ಬೆಳಗಾವಿಯ ಕಲಾವಿದನಿಂದ ರಂಗೋಲಿ ಕಲೆಯಲ್ಲಿ ಪಿಎಚ್‌ಡಿ

Update: 2017-07-10 05:12 GMT

ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿಯನ್ನು ಹೊಂದಿ ದ್ದರೂ ರಂಗೋಲಿ ಕಲೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಮೂಲತಃ ಬೆಳಗಾವಿಯ ಪ್ರತಿಭಾವಂತ ಕಲಾವಿದ ಮಹೇಶ್ ರಾವ್(29) ಇದೀಗ ಅದೇ ಕ್ಷೇತ್ರದಲ್ಲಿ ಪಿಎಚ್‌ಡಿ ಮಾಡಲಿದ್ದಾರೆ. ರಂಗೋಲಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲಿರುವ ದೇಶದ ನಾಲ್ಕನೆ ಕಲಾವಿದ ಇವರಾಗಿದ್ದಾರೆ.

ಮಣಿಪಾಲದ ಸ್ಕೂಲ್ ಆಫ್ ಆರ್ಟ್ಸ್‌ನ ವಿದ್ಯಾರ್ಥಿಯಾ ಗಿರುವ ಮಹೇಶ್ ರಾವ್ ದೇಶಿ ಸಂಸ್ಕೃತಿಯಾಗಿರುವ ರಂಗೋಲಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅಲಹಾಬಾದ್ ವಿವಿಯ ಪ್ರಾಧ್ಯಾ ಪಕ ಡಾ.ವಿಜಯ ಖೋಟ್ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಲಿದ್ದಾರೆ. ಮೂರು ವರ್ಷಗಳ ಈ ಸಂಶೋಧನೆಯಲ್ಲಿ ಅವರು, ರಂಗೋಲಿ ಕಲೆಯ ಮೂಲ, ವಿವಿಧ ಪ್ರಕಾರ,ಶೈಲಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಲಿದ್ದಾರೆ.

ಬೆಳಗಾವಿಯ ಆರ್.ಸಿ.ನಗರ ನಿವಾಸಿಯಾ ಗಿರುವ ವಿಲಾಸ್ ರಾವ್ ಹಾಗೂ ನೀತಾ ರಾವ್ ದಂಪತಿಯ ಮಗನಾಗಿರುವ ಮಹೇಶ್ ರಾವ್, ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಯಲ್ಲಿ ನೆಲೆಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ಗೀತಾ ಮಂದಿರ ದಲ್ಲಿ ಪ್ರತಿದಿನ ಮಧ್ಯಾಹ್ನ ದಿಂದ ಸಂಜೆಯವರೆಗೆ ರಂಗೋಲಿ ಹಾಗೂ ಮೆಹಂದಿ ತರಗತಿಯನ್ನು ನಡೆಸುತ್ತಿರುವ ಇವರು, ಈವರೆಗೆ 400ಕ್ಕೂ ಅಧಿಕ ಮಂದಿಗೆ ಇದರಲ್ಲಿ ತರಬೇತಿ ನೀಡಿದ್ದಾರೆ.

ಗುರು ಇಲ್ಲದೆ ಕಲಿತ ವಿದ್ಯೆ: 

ಬೆಳಗಾವಿಯ ಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿಪಡೆದಿರುವ ಮಹೇಶ್, ನಂತರ ಮಣಿಪಾಲ ದಲ್ಲಿ ಹ್ಯೂಮನ್ ರಿಸೋರ್ಸ್‌ನಲ್ಲಿ ಎಂಬಿಎ ಶಿಕ್ಷಣ ಮುಗಿಸಿದ್ದರು. ರಂಗೋಲಿ ಕಲೆಯ ಕುರಿತ ಅತೀವ ಆಸಕ್ತಿಗೆ ಅವರ ತಾಯಿ ಮತ್ತು ಅಕ್ಕ ಪ್ರೇರಣೆ. ಮನೆಯಲ್ಲಿ ಪ್ರತಿದಿನ ಬಿಡಿಸುತ್ತಿದ್ದ ರಂಗೋಲಿಯಿಂದಾಗಿ ಮಹೇಶ್ ರಂಗೋಲಿ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಗುರು ಅಥವಾ ಯಾವುದೇ ತರಬೇತಿ ಇಲ್ಲದೆ ತನ್ನದೇ ಸ್ವಂತ ಪರಿಶ್ರಮ ಹಾಗೂ ಸೃಜನಾತ್ಮಕತೆಯಿಂದ ಆಕರ್ಷಕ ರಂಗೋಲಿ ಚಿತ್ರ ರಚಿಸುವ ಮೂಲಕ ಅದ್ಭುತ ಕಲಾವಿದರಾಗಿ ಈಗಾಗಲೇ ಗುರು ತಿಸಿಕೊಂಡಿದ್ದಾರೆ. ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ಇವರು ಇದೀಗ ಪಿಎಚ್‌ಡಿ ಮಾಡಲು ಮುಂದಾಗಿದ್ದಾರೆ. ಈ ಕ್ಷೇತ್ರದಲ್ಲಿ ಈವರೆಗೆ ಭಾರತದಲ್ಲಿ ಡಾ.ಭಾರತಿ ಮರವಂತೆ ಸಹಿತ ಕೇವಲ ನಾಲ್ಕು ಮಂದಿ ಮಾತ್ರ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಮುಂದೆ ಇವರ ಸಾಲಿನಲ್ಲಿ ಮಹೇಶ್ ರಾವ್ ಕೂಡ ಸೇರಲಿದ್ದಾರೆ. 2012ರಲ್ಲಿ ದಿಲ್ಲಿಯ ಕೆಂಪು ಕೋಟೆಯಲ್ಲಿ ಭಾರತ ಸರಕಾರದ ವತಿಯಿಂದ ಏರ್ಪಡಿ ಸಲಾದ ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ಮಹೇಶ್ ರಾವ್ ಚಿನ್ನದ ಪದಕವನ್ನು ಗೆದ್ದು ಕೊಂಡಿದ್ದರು. ಉಡುಪಿಯ ರಂಗೋಲಿ ತಜ್ಞ ಬಿ.ಪಿ.ಬಾಯರಿ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಇವರಿಗೆ ಬಿ.ಪಿ.ಬಾಯರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.

ದಾಖಲೆ ನಿರ್ಮಿಸುವ ಗುರಿ: 

ಮಹೇಶ್ ರಾವ್ ರಂಗೋಲಿ ಕಲೆಯಲ್ಲಿ ದಾಖಲೆ ನಿರ್ಮಿಸಬೇಕೆಂಬ ಗುರಿಯನ್ನು ಹೊಂದಿದ್ದಾರೆ. ಅತ್ಯಂತ ಉದ್ದದ ಬಿಳಿ ಬಣ್ಣದ ರಂಗೋಲಿ ಯನ್ನು ರಚಿಸಿ ಲಿಮ್ಕಾ ದಾಖಲೆ ಮಾಡಬೇಕೆಂಬುದು ಇವರ ಮಹದಾಸೆ. ಅವರ ಪ್ರಕಾರ ಈವರೆಗೆ 300ಮಂದಿ 40ಸಾವಿರ ಚದರ ಅಡಿ ಉದ್ದದ ಬಣ್ಣದ ರಂಗೋಲಿಯನ್ನು ತಯಾರಿಸಿ ಲಿಮ್ಕಾ ದಾಖಲೆ ಮಾಡಿದ್ದಾರೆ. ಇತರ ರಂಗೋಲಿ ಕಲಾವಿದರು ರಂಗೋಲಿ ರಚಿಸಲು ಸಲಕರಣೆಗಳಾದ ಅಚ್ಚು, ಪೇಪರ್, ಸಾರಣಿಯನ್ನು ಬಳಸುತ್ತಾರೆ. ವೃತ್ತಾಕಾರ ಮಾಡಲು ಹಗ್ಗ ಸಹಾಯವನ್ನು ಪಡೆಯುತ್ತಾರೆ. ಆದರೆ ಮಹೇಶ್ ರಾವ್ ಮಾತ್ರ ಎಲ್ಲವನ್ನು ತನ್ನ ಕೈಯಿಂದಲೇ ಮಾಡುತ್ತಾರೆ. ವೃತ್ತ ರಚನೆಯಿಂದ ಹಿಡಿದು ವಿವಿಧ ಡಿಸೈನ್ ಗಳನ್ನು ಕೂಡ ತನ್ನ ಕೈಯಾರೆಯೇ ಬಿಡಿಸುವ ಅದ್ಭುತ ಕಲಾವಿದ ಎನಿಸಿಕೊಂಡಿದ್ದಾರೆ.

ಶ್ರೀಕೃಷ್ಣ ಮಠದಲ್ಲಿ ಪ್ರತಿವರ್ಷ ಎಂಟು ತಿಂಗಳ ಕಾಲ ನಡೆಯುವ ರಥೋತ್ಸವಕ್ಕೆ ಮಠದ ಎದುರಿನ ರಥಬೀದಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇವರೇ ರಂಗೋಲಿ ರಚಿಸುತ್ತಿದ್ದಾರೆ. ತರಕಾರಿ, ಹಣ್ಣು, ಹೂವು, ಉಪ್ಪು ಹೀಗೆ ಹಲವು ವಸ್ತುಗಳನ್ನು ಬಳಸಿಯೂ ರಂಗೋಲಿಯ ನ್ನು ತಯಾರಿಸುವ ಸೃಜನಾತ್ಮಕ ಕಲಾವಿದ ಇವರು. ಇವರು ಸಲ್ಸ, ಹಿಪ್‌ಹೋಮ್ ನೃತ್ಯ ಕಲಾವಿದ ಕೂಡ ಹೌದು. ತನಗೆ ಹೊಳೆಯುವ ರಚನೆಗೆ ತನ್ನದೇ ಶೈಲಿಯಲ್ಲಿ ರೂಪ ನೀಡುವ ಇವರು ರಂಗೋಲಿಯಲ್ಲಿ ಹೊಸ ಹೊಸ ಆವಿಷ್ಕಾರ ನಡೆಸುತ್ತಿದ್ದಾರೆ.

ರಂಗೋಲಿ ಕಲೆ ನಮ್ಮ ಸಂಪ್ರದಾಯ. ಇದರ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದೇನೆ. ಈವರೆಗೆ ಸುಮಾರು 400 ಮಂದಿಗೆ ಇದರ ಬಗ್ಗೆ ತರಬೇತಿ ನೀಡಿದ್ದೇನೆ. ಈ ಕಲೆ ಉಳಿಯಬೇಕು ಮತ್ತು ಬೆಳೆಯಬೇಕು ಎಂಬ ಉದ್ದೇಶದಿಂದ ಈ ವಿಷಯವನ್ನು ಇಟ್ಟುಕೊಂಡು ಸಂಶೋಧನೆ ನಡೆಸಲು ನಿರ್ಧರಿಸಿದ್ದೇನೆ. ಮೂರು ವರ್ಷಗಳ ಪಿಎಚ್‌ಡಿ ಸಂಶೋಧನೆಗಾಗಿ ರಾಜ್ಯ, ಹೊರರಾಜ್ಯಗಳಲ್ಲಿರುವ ವಿವಿಧ ರಂಗೋಲಿ ಪ್ರಾಕಾರಗಳ ಕುರಿತು ಅಧ್ಯಯನ ಮಾಡಬೇಕಾಗಿದೆ.

 ಮಹೇಶ್ ರಾವ್
ರಂಗೋಲಿ ಕಲಾವಿದ


ಪ್ರತಿಭಾವಂತ ಕಲಾವಿದ ಮಹೇಶ್ ರಾವ್‌ರಲ್ಲಿ ಅಡಗಿದ ಕಲೆ ಜಗಜ್ಜಾಹೀರಾಗಬೇಕು. ಅಲ್ಲದೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅವರಲ್ಲಿ ಬಂದು ತರಬೇತಿ ಪಡೆದರೆ ಈ ರಂಗೋಲಿ ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಪಿಎಚ್‌ಡಿ ಮಾಡಲು ಮುಂದಾಗಿರುವ ಮಹೇಶ್ ರಾವ್ ನಿರ್ಧಾರ ಶ್ಲಾಘನೀಯ.  

ಅಮೃತ್ ಶೆಣೈ

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News