ಮಾರಣಾಂತಿಕವಾಗುತ್ತಿರುವ ಕೀಟನಾಶಕಯುಕ್ತ ಹಣ್ಣುಗಳು!

Update: 2017-07-28 18:08 GMT

2014ರಲ್ಲಿ ಬಿಹಾರದ ಮುಝಫ್ಫರ್‌ಪುರದ ಗ್ರಾಮವೊಂದರಲ್ಲಿ ಲಿಚೀ ಹಣ್ಣುಗಳನ್ನು ತಿಂದು ನೂರಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದಾಗ ಇಡೀ ದೇಶವೇ ತಲ್ಲಣಿಸಿತ್ತು. ಈ ಸಾವುಗಳಿಗೆ ಲಿಚೀ ಹಣ್ಣು ಕಾರಣವಲ್ಲ, ಕೀಟನಾಶಕ ಎಂಡೊಸಲ್ಫಾನ್ ಎನ್ನುವುದನ್ನು ‘ದಿ ಅಮೆರಿಕನ್ ಜರ್ನಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಆ್ಯಂಡ್ ಹೈಜೀನ್’ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ಬಹಿರಂಗಗೊಳಿಸಿದೆ.

ಎಂಡೊಸಲ್ಫಾನ್ ಸೇರಿದಂತೆ 2011ರಿಂದ ನಿಷೇಧಿಸ ಲ್ಪಟ್ಟಿರುವ ಹಲವಾರು ಕೀಟನಾಶಕಗಳು ಈ ಮಕ್ಕಳಲ್ಲಿ ಮಿದುಳಿನ ಊತಕ್ಕೆ ಕಾರಣವಾಗಿದ್ದವು ಎಂದು ವರದಿಯು ಹೇಳಿದೆ.

ಅಧ್ಯಯನದ ಸಂದರ್ಭ ಸಂಶೋಧಕರು ಲಿಚೀ ಹಣ್ಣಿನ ತೋಟಗಳಲ್ಲಿ ಕೆಲಸ ಮಾಡುವ ಕುಟುಂಬಗಳ ಸಂದರ್ಶನ ನಡೆಸಿದ್ದರು. ಹೆಚ್ಚಿನ ಮಕ್ಕಳು ತೋಟಗಳಲ್ಲಿ ಉದುರಿ ಬಿದ್ದಿದ್ದ ಹಣ್ಣುಗಳನ್ನು ತಿಂದಿದ್ದರು ಮತ್ತು ಹೀಗೆ ಮಾಡುವಾಗ ಅವುಗಳ ಸಿಪ್ಪೆಯನ್ನು ತಮ್ಮ ಹಲ್ಲುಗಳಿಂದ ತೆಗೆದಿದ್ದರು. ಹೆಚ್ಚಿನ ಕೀಟನಾಶಕ ಸಿಪ್ಪೆಗಳಲ್ಲಿ ಸಂಗ್ರಹವಾಗಿದ್ದು, ಈ ಕೀಟನಾಶಕವೇ ಮಕ್ಕಳ ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಈ ಮಕ್ಕಳಲ್ಲಿ ಮಿದುಳಿನ ಊತ ಕಾಣಿಸಿಕೊಂಡಿದ್ದು, ಇದು ತೀವ್ರ ಮಿದುಳು ಜ್ವರದ ಲಕ್ಷಣಗಳನ್ನು ಹೋಲುತ್ತಿತ್ತು ವುತ್ತು ಅವರ ಸಾವಿಗೆ ಕಾರಣವಾಗಿತ್ತು.

ಇದಕ್ಕೂ ಮೊದಲು 2017, ಜನವರಿಯಲ್ಲಿ ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಸಂಸ್ಥೆಯು ಪ್ರಕಟಿಸಿದ್ದ ತನ್ನ ಅಧ್ಯಯನ ವರದಿಯಲ್ಲಿ ಮಕ್ಕಳ ಸಾವುಗಳಿಗೆ ಲಿಚೀ ಹಣ್ಣುಗಳು ಕಾರಣವೆಂದು ಹೇಳಿತ್ತು. ಲಿಚೀಹಣ್ಣುಗಳನ್ನು ತಿಂದಿದ್ದ ಮಕ್ಕಳು ಸಂಜೆಯ ಊಟವನ್ನು ಮಾಡಿರಲಿಲ್ಲ ಮತ್ತು ಇದರಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವು ತಗ್ಗಿತ್ತು ಹಾಗೂ ತೀವ್ರ ಮಿದುಳು ಜ್ವರವು ಹೆಚ್ಚಿನ ಪ್ರಕರಣಗಳಲ್ಲಿ ಸೆಳೆತ ಮತ್ತು ಕೋಮಾಕ್ಕೆ ಕಾರಣವಾಗಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಹಣ್ಣುಗಳನ್ನು ತಿನ್ನುವ ಮುನ್ನ ಅವುಗಳಲ್ಲಿಯ ಕೀಟನಾಶಕ ಅಂಶಗಳನ್ನು ತೊಲಗಿಸುವುದು ಮುಖ್ಯವಾಗಿದೆ ಎನ್ನುವುದನ್ನು ಮುಝಫ್ಫರ್‌ಪುರ ಘಟನೆಯು ತೋರಿಸಿದೆ. ಅದಕ್ಕಾಗಿ ಈ ಕ್ರಮಗಳನ್ನು ಅನುಸರಿಸಬಹುದಾಗಿದೆ.

*ಉಪ್ಪು ಬೆರಸಿದ ನೀರಿನಲ್ಲಿ ಹಣ್ಣುಗಳನ್ನು ಚೆನ್ನಾಗಿ ತೊಳೆಯಬೇಕು.ಇದು ಹಣ್ಣುಗಳ ಹೊರಮೈಯಲ್ಲಿರುವ ಕೀಟನಾಶಕ ಅಂಶಗಳನ್ನು ಹೋಗಲಾಡಿಸಲು ನೆರವಾಗುತ್ತದೆ. ತರಕಾರಿಗಳಿಗೂ ಈ ಕ್ರಮವನ್ನು ಅನುಸರಿಸಬಹುದಾಗಿದೆ.

*ಪಾತ್ರೆಯೊಂದರಲ್ಲಿ ಬಿಸಿನೀರು ತೆಗೆದುಕೊಂಡು ಸುಮಾರು 10-15 ನಿಮಿಷಗಳ ಕಾಲ ಹಣ್ಣುಗಳನ್ನು ಹಾಕಿಟ್ಟರೆ ಕೀಟನಾಶಕ ಅಂಶವು ತೊಲಗುತ್ತದೆ.

*ವಿನೆಗರ್ ಬೆರೆಸಿದ ನೀರಿನಲ್ಲಿ ಹಣ್ಣುಗಳನ್ನು ತೊಳೆದರೂ ಕೀಟನಾಶಕ ಅಂಶ ನಿವಾರಣೆಯಾಗುತ್ತದೆ.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News