ಬ್ರಾಹ್ಮಣ ಧರ್ಮದ ಸುತ್ತ ಕಟ್ಟಿರುವ ಮೂರು ಕೋಟೆಗಳಲ್ಲಿ ಅಸ್ಪಶ್ಯತೆ ಹೊರಗಿನ ಕೋಟೆ

Update: 2017-08-17 18:33 GMT

ಭಾಗ-2

ಅವರಿಗೆ ಸಾಕಷ್ಟು ಜನರ ಬೆಂಬಲವಿರುವಾಗ ನಾವು ಮಾಡಿದ್ದೇ ಸರಿ ಎಂದವರು ಧೈರ್ಯವಾಗಿ ಪ್ರತಿಪಕ್ಷಕ್ಕೆ ಹೇಳಬಹುದಿತ್ತು. ಆದರೆ ಕೇವಲ ಹೆಚ್ಚು ಮತಗಳನ್ನು ಪಡೆಯುವ ಆಸೆಯಿಂದ ಈ ಪ್ರಶ್ನೆಯನ್ನು ಬಿಡಿಸುವ ಪ್ರಯತ್ನ ಮಾಡಿದ್ದಿದ್ದರೆ ಬ್ರಾಹ್ಮಣ ಸಭೆಯಲ್ಲಿ ಒಡಕುಂಟಾಗುವ ಭಯದಿಂದ ಸಭಾಸದರು ಈ ಪ್ರಶ್ನೆಯನ್ನು ಭವಿಷ್ಯದ ದೃಷ್ಟಿಯಿಂದ ಹಾಗೂ ಒಗ್ಗಟ್ಟಿನ ಭಾವನೆಯಿಂದ ಬಿಡಿಸಬೇಕು ಅಂದುಕೊಂಡು, ನಾವು ಮಾಡಿದ್ದೇ ನಿಜ ಅನ್ನುವುದಕ್ಕಿಂತ ನೀವು ಹೇಳಿದ ಹಾಗೆ ಅನ್ನುವ ಕರಾರಿನ ಮೇಲೆ ಸಾಕಷ್ಟು ಎಳೆದಾಡುತ್ತಿದ್ದ ಪ್ರತಿಪಕ್ಷದೊಡನೆ ಹೊಂದಾಣಿಕೆ ಮಾಡಿಕೊಂಡರು. ಅವರ ಮೇಲಿನ ಯುಕ್ತಿವಾದವನ್ನು ನಾವು ಒಪ್ಪುತ್ತೇವೆ. ಈಗ ಹಿಂದೂ ಸಮಾಜದ ಒಗ್ಗಟ್ಟು ಮುಖ್ಯವೋ ಇಲ್ಲ ಬ್ರಾಹ್ಮಣ ಸಭೆಯ ಒಗ್ಗಟ್ಟು ಮುಖ್ಯವೋ ಅನ್ನುವ ದೇಶದ ದೃಷ್ಟಿಯಿಂದಲೂ ಈ ಪ್ರಶ್ನೆಯನ್ನು ಕಾಣಬೇಕಾಗಿತ್ತು. ಆದರೆ ದೇಶದ ಹೆಸರು ತಮ್ಮ ಊರು ಅನ್ನುವ ಲಫಂಗತನಕ್ಕೆ ರಾಷ್ಟ್ರೀಯ ಚಳವಳಿಯು ಇಂತಹ ಮುದ್ದಾದ ಹೆಸರು ಕೊಟ್ಟು ತಿಳುವಳಿಕೆಯಿಲ್ಲದವರಿಗೆ ಮೋಸ ಮಾಡುತ್ತ ಬಂದಿರುವ ಈ ಜನರಿಗೆ ವ್ಯಾಪಕ ದೃಷ್ಟಿಕೋನವಿರುವುದು ಸಾಧ್ಯವಿಲ್ಲ.

ವ್ಯಾಪಕ ದೃಷ್ಟಿ ಇಲ್ಲದಿದ್ದರೆ ಇಲ್ಲ, ಆದರೆ ಬ್ರಾಹ್ಮಣ ಸಭೆಯವರಲ್ಲಿ ವ್ಯಾಪಕ ಬುದ್ಧಿಯಾದರೂ ಇರಬೇಕಿತ್ತು. ಕೇವಲ ಬ್ರಾಹ್ಮಣ ಸಭೆಯ ಭವಿತವ್ಯದ ದೃಷ್ಟಿಯಿಂದ ಈ ಪ್ರಶ್ನೆಯನ್ನು ಬಿಡಿಸುವುದು ಅಗತ್ಯವಿದ್ದಿದ್ದರೆ ಉಭಯಪಕ್ಷಗಳಲ್ಲಿ ಇಷ್ಟು ದೊಡ್ಡ ಯುದ್ಧವಾದದ್ದಾದರೂ ಯಾಕೆ? ಬ್ರಾಹ್ಮಣ ಸಭೆಯು ಒಂದು ಬ್ರಾಹ್ಮಣರ ಸಂಸ್ಥೆ. ಈ ಸಂಸ್ಥೆಯನ್ನು ಕಟ್ಟವುದಕ್ಕಾಗಿ ಶಂಕರಾಚಾರ್ಯರಂತಹ ಧರ್ಮಮಾರ್ತಾಂಡರಿಂದ ಹಿಡಿದು ಒಬ್ಬ ಸಾಧಾರಣ ಭಿಕ್ಷುಕನು ಕೂಡ ಒಂದೊಂದು ಪೈಸೆಯನ್ನು ಕೂಡಿಟ್ಟು ಕೊಟ್ಟಿದ್ದಾರೆ. ಅಸ್ಪಶ್ಯತೆಯನ್ನು ನಂಬುವ ಜನ ಇಂತಹ ಸಂಸ್ಥೆಯಲ್ಲಲ್ಲದೆ ಇನ್ಯಾವ ಸಂಸ್ಥೆಯಲ್ಲಿದ್ದಾರು? ಬ್ರಾಹ್ಮಣ ಸಮಾಜದ ಸುತ್ತ ದಲಿತರು ಮೇಲ್ಜಾತಿಯವರು ಭೇಟಿಯಾಗದ ಬಂಧನದ, ಪರಸ್ಪರ ಊಟ ಮಾಡದಂತಹ ಬಂಧನದ ಹಾಗೂ ಪರಸ್ಪರರಲ್ಲಿ ಮದುವೆಯ ಸಂಬಂಧವನ್ನಿಟ್ಟುಕೊಳ್ಳದಂತಹ ಬಂದನದ ಮೂರು ಕೋಟೆಗಳನ್ನು ಕಟ್ಟಲಾಗಿದೆ, ಅದರಲ್ಲಿ ಅಸ್ಪಶ್ಯತೆ ಹೊರಗಿನ ಕೋಟೆ.

ಒಬ್ಬರನ್ನೊಬ್ಬರು ಭೇಟಿಯಾಗದಂತಹ ಕೋಟೆಯನ್ನೊಮ್ಮೆ ಒಡೆದು ಶತ್ರುಗಳು ಒಳಗೆ ನುಗ್ಗಿದರೆ ಅವರು ಸಹಜವಾಗಿ ಎರಡನೆಯ ಕೋಟೆ ಅಂದರೆ ಪರಸ್ಪರರಲ್ಲಿ ಊಟ ಮಾಡದಂತಹ ಬಂಧನದ ಕೋಟೆಯನ್ನು ಮುರಿಯಬಲ್ಲರು. ಈ ಕೋಟೆ ಮುರಿದರೆ ಮೂರನೆಯ ಅಂದರೆ ಪರಸ್ಪರರಲ್ಲಿ ಮದುವೆಯ ಸಂಬಂಧವನ್ನಿಟ್ಟುಕೊಳ್ಳದ ಮೂರನೆಯ ಕೋಟೆಯ ರಕ್ಷಣೆ ಮಾಡುವುದು ಯಾರಿಂದಲು ಸಾಧ್ಯವಾಗಲಾರದು. ಕಡೆಗೆ ಬ್ರಾಹ್ಮಣ ಧರ್ಮದ ಭಯ ಮಾಯವಾಗಿ ಮೊದಲ ಕೋಟೆಯ (ಭೇಟಿಯಾಗದಂತಹ) ಬಾಗಿಲು ತೆರೆದು ಶತ್ರುಗಳನ್ನು ಒಳಗೆ ಬಿಟ್ಟು ಅವರು ನಮ್ಮ ಮೇಲೆ ಏರಿ ಬರುವುದಕ್ಕಿಂತ ಹೊರಗಿನ ಕೋಟೆಯ ಬಾಗಿಲಲ್ಲೇ ಕಾದು ಕುಳಿತು ಒಳಗೆ ಬರುವವರನ್ನು ತಡೆಯುವುದೇ ಬ್ರಾಹ್ಮಣ ಧರ್ಮದ ಸಂರಕ್ಷಣೆಗಾಗಿ ಮಾಡಬಹುದಾದ ಜಾಣತನದ ಲಕ್ಷಣ ಎಂದು ಬ್ರಾಹ್ಮಣ ಸಮಾಜದ ಭಕ್ತರಿಗೆ ಅನಿಸುವುದು ಸಹಜ.

ಪರಸ್ಪರ ಭೇಟಿಯಾಗುವ ಬಂಧನದ ಕೋಟೆಯನ್ನು ಮುರಿದು ದಲಿತರನ್ನು ಒಳಗೆ ಕರೆತರಲು ಪ್ರಯತ್ನಿಸಿದ ಸಭಾಸದರಿಗೆ ಬ್ರಾಹ್ಮಣ ಸಭೆಯಲ್ಲಿ ತಮ್ಮನ್ನು ವಿರೋಧಿಸುವವರೂ ಇದ್ದಾರೆ ಅನ್ನುವುದು ಗೊತ್ತಿರಲಿಲ್ಲ ಎಂದಾಗುವುದಿಲ್ಲ. ಹಾಗಾಗಿ ಅವರು ತಮ್ಮ ವಿರೋಧಕರನ್ನು ಎದುರಿಸಿ ಅವರನ್ನು ಸೋಲಿಸುವ ಭಾವನೆಯಿಂದಲೇ ಹೆಜ್ಜೆಯನ್ನು ಮುಂದಿಟ್ಟರಬೇಕಲ್ಲವೆ. ಈ ಆಟದಲ್ಲಿ ದಲಿತರಂತಹ ಪರಕೀಯ ಸಮಾಜಕ್ಕಾಗಿ ನಾವು ಬ್ರಾಹ್ಮಣ ಸಮಾಜದಲ್ಲಿ ಬಿರುಕು ಬಿಡಬೇಕಾಗಬಹುದು ಅನ್ನುವುದು ಸೂರ್ಯನ ಬೆಳಕಿನಷ್ಟೆ ಸ್ಪಷ್ಟವಾಗುತ್ತಿತ್ತು. ಸುಧಾರಕರಿಗೆ ಈ ಜವಾಬ್ದಾರಿ ತೆಗೆದುಕೊಳ್ಳುವುದಿರದಿದ್ದರೆ ಅವರು ಈ ಬಿರುಗಾಳಿಯನ್ನೆಬ್ಬಿಸಿ ಸಾಧಿಸಿದ್ದಾದರು ಏನನ್ನು ಅನ್ನುವುದು ತಿಳಿಯದಾಗಿದೆ.

ಬ್ರಾಹ್ಮಣ ಸಮಾಜದಲ್ಲಿ ಬಿರುಕಂತೂ ಉಂಟಾಗಿದೆ. ಈಗ ಈ ವಾದದ ಕೊನೆ ಒಮ್ಮತವಾಗುವ ಮಸೂದೆಯಲ್ಲಾಗಿದೆ. ಈ ಮಸೂದೆಯಿಂದ ದಲಿತರು ಒಂದು ಪಕ್ಷ ಸಂತುಷ್ಟರಾಗಿದ್ದರೆ ಈ ವಾದಗಳಾಗಿದ್ದು ಒಳ್ಳೆಯದೇ ಆಯಿತು ಎಂದು ನಾವಂದುಕೊಳ್ಳುತ್ತಿದ್ದೆವು. ಆದರೆ ದಲಿತರು ಈ ಮಸೂದೆಯಿಂದ ಸಂತುಷ್ಟರಾಗುವುದು ಸಾಧ್ಯವೇ ಇಲ್ಲ ಅನ್ನುವುದು ನಮ್ಮ ಸ್ಪಷ್ಟ ಅನಿಸಿಕೆ. ಬ್ರಾಹ್ಮಣಶಾಹಿಯೇನು ಸಾಮಾನ್ಯವಲ್ಲ, ಅದು ಸಮರ್ಥವಾಗಿದೆ, ಅವರಲ್ಲಿ ಅಧಿಕಾರವಿದೆ ಹಾಗೂ ಅದು ಮಹಾ ಕಪಟಿಯಾಗಿದೆ. ತಮ್ಮ ಅಧಿಕಾರಿಗಳಿಗೆ ಚ್ಯುತಿ ಬರದಂತೆ ದಲಿತರಿಗೆ ಕೊಡಬಹುದಾದ್ದನ್ನೇ ಕೊಟ್ಟು ತಾವೇನೋ ಮಹಾ ಕೊಡುತ್ತಿದ್ದೇವೆ ಎಂದು ತೋರಿಸುತ್ತದೆ. ಆದರೆ ಇಂದಿನ ದಲಿತರು ಪಾಪದವರಲ್ಲ ಅನ್ನುವುದನ್ನವರು ಗಮನದಲ್ಲಿಡಬೇಕು.

ಇಂದಿನ ದಲಿತರು ಎಚ್ಚರದಿಂದಿದ್ದಾರೆ. ಅವರಿಗೇನು ಬೇಕು ಅನ್ನುವುದರ ಅರಿವು ಅವರಿಗಿದೆ ಹಾಗೂ ಸಿಕ್ಕಿದ್ದನ್ನೂ ಪರಿಶೀಲಿಸಿ ತೆಗೆದುಕೊಳ್ಳುವ ಬುದ್ಧಿ ಅವರಿಗಿದೆ. ಅಸ್ಪಶ್ಯರಿಗೆ ಅಸ್ಪಶ್ಯತೆಯನ್ನು ಹೊಡೆದೋಡಿಸುವುದಿದೆ. ಆದರೆ ಅಂತರ್ಜಾತಿಯ ವಿವಾಹಗಳಾಗದೆ ಅಸ್ಪಶ್ಯತೆ ತೊಲಗೀತು ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಬ್ರಾಹ್ಮಣ ನಿಲುವು ಸತ್ತರೆ ಮಾತ್ರ ಅಸ್ಪಶ್ಯತೆ ತೊಲಗೀತು ಹಾಗೂ ಅಂತರ್ಜಾತಿಯ ವಿವಾಹದ ಕೋಟೆ ಮುರಿಯದೆ ಬ್ರಾಹ್ಮಣ ನಿಲುವು ಸಾಯದು ಅನ್ನುವುದು ಸತ್ಯ. ಎಲ್ಲಿಯತನಕ ಬ್ರಾಹ್ಮಣ ನಿಲುವಿದೆಯೋ ಅಲ್ಲಿಯತನಕ ಅಸ್ಪಶ್ಯತೆ ಬಗಲಲ್ಲಿ ಅಲ್ಲವಾದರೂ ಮನೆಯಲ್ಲಾದರೂ ಇದ್ದೇ ಇರುತ್ತದೆ. ಈ ಸ್ಪಷ್ಟೀಕರಣದಿಂದಲಾದರೂ ದಲಿತರ ಅಪೇಕ್ಷೆಗಳೇನು? ಅನ್ನುವುದನ್ನು ಬ್ರಾಹ್ಮಣಶಾಹಿಗಳು ಅರ್ಥ ಮಾಡಿಕೊಳ್ಳಲಿ.

ದಲಿತರ ಬೇಡಿಕೆಯ ಓಟ ಇಲ್ಲಿಯವರೆಗೆ ತಲುಪಿದೆ ಅಂದ ಮೇಲೆ ಈ ಒಮ್ಮತದ ಮಸೂದೆಯಿಂದ ಬ್ರಾಹ್ಮಣರು ತಮ್ಮನ್ನು ಉಪಕೃತ್ಯರನ್ನಾಗಿ ಮಾಡದೆ ತಮ್ಮ ಅವಮಾನ ಮಾಡಿದ್ದಾರೆಂದೇ ದಲಿತರು ತಿಳಿದುಕೊಳ್ಳುವರು ಅನ್ನುವುದರ ಬಗ್ಗೆ ಯಾರೂ ಅನುಮಾನ ಪಡಬೇಕಿಲ್ಲ.

ಶೆಟ್ಯೆಯವರಿಗೆ ಮಾತ್ರ ತಮ್ಮ ಅಪಮಾನವಾಯಿತು ಎಂದೆನಿಸದೆ ಸಮಾಜವು ಸಾಕಷ್ಟು ಸೌಜನ್ಯತೆ ತೋರಿಸಿತು ಎಂದೂ ಅವರಿಗೆ ಅನಿಸಿದ್ದರಬಹುದು. ಏಕೆಂದರೆ ಅವರು ಗಣೇಶ ಮಂಡಳಕ್ಕೆ ಬರೆದ ಕಾಗದದಲ್ಲಿ ಅವರಿಟ್ಟ ಬೇಡಿಕೆಗಳಲ್ಲಿ ‘‘ಈ ಮೇಳವನ್ನು ಶಂಕರವಾಡಿ ಸಾರ್ವಜನಿಕ ಗಣೇಶನ ಎದುರಿನ ಮಹಡಿಯ ದಿವಾನಾಖಾನೆಯಲ್ಲಿ ಮಕ್ಕಳನ್ನು ಸೇರಿಸಿ ಪದ್ಯ ಹಾಡಿಸಿ, ಹಾಗಿಲ್ಲದಿದ್ದರೆ ಕೆಳಗಿನ ಮಹಡಿಯಲ್ಲಿ ಸೇರಿಸಿ, ಅದೂ ಇಷ್ಟವಿಲ್ಲ ಅಂದರೆ ಕೆಳಗಿನ ಚೌಕದಲ್ಲಿ ಶಂಕರವಾಡಿಯ ಕಟ್ಟಡದೆದುರು ಆದರೆ ಕಟ್ಟಡದ ಒಳಗೆ ಸೇರಿಸಿ, ಕಡೆಗೆ ಇದೂ ಇಷ್ಟವಿಲ್ಲವೆಂದರೆ ಶಂಕರವಾಡಿಯ ಎದುರು ಮಕ್ಕಳನ್ನು ರಸ್ತೆಯ ಮೇಲೆ ನಿಲ್ಲಿಸಿ ಅವರಿಂದ ಸೇವೆ ಪಡೆದುಕೊಳ್ಳಿ’’ ಅನ್ನುವ ಯಾಚನೆ ಮಾಡಿದ್ದರು. ಇದರರ್ಥ ‘‘ನಾನು ಕೇಳುವುದೆಷ್ಟು ದಾತನಾದ ಲಕ್ಷ್ಮೀಪತಿಯೇ’’ ಅನ್ನುವ ಸಂತವಾಣಿಯಂತೆ ಬ್ರಾಹ್ಮಣ ಸಭೆಯು ಮಂಜೂರು ಮಾಡಿದ ಒಮ್ಮತದ ಮಸೂದೆಯಲ್ಲಿ ಶೆಟ್ಯೆಯವರ ಕನಿಷ್ಠ ಬೇಡಿಕೆಗಿಂತ ಎಷ್ಟೋ ಪಟ್ಟು ದೊಡ್ಡ ವರವನ್ನೇ ಕೊಡಲಾಗಿದೆ.

ಶ್ವಾನವೃತ್ತಿಯನ್ನು ಧರಿಸಿ ಬೇಡಿದ್ದು ಹೀಗೆ ಸಫಲವಾಗುವುದನ್ನು ಕಂಡು ಶೆಟ್ಯೆಯವರಿಗೆ ಧನ್ಯನಾದೆ ಅನಿಸುವುದು ಸಹಜ. ಆದರೆ ಶೆಟ್ಯೆಯವರು ದಲಿತರಲ್ಲ. ಹಾಗಾಗಿ ಅವರಲ್ಲಿ ದಲಿತರಲ್ಲಿ ಜಾಗ್ರತವಾಗಿರುವಂತಹ ಅಭಿಮಾನದ ಲವಲೇಶವೂ ಇಲ್ಲ. ಹಾಗಿದ್ದಿದ್ದರೆ ಅವರು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ತಮ್ಮ ಹಕ್ಕುಗಳಿಗೆ ದೈನ್ಯತೆಯಿಂದ ಬೇಡಲು ಹೇಳುತ್ತಿರಲಿಲ್ಲ. ಈ ವರ್ಷ ನೀವು ದಲಿತರ ಅಪಮಾನಕ್ಕೆ ಕಾರಣರಾದಂತೆ ದಯವಿಟ್ಟು ಮುಂದಿನ ವರ್ಷ ಆಗಬೇಡಿ ಅನ್ನುವುದೇ ಶೆಟ್ಯೆಯವರಲ್ಲಿ ನಮ್ಮ ಸೂಚನೆ. ಹಿಂದೂ ಧರ್ಮದಲ್ಲಿರದೆ ದಲಿತರಿಗೆ ಮೋಕ್ಷವಿಲ್ಲ ಅನ್ನುವುದು ನಿಜವಾಗಿದ್ದರೆ ನಾವು ಕೂಡ ಬ್ರಾಹ್ಮಣರ ಕಾಲು ಹಿಡಿಯುತ್ತಿದ್ದೆವು. ಆದರೆ ಸುದೈವದಿಂದ ನಮಗೆ ಮೋಕ್ಷಗಳ ಇತರ ದಾರಿಗಳು ತೆರೆದಿರುವುದರಿಂದ ನಮಗಿನ್ನೂ ಆ ಕಾಲ ಬಂದಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News