ಮೂಲಭೂತವಾದಿಗಳ ಮೂಲವ್ಯಾಧಿ ಪಠ್ಯಕ್ರಮ ಬದಲಾವಣೆ
ಭಾಗ-2
ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿಗಳ ಮಿಲಿಟರಿ ಶಾಲೆಗಳ ಕಾರ್ಯನಿರ್ವಹಣೆಯನ್ನು ಅಭ್ಯಸಿಸಿದ್ದ ಮೂಂಜೆ ಹಿಂದೂಗಳಿಗೆ ಸೈನಿಕ ತರಬೇತಿ ನೀಡುವ ಸಲುವಾಗಿ ಅದೇ ಮಾದರಿಯ ಭೋನ್ಸಾಲಾ ಮಿಲಿಟರಿ ಶಾಲೆಯನ್ನು 1937ರಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಾರಂಭಿಸಿದರು. ಇದಕ್ಕೂ ಮುನ್ನ ಅವರು ಹಂಚಿದ್ದ ಕರಪತ್ರದಲ್ಲಿ ಜರ್ಮನ್ ಪ್ರೊಫೆಸರ್ ಎವಾಲ್ಡ್ ಬನ್ಸೆಯ ಮಿಲಿಟರಿ ವಿಜ್ಞಾನ ಪುಸ್ತಕದ ಆಯ್ದ ಕೆಲವು ಸಾಲುಗಳನ್ನು ಉಲ್ಲೇಖಿಸಲಾಗಿತ್ತು: ‘‘ಮರಣಶಯ್ಯೆಯಲ್ಲಿರುವ ಯೋಧನೊಬ್ಬನಿಗೆ ತನ್ನ ರಕ್ತ ತನ್ನ ರಾಷ್ಟ್ರದೇವತೆಗಾಗಿ ಹರಿದುಹೋಗುತ್ತಿದೆಯೆಂದು ಗೊತ್ತಿದ್ದಾಗ ಆತ ಹೆಚ್ಚು ನಿಶ್ಚಿಂತನಾಗಿ ಸಾಯುತ್ತಾನೆ. ಹೀಗಾಗಿ ದೇಶದ (ಜನರ) ಮನದಲ್ಲಿ ಚಿಕ್ಕಂದಿನಿಂದಲೇ ಯುದ್ಧದ ಯೋಚನೆಯನ್ನು ತುಂಬಿ, ಅದು ರೂಢಿಗತವಾಗುವ ರೀತಿಯಲ್ಲಿ ಅದನ್ನು ಸಜ್ಜುಗೊಳಿಸಬೇಕು.’’
ಕೆಲವು ವರ್ಷಗಳ ನಂತರ ನಾಗಪುರದಲ್ಲೂ ಇದರ ಶಾಖೆಯೊಂದನ್ನು ತೆರೆಯಲಾಯಿತು. ತರುವಾಯದ ದಿನಗಳಲ್ಲಿ ಸಂಘ ಪರಿವಾರದ ನಾಯಕರು ಕಾಲಕಾಲಕ್ಕೆ ಮಕ್ಕಳಿಗೆ ಸೈನಿಕ ಶಿಕ್ಷಣ ನೀಡುವ ಬಗ್ಗೆ ಹೇಳುತ್ತಲೇ ಬಂದಿರುವುದನ್ನು ಗಮನಿಸಬಹುದು. 2012ರಲ್ಲಿ ಈಗಿನ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಕೂಡಾ ಇದನ್ನೇ ಪುನರುಚ್ಚರಿಸಿದ್ದಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಏಕಾಏಕಿ ಚುರುಕಾದ ಸಂಘ ಪರಿವಾರ ಮಿಲಿಟರಿ ಶಿಕ್ಷಣ, ದೇಶಭಕ್ತಿ ಹೇರುವಿಕೆಗಳು ಸೇರಿದಂತೆ ತನ್ನ ಅಜೆಂಡಾದ ಅಂಶಗಳೆಲ್ಲವನ್ನೂ ಒಂದೊಂದಾಗಿ ಜಾರಿಗೊಳಿಸತೊಡಗಿದೆ. ಇತ್ತೀಚಿನ ಮಾಹಿತಿಗಳಂತೆ ಸಿಬಿಎಸ್‌ಸಿ ಪಠ್ಯಕ್ರಮದ ಸುಮಾರು 20,000 ಶಾಲೆಗಳ ಪಠ್ಯಕ್ರಮದಲ್ಲಿ ಮಿಲಿಟರಿ ಶಿಕ್ಷಣದ ವಿಷಯವನ್ನು ಸೇರಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ವಿದ್ಯಾರ್ಥಿಗಳಲ್ಲಿ ದೈಹಿಕ ಕ್ಷಮತೆ, ಶಿಸ್ತು ಹಾಗೂ ದೇಶಭಕ್ತಿ ಬೆಳೆಸುವುದೇ ಇದರ ಉದ್ದೇಶ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶಭಕ್ತಿ ಬೆಳೆಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗದಿಂದಲೂ ಕೆಲವೊಂದು ತೀರ್ಪುಗಳು ಹೊರಬೀಳುತ್ತಿರುವುದನ್ನು ಗಮನಿಸಬಹುದು. ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದ ಬಳಿಕ ಈಗ ತಮಿಳುನಾಡಿನಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಸರಕಾರಿ ಕಚೇರಿಗಳು, ಸ್ಟೇಡಿಯಂಗಳಂತಹ ಜಾಗಗಳಲ್ಲಿ ‘ವಂದೇ ಮಾತರಂ’ ಹಾಡು ಕಡ್ಡಾಯವಾಗಿದೆ. ಇದರಿಂದ ಸ್ಫೂರ್ತಿ ಪಡೆದ ಮುಂಬೈ ಮಹಾನಗರಪಾಲಿಕೆ ತನ್ನ ಶಾಲೆಗಳಲ್ಲೂ ‘ವಂದೇ ಮಾತರಂ’ ಕಡ್ಡಾಯಗೊಳಿಸಿದೆ. ಸಂಘ ಪರಿವಾರದ ಅಜೆಂಡಾ ಅನತಿ ಕಾಲದಲ್ಲಿ ದೇಶದ ಎಲ್ಲಾ ಶಾಲೆಗಳಿಗೆ, ಎಲ್ಲಾ ಮೂಲೆಗಳಿಗೆ ವಿಸ್ತರಿಸುವುದರಲ್ಲಿ ಸಂಶಯವಿಲ್ಲ.
ಈಗ ಪಠ್ಯಕ್ರಮ ಮಾರ್ಪಾಟಿನ ವಿಚಾರಕ್ಕೆ ಬರೋಣ. ಬಿಜೆಪಿ ಆಡಳಿತದ ರಾಜಸ್ಥಾನ, ಗುಜರಾತ್, ಹರ್ಯಾಣ, ಮಧ್ಯಪ್ರದೇಶ, ಛತ್ತೀಸ್‌ಗಡ, ಜಾರ್ಖಂಡ್‌ಗಳಲ್ಲಿ ಪಠ್ಯಪುಸ್ತಕಗಳು ಈಗಾಗಲೇ ಹೆಚ್ಚುಕಡಿಮೆ ಪೂರ್ತಿ ಕೇಸರೀಕರಣಕ್ಕೆ ಒಳಗಾಗಿವೆ. ಗಾಂಧಿ, ನೆಹರೂ ಮೊದಲಾದವರ ಕುರಿತ ಪಾಠಗಳ ಬದಲು ಸಾವರ್ಕರ್, ಗೋಳ್ವಾಲ್ಕರ್, ಹೆಡ್ಗೇವಾರ್ ಮುಂತಾದ ಸಂಘ ಪರಿವಾರದ ನಾಯಕರನ್ನು ಹೊಗಳುವ, ಅನ್ಯ ಧರ್ಮಗಳನ್ನು ತೆಗಳುವ ಪಾಠಗಳು ಬಂದಿವೆ. ರಾಜಸ್ಥಾನದ ವಿಶ್ವವಿದ್ಯಾನಿಲಯಗಳಲ್ಲಿ ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಈಗ ಗೀತೆ, ರಾಮಾಯಣ, ವೇದಗಳನ್ನು ಓದಲೇಬೇಕಾಗಿದೆ. ಗುಜರಾತಿನ 4ನೆ ತರಗತಿಯ ಹಿಂದಿ ಪಠ್ಯಪುಸ್ತಕದಲ್ಲಿ ಮುಸ್ಲಿಮರು ಪ್ರತೀ ವರ್ಷ ರಮಝಾನ್ ಹಬ್ಬಕ್ಕೆ ಮುನ್ನ ಒಂದು ತಿಂಗಳ ಕಾಲ ಆಚರಿಸುವ ಉಪವಾಸ ವ್ರತವಾದ ‘ರೋಜಾ’ವನ್ನು ‘‘ವಾಂತಿಭೇದಿ ಉಂಟು ಮಾಡುವ ಅಪಾಯಕಾರಿ ಸಾಂಕ್ರಾಮಿಕ ರೋಗ’’ ಎಂದು ಕರೆಯ ಲಾಗಿದೆ. ಅದೇ ರೀತಿ 9ನೆ ತರಗತಿಯ ಹಿಂದಿ ಪಠ್ಯವೊಂದು ಯೇಸು ಕ್ರಿಸ್ತರನ್ನು ‘ದೆವ್ವ’ ಎಂದು ವರ್ಣಿಸುತ್ತದೆ.
ಆರೆಸ್ಸೆಸ್‌ನ ಅಂಗಸಂಸ್ಥೆಗಳಲ್ಲೊಂದಾದ ‘ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್’ ಈಗ ದೇಶದಾದ್ಯಂತದ ಶಾಲಾ ಪಠ್ಯಗಳಿಂದ ತನಗಿಷ್ಟವಿಲ್ಲದ ವಿಷಯಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸತೊಡಗಿದೆ. ದೀನನಾಥ ಬಾತ್ರ ಎಂಬವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಸ್ ಇತ್ತೀಚೆಗೆ ಶಾಲಾ ಪಠ್ಯಕ್ರಮ ಬದಲಾವಣೆ ಕುರಿತು 5 ಪುಟಗಳಷ್ಟು ಸಲಹೆಸೂಚನೆಗಳನ್ನು ತಯಾರಿಸಿ ಎನ್‌ಸಿಇಆರ್‌ಟಿಗೆ ಕಳುಹಿಸಿದೆ. ಈ ಹಿಂದೆ ದಿಲ್ಲಿ ವಿಶ್ವವಿದ್ಯಾನಿಲಯದ ಪಠ್ಯದಿಂದ ಎಕೆ ರಾಮಾನುಜಂರ ‘ಮುನ್ನೂರು ರಾಮಾಯಣಗಳು’ ಎಂಬ ಪಾಠವನ್ನು ತೆಗೆಸಿ ಕುಖ್ಯಾತಿಗೊಳಗಾದ ಸಂಘಟನೆ ಇದೇ ಆಗಿದೆ.
ರವೀಂದ್ರನಾಥ ಟಾಗೋರರು ‘‘ರಾಷ್ಟ್ರ ಎಂಬುದು ಮನುಷ್ಯ ಆವಿಷ್ಕರಿಸಿರುವ ಅತ್ಯಂತ ಶಕ್ತಿಶಾಲಿ ಅರಿವಳಿಕೆಯ ಮದ್ದು. ಅದರ ಪ್ರಭಾವಕ್ಕೊಳಗಾದ ಜನಸಮೂಹ ನೈತಿಕ ವಿಕೃತಿಯ ಅರಿವಿಲ್ಲದೆ ಅತ್ಯುಗ್ರ ಸ್ವಾರ್ಥಪರತೆಯ ವ್ಯವಸ್ಥಿತ ಕಾರ್ಯಾಚರಣೆಯನ್ನು ನಡೆಸಬಹುದು’’ ಎಂದಿರುವುದು ಬಾತಾರ ಕಣ್ಣನ್ನು ಕೆಂಪಾಗಿಸಿದೆ. ಹೀಗೆ ಟಾಗೋರರ ಬರಹಗಳು ಮತ್ತು ಚಿಂತನೆಗಳ ಮೂಲಕ ರಾಷ್ಟ್ರೀಯತೆ ಮತ್ತು ಮಾನವೀಯತೆ ನಡುವೆ ಒಡಕುಗಳಿರುವಂತೆ ತೋರಿಸಲು ಯತ್ನಿಸಲಾಗುತ್ತಿರುವುದರಿಂದ ಪಠ್ಯಪುಸ್ತಕಗಳಲ್ಲಿ ಅಂತಹ ಪಾಠಗಳು ಇರಬಾರದೆಂದು ಆಗ್ರಹಿಸಿರುವ ‘ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್’ನ ಇನ್ನಿತರ ಆಕ್ಷೇಪಣೆಗಳು, ಪ್ರತಿಪಾದನೆಗಳು ಮತ್ತು ಡಿಮಾಂಡ್‌ಗಳು ಹೀಗಿವೆ:
* ರಾಮ್‌ಧಾರಿ ಸಿಂಗ್ ದಿನಕರ್ ಎಂಬ ಹೆಸರಾಂತ ಹಿಂದಿ ಕವಿಯ ಪದ್ಯ ಮಕ್ಕಳನ್ನು ತಪ್ಪುದಾರಿಗೆ ಎಳೆಯುತ್ತದೆ. ಅದನ್ನು ಓದಿದರೆ ಮಕ್ಕಳ ಗುಣನಡತೆ ಹಾಳಾಗುತ್ತದೆ.
* ಅಕ್ಕ ಮಹಾದೇವಿ ಮೇಲಿನ ಪಾಠಕ್ಕೆ ಕತ್ತರಿಪ್ರಯೋಗ ಮಾಡಬೇಕು.
* 19ನೆ ಶತಮಾನದ ಮಹಿಳಾಹಕ್ಕು ಕಾರ್ಯಕರ್ತೆ ತಾರಾಬಾಯಿ ಶಿಂಧೆ ಬರೆದಿರುವ ಪುಸ್ತಕದಿಂದ ಉದ್ಧರಿಸಲಾದ ಪಿತೃಪ್ರಾಧಾನ್ಯತೆ ವಿರೋಧಿಸುವ ಪ್ಯಾರಾವನ್ನು ಕಿತ್ತುಹಾಕಬೇಕು.
* ಜಾತಿ ಪದ್ಧತಿ ಕುರಿತ ಯಾವ ಉಲ್ಲೇಖಗಳೂ ಇರಬಾರದು.
* ಅಲ್ಪಸಂಖ್ಯಾತರ ವಿರುದ್ಧ ನಡೆಯುವ ಹಿಂಸಾಕೃತ್ಯಗಳ ವಿಷಯ ಇರಬಾರದು.
* ಮನಮೋಹನ ಸಿಂಗ್ 1984ರ ಸಿಖ್ಖರ ಮಾರಣಹೋಮಕ್ಕೆ ಕ್ಷಮೆ ಯಾಚಿಸಿದ ವಿಷಯವನ್ನು ತೆಗೆದುಹಾಕಬೇಕು.
* ಸುಮಾರು 2,000 ಮುಸ್ಲಿಮರನ್ನು ಬಲಿ ತೆಗೆದುಕೊಂಡ 2002ರ ಗುಜರಾತ್ ಮಾರಣ ಹೋಮದ ವಿಷಯವನ್ನೂ ಕಿತ್ತುತೆಗೆಯಬೇಕು.
* ಸಮುದಾಯವೊಂದನ್ನು ಅವಮಾನಿಸುವ ದಂಗೆಗಳ ಕುರಿತು ಚರ್ಚಿಸುವ ಪಠ್ಯಗಳು ಇರಕೂಡದು.
* ಸಹಿಷ್ಣುತೆ ಮತ್ತು ಸಮನ್ವಯಗಳನ್ನು ಬೋಧಿಸಿದ ಮಧ್ಯಯುಗದ ಸೂಫಿ ಸಂತ ಅಮೀರ್ ಖುಸ್ರೋ ವಿಷಯವನ್ನು ಕಿತ್ತುಹಾಕಬೇಕು.
* ಹಿಂದೂ ಮತ್ತು ಸಿಖ್ಖರ ಮಧ್ಯೆ ಒಡಕು ಮೂಡಿಸುವ, ದ್ವೇಷ ಬೆಳೆಸಲೆೆತ್ನಿಸುವ ಶಕ್ತಿಗಳನ್ನು ವಿರೋಧಿಸುವ ಖ್ಯಾತ ಪಂಜಾಬಿ ಕವಿ ಅವತಾರ್ ಸಿಂಗ್ ಪಾಶರ ಪದ್ಯಗಳು ಇರಬಾರದು.
* ಕೆಲವು ಉರ್ದು, ಪರ್ಷಿಯನ್, ಅರಬಿ ಶಬ್ದಗಳನ್ನು ಕಿತ್ತುತೆಗೆಯಬೇಕು.
* ಮಿರ್ಝಾ ಘಾಲಿಬ್ ಪದ್ಯ, ಎಂ.ಎಫ್.ಹುಸೈನ್ ಜೀವನಚರಿತ್ರೆಗಳನ್ನು ತೆಗೆದುಹಾಕಬೇಕು.
* ಮೊಘಲ್ ಚಕ್ರವರ್ತಿಗಳು ದಯಾಪರರು, ಬಿಜೆಪಿ ಹಿಂದುತ್ವ ಸಿದ್ಧಾಂತಕ್ಕೆ ಬದ್ಧ ಎಂಬ ಉಲ್ಲೇಖಗಳನ್ನು ಕಿತ್ತುಹಾಕಬೇಕು.
ವಾಸ್ತವದಲ್ಲಿ ಇದೆಲ್ಲವೂ ಮೊಘಲ್ ಆಡಳಿತ ವನ್ನು ಮರೆಮಾಚಿ/ಭಯಾನಕವೆಂದು ಬಿಂಬಿಸಿ ಇತಿಹಾಸವನ್ನು ಮರುಬರೆಯುವ ಮೋದಿ ಸರಕಾರದ ಯೋಜನೆಯ ಭಾಗವೆ ಆಗಿದೆ. ಈಗಾಗಲೇ ಮೋದಿಯನ್ನು ಖುಷಿಗೊಳಿಸಲು ಮುಂದಾಗಿರುವ ಮಹಾರಾಷ್ಟ್ರದ ಬಿಜೆಪಿ ಸರಕಾರ, ರಾಜ್ಯದ 7 ಮತ್ತು 9ನೆ ತರಗತಿಯ ಪಠ್ಯಪುಸ್ತಕ ಗಳಿಂದ ಮೊಘಲರ ಆಳ್ವಿಕೆಯ ವಿಷಯವನ್ನು ಹೆಚ್ಚುಕಮ್ಮಿ ಸಂಪೂರ್ಣವಾಗಿ ಅಳಿಸಿಹಾಕಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಹಿಂದುತ್ವ ಸಿದ್ಧಾಂತವನ್ನು ವೈಭವೀಕರಿಸುವ, ಮಿಲಿಟರಿ ಶಿಕ್ಷಣ ನೀಡುವ, ತಿರುಚಿದ ಇತಿಹಾಸ ಬೋಧಿಸುವ ಪಠ್ಯಕ್ರಮಗಳು ದೇಶದೆಲ್ಲೆಡೆಯ ಶಿಕ್ಷಣಸಂಸ್ಥೆಗಳಲ್ಲಿ ಜಾರಿಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿ ಸುತ್ತಿವೆ.
**********
(ಆಧಾರ: ವಯರ್.ಕಾಂ ಲೇಖನ; ‘ಸಬ್‌ರಂಗ್ ಇಂಡಿಯಾ’ದಲ್ಲಿ ಶಂಸುಲ್ ಇಸ್ಲಾಂ ಲೇಖನ; ಇತರ ಮಾಧ್ಯಮ ವರದಿಗಳು)