ಸರಕಾರದಿಂದ ಮಂಜೂರಾದರೂ ಪ್ರಾರಂಭವಾಗದ ಶಾಲೆ

Update: 2017-07-18 18:30 GMT

ಕಾರವಾರ, ಜು.18: ಜಿಲ್ಲೆಗೆ ಸರಕಾರದಿಂದ ಮಂಜೂರಾಗಿರುವ ನಾಲ್ಕು ಮೌಲಾನ ಆಝಾದ್ ಮಾದರಿ ಶಾಲೆಗಳಲ್ಲಿ ಎರಡು ಶಾಲೆಗಳನ್ನು ಆರಂಭಿಸುವ ಕಾರ್ಯ ಕೆಲ ಕಾರಣಗಳಿಂದ ನನೆಗುದಿಗೆ ಬೀಳುವ ಲಕ್ಷಣಗಳಿದ್ದು, ಇನ್ನೆರಡು ಶಾಲೆಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ.

ಜಿಲ್ಲೆಯ ಕಾರವಾರ, ಭಟ್ಕಳ, ಮುಂಡಗೋಡ ಹಾಗೂ ಹಳಿಯಾಳದಲ್ಲಿ ಸರಕಾರ ಮೌಲಾನ ಆಝಾದ್ ಮಾದರಿ ಶಾಲೆಯ ಪ್ರಾರಂಭಕ್ಕೆ ಪ್ರಸಕ್ತ ಸಾಲಿನಲ್ಲಿ ಆದೇಶ ನೀಡಿದೆ. ಆದರೆ ಶೈಕ್ಷಣಿಕ ಅವಧಿ ಪ್ರಾರಂಭವಾಗಿ ಈಗಾಗಲೇ ಎರಡು ತಿಂಗಳು ಕಳೆಯುತ್ತಿದ್ದರೂ ಈವರೆಗೆ ಈ ಶಾಲೆಗಳು ಪ್ರಾರಂಭವಾಗಿಲ್ಲ.

 ಅಲ್ಲದೆ, ಕಾರವಾರ ಹಾಗೂ ಭಟ್ಕಳದಲ್ಲಿ ಮಂಜೂರಾದ ಶಾಲೆಗಳಿಗೆ ಅಗತ್ಯದಷ್ಟು ವಿದ್ಯಾರ್ಥಿಗಳು, ಶಿಕ್ಷಕರು ಲಭ್ಯವಾಗದ ಕಾರಣ ಎರಡು ಶಾಲೆಗಳು ಪ್ರಾರಂಭವಾಗುವ ಹಂತದಲ್ಲಿಲ್ಲ ಎನ್ನಲಾಗಿದೆ. ಹಳಿಯಾಳ-ಮುಂಡಗೋಡದಲ್ಲಿ ಶಾಲೆ ಪ್ರಾರಂಭಿಸುವ ತಯಾರಿ ನಡೆದಿದೆ.

ಅಲ್ಪಸಂಖ್ಯಾತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಳೆದ ಸಾಲಿನ ಬಜೆಟ್ ಘೋಷಣೆಯಲ್ಲಿ ರಾಜ್ಯದಲ್ಲಿ ಒಟ್ಟು 100 ಆಝಾದ್ ಮಾದರಿ ಶಾಲೆಗಳನ್ನು ಸ್ಥಾಪಿಸಲು ಸರಕಾರ ಮುಂದಾಗಿದೆ. ಜಿಲ್ಲೆಗೆ ಒಟ್ಟು 4 ಶಾಲೆಗಳು ಮಂಜೂರಾಗಿವೆ. ಆದರೆ ಪಾಲಕರ ಇಂಗ್ಲಿಷ್ ವ್ಯಾಮೋಹ ಸೇರಿದಂತೆ ಹಲವು ಕಾರಣಗಳಿಗಾಗಿ ಈಗಾಗಲೇ ಇರುವ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗುತ್ತಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಒಟ್ಟು 83 ಸರಕಾರಿ ಶಾಲೆಗಳಲ್ಲಿ ಒಂದನೆ ತರಗತಿಗೆ ವಿದ್ಯಾರ್ಥಿಗಳ ಪ್ರವೇಶ ಶೂನ್ಯವಾಗಿದ್ದು, ಆತಂಕದ ಸಂಗತಿಯಾಗಿದೆ.

ಎಲ್ಲ ಸೌಲಭ್ಯ ವಿದ್ಯಾರ್ಥಿಗಳಿಗಿದೆ: ಹೊಸದಾಗಿ ಮಂಜೂರಾಗಿರುವ ಮೌಲಾನ ಆಝಾದ್ ಶಾಲೆಯ ವಿದ್ಯಾರ್ಥಿಗಳಿಗೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದೊರೆಯುವಂಥ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಶೂ, ಪಠ್ಯಪುಸ್ತಕ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸುಸಜ್ಜಿತ ಕೊಠಡಿ ಮತ್ತು ಶುದ್ಧ ನೀರಿನ ವ್ಯವಸ್ಥೆ, ಶಿಷ್ಯವೇತನ ನೀಡಲಾಗುತ್ತಿದೆ. ಶಾಲೆಯಲ್ಲಿ ಕಂಪ್ಯೂಟರ್, ಸಿಸಿ ಕ್ಯಾಮೆರಾ ಅಳವಡಿಕೆಯು ಸೇರಿದೆ.

ವಿದ್ಯಾರ್ಥಿಗಳ ಕೊರತೆ: ಮೌಲಾನ ಆಝಾದ್ ಮಾದರಿ ಶಾಲೆಯ ಪ್ರತಿ ತರಗತಿಯಲ್ಲಿ ಗರಿಷ್ಠ 60 ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದಾಗಿದೆ.ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಸೀಟು ಮತ್ತು ಎಸ್ಸಿ-ಎಸ್ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟು ಮೀಸಲಿಡಲಾಗಿದೆ. ಪ್ರತಿ ಶಾಲೆಯಲ್ಲಿ ಶೇ.50ರಷ್ಟು ವಿದ್ಯಾರ್ಥಿನಿಯರಿಗೆ ಮೀಸಲಿಡಲು ಸರಕಾರ ನಿರ್ಧರಿಸಿದೆ. ಆದರೆ ಕಾರವಾರ, ಭಟ್ಕಳದಲ್ಲಿ ವಿದ್ಯಾರ್ಥಿಗಳ ಕೊರತೆಯಿದ್ದು, ಶಾಲೆ ಪ್ರಾರಂಭವಾಗುವುದು ಅನುಮಾನವಾಗಿದೆ.ಮುಂಡಗೋಡ, ಹಳಿಯಾಳದಲ್ಲಿ ಶೀಘ್ರವೇ ಪ್ರಾರಂಭವಾಗುವ ನಿರೀಕ್ಷೆ ಇದೆ.

ಮೌಲಾನ ಆಝಾದ್ ಮಾದರಿ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್, ಉರ್ದು ಹಾಗೂ ಗಣಿತ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಇತರ ಸರಕಾರಿ ಶಾಲೆಯಂತೆ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯ, ಉತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಾಗಲಿದೆ. ಆಸಕ್ತಿಯಿಂದ ಬರುವ ಮಕ್ಕಳನ್ನು ಮಾತ್ರ ಸೇರಿಸಿಕೊಳ್ಳಲಾಗುವುದು.
 
 ಗುಡ್ಡಪ್ಪಜಿಗಳಿಕೊಪ್ಪ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ, ಕಾರವಾರ

Writer - ಶ್ರೀನಿವಾಸ್ ಬಾಡ್ಕರ್

contributor

Editor - ಶ್ರೀನಿವಾಸ್ ಬಾಡ್ಕರ್

contributor

Similar News