ಮೂಲಭೂತವಾದಿಗಳ ಮೂಲವ್ಯಾಧಿ: ಪಠ್ಯಕ್ರಮ ಬದಲಾವಣೆ

Update: 2017-08-15 18:29 GMT

ಭಾಗ-1

ಕಳೆದ ಹಲವಾರು ದಶಕಗಳಿಂದ ತನ್ನ ಕೇಸರಿ ಸಿದ್ಧಾಂತವನ್ನು ಭಾರತದ ವಿವಿಧ ರಾಜ್ಯಗಳ ಶಾಲಾ ಪಠ್ಯಕ್ರಮಗಳಲ್ಲಿ ಪರೋಕ್ಷವಾಗಿ ತೂರಿಸುತ್ತಾ ಬಂದಿರುವ ಸಂಘ ಪರಿವಾರ ಈಗ ಕೇಂದ್ರದಲ್ಲಿ ತನ್ನದೇ ಸರಕಾರ ಆಡಳಿತ ವಹಿಸಿಕೊಂಡ ನಂತರವಂತೂ ಪಠ್ಯಕ್ರಮಗಳಲ್ಲಿ ನೇರ ಹಸ್ತಕ್ಷೇಪಕ್ಕೆ ಮುಂದಾಗಿದೆ. ಸಂಘ ಪರಿವಾರದ ಹಲವು ಮುಖಂಡರಿಂದ ದೇಶಾದ್ಯಂತದ ಎಲ್ಲಾ ಶಾಲೆಗಳ ಪಠ್ಯಕ್ರಮವನ್ನು ಕೇಸರಿ ಸಿದ್ಧಾಂತಕ್ಕೆ ಅನುಗುಣವಾಗಿ ಬದಲಾಯಿಸುವ ಇಂಗಿತ ವ್ಯಕ್ತವಾಗುತ್ತಲೇ ಬಂದಿದೆ. ಇತ್ತೀಚೆಗೆ ‘‘ಇವತ್ತಿನ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಬದಲು ಕಾರ್ಯಕರ್ತರನ್ನು ಸೃಷ್ಟಿಸುತ್ತಿರುವುದರಿಂದ ಇಂತಹ ರಾಜಕೀಯ ಅಜೆಂಡಾ ಇಟ್ಟುಕೊಂಡಿರುವ ಪಠ್ಯಕ್ರಮವನ್ನು ಬದಲಾಯಿಸಬೇಕಾಗಿದೆ’’ ಎಂಬ ನುಡಿಮುತ್ತೊಂದನ್ನು ಉದುರಿಸಿರುವ ಭಾರತೀಯ ಸಮಾಜವಿಜ್ಞಾನ ಸಂಶೋಧನಾ ಮಂಡಳಿಯ ನೂತನ ಮುಖ್ಯಸ್ಥ ಬ್ರಜ್ ಬಿಹಾರಿ ಕುಮಾರ್, ತನ್ಮೂಲಕ ಮುಂಬರುವ ವಿದ್ಯಮಾನಗಳ ಸೂಚನೆಯೊಂದನ್ನು ನೀಡಿದ್ದಾರೆ.

ಉತ್ತರ ಪ್ರದೇಶದ ಬೆಳವಣಿಗೆಗಳು

‘‘ಹಿಂದುತ್ವ ಒಂದು ಉತ್ತಮ ಜೀವನಶೈಲಿಯಾಗಿದ್ದು ಜನತೆಗೆ ಅದನ್ನು ಪರಿಚಯಿಸುವ ಅಗತ್ಯವಿದೆ’’ ಎಂದು ಹೇಳಿರುವ ಉತ್ತರ ಪ್ರದೇಶದ ಬಿಜೆಪಿ ಘಟಕ ಕೇಸರಿ ಸಿದ್ಧಾಂತವನ್ನು ನೇರವಾಗಿ ಮಕ್ಕಳ ತಲೆಯಲ್ಲಿ ಬಿತ್ತಲು ಯೋಚಿಸುತ್ತಿದೆ. ಆ ನಿಟ್ಟಿನಲ್ಲಿ ಅದು ರಾಜ್ಯದ 9000 ಶಾಲೆಗಳ ಸುಮಾರು 9 ಲಕ್ಷ ವಿದ್ಯಾರ್ಥಿಗಳಿಗೆ ತಥಾಕಥಿತ ಸಾಮಾನ್ಯ ಜ್ಞಾನದ ಪರೀಕ್ಷೆಯೊಂದನ್ನು ಸದ್ಯದಲ್ಲೆ ನಡೆಸಲಿದೆ. ಪರೀಕ್ಷೆಯನ್ನು ನಡೆಸುವುದಷ್ಟೆ ಅಲ್ಲ ಅದರ ಸಿಲೆಬಸ್ ಅನ್ನೂ ತಯಾರಿಸಿ ಹಂಚುತ್ತಿರುವುದು ಗಮನಾರ್ಹವಾಗಿದೆ. 70 ಪುಟಗಳ ಕಿರುಹೊತ್ತಗೆಯ ರೂಪದಲ್ಲಿರುವ ಸಿಲೆಬಸ್‌ಅನ್ನು ಇದೇ ಆಗಸ್ಟ್ 1ರಂದು ಲಕ್ನೋದಲ್ಲಿ ಪಕ್ಷಾಧ್ಯಕ್ಷ ಅಮಿತ್ ಶಾರ ‘ದಿವ್ಯಹಸ್ತ’ದಲ್ಲಿ ಬಿಡುಗಡೆಗೊಳಿಸಲಾಗಿದ್ದು ಅದರ ಹೆಸರು ‘ಸಾಮಾನ್ಯ ಗ್ಯಾನ್ ಪ್ರತಿಯೋಗ’. ಪುಸ್ತಕದಲ್ಲಿರುವ ವಿಷಯಗಳೆಲ್ಲವೂ ಸತ್ಯವೆಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಅದರಲ್ಲಿ ‘‘ಆರೆಸ್ಸೆಸ್ ವಿಶ್ವದ ಅತೀ ದೊಡ್ಡ ಸಾಮಾಜಿಕ ಸಂಘಟನೆ’’ ಎಂದು ಗುಣಗಾನ ಮಾಡಲಾಗಿದೆ; ಮಾತೃಭೂಮಿ, ಸಂಸ್ಕೃತಿ, ಹಿಂದುತ್ವ ಮತ್ತು ರಾಷ್ಟ್ರೀಯತೆಗಳ ಬಗ್ಗೆ ಲೇಖನಗಳಿವೆ. ‘‘ಮುಂದಿನ ಪೀಳಿಗೆಗಳು ಇದುವರೆಗೂ ಮುಚ್ಚಿಡಲಾದ ಇತಿಹಾಸದ ಶ್ರೇಷ್ಠ ವ್ಯಕ್ತಿಗಳು ಮತ್ತು ಹೀರೊಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ’’ ಎಂದಿರುವ ಬಿಜೆಪಿ, ತನ್ನ ಈ ಪುಸ್ತಕದಲ್ಲಿ ದೀನ ದಯಾಳು ಉಪಾಧ್ಯಾಯ, ಕೆ.ಬಿ. ಹೆಡಗೇವಾರ್, ಶ್ಯಾಮಪ್ರಸಾದ್ ಮುಖರ್ಜಿ, ವೀರ ಸಾವರ್ಕರ್, ನಾನಾಜಿ ದೇಶ್‌ಮುಖ್‌ರಂತಹ ಸಂಘ ಪರಿವಾರದ ನಾಯಕರು ಮತ್ತು ಸಿದ್ಧಾಂತಿಗಳ ಬದುಕು ಮತ್ತು ನಿಲುವುಗಳನ್ನು ಪರಿಚಯಿಸುವ ಬರಹಗಳನ್ನು ಸೇರಿಸಿದೆ. ಪ್ರಧಾನಿ ನರೇಂದ್ರ ಮೋದಿಯ ಐಡಿಯಾಗಳಾದ ನೋಟು ರದ್ದತಿ, ಜನಧನ್ ಯೋಜನೆಗಳನ್ನಂತೂ ಕಂಠಪೂರ್ತಿ ಹೊಗಳಲಾಗಿದೆ. ಪುಸ್ತಕದಲ್ಲಿ ಉತ್ತರ ಪ್ರದೇಶದ ಯೋಗಿ ಸರಕಾರ, ರಾಮಜನ್ಮಭೂಮಿ, ನೋಟು ರದ್ದತಿಯಂತಹ ವಿಷಯಗಳ ಕುರಿತು ಪ್ರಶ್ನೆಗಳಿವೆ. ಭಾರತದ ಪ್ರಥಮ ಗವರ್ನರ್ ಜನರಲ್, ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಭಾಧ್ಯಕ್ಷ ಮುಂತಾದ ಗಣ್ಯರನ್ನು ಹೆಸರಿಸುವ ಪಟ್ಟಿಯೊಂದರಲ್ಲಿ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರೂ ಹೆಸರನ್ನು ಕೈಬಿಡಲಾಗಿದೆ! ಇದನ್ನು ಉದ್ದೇಶಪೂರ್ವಕ ಎಂದಲ್ಲದೆ ಇನ್ನೇನೆಂದು ಕರೆಯಬೇಕು? ಸ್ಪರ್ಧಾತ್ಮಕ ಎನ್ನಲಾಗಿರುವ ಈ ಪರೀಕ್ಷೆಯನ್ನು ಹಿಂದುತ್ವವಾದಿ ದೀನ ದಯಾಳು ಉಪಾಧ್ಯಾಯರ ಜನ್ಮದಿನವಾದ ಆಗಸ್ಟ್ 26ರಂದು ಹಮ್ಮಿಕೊಂಡಿರುವುದು ಗಮನಾರ್ಹವಿದೆ. ಸುಮಾರು 100 ಪ್ರಶ್ನೆಗಳ ಈ ಪರೀಕ್ಷೆ ಕೇವಲ 9, 10ನೆ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಎನ್ನಲಾಗಿದೆ. ಸಂಘ ಪರಿವಾರದ ಉತ್ಪನ್ನವಾದ ‘ಸಾಮಾನ್ಯ ಗ್ಯಾನ್ ಪ್ರತಿಯೋಗ’ದಲ್ಲಿ ನೀಡಲಾಗಿರುವ ಕೆಲವು ಸ್ಯಾಂಪಲ್ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೋಡಿದರೆ ಸಾಕು ಅದರ ಹಿಂದಿರುವ ಯೋಚನೆಗಳೇನೆಂದು ನಿಚ್ಚಳವಾಗುತ್ತದೆ:

ಪ್ರಶ್ನೆ: ಭಾರತ ಹಿಂದೂಗಳ ದೇಶವೆಂದು ಯಾರು ಹೇಳಿದರು?

ಉತ್ತರ: ಡಾ. ಕೇಶವ ಬಲಿರಾಮ ಹೆಡಗೇವಾರ್

ಪ್ರಶ್ನೆ: ಚಿಕಾಗೊದ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಯಾವ ಧರ್ಮವನ್ನು ಪ್ರತಿನಿಧಿಸಿದರು?

ಉತ್ತರ: ಹಿಂದುತ್ವ

ಪ್ರಶ್ನೆ: ಮಹಾರಾಜ ಸುಹೇಲ್‌ದೇವ ಯಾವ ಮುಸ್ಲಿಂ ಆಕ್ರಮಣಕಾರನನ್ನು ಕ್ಯಾರಟ್, ಮೂಲಂಗಿ ಥರ ಕೊಚ್ಚಿಹಾಕಿದ?

ಉತ್ತರ: ಸೈಯದ್ ಸಾಲಾರ್ ಮಸೂದ್ ಘಾಝಿ

ಪ್ರಶ್ನೆ: ರಾಮ ಜನ್ಮಭೂಮಿ ಎಲ್ಲಿದೆ?

ಉತ್ತರ: ಅಯೋಧ್ಯೆ

ಪ್ರಶ್ನೆ: ಹರಿಜನರ ಕುರಿತು ಗಾಂಧಿ ಮತ್ತು ಕಾಂಗ್ರೆಸ್ ನೀಡಿದ ಹೇಳಿಕೆಯನ್ನು ವಿರೋಧಿಸಿ ಅಂಬೇಡ್ಕರ್ ಬರೆದ ಪುಸ್ತಕ ಯಾವುದು?

ಉತ್ತರ: ಕಾಂಗ್ರೆಸ್ ಮತ್ತು ಗಾಂಧಿ ಮಾಡಿದ್ದಾರೆ.

ಕೊನೆಯ ಪ್ರಶ್ನೆಗೆ ಸರಿಯಾದ ಉತ್ತರವೆಂದರೆ: ‘‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪಶ್ಯರಿಗಾಗಿ ಏನು ಮಾಡಿದ್ದಾರೆ.’’ ಇಲ್ಲಿ ಅಂಬೇಡ್ಕರ್‌ರ ಇತರ ಕೃತಿಗಳ ವಿಷಯವನ್ನು ಪ್ರಸ್ತಾಪಿಸದಿರುವುದು ಖಂಡಿತಾ ಅನುದ್ದೇಶಪೂರ್ವಕವಲ್ಲ. ಉದಾಹರಣೆಗೆ ‘ಹಿಂದೂ ಧರ್ಮದ ಒಗಟುಗಳು’, ‘ಹಿಂದೂ ಧರ್ಮದ ತತ್ವ’, ‘ಜಾತಿ ವಿನಾಶ’ ಮುಂತಾದ ಪುಸ್ತಕಗಳು. ಇವು ಕೇಸರಿವಾದಿಗಳ ಹುಳುಕುಗಳನ್ನು ಬಯಲುಗೊಳಿಸುತ್ತವೆ ಎಂಬ ಕಾರಣಕ್ಕಾಗಿ ಇವುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವುದು ಸ್ಪಷ್ಟವಿದೆ.

ಅಖಿಲ ಭಾರತ ಮಟ್ಟದಲ್ಲಿ

ತೀರಾ ಇತ್ತೀಚೆಗೆ ಜವಾಹರ್‌ಲಾಲ್ ವಿಶ್ವವಿದ್ಯಾನಿಲಯದ ಉಪಕುಲಪತಿ ಜಗದೀಶ್ ಕುಮಾರ್ ಎಂಬವರು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಉದ್ದೀಪಿಸಲು ‘‘ಕ್ಯಾಂಪಸ್ ಒಳಗಡೆ ಯುದ್ಧ ಟ್ಯಾಂಕ್ ಪ್ರದರ್ಶಿಸಬೇಕಾಗಿದೆ’’ ಎಂದು ಹೇಳಿದರು. ಇದರಲ್ಲಿ ಅಚ್ಚರಿಪಡುವಂಥದ್ದೇನೂ ಇಲ್ಲ. ಏಕೆಂದರೆ ಇದು ಕೇಸರಿವಾದಿಗಳ ಚಿಂತನೆಗೆ ಅನುಗುಣವಾಗಿಯೆ ಇದೆ. ಆರೆಸ್ಸೆಸ್‌ನ ಸಂಸ್ಥಾಪಕರಲ್ಲೊಬ್ಬನಾದ ಡಾ. ಬಿ.ಎಸ್. ಮೂಂಜೆ 1930ರ ದಶಕದಿಂದಲೇ ಕೇಸರೀ ಸೈನಿಕೀಕರಣಕ್ಕೆ ಸಿದ್ಧತೆೆಗಳನ್ನು ಪ್ರಾರಂಭಿಸಿದ್ದರು.

ಸಂಘ ಪರಿವಾರದ ಉತ್ಪನ್ನವಾದ ‘ಸಾಮಾನ್ಯ ಗ್ಯಾನ್ ಪ್ರತಿಯೋಗ’ದಲ್ಲಿ ನೀಡಲಾಗಿರುವ ಕೆಲವು ಸ್ಯಾಂಪಲ್ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೋಡಿದರೆ ಸಾಕು ಅದರ ಹಿಂದಿರುವ ಯೋಚನೆಗಳೇನೆಂದು ನಿಚ್ಚಳವಾಗುತ್ತದೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News