ನೆಲಕ್ಕುರುಳಲಿವೆಯೇ ಬ್ರಿಟಿಷರ ಕಾಲದ ಐತಿಹಾಸಿಕ ಕಟ್ಟಡಗಳು?

Update: 2017-08-27 18:39 GMT

ಕಾರವಾರ, ಆ.27: ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ನಗರದಲ್ಲಿರುವ ನೂರಾರು ವರ್ಷಗಳ ಹಿಂದಿನ ಐತಿಹಾಸಿಕ ಕಟ್ಟಡಗಳು ಧರೆಗುರುಳಲಿವೆ ಎಂದು ತಿಳಿದುಬಂದಿದೆ.

ಬ್ರಿಟಿಷರು 1864ರಲ್ಲಿ ತಮ್ಮ ವ್ಯಾಪಾರಕ್ಕಾಗಿ ಕಾರವಾರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ನಗರದ ರೂಪವನ್ನು ನೀಡಿದ್ದರು. ನಂತರದ 50 ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ, ಅಂಚೆ ಕಚೇರಿ, ಶಿಕ್ಷಣ ಇಲಾಖೆಗಳ ಕಚೇರಿಗಳನ್ನು ನಿರ್ಮಾಣ ಮಾಡಿದ್ದರು. ಅಂದು ನಿರ್ಮಿಸಿದ ಆ ಕಟ್ಟಡಗಳು ಈಗಲೂ ಬಲಿಷ್ಠವಾಗಿದ್ದು ಇಲಾಖೆ ಕಚೇರಿಗಳು ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಈಗ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಅವುಗಳನ್ನು ಒಡೆಯಲು ಗುರುತು ಹಾಕಲಾಗಿದ್ದು, ಕೆಲವೇ ದಿನಗಳಲ್ಲಿ ಕಟ್ಟಡ ಒಡೆಯುವ ಕಾರ್ಯ ಪ್ರಾರಂಭವಾಗಲಿದೆ ಎನ್ನಲಾಗಿದೆ.

ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿ

ತೋಡೂರಿನಲ್ಲಿ ಅತೀ ಹೆಚ್ಚು ಖಾಸಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು, ಮನೆಗಳ ಮೌಲ್ಯಮಾಪನ ಇತ್ತೀಚೆಗಷ್ಟೇ ಆಗಿದೆ. ಚೆಂಡಿಯಾ, ಚಿತ್ತಾಕುಲಾ ಗ್ರಾಮಗಳಲ್ಲಿ ಇನ್ನೂ ಸಾಕಷ್ಟು ಖಾಸಗಿ ಭೂಮಿ ವಶಕ್ಕೆ ಪಡೆಯುವುದು ಬಾಕಿ ಇದೆ. ಅಮದಳ್ಳಿಯಲ್ಲಿ ಬೈಪಾಸ್ ಮೂಲಕ ರಸ್ತೆ ನಿರ್ಮಿಸಲು ಸ್ಥಳೀಯರು ಹಾಗೂ ಶಾಸಕರು ಹೋರಾಟ ನಡೆಸಿದ್ದರಾದರೂ ಒಪ್ಪಿಗೆ ದೊರೆಯದೆ ಸದ್ಯ ಈಗಿರುವ ರಸ್ತೆಯ ಪಕ್ಕದಲ್ಲೇ 45 ಮೀಟರ್ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಕಾಮಗಾರಿಗಳು ಅಂತಿಮ ಹಂತದಲಿ್ಲ: ಬಿಣಗಾದಿಂದ ಆರಂಭಗೊಂಡು ಕಾರವಾರದ ಲಂಡನ್ ಬ್ರಿಜ್‌ನವರೆಗೆ ಸುರಂಗದ ಮೂಲಕ ಚತುಷ್ಪಥ ಕಾಮಗಾರಿ ಮಾಡಲು ಯೋಜನೆ ರೂಪಿಸಲಾಗಿದ್ದು, ಸುರಂಗ ನಿರ್ಮಾಣ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದೆ. ಇನ್ನು ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಕಾರ್ಯ ಬಾಕಿ ಇದೆ ಎಂದು ಐಆರ್‌ಬಿ ಕಂಪೆನಿ ಮಾಹಿತಿ ನೀಡಿದೆ. ಕಾಳಿ ನದಿಗೆ ನಿರ್ಮಿಸಲಾಗುತ್ತಿರುವ ಮತ್ತೊಂದು ಸೇತುವೆ ಕಾರ್ಯ ಕೂಡ ಮುಕ್ತಾಯ ಹಂತದಲ್ಲಿದೆ. ಇನ್ನು ಗುಡ್ಡಗಳನ್ನು ತೆರವು ಮಾಡುವ ಕಾರ್ಯ ಮಾತ್ರ ಬಂಡೆಗಳಿಂದಾಗಿ ಕಷ್ಟಕರವಾಗಿದ್ದು ವಿಳಂಬವಾಗಲಿದೆ ಎನ್ನಲಾಗುತ್ತಿದೆ.

ಭೂಸ್ವಾಧೀನದ ವಿವ: ತಾಲೂಕಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ 38.35 ಹೆಕ್ಟೇರ್ ಭೂಮಿ ಸ್ವಾಧೀನಕ್ಕೆ 3ಡಿ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಅದರಲ್ಲಿ 4.3 ಹೆಕ್ಟೇರ್ ಸರಕಾರಿ ಭೂಮಿಯಾಗಿದ್ದು ಉಳಿದವು ಖಾಸಗಿ ಭೂಮಿಯಾಗಿದೆ. ಅದರಲ್ಲಿ ಇದುವರೆಗೆ ಒಟ್ಟು 14.61 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ ಮಾಜಾಳಿಯಲ್ಲಿ 3.57 ಹೆಕ್ಟೇರ್ (0.14 ಹೆ. ಸರಕಾರಿ ಭೂಮಿ), ಚಿತ್ತಾಕುಲಾದಲ್ಲಿ 0.88(0.018), ಕೋಡಿಬಾಗದಲ್ಲಿ 1.24(1.07), ಬಾಡದಲ್ಲಿ ಕಾರವಾರ ನಗರ ಅಂದರೆ ಬಾಡದಲ್ಲಿ 0.70 ಸಂಪೂರ್ಣ ಸರಕಾರಿ ಭೂಮಿ, ಬಿಣಗಾದಲ್ಲಿ 7.61(0.52 ಸರಕಾರಿ ಭೂಮಿ), ಅರಗಾ2.41(0.11), ಚೆಂಡಿಯಾ 7.15(0.01), ತೋಡೂರು 8.50(0.25), ಅಮದಳ್ಳಿ 6.23(1.25) ಹೆಕ್ಟೇರ್ ಭೂಮಿ ಸ್ವಾಧೀನಕ್ಕೆ ಯೋಜನೆ ರೂಪಿಸಲಾಗಿದೆ. ಭೂಸ್ವಾಧೀನಕ್ಕೆ ಪರಿಹಾರ ವಿತರಿಸಲು 56 ಕೋಟಿ ರೂ. ಬಿಡುಗಡೆಯಾಗಿದೆ. 

Writer - ಶ್ರೀನಿವಾಸ್ ಬಾಡ್ಕರ್

contributor

Editor - ಶ್ರೀನಿವಾಸ್ ಬಾಡ್ಕರ್

contributor

Similar News