೆ ಎಂದು ಲೆಕ್ಕಿಸುತ್ತದೆ ಎಂದು ಯಾರಾದರೂ ಅನ್ನಬಹುದೇ? ಬುದ್ಧನು ಭಿಕ್ಕು ಹಾಗೂ ಭಿಕ್ಕುಣಿಯರ ನಂಟನ್ನು ನಿಯಮಿತಗೊಳಿಸಲೆಂದು ಯಾವುದೋ ಒಂದು ಬಗೆಯ ಏರ್ಪಾಡನ್ನು ಮಾಡಿದ್ದರೆ ಅದನ್ನು ಬೇರೆ ಬಗೆಯಾಗಿ ಅರ್ಥೈಸಬೇಕೇಕೆ? ಸುತ್ತ ಪೀಠಕಕ್ಕೆ ಸಂಬಂಧಪಟ್ಟಂತೆ, ಬುದ್ಧನ ದೃಷ್ಟಿಕೋನವು ಸ್ತ್ರೀಯರನ್ನು ಕುರಿತು ತಾರತಮ್ಯದಿಂದ ಕೂಡಿತ್ತು. ಆದರೆ ಪುರುಷರು ಸ್ತ್ರೀಯರ ಬಗೆಗೆ ಎಚ್ಚರ ತಳೆಯಬೇಕೆಂಬ ಆಗ್ರಹದ ಪ್ರತಿಪಾದನೆಯನ್ನು ಮಾಡುವ ಆಪಾದನೆಗೆ ಯಾವುದೇ ಬಗೆಯ ಆಧಾರವಿಲ್ಲ.

2
ವಿಶಿಷ್ಟ ಘಟನೆಗಳನ್ನು ಬದಿಗಿಟ್ಟು ಸ್ತ್ರೀಯರತ್ತ ನೋಡುವ ಬುದ್ಧನ ಸರ್ವ ಸಾಮಾನ್ಯ ದೃಷ್ಟಿಕೋನವು ಹೇಗಿತ್ತರೆಂಬುದರತ್ತ ಹೊರಳೋಣ. ಬುದ್ಧನು ಸ್ತ್ರೀಯರನ್ನು ಕೆಳಮಟ್ಟದವರೆಂದು ಬಗೆಯುತ್ತಾನೆಯೇ? ಬುದ್ಧನು ಸ್ತ್ರೀವರ್ಗವನ್ನು ಕುರಿತು ಬೌದ್ಧರ ಶ್ರೇಷ್ಠ ಸಾಹಿತ್ಯದಲ್ಲಿ ಮಾಡಿದ ಉಲ್ಲೇಖಗಳನ್ನು ಓದುವವನಿಗೆ, ಅವನು ಸ್ತ್ರೀಯರು ಕೆಳ ಮೆಟ್ಟಲಿಗೆ ಇಳಿಯುವಂತೆ ಏನನ್ನಾದರೂ ಮಾಡುವುದಂತೂ ದೂರ, ಬದಲು ಅವರಿಗೆ ಉದಾತ್ತತೆ ಲಭಿಸಬೇಕು, ಉಚ್ಚ ಮಟ್ಟ ಲಭಿಸಬೇಕೆಂದು ಸತತವಾಗಿ ಪ್ರಯತ್ನ ಶೀಲನಾಗಿದ್ದನೆಂಬುದು ಖಾತ್ರಿಯಾಗದಿರದೆಂಬ ಖಾತ್ರಿ ನನಗಿದೆ. ಈ ದೃಷ್ಟಿಕೋನದ ಪುಷ್ಟಿಗಾಗಿ ಕೆಲವು ಉದಾಹರಣೆಗಳನ್ನು ಕೊಡಬಯಸುತ್ತೇನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News