ಮಹಾತ್ಮಾ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿ
ಹೊಸದಿಲ್ಲಿ, ಜು.11: ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ವಿಪಕ್ಷಗಳು ಮಹಾತ್ಮಾ ಗಾಂಧಿ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ ಅವರನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಇಂದು ನಡೆದ ವಿಪಕ್ಷಗಳ ಸಭೆಯಲ್ಲಿ ಗೋಪಾಲ ಕೃಷ್ಣ ಗಾಂಧಿ ಅವರ ಹೆಸರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯಾಗಿ ಘೋಷಿಸಲಾಯಿತು.
ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಗೋಪಾಲ ಕೃಷ್ಣ ಗಾಂಧಿ ಹೆಸರನ್ನು ಆರಂಭದಲ್ಲಿ ಎಡಪಕ್ಷಗಳು ಪ್ರಸ್ತಾಪ ಮಾಡಿತ್ತು. ಆದರೆ ಲೋಕಸಭೆಯ ಮಾಜಿ ಸ್ವೀಕರ್ ಮೀರಾ ಕುಮಾರ್ ಅವರು ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಇದೀಗ ಗೋಪಾಲ ಕೃಷ್ಣ ಗಾಂಧಿ ಹೆಸರನ್ನು ಉಪರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳು ಅಂತಿಮಗೊಳಿಸಿದೆ.
1985-87 ರ ತನಕ ಉಪ ರಾಷ್ಟ್ರಪತಿಯ ಕಾರ್ಯದರ್ಶಿಯಾಗಿ ಮತ್ತು 1987-92 ರ ರಾಷ್ಟ್ರಪತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಗೋಪಾಲಕೃಷ್ಣ ಗಾಂಧಿ ಬಳಿಕ ಬ್ರಿಟನ್ ನ ಭಾರತದ ರಾಯಭಾರಿ ಕಚೇರಿಯಲ್ಲಿ ಸಾಂಸ್ಕೃತಿಕ ಸಚಿವರಾಗಿದ್ದರು. ಬಳಿಕ ಲಂಡನ್ ನ ನೆಹರೂ ಸೆಂಟರ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
1996ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು. 1997ರಲ್ಲಿ ಮತ್ತೆ ಭಾರತದ ರಾಷ್ಟ್ರಪತಿಯ ಕಾರ್ಯದರ್ಶಿಯಾಗಿ ನೇಮಕಗೊಂಡು 2000 ತನಕ ಸೇವೆ ಸಲ್ಲಿಸಿದ್ದರು.
2000ರಲ್ಲಿ ಶ್ರೀಲಂಕಾ, 2002 ರಲ್ಲಿ ನಾರ್ವೆ ಮತ್ತು ಐಸ್ ಲ್ಯಾಂಡ್ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿ 2003ರಲ್ಲಿ ನಿವೃತ್ತರಾಗಿದ್ದರು.
2004ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡ ಗೋಪಾಲಕೃಷ್ಣ ದೇವದಾಸ್ ಗಾಂಧಿ 2009ರ ತನಕ ಅಧಿಕಾರದಲ್ಲಿದ್ದರು.