ಗಾಂಧೀಜಿಯವರ ಮೆಚ್ಚುಗೆಗಳಿಸಿದ್ದ ಮಂಡ್ಯ ಸ್ವಾತಂತ್ರ ಸೇನಾನಿಗಳು
Update: 2017-08-15 06:25 GMT
ಸ್ವಾತಂತ್ರ ಹೋರಾಟದ ಕಿಚ್ಚು ದೇಶಾದ್ಯಂತ ಹರಡಿರುವ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲೂ ಹೋರಾಟಗಳು ನಡೆದವು. ಅವುಗಳಲ್ಲೆೆಲ್ಲ 1938ನೆ ಎಪ್ರಿಲ್ ತಿಂಗಳಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹ ಇತಿಹಾಸದಲ್ಲಿ ಮರೆಯದ ದಾಖಲೆಯಾಗಿದೆ. ಆ ಹೋರಾಟ ಅಖಿಲ ಭಾರತದ ಪ್ರಖ್ಯಾತಿಯನ್ನು ಪಡೆಯಿತಲ್ಲದೆ, ಮಹಾತ್ಮಾ ಗಾಂಧಿಯವರ ಮೆಚ್ಚುಗೆಯನ್ನೂ ಗಳಿಸಿದೆ.
ಸ್ವಾತಂತ್ರಚಳವಳಿಯ ಸಂದರ್ಭದಲ್ಲಿ ನಡೆದ ಶಿವಪುರ ಧ್ವಜ ಸತ್ಯಾಗ್ರಹ, ಇರ್ವಿನ್ ನಾಲೆ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ, ಮೈಸೂರು ಅರಮನೆ ಚಲೋ ಚಳವಳಿಗಳು ಸ್ವಾತಂತ್ರ ಸಂಗ್ರಾಮದ ಇತಿಹಾಸದಲ್ಲಿ ಮಂಡ್ಯ ಜಿಲ್ಲೆಗೆ ಅದ್ವಿತೀಯ ಸ್ಥಾನ ಕಲ್ಪಿಸಿಕೊಟ್ಟಿವೆ.
ಮೈಸೂರು ಸಂಸ್ಥಾನದಲ್ಲಿ ಮೈಸೂರು, ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಕಡೂರು, ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿದ್ದವು. ಈಗಿನ ಮಂಡ್ಯ ಜಿಲ್ಲೆ ಅಂದಿನ ಮೈಸೂರು ಜಿಲ್ಲೆಯ ಭಾಗವಾಗಿತ್ತು. ಈ ಮೈಸೂರು ಸಂಸ್ಥಾನದಲ್ಲಿ ನಡೆದ ಸ್ವಾತಂತ್ರಹೋರಾಟದ ಕೇಂದ್ರ ಬಿಂದು ಮಂಡ್ಯ ಜಿಲ್ಲೆಯಾಗಿತ್ತು ಎನ್ನುವುದು ಗಮನಾರ್ಹ ವಿಷಯ.
ಚಳವಳಿ ಪ್ರಾರಂಭದಲ್ಲಿ ಬ್ರಿಟಿಷ್ ಇಂಡಿಯಾ ಭಾಗದಲ್ಲಿ ಕಾಣಿಸಿಕೊಂಡಿತು. ದೇಶೀಯ ಸಂಸ್ಥಾನಗಳಿಗೆ ಚಳವಳಿಯ ಕಾವು ಬೇಗ ಹರಡಲಿಲ್ಲ. ಕಾರಣವೇನೆಂದರೆ, ದೇಶೀಯ ಸಂಸ್ಥಾನಗಳ ಸ್ಥಿತಿಗತಿಗಳು ಬೇರೆಯಾಗಿದ್ದವು. ಇವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರೂ ಸ್ವಾಯತ್ತವಾದ ಕೆಲವು ಸೌಲಭ್ಯಗಳು ಇದ್ದವು. ಹಾಗಾಗಿ ಈ ದೇಶೀಯ ಸಂಸ್ಥಾನದ ಜನರು ಚಳವಳಿಯಲ್ಲಿ ಭಾಗವಹಿಸುವ ಬಗೆಗೆ ಗಾಂಧೀಜಿಯವರಿಗೂ ಅಷ್ಟೇನು ವಿಶ್ವಾಸವಿರಲಿಲ್ಲ. ಇಂತಹ ಸನ್ನಿವೇಶದಲ್ಲೂ ಮೈಸೂರು ಸಂಸ್ಥಾನದ ಮಂಡ್ಯ ಜಿಲ್ಲೆಯಲ್ಲಿ ನಡೆದ ಚಳವಳಿ ಭಾರತದ ಸ್ವಾತಂತ್ರ ಸಂಗ್ರಾಮದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನಗಳಿಸಿದೆ.
1936ರಿಂದಲೇ ಸ್ವಾತಂತ್ರ ಹೋರಾಟದ ಸಾಕ್ಷಿಕಲ್ಲುಗಳು ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಿಕೊಂಡಿವೆ. ಸ್ವಾತಂತ್ರ ಹೋರಾಟ ಉತ್ತುಂಗ ಎನ್ನಿಸಿಕೊಳ್ಳುವ ಹೊತ್ತಿನಲ್ಲಿ ಗಾಂಧಿಯಾತ್ರೆ ಭಾರತದ ಉದ್ದಗಲಕ್ಕೂ ಸಾಗಿತ್ತು. ಗಾಂಧೀಜಿಯವರು ಮೈಸೂರಿಗೆ ಭೇಟಿ ನೀಡಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಮದ್ದೂರಿನಲ್ಲಿ ಎಚ್.ಕೆ.ವೀರಣ್ಣಗೌಡರು ಬರಮಾಡಿಕೊಂಡಿದ್ದು, ಜಿಲ್ಲೆಯ ಜನರಲ್ಲಿ ಸ್ವಾತಂತ್ರ ಸಂಗ್ರಾಮದ ಕಿಡಿ ಹೊತ್ತಿಕೊಳ್ಳಲು ಪ್ರೇರಣೆಯಾಯಿತು ಎಂದು ಹಿರಿಯರು ಸ್ಮರಿಸುತ್ತಾರೆ.
ಎಚ್.ಕೆ.ವೀರಣ್ಣಗೌಡ, ಶಿವಪುರದ ತಿರುಮಲೇಗೌಡ, ಸಾಹುಕಾರ್ ಚನ್ನಯ್ಯ, ಹೊನಗಾನಹಳ್ಳಿ ಪುಟ್ಟಣ್ಣ, ಟಿ.ಮರಿಯಪ್ಪ, ಕೊಪ್ಪದ ಜೋಗಿಗೌಡ, ಡಾ.ಬಂದೀಗೌಡ, ಇಂಡುವಾಳು ಹೊನ್ನಯ್ಯ, ಕ್ಯಾತನಹಳ್ಳಿ ಕಪನಿಗೌಡ, ಕಾಂಗ್ರೆಸ್ ಸುಬ್ಬಯ್ಯ, ಕೆ.ಪುಟ್ಟಸ್ವಾಮಿ, ತಾಯಮ್ಮ ವೀರಣ್ಣಗೌಡ, ಪೈಲ್ವಾನ್ ಗೋವಿಂದೇಗೌಡ, ವೀರಕೇಸರಿ ಸೀತಾರಾಮಶಾಸ್ತ್ರಿ, ಪಿ.ಎನ್.ಜವರಪ್ಪಗೌಡ, ವಳೆಗೆರೆಹಳ್ಳಿ ಕರಡಣಯ್ಯ, ನಗರಕೆರೆ ಎನ್.ಎಲ್.ಶಿವಲಿಂಗೇಗೌಡ, ಕೆ.ಬೆಟ್ಟಶೆಟ್ಟಿ, ಪಿ.ಆರ್.ರಾಮಯ್ಯ, ಬಾಂಬ್ ಕಾಳಪ್ಪ, ಬಸಪ್ಪಗೌಡ, ಎ.ಸಿ.ಭೈರಪ್ಪ, ಮಳವಳ್ಳಿ ವೀರಪ್ಪ, ನ.ಭದ್ರಯ್ಯ, ಇತರ ನೂರಾರು ಸ್ವಾತಂತ್ರ್ಯ ಸೇನಾನಿಗಳು ಸ್ವಾತಂತ್ರ ಚಳವಳಿಗೆ ತಮ್ಮನ್ನು ತನುಮನ ಧನದ ಸಮೇತ ಅರ್ಪಿಸಿಕೊಂಡಿದ್ದಾರೆ.
ಎಚ್.ಕೆ.ವೀರಣ್ಣಗೌಡರ ಬದುಕೇ ಒಂದು ಆದರ್ಶ. ಪಕ್ಕದ ಚನ್ನಪಟ್ಟಣದಲ್ಲಿ ಹುಟ್ಟಿ ಬೆಳೆದರೂ ಅವರ ಸ್ವಾತಂತ್ರ ಹೋರಾಟದ ಕೃಷಿ ಮತ್ತು ರಾಜಕೀಯ ಬದುಕು ಸಾಗಿಬಂದದ್ದು ಮಂಡ್ಯ ಜಿಲ್ಲೆಯೊಳಗೆ! ಸ್ವಾತಂತ್ರಪೂರ್ವದ ಸಂದರ್ಭದಲ್ಲೇ ವಿಧವೆಯೊಂದಿಗೆ ಮದುವೆಯಾಗಿ ಕ್ರಾಂತಿಕಾರಕ ತೀರ್ಮಾನಕ್ಕೆ ಮುನ್ನುಡಿಯಾದರು. ಸ್ವತಂತ್ರ ಹೋರಾಟದ ಬಂಡಿಯ ನೊಗಕ್ಕೆ ಇಬ್ಬರೂ (ವೀರಣ್ಣಗೌಡ ಮತ್ತು ಪತ್ನಿ ತಾಯಮ್ಮ) ಜೋಡೆತ್ತಿನಂತೆ ಹೆಗಲಾದವರು.