ಕರ್ನಾಟಕದ ಕಲ್ಯಾಣ್ ಸಿಂಗ್ ಯಡಿಯೂರಪ್ಪ
ಬೂಕನಕೆರೆಯ ಬೇರುಮಟ್ಟದ ಹುಟ್ಟು ಹೋರಾಟಗಾರ ಯಡಿಯೂರಪ್ಪ ಹುಟ್ಟಿದ್ದು 1943ರಲ್ಲಿ. ಬರುವ ಫೆಬ್ರವರಿ 2018ಕ್ಕೆ 75ನೆ ವಯಸ್ಸಿಗೆ ಕಾಲಿಡಲಿದ್ದಾರೆ. ಈ 75 ವರ್ಷಗಳಲ್ಲಿ ಸುಮಾರು 50 ವರ್ಷಗಳ ಕಾಲ ಸಾರ್ವಜನಿಕ ಕ್ಷೇತ್ರದಲ್ಲಿಯೇ ಕಳೆದು, ಅಪಾರ ಅನುಭವ ಮತ್ತು ಹಿರಿಯ ನಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ ಈಗ ಆ ಹಿರಿತನವೇ ಅವರಿಗೆ ಬಹಳ ದೊಡ್ಡ ಕಂಟಕವಾಗಿದೆ. ಕರ್ನಾಟಕ ರಾಜ್ಯದಲ್ಲಿ 1.5 ಕೋಟಿ ಲಿಂಗಾಯತ ರಿದ್ದಾರೆ. ಸದ್ಯಕ್ಕೆ ಅವರೇ ಬಹುಸಂಖ್ಯಾತರು. 2008ರ ವಿಧಾನಸಭಾ ಚುನಾವಣೆಯಲ್ಲಿ ಬಹುಪಾಲುಲಿಂಗಾಯತರು ‘ನಮ್ಮವ’ ಎನ್ನುವ ಕಾರಣಕ್ಕೆ ಯಡಿಯೂ ರಪ್ಪನವರನ್ನು ಬೆಂಬಲಿಸಿದ್ದರು. ಮುಖ್ಯಮಂತ್ರಿಯಾ ಗಿಸಿದ್ದರು. ಸಂಘ ಪರಿವಾರ ಮತ್ತು ದಿಲ್ಲಿಯ ಬಿಜೆಪಿ ನಾಯಕರು ಈಗಲೂ ಅದೇ ಲೆಕ್ಕಾಚಾರದಲ್ಲಿದ್ದು, ಮಾಸ್ ಲೀಡರ್ ಎಂಬ ಕಾರಣಕ್ಕೆ ಯಡಿಯೂರಪ್ಪನವರನ್ನು ರಾಜ್ಯಾ ಧ್ಯಕ್ಷರನ್ನಾಗಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಆ ಮೂಲಕ 2018ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲು ತಂತ್ರ ಹೆಣೆಯುತ್ತಿದ್ದಾರೆ.
ಬಿಜೆಪಿಯ ಆಶಯಕ್ಕೆ ತಕ್ಕಂತೆ ಯಡಿಯೂರಪ್ಪ ನವರು ಕಾಂಗ್ರೆಸ್ ಕಟ್ಟಿಹಾಕಲು ವಯಸ್ಸನ್ನು ಮರೆತು ಓಡಾಡುತ್ತಿದ್ದಾರೆ. ಪಕ್ಷ ಸಂಘಟನೆಗಾಗಿ ಬೆವರು ಸುರಿಸು ತ್ತಿದ್ದಾರೆ. ಈ ಬೆವರಿಗೆ ತಕ್ಕ ಪ್ರತಿಫಲ ಪಡೆಯುವ ವೇಳೆಗೆ 75 ಆಗಲಿದೆ. ಆದರೆ ಭಾರತೀಯ ಜನತಾ ಪಕ್ಷದ ನಿಯಮದಂತೆ 75 ಆದವರಿಗೆ, ಅಡ್ವಾಣಿ- ಜೋಷಿಯ ಸ್ಥಿತಿ ಪ್ರಾಪ್ತವಾಗಲಿದೆ. ಇಂತಹ ಸಮಯ ಮತ್ತು ನಿಯಮಕ್ಕಾಗಿ ಬಿಜೆಪಿಯಲ್ಲಿರುವ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಆರೆಸ್ಸೆಸ್‌ನ ಸಂತೋಷ್ ಬಣ- ಯಡಿಯೂರಪ್ಪನವರನ್ನು ಹಣಿಯಲು ಕಾದು ಕೂತಿದೆ. ಇವೆರಡೂ ಬಣಗಳಿಂದ ಪ್ರೇರೇಪಿತ ರಾದ ಕೆ.ಎಸ್. ಈಶ್ವರಪ್ಪ ಕೂಡ ಸಿದ್ಧರಾಗಿ ನಿಂತಿದ್ದಾರೆ. ಇಷ್ಟಲ್ಲದೆ, ಬಿಜೆಪಿಯಲ್ಲಿರುವ ಸೊಗಡು ಶಿವಣ್ಣ, ವಿ.ಸೋಮಣ್ಣರಂತಹ ಲಿಂಗಾಯತರೇ ಯಡಿಯೂರಪ್ಪ ನವರ ವಿರುದ್ಧವಿದ್ದು, ಅವರ ನಾಯಕತ್ವವನ್ನು ವಿರೋಧಿಸುತ್ತಿದ್ದಾರೆ. ಇವರೆಲ್ಲರೂ ಹೀಗೆ ಸಾರಾಸಗಟು ಯಡಿಯೂರಪ್ಪನ ವರನ್ನು ಒಪ್ಪದಿರಲು, ಅವರ ವಿರುದ್ಧ ಪಿತೂರಿಯಲ್ಲಿ ತೊಡಗಲು ಬಹಳ ಮುಖ್ಯವಾದ ಕಾರಣವೆಂದರೆ- ಅವರ ಮುಂಗೋಪ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊ ಳ್ಳದಿರುವುದು, ಶೋಭಾ ಕರಂದ್ಲಾಜೆಯವರನ್ನು ಅತಿಯಾಗಿ ನಂಬುವುದು, ಎಲ್ಲದಕ್ಕೂ ಅವರನ್ನೇ ಮುಂದು ಮಾಡುವುದು. ಆದರೂ ವಿಎಚ್‌ಪಿ, ಆರೆಸ್ಸೆಸ್, ಗೋರಕ್ಷಕ ಸೇನೆ, ಶ್ರೀರಾಮಸೇನೆ, ಬಿಜೆಪಿ.. ಇವರೆಲ್ಲ ಒಂದಾಗಿರುವಂತೆ ಕಂಡರೂ, ಒಳಗೊಳಗೆ ಒಬ್ಬೊಬ್ಬರೂ ಒಂದೊಂದು ದ್ವೀಪವಾಗಿದ್ದಾರೆ. ಇದು ಯಡಿಯೂರಪ್ಪನವರ ಅಂತರಂಗದಲ್ಲಿ ಮೃದಂಗ ಬಾರಿಸುತ್ತಿದ್ದರೆ, ಬಹಿರಂಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಪ್ರತ್ಯೇಕ ನಾಡಧ್ವಜ ಎಂಬ ಎರಡು ಬ್ರಹ್ಮಾಸ್ತ್ರಗಳನ್ನು ಬಿಟ್ಟು ಮರ್ಮಾಘಾತಕ್ಕೆ ಕಾರಣರಾಗಿದ್ದಾರೆ. ಪ್ರತ್ಯೇಕ ಧರ್ಮ ಮತ್ತು ಪ್ರತ್ಯೇಕ ಧ್ವಜ- ಎರಡೂ ಭಾವನಾತ್ಮಕ ವಿಚಾರ ಗಳು. ಒಂದು ಧರ್ಮಕ್ಕೆ, ಒಂದು ನಾಡಿಗೆ ಸಂಬಂಧಿಸಿದ, ಸಂಘರ್ಷವನ್ನು ಹುಟ್ಟುಹಾಕುವ ವಿಷಯಗಳು. ನಾಡಿನ ಜನತೆಯನ್ನು ಇಬ್ಭಾಗಿಸುವ ಸಂಗತಿಗಳು.
ಇದರ ಹಿಂದೆ ಸಿದ್ದರಾಮಯ್ಯನವರ ಚಾಣಾಕ್ಷ ರಾಜಕಾರಣ ಅಡಗಿದೆ ಎನ್ನುವವರಿದ್ದಾರೆ. ವಿಚಿತ್ರ ವೆಂದರೆ, ಎರಡೂ ವಿಷಯಗಳೊಂದಿಗೆ ಧರ್ಮ ರಾಜಕಾರಣ ತಳಕು ಹಾಕಿಕೊಂಡಿದೆ. ಸಂಘಪರಿವಾರ ವನ್ನು ಸಂಕಷ್ಟಕ್ಕೀಡುಮಾಡಿದೆ. ಅದು ಮುನ್ನೆಲೆಗೆ ಬಂದರೆ, ಪರ-ವಿರೋಧ ಚರ್ಚೆಯಾಗಿ ಆರೆಸ್ಸೆಸ್‌ನ ಹಿಂದುತ್ವದ ಹಿಡನ್ ಅಜೆಂಡಾ ಬಯಲಾಗುತ್ತದೆ. ಅದು ಬಿಜೆಪಿಯ ಮತಬ್ಯಾಂಕಿಗೆ ಹೊಡೆತ ಬೀಳುತ್ತದೆ. ಆದರೂ ವಿರೋಧ ಪಕ್ಷವಾಗಿರುವ ಬಿಜೆಪಿ ಮತ್ತು ಯಡಿಯೂರಪ್ಪ, ‘ಇದು ಸಮಾಜವನ್ನು ಒಡೆಯುವ ಹುನ್ನಾರ, ಸಿದ್ದರಾಮಯ್ಯರ ಕೆಟ್ಟ ರಾಜಕೀಯ’ ಎಂದೆಲ್ಲ ಬಡಬಡಿಸುತ್ತಿದ್ದಾರೆ. ಇದು ನಿಜವಾದರೆ, ಬಿಜೆಪಿ ಕರಾವಳಿಯಲ್ಲಿ ಮಾಡಿದ್ದೇನು? ಕಲ್ಲಡ್ಕ ಪ್ರಭಾಕರ ಭಟ್‌ರ ಪ್ರಚೋದನೆಗೆ ಅಮಾ ಯಕರ ಹೆಣ ಬೀಳುತ್ತಿದ್ದಾಗ, ಕರಾವಳಿ ಪ್ರಕ್ಷುಬ್ಧಗೊಂಡು ಶಾಂತಿ ನೆಮ್ಮದಿಗೆ ಭಂಗ ಉಂಟಾದಾಗ, ‘ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಮುಟ್ಟಿದರೆ ಬೆಂಕಿ ಬೀಳುತ್ತದೆ’ ಎಂದು ಹೇಳು ವುದು ಎಷ್ಟು ಸರಿ? ಇದು ಕೆಟ್ಟ ರಾಜಕೀಯವಲ್ಲವೇ? ಜನರನ್ನು ಭಾವನಾತ್ಮಕವಾಗಿ ಕೆರಳಿಸುವ, ರೊಚ್ಚಿಗೇ ಳಿಸುವ, ಆ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರಕ್ಕೆ ಬಿಜೆಪಿ ಕೈ ಹಾಕಿದರೆ, ಅಂಥದ್ದೇ ಭಾವನಾತ್ಮಕ ವಿಚಾರಗಳಾದ ಪ್ರತ್ಯೇಕ ನಾಡ ಧ್ವಜ, ಕೇಂದ್ರದ ಹಿಂದಿ ಹೇರಿಕೆ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಗಳು ಕಾಂಗ್ರೆಸ್ ಕೈಗೆ ತಾನಾಗಿಯೇ ಬಂದು ತಗಲಿಕೊಂಡಿವೆ. ಪ್ರಬಲ ಅಸ್ತ್ರದಂತೆ ಬಳಕೆಯಾಗಿ, ರಾಜಕೀಯವಾಗಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತಿವೆ. ಹಿರಿಯ ಪತ್ರಕರ್ತರಾದ ಪಾಟೀಲ ಪುಟ್ಟಪ್ಪ ರಾಜ್ಯ ನಾಡಧ್ವಜ ಹೊಂದುವ ಅಗತ್ಯವಿದೆ ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅಖಿಲ ಭಾರತ ಲಿಂಗಾಯತ ಮಹಾಸಭಾದವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ. ಇಂತಹವರಿಂದ ಬಂದ ಮನವಿಗೆ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ. ಹಾಗೆಯೇ ನಾಡಿನ ಜನತೆಯ ಬಹು ದಿನದ ಬೇಡಿಕೆ, ರಾಷ್ಟ್ರಧ್ವಜವನ್ನು ಗೌರವಿಸುತ್ತಲೇ ನಾಡಧ್ವಜವನ್ನು ಹೊಂದುವ ಹಕ್ಕು ಸಂವಿಧಾನಬದ್ಧ ಎಂದಿದ್ದಾರೆ. ಎರಡೂ ವಿಚಾರಗಳಲ್ಲಿ ಮುಖ್ಯಮಂತ್ರಿಯ ನಡೆ ಕಾನೂನಾತ್ಮಕವಾಗಿದೆ. ನಾಡಿನ ಜನತೆಯ ಪರವಾಗಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಅದರ ನಾಯಕ ಯಡಿಯೂರಪ್ಪನವರು ನಾಡಧ್ವಜ ಬೇಡವೆಂದರೆ, ಅದು ಕನ್ನಡ-ಕನ್ನಡಿಗರ ವಿರುದ್ಧದ ನಿಲುವಾಗುತ್ತದೆ. ನಾಡಿನ ಅಸ್ಮಿತೆಯನ್ನು ಕಡೆಗಣಿಸಿದಂತಾಗಿ ಕನ್ನಡಿಗರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ನಾಡಧ್ವಜ ಬೇಕೆಂದರೆ, ಕೇಂದ್ರ ಸರಕಾರದ ಒಂದೇ ದೇಶ-ಒಂದೇ ಧ್ವಜ ಮಂತ್ರಕ್ಕೆ ಮತ್ತು ಸಂಘಪರಿವಾರದ ಗೋಳ್ವಾಲ್ಕರ್ ನಿಲುವಿಗೆ ವಿರುದ್ಧವಾಗುತ್ತದೆ. ಒಟ್ಟಿನಲ್ಲಿ ಪರ-ವಿರೋಧ, ಯಾವುದನ್ನು ಹೇಳಿದರೂ ಕಷ್ಟ. ಧ್ವಜ ಬೇಕು ಎಂದರೆ ದೇಶದ್ರೋಹ, ಬೇಡ ಎಂದರೆ ನಾಡದ್ರೋಹ. ಯಾವ ನಿಲುವು ತಳೆದರೂ, ರಾಜಕೀಯವಾಗಿ ಬಿಜೆಪಿಗೆ ಬಹಳ ಪೆಟ್ಟು ಕೊಡಲಿದೆ. ಬಿಜೆಪಿಯ ತತ್ವ-ಸಿದ್ಧಾಂತಗಳೇ ಯಡಿಯೂರಪ್ಪನವರ ಬಾಯಿ ಬಂದ್ ಮಾಡಿವೆ. ಹಾಗೆಯೇ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ. ಲಿಂಗಾಯತ ಕೋಮಿನ ಮಾತೆ ಮಹಾದೇವಿ, ‘ಹಿಂದೂ ಧರ್ಮದೊಳಗೆ ನಾವಿಲ್ಲ. ನಮ್ಮದೇ ಪ್ರತ್ಯೇಕ ಲಿಂಗಾಯತ ಧರ್ಮ’ ಎಂದು ಘೋಷಿಸಿದ್ದಾರೆ ಮತ್ತು ಕೆಲ ಮಠಾಧಿಪತಿಗಳೊಂದಿಗೆ ಸೇರಿ ಕಲಬುರಗಿಯಲ್ಲಿ ಸಮಾವೇಶ ಮಾಡಿ ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಲಿಂಗಾಯತರು ಬಿಜೆಪಿಯ ಪರವಿದ್ದ ಕಾರಣಕ್ಕೆ ಪೇಜಾವರಶ್ರೀಗಳು, ‘ಹಿಂದೂ ಧರ್ಮದಿಂದ ಲಿಂಗಾಯತರು ಹೊರಹೋಗಬಾರದು, ನಾವೆಲ್ಲ ಒಂದೇ’ ಎಂದಿದ್ದಾರೆ. ಇದಕ್ಕಾಗಿಯೇ ಕಾಯುತ್ತಿದ್ದ ಸಚಿವ ಎಂ.ಬಿ.ಪಾಟೀಲ್, ‘ಪೇಜಾವರರಿಗೂ ಲಿಂಗಾಯ ತರಿಗೂ ಸಂಬಂಧವಿಲ್ಲ, ಆರೆಸ್ಸೆಸ್ ಪರ ಒಲವಿರುವ ಪೇಜಾವರರು, ಲಿಂಗಾಯತರ ವಿಷಯದಲ್ಲಿ ತಲೆಹಾಕುವ ಅಗತ್ಯವಿಲ್ಲ. ಇದು ನಾವು ನಾವೇ ಕೂತು ಚರ್ಚಿಸಿ ಬಗೆಹರಿಸಿಕೊಳ್ಳುವಂಥದ್ದು’ ಎಂದು ಬಿಜೆಪಿ ಪರವಿದ್ದ ಹಿಂದೂಗಳನ್ನು ಗೊಂದಲಗೊಳಿಸಿದ್ದಾರೆ. ಪ್ರತ್ಯೇಕ ಧರ್ಮದ ಬಗ್ಗೆ ಮಠಾಧೀಶರು, ಸ್ವಾಮೀ ಜಿಗಳು, ಚಿಂತಕರಲ್ಲಿ ಪರ-ವಿರೋಧದ ಚರ್ಚೆಯಾ ಗುತ್ತಿದೆ. ಸಮಾವೇಶ, ಮೆರವಣಿಗೆ, ಒತ್ತಡ, ಬೇಡಿಕೆ ಹೆಚ್ಚಾಗುತ್ತಿದೆ. ಲಿಂಗಾಯತರ ನಾಯಕ ಎನ್ನಲಾಗುತ್ತಿದ್ದ ಯಡಿಯೂರಪ್ಪ ಈಗ ಪ್ರತ್ಯೇಕ ಧರ್ಮದ ಪರವೋ, ವಿರುದ್ಧವೋ ಎನ್ನುವುದನ್ನು ಹೇಳಲಾಗದ ಸಂದಿಗ್ಧಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.
ಂಗಾಯತ ಧರ್ಮ, ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೊ, 50 ಸಾವಿರದವರೆಗಿನ ರೈತರ ಸಾಲ ಮನ್ನಾ.. ಇವ್ಯಾವುದಕ್ಕೂ ಬಿಜೆಪಿಯಿಂದ ಉತ್ತರವಿಲ್ಲ. ಬಿಜೆಪಿಯ ಹಿಂದುತ್ವದ ನೀತಿ-ನಿಲುವುಗಳೇ ಯಡಿಯೂರಪ್ಪರನ್ನು ಕಟ್ಟಿಹಾಕಿವೆ. ಹಾಗಾಗಿ ರಾಜ್ಯ ಸರಕಾರವನ್ನು ಸಮರ್ಥ ವಾಗಿ ಎದುರಿಸಲಾಗದ ಯಡಿಯೂರಪ್ಪ, ಗೊಂದಲಕ್ಕೆ ಬಿದ್ದು ಗಲಿಬಿಲಿಗೊಂಡಿದ್ದಾರೆ, ಸಂದಿಗ್ಧಕ್ಕೆ ಸಿಕ್ಕಿ ಸುಮ್ಮನಾ ಗಿದ್ದಾರೆ. ನಾಯಕನ ನಿಸ್ತೇಜ ಸ್ಥಿತಿ ಬಿಜೆಪಿಯ ಹಿನ್ನಡೆ ಯಂತೆ ಕಾಣತೊಡಗಿದೆ. ಇಂತಹ ಸಂದರ್ಭಕ್ಕಾಗಿಯೇ ಕಾಯುತ್ತಿದ್ದ ಬಿಜೆಪಿಯೊಳಗೇ ಇರುವ ಯಡಿಯೂರಪ್ಪ ನವರ ವಿರೋಧಿಗಳು ಎದ್ದು ಕೂತಿದ್ದಾರೆ. ವಯಸ್ಸು ಮತ್ತು ನಿಸ್ತೇಜ ಸ್ಥಿತಿಯನ್ನು ಮುಂದು ಮಾಡುತ್ತಿದ್ದಾರೆ. ನಾಯಕತ್ವ ಬದಲಾವಣೆಗೆ ದಿಲ್ಲಿಯ ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ. ಅಂದರೆ ಒಬ್ಬ ಮಾಸ್ ಲೀಡರ್‌ನನ್ನು ಕಟ್ಟಿಹಾಕುವವರೂ ಅವರೆ, ಕತೆ ಮುಗಿಸುವವರೂ ಅವರೆ. ಇವರ ಪಿತೂರಿಗೆ ಯಡಿಯೂರಪ್ಪ ಬಲಿ ಯಾದರೆ, ಕರ್ನಾಟಕದ ಕಲ್ಯಾಣಸಿಂಗ್ ಆಗಿ ಇತಿಹಾ ಸದ ಪುಟಗಳಲ್ಲಿ ದಾಖಲಾಗಲಿದ್ದಾರೆ.
ಪ್ರತ್ಯೇಕ ನಾಡಧ್ವಜ, ಕೇಂದ್ರದ ಹಿಂದಿ ಹೇರಿಕೆ, ಪ್ರತ್ಯೇಕ ಲಿಂಗಾಯತ ಧರ್ಮ, ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೊ, 50 ಸಾವಿರದವರೆಗಿನ ರೈತರ ಸಾಲ ಮನ್ನಾ.. ಇವ್ಯಾವುದಕ್ಕೂ ಬಿಜೆಪಿಯಿಂದ ಉತ್ತರವಿಲ್ಲ. ಬಿಜೆಪಿಯ ಹಿಂದುತ್ವದ ನೀತಿ-ನಿಲುವುಗಳೇ ಯಡಿಯೂರಪ್ಪರನ್ನು ಕಟ್ಟಿಹಾಕಿವೆ. ಹಾಗಾಗಿ ರಾಜ್ಯ ಸರಕಾರವನ್ನು ಸಮರ್ಥವಾಗಿ ಎದುರಿಸಲಾಗದ ಯಡಿಯೂರಪ್ಪ, ಗೊಂದಲಕ್ಕೆ ಬಿದ್ದು ಗಲಿಬಿಲಿಗೊಂಡಿದ್ದಾರೆ, ಸಂದಿಗ್ಧಕ್ಕೆ ಸಿಕ್ಕಿ ಸುಮ್ಮನಾಗಿದ್ದಾರೆ.