ಮಂಗಳೂರು ಫ್ಲವರ್ ಸಿಟಿ ಸೊಸೈಟಿಯಿಂದ ಹೊಸ ಹೆಜ್ಜೆ!
ಮಂಗಳೂರು, ಆ.31: ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಮಂಗಳೂರು ಮಹಾನಗರದ ರಸ್ತೆಗಳು ಸುಂದರ ಹಾಗೂ ಹಸಿರುಮಯವಾಗಿ ಕಂಗೊಳಿಸಲಿದೆ.
ಮಂಗಳೂರಿನ ಯುವ ಉತ್ಸಾಹಿ ಯುವಕರ ತಂಡ ‘ಮಂಗಳೂರು ಫ್ಲವರ್ ಸಿಟಿ ಸೊಸೈಟಿ’ (ಎಂಎಫ್‌ಸಿ) ಮೂಲಕ ಮಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಬಣ್ಣದ ಹೂಬಿಡುವ ಹಸಿರು ಗಿಡಗಳನ್ನು ನೆಟ್ಟು ನಗರವನ್ನು ಸುಂದರಗೊಳಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ತಯಾರಿಗಳು ಆರಂಭಗೊಂಡಿದ್ದು, ಸೆಪ್ಟಂಬರ್ 4ರಿಂದ ‘ನಮ್ಮ ಮಂಗಳೂರು ಸುಂದರೀಕರಣ’ದ ಈ ಮಹತ್ವಪೂರ್ಣ ಯೋಜನೆಗೆ ಚಾಲನೆ ನೀಡಲು ಸಿದ್ಧತೆಗಳು ಭರದಿಂದ ಸಾಗಿವೆ.
ವಿದೇಶದಲ್ಲಿ ಉದ್ಯಮವನ್ನು ಹೊಂದಿರುವ, ಕೇಡಿಯಂ ಫ್ಲೈವುಡ್ಸ್ ಎಕ್ಸ್‌ಪರ್ಟೈಸ್ ಇಂಡಸ್ಟ್ರೀಯ ಪಾಲುದಾರನಾಗಿರುವ ಯುವ ಉದ್ಯಮಿ ಶವಾಝ್ ಮುಹಮ್ಮದ್ ರವರು ಮಂಗಳೂರು ಫ್ಲವರ್ ಸಿಟಿ ಅಸೋಸಿಯೇಶನ್ ಎಂಬ ತಂಡವೊಂದನ್ನು ರಚಿಸಿಕೊಂಡು ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಈ ವಿನೂತನ ಯೋಜನೆಗೆ ಮುಂದಾಗಿದ್ದಾರೆ.
ತಮ್ಮಂತೆ ಉತ್ಸಾಹಿಗಳನ್ನು ಒಟ್ಟುಗೂಡಿಸಿಕೊಂಡಿರುವ ಇವರು ಮಂಗಳೂರು ನಗರ ಸುಂದರೀಕರಣದತ್ತ ಹೊಸ ಹೆಜ್ಜೆ ಇರಿಸಿದ್ದಾರೆ. ಮಂಗಳೂರು ನಗರದ ರಸ್ತೆಗಳಲ್ಲಿ ಗಿಡ ಮರಗಳನ್ನು ನೆಡುವುದು ಮಾತ್ರವಲ್ಲದೆ, ಆ ಗಿಡಗಳಿಗೆ ನೀರು, ಹಾಕಿ ಪೋಷಿಸುವ ಕೆಲಸವನ್ನೂ ನಿರಂತರವಾಗಿ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮಂಗಳೂರು ನಗರವನ್ನು ಅಂತಾರಾಷ್ಟ್ರೀಯ ದರ್ಜೆಯಲ್ಲಿ ಸುಂದರ ನಗರವನ್ನಾಗಿಸುವುದು ಈ ಯುವ ತಂಡದ ಯೋಜನೆಯಾಗಿದೆ.
ಪ್ರಥಮ ಹಂತದಲ್ಲಿ ನಗರದ ಕೆಪಿಟಿಯಿಂದ ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಸುಮಾರು ಐದು ಕಿ.ಮೀ. ಉದ್ದದ ಚತುಷ್ಪಥ ರಸ್ತೆಯನ್ನು ಈ ಯೋಜನೆಗಾಗಿ ಆಯ್ದುಕೊಳ್ಳಲಾಗಿದೆ. ಈ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಕೆಂಪು ಬಣ್ಣದ ಮೇ ಫ್ಲವರ್ ಗಿಡಗಳನ್ನು ನೆಡಲಾಗುವುದು. ಮಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
‘‘ಇದೊಂದು ‘ನಮ್ಮ ಮಂಗಳೂರಿಗಾಗಿ ನಮ್ಮ ಕೊಡುಗೆ’ಯ ಕನಸಿನ ಯೋಜನೆ. ನಾವು ಹೊರ ದೇಶಗಳಿಗೆ ಪ್ರಯಾಣಿಸುವ ಸಂದರ್ಭ ಅಲ್ಲಿನ ರಸ್ತೆಗಳಲ್ಲಿನ ಅಚ್ಚುಕಟ್ಟುತನ, ಸುಂದರತೆ ಕಂಡು ಮಾರುಹೋಗಿದ್ದೇವೆ. ನಮ್ಮ ಮಂಗಳೂರಿಗೂ ವಿದೇಶಗಳಿಂದ ಸಾಕಷ್ಟು ಪ್ರವಾಸಿಗರು ಅತಿಥಿಗಳು ಬರುತ್ತಿರುತ್ತಾರೆ. ಹಾಗಿರುವಾಗ ನಮ್ಮ ಮನೆಯಾಗಿರುವ ನಮ್ಮ ಮಂಗಳೂರನ್ನು ಸುಂದರಗೊಳಿಸುವುದು ನಮ್ಮ ಜವಾಬ್ದಾರಿ. ವಿದೇಶಗಳಲ್ಲಿನ ರಸ್ತೆಗಳಲ್ಲಿ ಬಹುತೇಕವಾಗಿ ಕೃತಕವಾಗಿ ಇಂತಹ ಸೌಂದರ್ಯವನ್ನು ನಾವು ಕಾಣಬಹುದು. ಆದರೆ ನಮ್ಮ ಮಂಗಳೂರಿನಲ್ಲಿ ಆ ಸೌಂದರ್ಯವನ್ನು ನಾವು ಪ್ರಾಕೃತಿಕದತ್ತವಾಗಿ ನೀಡಬೇಕೆಂಬ ಆಲೋಚನೆಯೊಂದಿಗೆ ಈ ಕಾರ್ಯಕ್ಕೆ ಮುಂದಾಗಿದ್ದೇವೆ’’ ಎಂದು ಈ ಯೋಜನೆಯ ಪ್ರಮುಖ ರುವಾರಿಯಾಗಿರುವ ಉದ್ಯಮಿ, ಉತ್ಸಾಹಿ ಯುವಕ ಶವಾಝ್ ಮುಹಮ್ಮದ್ ‘ವಾರ್ತಾಭಾರತಿ’ಗೆ ತಮ್ಮ ಯೋಜನೆಯ ಬಗ್ಗೆ ವಿವರ ನೀಡಿದ್ದಾರೆ.
ಮೂಲತ: ಜೆಪ್ಪು ನಿವಾಸಿಯಾಗಿರುವ ಶವಾಝ್, ತಮ್ಮ ಈ ಆಲೋಚನೆಗಾಗಿ ತಾವೇ ತಮ್ಮ ಪ್ರಥಮ ಹಂತದಲ್ಲಿ ಕೊಡುಗೆ ನೀಡಲು ಮುಂದಾಗಿದ್ದಾರೆ. ಕೆಪಿಟಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆಯಲ್ಲಿ ನೆಡಲು 500 ಗಿಡಗಳಿಗೆ ಇವರು ತಮ್ಮ ಕೇಡಿಯಂ ಫ್ಲೈವುಡ್ ಮತ್ತು ಎಕ್ಸ್‌ಪರ್ಟೈಸ್ ಇಂಡಸ್ಟ್ರೀಸ್‌ನಿಂದ ಪ್ರಾಯೋಜಕತ್ವ ನೀಡುತ್ತಿದ್ದಾರೆ. ಇವರ ಈ ಉತ್ಸಾಹಕ್ಕೆ ಬೆನ್ನು ತಟ್ಟಿರುವ ಯಎಇ ದುಬೈನ ಮೊಯ್ದೀನ್ ವುಡ್ಸ್ ತುಂಬೆ ಇದರ ಮಾಲಕ ಅಶ್ರಫ್ ಅವರು 500 ಗಿಡಗಳ ಪ್ರಾಯೋಜಕತ್ವ ವಹಿಸಲು ಮುಂದಾಗಿದ್ದಾರೆ.
‘‘ಇಲ್ಲಿ ಗಿಡಗಳನ್ನು ನೆಡುವುದು ಮಾತ್ರ ನಮ್ಮ ಉದ್ದೇಶವಲ್ಲ. ಸಿಮೆಂಟ್ ರಿಂಗ್‌ಗಳನ್ನು ನಿರ್ಮಿಸಿ ರಸ್ತೆಯ ಇಕ್ಕೆಲಗಳಲ್ಲಿ ಅದನ್ನಿಸಿರಿ ಅದರೊಳಗೆ ಗಿಡಗಳನ್ನು ನೆಟ್ಟು ಅದಕ್ಕೆ ಮರದ ಟ್ರೀ ಗಾರ್ಡ್‌ಗಳನ್ನು ಒದಗಿಸಲಾಗುವುದು. ಬಳಿಕ ಬಯೋ ಗ್ರೀನ್ ನರ್ಸರಿಯ ಮೂಲಕ ಈ ಗಿಡಗಳ ನಿರ್ವಹಣೆ ಮಾಡಲಾಗುವುದು. ಗಿಡವನ್ನು ನಿಯಮಿತವಾಗಿ ಕಟ್ಟಿಂಗ್, ಟ್ರಿಮ್ಮಿಂಗ್ ಮಾಡುವ ಕೆಲಸ ಜತೆಗೆ ಅದಕ್ಕೆ ಎರಡು ವರ್ಷಗಳ ಕಾಲ ನೀರು, ಅಗತ್ಯ ಗೊಬ್ಬರ ಹಾಕಿ ಪೋಷಿಸುವ ಕಾರ್ಯ ನಡೆಯಲಿದೆ.
ಒಂದು ಗಿಡಕ್ಕೆ ತಲಾ 1,100 ರೂ.ಗಳ ವೆಚ್ಚ ತಗಲಲಿದೆ. ಇದಕ್ಕಾಗಿ ನಾವು ಈಗಾಗಲೇ ವಾಟ್ಸ್ಆ್ಯಪ್ ಗ್ರೂಪೊಂದನ್ನು ರಚಿಸಿಕೊಂಡಿದ್ದೇವೆ. ಇದರಲ್ಲಿ ನಗರದ ಉದ್ಯಮಿಗಳು, ವೈದ್ಯರು, ಪರಿಸರ ಪ್ರೇಮಿಗಳು ಸೇರಿದಂತೆ ಸುಮಾರು 300ಕ್ಕೂ ಅಧಿಕ ಮಂದಿಯನ್ನು ಸೇರ್ಪಡೆಗೊಳಿಸಲಾಗಿದ್ದು, ಅವರೆಲ್ಲರೂ ಈ ಕಾರ್ಯದಲ್ಲಿ ಭಾಗಿಗಳಾಗಲು ಕೈಜೋಡಿಸಿದ್ದಾರೆ.
ಪ್ರಾಯೋಜಕತ್ವ ನೀಡುವವರ ಹೆಸರನ್ನು ಆಯಾ ಮರದ ಸುತ್ತ ಬರೆಸಲಾಗುವುದು. ಮಾತ್ರವಲ್ಲದೆ, ಈ ಗಿಡಕ್ಕೆ ನಿರ್ಮಿಸಲಾಗುವ ಟ್ರೀ ಗಾರ್ಡ್‌ನಲ್ಲಿ ವಾಟ್ಸ್ಆ್ಯಪ್ ನಂಬರನ್ನೂ ಹಾಕಲಾಗುತ್ತದೆ. ಈ ಗಿಡಗಳ ಬಳಿ ಹಾದು ಹೋಗುವ ಸಾರ್ವಜನಿಕರು, ಅಥವಾ ಇದರ ಪ್ರಾಯೋಜಕತ್ವ ವಹಿಸಿದವರು, ಗಿಡಗಳ ನಿರ್ವಹಣೆ ಸರಿ ಆಗದಿದ್ದಲ್ಲಿ ಈ ವಾಟ್ಸ್ಆ್ಯಪ್ ನಂಬರಿಗೆ ಸಂದೇಶ ಕಳುಹಿಸುವ ಮೂಲಕ ನಿರ್ವಹಣೆ ಮಾಡುವವರಿಗೆ ಸೂಚನೆ ನೀಡಬಹುದು. ಈ ಮೂಲಕ ತಮ್ಮ ಪ್ರಾಯೋಜಕತ್ವದ ಗಿಡ ಅಥವಾ ನಮ್ಮ ಮಂಗಳೂರಿನ ಗಿಡವೆಂಬ ನೆಲೆಯಲ್ಲಿ ಈ ಗಿಡಗಳ ಪೋಷಣೆಯನ್ನು ಖುದ್ದು ಮಂಗಳೂರಿಗರೇ ಮಾಡಲು ಅವಕಾಶವನ್ನೂ ಒದಗಿಸಲಾಗುತ್ತದೆ. ಈ ನಮ್ಮ ಕಾರ್ಯಕ್ಕೆ ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ತೀವ್ರ ಆಸಕ್ತ ಹಾಗೂ ಸಹಕಾರ ಹಾಗೂ ಮಾರ್ಗದರ್ಶನವನ್ನು ಒದಗಿಸಿದ್ದಾರೆ’ ಎಂದು ಶವಾಝ್ ವಿವರ ನೀಡುತ್ತಾರೆ.
‘‘ಪ್ರಥಮ ಹಂತದ ಯೋಜನೆ ಸಾಕಾರಗೊಳಿಸಲು ಈಗಾಗಲೇ ನಮಗೆ 1300 ಕ್ಕೂ ಅಧಿಕ ಗಿಡಗಳಿಗೆ ಪ್ರಾಯೋಜಕರು ದೊರಕಿದ್ದಾರೆ. ಇದಕ್ಕಾಗಿ ಸುಮಾರು 1500ರಷ್ಟು ಟ್ರೀಗಾರ್ಡ್‌ಗಳ ನಿರ್ಮಾಣವನ್ನೂ ಮಾಡಲಾಗಿದೆ. ಕಳೆದ 15 ದಿನಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಪ್ರತಿಕ್ರಿಯೆ ಲಭ್ಯವಾಗಿದೆ.
ಬೆಂಗಳೂರಿನ ನರ್ಸರಿಯಿಂದ ಏಕರೂಪದ ಗಿಡಗಳು ರವಾನೆಯಾಗಲಿವೆ. ಗಿಡಗಳು ಏಕಕಾಲದಲ್ಲಿ ದೊಡ್ಡದಾಗಿ ಅವುಗಳು ಹೂಬಿಡುವ ವೇಳೆಗೆ ಈ ರಸ್ತೆಯ ಚಿತ್ರಣವೇ ಬದಲಾಗಲಿದೆ. ಈ ರಸ್ತೆಯಲ್ಲಿ ಗಿಡಗಳನ್ನು ನೆಡಲು ಈಗಾಗಲೇ ಸಿಮೆಂಟ್ ರಿಂಗ್‌ಗಳನ್ನು ರಚಿಸಿ ಸ್ಥಿತಗೊಳಿಸಲಾಗಿದೆ. ಇದರ ಜತೆಯಲ್ಲೇ ರಸ್ತೆಯ ಡಿವೈಡರ್‌ಗಳಲ್ಲಿ ಲ್ಯಾಂಡ್ ಸ್ಕೇಪಿಂಗ್ ಮೂಲಕ ಸ್ವಚ್ಛ ಹಾಗೂ ಸುಂದರಗೊಳಿಸಲಾಗುವುದು. ಜತೆಗೆ ಡಿವೈಡರಗಳಿಗೆ ನೀರಿನ ಸಂಪರ್ಕವನ್ನು ಪಡೆದುಕೊಳ್ಳಲಾಗುವುದು. ಪ್ರಥಮ ಹಂತದಲ್ಲಿ ಈ ರಸ್ತೆಯನ್ನು ಸುಂದರ ಗೊಳಿಸಿದ ಬಳಿಕ ನಮ್ಮ ದ್ವಿತೀಯ ಹಂತದ ಯೋಜನೆ ಪದುವಾದಿಂದ ಕೊಟ್ಟಾರ ಚೌಕಿವರೆಗಿನ ಚತುಷ್ಪಥ ರಸ್ತೆಯನ್ನು ಇದೇ ರೀತಿ ಸುಂದರಗೊಳಿಸುವುದಾಗಿದೆ. ಪ್ರಥಮ ಹಂತದ ಯೋಜನೆಯಡಿ ಕೆಂಪು ಬಣ್ಣದ ಹೂವಿನ ಗಿಡಗಳನ್ನು ನೆಡುವುದಾದರೆ, ದ್ವಿತೀಯ ಹಂತದ ಯೋಜನೆಯ ರಸ್ತೆಯಲ್ಲಿ ಹಳದಿ ಬಣ್ಣದ ಗಿಡಗಳನ್ನು ನೆಡಲಾಗುವುದು. ಮುಂದೆ ತೃತೀಯ ಹಂತದಲ್ಲಿ ನಮ್ಮ ನಗರದ ಸುತ್ತಮುತ್ತ ಲಭ್ಯವಿರುವ ಸಣ್ಣ ಪುಟ್ಟ ಸರಕಾರಿ ಜಾಗಗಳಲ್ಲಿ ಅಡಿಕೆ ಗಿಡಗಳಂತಹ ಮರಗಳನ್ನು ನೆಟ್ಟು ಪೋಲಾಗುವ ಭೂಮಿಯಲ್ಲಿ ಹಸಿರು ಪೋಷಣೆ ಮಾಡುವುದಾಗಿದೆ. ಇದಕ್ಕೆಲ್ಲಾ ಮಂಗಳೂರಿಗರ, ಸಾರ್ವಜನಿಕರ ಸಹಕಾರವನ್ನು ನಾವು ಬಯಸುತ್ತಿದ್ದೇವೆ’’ ಎಂದು ಶವಾಝ್ ತಿಳಿಸಿದ್ದಾರೆ.
‘‘ಮಂಗಳೂರಿಗರೇ ಆದ ಶವಾಝ್‌ನಂತಹ ಯುವಕರಿಂದ ಇಂತಹ ಉತ್ತಮ ಕೆಲಸ ನಡೆಯುತ್ತಿರುವುದು ಸಂತಸದ ವಿಚಾರ. ಅವರ ಕಲ್ಪನೆಯ ಯೋಜನೆ ಕೇವಲ ರಸ್ತೆ ಬದಿ ಗಿಡ ಮರಗಳನ್ನು ನೆಟ್ಟು ಸುಂದರ ಗೊಳಿಸುವುದು ಮಾತ್ರವಲ್ಲ, ಆ ಮರಗಳು ಮುಂದೆ ನಗರದ ರಸ್ತೆಗಳಲ್ಲಿ ಓಡಾಡುವ ಜನರಿಗೆ ನೆರಳಿನ ತಾಣವಾಗಿಸುವುದು, ತಂಪು ವಾತಾವರಣ ನೀಡುವುದರ ಜತೆಗೆ ಪಕ್ಷಿಗಳು ಹಾಗೂ ಕೀಟಗಳಿಗೆ ಆಶ್ರಯ ಹಾಗೂ ಆಹಾರವನ್ನೂ ಒದಗಿಸುವುದಾಗಿದೆ. ಸ್ಥಳೀಯ ಜನಪ್ರತಿನಿಧಿಯಾಗಿ ಮಾತ್ರವಲ್ಲದೆ, ಓರ್ವ ನಾಗರಿಕನಾಗಿಯೂ ನಾನು ಈ ಯುವಕರ ಕಾರ್ಯಕ್ಕೆ ಬೆಂಬಲ ನೀಡಲು ಸದಾ ಸಿದ್ಧನಿದ್ದೇನೆ’’ ಎನ್ನುತ್ತಾರೆ ಮಾಜಿ ಮೇಯರ್, ಕಾರ್ಪೊರೇಟರ್ ಕೂಡಾ ಆಗಿರುವ ಮಹಾಬಲ ಮಾರ್ಲ.
ನಮ್ಮ ನಗರವನ್ನು ನಮ್ಮದೆಂಬ ಜವಾಬ್ಧಾರಿಯೊಂದಿಗೆ ಸ್ವಚ್ಛ, ಸುಂದರವಾಗಿಸುವ ನಿಟ್ಟಿನಲ್ಲಿ ಈ ಯೋಜನೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಅದಕ್ಕೆ ಮಂಗಳೂರು ನಾಗರಿಕರೆಲ್ಲರೂ ಕೈಜೋಡಿಸುವ ಅಗತ್ಯವಿದೆ ಎನ್ನುತ್ತಾರೆ ಎಂಎಫ್‌ಸಿಯ ಸದಸ್ಯರಲ್ಲಿ ಓರ್ವರಾಗಿರುವ ಶೇಖ್ ಮೊಯ್ದೀನ್.
ಒಟ್ಟಾರೆ ಈ ಕಾರ್ಯವು ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ತೋಟಾಗರಿಕಾ ಇಲಾಖೆ, ಮೂಡಾದ ನೆರವಿನೊಂದಿಗೆ ಸಾರ್ವಜನಿಕರ ಪಾಲುದಾರಿಕೆ ಯಲ್ಲಿ ನಡೆಯಲಿದೆ. ಈ ಕಾರ್ಯಕ್ಕಾಗಿ ರಚಿಸಲಾಗಿರುವ ಮಂಗಳೂರು ಫ್ಲವರ್ ಸಿಟಿ ಸೊಸೈಟಿಗೆ ಮಾಜಿ ಮೇಯರ್ ಮಹಾಬಲ ಮಾರ್ಲರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಶವಾಝ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೋಶಾಧಿಕಾರಿಯಾಗಿ ಗೋವಿಂದ್ ಪ್ರಸಾದ್, ಟ್ರಸ್ಟ್‌ನ ಪ್ರಮುಖ ಸದಸ್ಯರಾಗಿ ಕ್ಲಿಫರ್ಡ್ ಲೋಬೋ, ರಾಧಾ ಕೃಷ್ಣ ಶೆಟ್ಟಿ, ಡಾ. ಪ್ರಶಾಂತ್ ಮಾರ್ಲ, ಜೀತ್ ಮಿಲನ್ ರೋಚ್, ಮುಹಮ್ಮದ್ ಮುಸ್ತಫಾ, ನವೀನ್ ಕಾರ್ಡೋಝಾ, ಸುಮಂತ್, ಮನ್ಸೂರ್ ಆಝಾದ್, ಗಣೇಶ್ ನಾಯಕ್, ಅಬ್ದುಲ್ ದಾವೂದ್, ಅಯೇಷಾ ಸುಝಾನಾ, ಮೋಹನ್ ಕುಮಾರ್, ವರದರಾಜ್ ಶೆಣೈ, ಶೇಕ್, ನಿತ್ಯಾನಂದ ಮೊದಲಾದವರು ಕಾರ್ಯ ನಿರ್ವಹಿಸಲಿದ್ದಾರೆ. ‘ನಮ್ಮ ಮಂಗಳೂರು ಸುಂದರಗೊಳಿಸುವಲ್ಲಿ’ ನೀವೂ ಕೈಜೋಡಿಸಬಹುದು.
Join the flower City Facebook page :
https://www.facebook.com/Flower-tree-city-Mangaluru-841579286007228/