ಮೇಧಾ ಪಾಟ್ಕರ್ ಬಂಧನ ಹೇಯ ಕೃತ್ಯ

Update: 2017-08-09 18:41 GMT

ಭಾರತದ ಜನತಂತ್ರ ವ್ಯವಸ್ಥೆಯ ಮೇಲೆ ಗೋರಿ ಕಟ್ಟಿ ಫ್ಯಾಶಿಸ್ಟ್ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಹೊರಟಿರುವ ವ್ಯಕ್ತಿಗಳ ಕೈಗೆ ಸಿಕ್ಕು ಈ ದೇಶ ನಲುಗಿ ಹೋಗಿದೆ. ಪ್ರತಿಭಟನೆಯ ಧ್ವನಿಗಳನ್ನು ಹತ್ತಿಕ್ಕಲು ಹೊರಟಿರುವ ಪ್ರಭುತ್ವ ಇದೀಗ ಮಧ್ಯಪ್ರದೇಶದಲ್ಲಿ ಮೇಧಾ ಪಾಟ್ಕರ್ ಮತ್ತು ಅವರ ಐವರು ಒಡನಾಡಿಗಳನ್ನು ಬಂಧಿಸಿ ಜೈಲಿಗೆ ಹಾಕಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಳೆದ 12 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮೇಧಾ ಪಾಟ್ಕರ್ ಹೋರಾಟ ಅಹಿಂಸಾತ್ಮಕವಾಗಿತ್ತು. ಆದರೆ, ಪೊಲೀಸರೇ ಅಪ್ರಚೋದಿತವಾಗಿ ಅವರು ಸತ್ಯಾಗ್ರಹ ನಡೆಸುತ್ತಿದ್ದ ಪೆಂಡಾಲಿಗೆ ನುಗ್ಗಿ ಲಾಠಿ ಪ್ರಹಾರ ಮಾಡಿ ನಡುರಾತ್ರಿ ಬಂಧಿಸಿ ಸೆರೆಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಭ್ರಷ್ಟಾಚಾರ ಹಾಗೂ ಕೊಲೆಗಡುಕತನದಲ್ಲಿ ದಾಖಲೆ ಸ್ಥಾಪಿಸಿದ ಮಧ್ಯಪ್ರದೇಶದ ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಐದಾರು ಜನ ಸತ್ಯಾಗ್ರಹಿಗಳ ಮೇಲೆ ಎರಡು ಸಾವಿರ ಪೊಲೀಸರನ್ನು ಛೂ ಬಿಟ್ಟು ಈ ದುಷ್ಕೃತ್ಯ ಎಸಗಿದೆ. ಮೇಧಾ ಬಂಧನವನ್ನು ಈ ದೇಶದ ಪ್ರಧಾನಿ ಮತ್ತು ಅವರ ಪಕ್ಷದ ದಲ್ಲಾಳಿ ಅಧ್ಯಕ್ಷ ಅಮಿತ್ ಶಾ ವೌನವಾಗಿ ಸಂಭ್ರಮಿಸಿ ಖುಷಿಪಡುತ್ತಿದ್ದಾರೆ.

ಸರ್ದಾರ್ ಸರೋವರ ಯೋಜನೆಯಲ್ಲಿ ಮುಳುಗಡೆಯಾಗುವ ಹಳ್ಳಿಗಳ ಬಡಪಾಯಿ ಜನರಿಗೆ, ಆದಿವಾಸಿಗಳಿಗೆ ನ್ಯಾಯ ಒದಗಿಸಲು ಮೇಧಾ ಪಾಟ್ಕರ್ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಹೋರಾಡುತ್ತಿದ್ದಾರೆ. ಗಾಂಧಿವಾದಿಯಾದ ಮೇಧಾಪಾಟ್ಕರ್ ಮೊದಲು ಶಾಂತಿಯುತವಾದ ಹೋರಾಟವನ್ನು ಆರಂಭಿಸಿದ್ದರು. ಅಣೆಕಟ್ಟು ನಿರ್ಮಾಣವಾಗುವಾಗ ಏರುತ್ತಿರುವ ಹಿನ್ನೀರಿನಲ್ಲಿ ನಿಂತು ಜಲಸತ್ಯಾಗ್ರಹ ಕೈಗೊಂಡರು. ಕುತ್ತಿಗೆವರೆಗೆ ನೀರು ಬಂದಾಗಲೂ ಅವರು ಸತ್ಯಾಗ್ರಹ ಕೈಬಿಡಲಿಲ್ಲ. ಕೊನೆಗೆ ಪೊಲೀಸರು ಅವರನ್ನು ಎತ್ತಿಹಾಕಿಕೊಂಡು ಹೋದರು. ಈ ಅಣೆಕಟ್ಟು ನಿರ್ಮಾಣದಿಂದ ಕೆಲ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಸಿಗಬಹುದು. ವಿದ್ಯುತ್ ಉತ್ಪಾದನೆ ಆಗಬಹುದು. ಮಧ್ಯಪ್ರದೇಶ ಮತ್ತು ಗುಜರಾತ್‌ನ ಕೆಲ ನಗರಗಳಿಗೆ ಕುಡಿಯುವ ನೀರನ್ನೂ ಒದಗಿಸಬಹುದು. ಆದರೆ, ಇದರಿಂದ ನರ್ಮದಾ ಕಣಿವೆ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡ 200ಕ್ಕೂ ಹೆಚ್ಚು ಹಳ್ಳಿಗಳ ಜನರ ಬದುಕು ಸ್ಮಶಾನಸದೃಶವಾಗುತ್ತದೆ.

ಈಗಾಗಲೇ ಅವರ ಬದುಕು ಛಿದ್ರವಾಗಿ ಹೋಗಿದೆ. ಅಂತಲೇ ಅವರಿಗೆ ಮೊದಲು ಪುನರ್ವಸತಿ ಒದಗಿಸಿ ಕೊಡಬೇಕೆಂದು ಮೇಧಾ ಪಾಟ್ಕರ್ ಹೋರಾಡುತ್ತಿದ್ದಾರೆ. ತಮ್ಮ ಹೋರಾಟವನ್ನು ಸಂಸತ್ತಿನವರೆಗೂ ಅವರು ತೆಗೆದುಕೊಂಡು ಹೋದರು. ಸುಪ್ರೀಂ ಕೋರ್ಟ್ ವರೆಗೂ ಹೋದರು. ಆದರೂ ಸಮಸ್ಯೆ ಬಗೆಹರಿದಿಲ್ಲ. ಒಂದು ಹಂತದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನರ್ಮದಾ ಯೋಜನೆಯ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಆದೇಶ ನೀಡಿತು. ಆದರೆ, ಈ ಆದೇಶ ಜಾರಿಗೆ ಬರಲೇ ಇಲ್ಲ. ಈ ಆದೇಶ ಜಾರಿಗೆ ಬರುತ್ತದೆ ಎಂದು ಅಲ್ಲಿನ ಜನ ದಶಕಗಳವರೆಗೆ ಕಾದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ನಿರಾಶ್ರಿತರಿಗೆ ಮರು ವಸತಿ ಕಲ್ಪಿಸುವ ವ್ಯವಧಾನ ಇರಲಿಲ್ಲ.

ವ್ಯಾಪಂ ಹಗರಣದಲ್ಲಿ ಮುಳುಗಿದ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ನಿರಾಶ್ರಿತರಿಗೆ ಮರು ವಸತಿ ಕಲ್ಪಿಸುವ ಬದಲು ಶಾಲೆಗಳಲ್ಲಿ ವಂದೇ ಮಾತರಂ ಹೇಳಿಸುವಂತಹ ಸಂಘಪರಿವಾರದ ಕಾರ್ಯಸೂಚಿಯ ಜಾರಿಯ ಬಗ್ಗೆ ಅವರು ಹೆಚ್ಚು ಆಸಕ್ತಿ ವಹಿಸಿದರು. ಇದರಿಂದಾಗಿ ರೋಸಿ ಹೋದ ಮೇಧಾ ಪಾಟ್ಕರ್ ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ಶಾಂತಿಯುತವಾದ ಹೋರಾಟಕ್ಕಿಳಿದ ಮೇಧಾ ಪಾಟ್ಕರ್ ಅವರನ್ನು ಕರೆಸಿ ಮಾತನಾಡದೆ ಅಲ್ಲಿನ ಸರಕಾರ ಪೊಲೀಸ್ ಅಸ್ತ್ರವನ್ನು ಬಳಸಿದೆ. ಶಾಂತಿ ಮಾರ್ಗದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದೂ ಈಗ ಅಪರಾಧವಾಗಿದೆ. ನಮ್ಮ ಆಳುವ ವರ್ಗ ಚಳವಳಿಗಳ ಬಗ್ಗೆ ಅನುಸರಿಸುತ್ತಿರುವ ದಮನ ತಂತ್ರ ದಿನದಿನಕ್ಕೂ ಫ್ಯಾಶಿಸ್ಟ್ ದಾರಿಯತ್ತ ಸಾಗುತ್ತಿರುವುದರ ಸೂಚನೆಯಾಗಿದೆ.

ನರ್ಮದಾ ಯೋಜನೆಯಿಂದ 198 ಹಳ್ಳಿಗಳ 48 ಸಾವಿರ ಮಂದಿ ಮನೆ ಮಾರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಅಣೆಕಟ್ಟಿನ ಹಿನ್ನೀರಿನಲ್ಲಿ ಈ ಆದಿವಾಸಿಗಳ ಹಳ್ಳಿಗಳು ಮುಳುಗಿ ನೀರು ಪಾಲಾಗಿವೆ. ಅಣೆಕಟ್ಟಿನ ಎತ್ತರ ಹೆಚ್ಚಿಸಲು ಸರಕಾರ ತೀರ್ಮಾನ ಕೈಗೊಂಡ ನಂತರ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸಿದೆ. ಸರಕಾರ ಯಾವುದೇ ಯೋಜನೆ ಕೈಗೊಳ್ಳಲು ಆಕ್ಷೇಪವಿಲ್ಲ. ಆದರೆ, ಅದರಿಂದಾಗಿ ತಮ್ಮ ಮನೆ ಮಾರು ಕಳೆದುಕೊಳ್ಳುವ ಜನರಿಗೆ ಮೊದಲು ಸೂಕ್ತ ಪುನರ್ವಸತಿ ಕಲ್ಪಿಸಬೇಕು. ಅವರಿಗೆ ಒಂದು ನೆಮ್ಮದಿಯ ನೆಲೆ ಒದಗಿಸಬೇಕು. ಕೃಷಿಯಲ್ಲಿ ತೊಡಗಿದ ಕುಟುಂಬಗಳಿಗೆ ಕೃಷಿ ಭೂಮಿಯನ್ನೂ ಮಂಜೂರು ಮಾಡಬೇಕು. ಆದರೆ, ಈ ಸರಕಾರದ ಪುನರ್ವಸತಿ ನೀತಿಯೆಂದರೆ ಮನೆ ಮಾರು ಕಳೆದುಕೊಂಡ ನಿರಾಶ್ರಿತರನ್ನು ಯಾವುದೋ ನಗರದ ಕೊಳಚೆ ಪ್ರದೇಶದಲ್ಲಿ ತಂದು ಬಿಸಾಡಿ ಹೋಗುತ್ತದೆ.

ದುರಂತದ ಸಂಗತಿಯೆಂದರೆ ಸ್ವಾತಂತ್ರಾ ನಂತರ ನಿರ್ಮಾಣಗೊಂಡ ಈ ದೇಶದ ಯಾವುದೇ ಯೋಜನೆಗಳಲ್ಲೂ ನಿರಾಶ್ರಿತರಿಗೆ ಸೂಕ್ತವಾದ ಪುನರ್ವಸತಿ ದೊರಕಿಲ್ಲ. ಸ್ವಾತಂತ್ರಾ ನಂತರ ಈ ದೇಶದಲ್ಲಿ ನಿರ್ಮಾಣಗೊಂಡ ಮೊದಲ ಅಣೆಕಟ್ಟು ಭಾಕ್ರಾನಂಗಲ್ ಅಣೆಕಟ್ಟಿನಿಂದ ಭೂಮಿ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಿಕೊಡಲು ಈವರೆಗೆ ಸಾಧ್ಯವಾಗಿಲ್ಲ. ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆಯ ನಿರಾಶ್ರಿತರಿಗೂ ಸರಿಯಾದ ಪುನರ್ವಸತಿ ಕಲ್ಪಿಸಿಲ್ಲ. ಪುನರ್ವಸತಿಗೆ ಮೀಸಲಾದ ಹಣ ಭ್ರಷ್ಟರ ಪಾಲಾಗಿದೆ. ಅಂತಲೇ ಅಭಿವೃದ್ಧಿ ಯೋಜನೆಗಳೆಂದರೆ ಜನರಿಗೆ ಭಯ ಉಂಟಾಗುತ್ತದೆ. ಈಗಂತೂ ಸರ್ವಾಧಿಕಾರಿ ಮಾದರಿಯ ಕಾಲ; ಇಲ್ಲಿ ಪ್ರತಿಭಟನೆ ಮತ್ತು ಪ್ರತಿರೋಧಗಳಿಗೆ ಅವಕಾಶಗಳೇ ಇಲ್ಲ.

ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಬಂಡವಾಳದಾರರ ಖಜಾನೆ ತುಂಬುವುದೇ ಈಗಿನ ಸರಕಾರದ ಕಾರ್ಯಸೂಚಿಯಾಗಿದೆ. ಈ ಹಿಂದೆ ಯುಪಿಎ ಸರಕಾರ ಇದ್ದಾಗ ಪ್ರಧಾನಿ ಮನಮೋಹನ್ ಸಿಂಗ್ ಎಷ್ಟೇ ಬಂಡವಾಳದಾರರ ಪರವಾಗಿದ್ದರೂ ಅವರ ಸಂಪುಟದಲ್ಲಿ ಕೆಲವರಾದರು ವಿವೇಚನೆಯುಳ್ಳ ಸಚಿವರಿದ್ದರು. ಜೈರಾಂ ರಮೇಶ್ ಅವರಂತಹ ಅಂದಿನ ಪರಿಸರ ಸಚಿವರಿಗೆ ಇಂತಹ ಸಮಸ್ಯೆಗಳು ಅರ್ಥವಾಗುತ್ತಿದ್ದವು. ಆಗ ಇಂತಹ ಸಮಸ್ಯೆ ಉಲ್ಬಣಿಸಿದಾಗ ಮೇಧಾ ಪಾಟ್ಕರ್ ಅವರನ್ನು ದಿಲ್ಲಿಗೆ ಕರೆಸಿಕೊಂಡು ಅನೇಕ ಬಾರಿ ಸಮಾಲೋಚನೆ ಮಾಡಿದ ಉದಾಹರಣೆಗಳಿವೆ. ಆದರೆ, ಈಗಿನ ನರೇಂದ್ರ ಮೋದಿ ಸರಕಾರ ಮೇಧಾ ಪಾಟ್ಕರ್ ಅವರಂತಹ ಪರಿಸರ ಹೋರಾಟಗಾರರನ್ನು ಶತ್ರುಗಳಂತೆ ಕಾಣುತ್ತಿದೆ. ಇವರನ್ನು ಕರೆಸಿ ಮಾತನಾಡುತ್ತಾರೆ ಎಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೇಧಾ ಪಾಟ್ಕರ್ ಅವರು ಗುಜರಾತ್‌ನ ಸಬರಮತಿಯಲ್ಲಿ ಗಾಂಧಿ ಆಶ್ರಮಕ್ಕೆ ಉಪನ್ಯಾಸವನ್ನು ನೀಡಲು ಹೋಗಿದ್ದರು. ಆಗ ಅವರ ಮೇಲೆ ಸಂಘಪರಿವಾರದ ಗೂಂಡಾಗಳು ಹಲ್ಲೆ ಮಾಡಿದ್ದರು. ಈ ಹಲ್ಲೆ ಎಷ್ಟು ಹೇಯವಾಗಿತ್ತೆಂದರೆ ಅವರ ಮೈಮೇಲೆ ಏರಿ ಅವರು ಧರಿಸಿದ್ದ ಸೀರೆಯನ್ನು ಬಿಚ್ಚಲು ಯತ್ನಿಸಿದ್ದರು. ನರೇಂದ್ರ ಮೋದಿ ಅವರ ಪೊಲೀಸರು ಮೇಧಾ ಅವರಿಗೆ ರಕ್ಷಣೆಯನ್ನು ನೀಡಲಿಲ್ಲ. ಮೋದಿ ಅವರೂ ಈ ಘಟನೆಯನ್ನು ಖಂಡಿಸಲಿಲ್ಲ. ನರ್ಮದಾ ಕಣಿವೆ ಪರಿಸ್ಥಿತಿ ಮಾತ್ರವಲ್ಲ ಈ ದೇಶದಲ್ಲಿ ಎಲ್ಲೆಲ್ಲಿ ಆದಿವಾಸಿಗಳು ನೆಲೆಸಿದ್ದಾರೋ ಆ ಪ್ರದೇಶಗಳಲ್ಲೆ ಈಗ ಇದೇ ಪರಿಸ್ಥಿತಿ ಉಂಟಾಗಿದೆ. ಛತ್ತೀಸ್‌ಗಡದಲ್ಲಿ ಅಲ್ಲಿನ ಅಮೂಲ್ಯವಾದ ಖನಿಜ ಸಂಪತ್ತಾದ ಮ್ಯಾಂಗನೀಸ್ ಮತ್ತು ಬಾಕ್ಸೈಟ್‌ಅನ್ನು ವಿದೇಶಿ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡ ಅಲ್ಲಿನ ಬಿಜೆಪಿ ಸರಕಾರ ಗಣಿಗಾರಿಕೆಗೆ ಅಡ್ಡಿಯಾಗಿರುವ ಆದಿವಾಸಿಗಳ ಅಲ್ಲಿಂದ ಎತ್ತಂಗಡಿ ಮಾಡಲು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ಬಳಸಿಕೊಳ್ಳುತ್ತಿದೆ.

ಆದಿವಾಸಗಳ ಮೇಲೆ ಅಲ್ಲಿ ನಿತ್ಯವೂ ಅತ್ಯಾಚಾರ ನಡೆಯುತ್ತಿದೆ. ಒಡಿಶಾದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿನ ಆದಿವಾಸಿಗಳೂ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಬಂಡೆದಿದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಕಾಲೂರಲು ಬಂದಿದ್ದ ಪೋಸ್ಕೋ ಕಂಪೆನಿಯನ್ನು ಇಲ್ಲಿನ ಜನ ಹೋರಾಟ ಮಾಡಿ ತೊಲಗಿಸಿದ್ದರು. ಈಗ ಅದು ಒಡಿಶಾದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಅಲ್ಲಿಯ ಜನ ಇದರ ವಿರುದ್ಧ ಹೋರಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News