ತಿರುಚಲ್ಪಟ್ಟ ಸ್ವಾತಂತ್ರ್ಯ
ವಿಮರ್ಶೆ ಮಾಡುವ ಸ್ವಾತಂತ್ರ್ಯವನ್ನು ಅಧಿಕಾರದಲ್ಲಿರುವವರು ನಮಗೆ ನೀಡಿರುವ ಕೃಪಾಭಿಕ್ಷೆ ಏನಲ್ಲ. ಅದನ್ನು ಭಾರತದ ಸಂವಿಧಾನವೇ 19 (1)(ಎ) ಕಲಮಿನ ಮೂಲಕ ನಮಗೆ ನೀಡಿದೆ. ಆದರೆ ಈಗ ಹಾಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವವರ ಹೇಳಿಕೆಗಳು ಮತ್ತು ಕ್ರಮಗಳು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಅಧಿಕಾರದಲ್ಲಿರುವ ಸರಕಾರದ ಮತ್ತು ಅದರ ಸಿದ್ಧಾಂತದ ಸಮರ್ಥಕರಿಗೆ ಮಾತ್ರ ಇವೆಯೆಂಬಂತೆ ಮತ್ತು ಅದನ್ನು ವಿರೋಧಿಸುವವರ ರಕ್ಷಣೆಗೆ ಸರಕಾರವು ಬಾಧ್ಯಸ್ಥನಲ್ಲವೆಂಬಂತಿದೆ.
ಇದರಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ನೀವು ಹೇಳಿದರೆ, ಅದಕ್ಕೆ ಪುರಾವೆ ತೋರಿಸಿ ಎಂದು ಅವರು ಕೇಳುತ್ತಾರೆ; ಬೆರಳೆಣಿಕೆಯಷ್ಟು ಬರಹಗಾರರ ಅಥವಾ ಪ್ರಖ್ಯಾತ ಪತ್ರಕರ್ತರ ಕೊಲೆಗಳನ್ನು ಅಥವಾ ಸರಕಾರದ ವಿರುದ್ಧ ಮಾತನಾಡುವವರ ವಿರುದ್ಧ ದಾಖಲಾಗುತ್ತಿರುವ ದೇಶದ್ರೋಹಿ ಅಥವಾ ಮಾನನಷ್ಟ ಮೊಕದ್ದಮೆಗಳಷ್ಟರಿಂದಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗುತ್ತಿದೆಯೆಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ ಎಂದು ಅವರು ಹೇಳುತ್ತಾರೆ.
ಅವರ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರಂತೂ ಅಭಿವ್ಯಕ್ತಿ ಸ್ವಾತಂತ್ರ್ಯದ ಎಂತಹ ದೊಡ್ಡ ಬೆಂಬಲಿಗರೆಂದರೆ ತನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸುವ ಬೆಂಬಲಿಗರು ಎಂತಹ ಕೆಟ್ಟ ವಿಚಾರದವರೇ ಆಗಿದ್ದರೂ ಅಂಥವರನ್ನು ಮೋದಿಯವರು ಬ್ಲಾಕ್ ಮಾಡುವುದಿಲ್ಲ. ಉದಾಹರಣೆಗೆ ಬೆಂಗಳೂರಿನಲ್ಲಿ ಇದೇ ಸೆಪ್ಟಂಬರ್ 5 ರಂದು ಪ್ರಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಯಿತು. ಅವರ ಹತ್ಯೆಯಾದ ಕೆಲವೇ ಕ್ಷಣಗಳಲ್ಲೇ ಮೋದಿಯವರ ಇಂತಹ ಕೆಲವು ಅನುಚರರು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಅತ್ಯಂತ ಹೀನಾಯ ಮತ್ತು ಕೊಳಕು ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು.
ಆಗಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಮ ಸಮರ್ಥಕರಾದ ಮೋದಿಯವರು ಅವರನ್ನೇನು ಬ್ಲಾಕ್ ಮಾಡಲಿಲ್ಲ. ಅಷ್ಟು ಮಾತ್ರವಲ್ಲ ಈ ಹತ್ಯೆಯ ಬಗ್ಗೆ ಬಿಜೆಪಿಗಿಂತ ಭಿನ್ನ ಅಭಿಪ್ರಾಯವುಳ್ಳ ಪ್ರಖ್ಯಾತ ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾ ಅವರಿಗೆ ಕರ್ನಾಟಕದ ಬಿಜೆಪಿಯ ಯುವ ಘಟಕ ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳಿಸಿದ್ದೂ ಸಹ ಪ್ರಾಯಶಃ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯೇನೂ ಆಗಿರಲಿಕ್ಕಿಲ್ಲ. ಸ್ಕ್ರೋಲ್.ಇನ್ ಎಂಬ ಜಾಲತಾಣದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ರಾಮಚಂದ್ರ ಗುಹಾ ಅವರು ‘‘ಗೌರಿಯ ಹಂತಕರು ದಾಭೋಲ್ಕರ್, ಪನ್ಸಾರೆ ಮತ್ತು ಕಲುಬುರ್ಗಿಯವರ ಹಂತಕರ ಗುಂಪಿನವರಾಗಿರುವ ಸಾಧ್ಯತೆಯೇ ಹೆಚ್ಚು’’ ಎಂದು ಹೇಳಿದ್ದರು.
ಬಿಜೆಪಿ ನೀಡಿರುವ ಮಾನನಷ್ಟ ನೋಟಿಸ್‌ನ ಪ್ರಕಾರ ಈ ಹೇಳಿಕೆಯು ಆರೋಪಿಸುವ ಮತ್ತು ಮಾನನಷ್ಟ ಮಾಡುವ ಧಾಟಿಯಲ್ಲಿದ್ದು ಬಿಜೆಪಿಯ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ತರುವಂತಿದೆಯಂತೆ. ಈ ವಿದ್ಯಮಾನಗಳಿಂದ ಬಿಜೆಪಿಯದ್ದು ಅನುಕೂಲಸಿಂಧು ವಾದವೆಂಬುದು ಸ್ಪಷ್ಟವಾಗುತ್ತದೆ. ಸಂದರ್ಭವು ಅದರ ಸಿದ್ಧಾಂತಕ್ಕೆ ಪೂರಕವಾಗಿದ್ದಾಗ ಅದು ಅಭಿವ್ಯಕ್ತಿಯ ಸ್ವಾತಂತ್ರ್ಯದ ಹಕ್ಕನ್ನು ಬಳಸಿಕೊಂಡು ದ್ವೇಷವನ್ನು ಉಗುಳುವ ಭಾಷಣಗಳಿಗೂ ಅನುಮತಿ ನೀಡುತ್ತದೆ. ಆದರೆ ಗುಹಾ ಮತ್ತು ಅವರಂಥವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಗಡಿಗಳನ್ನು ಉಲ್ಲಂಘಿಸುತ್ತಿದ್ದಾರೆಂದು ಆರೋಪಿಸಲಾಗುತ್ತದೆ. ಅಂಥವರನ್ನು ಬೆದರಿಸಿ ಸುಮ್ಮನಾಗಿಸಲು ಅವರು ಅನುಸರಿಸುವ ಹಲವಾರು ದಾರಿಗಳಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದು ಸಹ ಒಂದು ಮಾರ್ಗವಷ್ಟೆ.
ಟೀಕಾಕಾರರ ಧ್ವನಿಯನ್ನು ಸುಮ್ಮನಾಗಿಸಲು ಅನುಸರಿಸಲಾಗುವ ಮತ್ತೊಂದು ಜನಪ್ರಿಯ ಮಾರ್ಗವೆಂದರೆ ಅವರ ಮೇಲೆ ಭಾರತೀಯ ದಂಡ ಸಂಹಿತೆಯ 124-ಎ ಸೆಕ್ಷನ್ ಅಡಿ ದೇಶದ್ರೋಹದ ಮೊಕದ್ದಮೆಯನ್ನು ದಾಖಲಿಸುವುದು. ‘ದ ಹೂಟ್’ ಎಂಬ ಜಾಲತಾಣದ ಪತ್ರಿಕೆಯ ಪ್ರಕಾರ 2014-16ರ ನಡುವೆ ಈ ಕಲಮಿನಡಿ ದಾಖಲಾದ ಪ್ರಕರಣಗಳ ಸಂಖ್ಯೆ ಸೊನ್ನೆಯಿಂದ 11ಕ್ಕೇರಿದೆ. ಮೇಲುನೋಟಕ್ಕೆ ಇದು ಸಣ್ಣ ಸಂಖ್ಯೆಯೆಂದು ಕಾಣಬಹುದು. ಆದರೆ ಇಂತಹ ಪ್ರತಿಯೊಂದು ಪ್ರಕರಣವೂ ಉಳಿದ ಸಂಭಾವ್ಯ ಭಿನ್ನಮತೀಯರಿಗೆ ಮತ್ತು ಟೀಕಾಕಾರರಿಗೆ ನೀಡುವ ಎಚ್ಚರಿಕೆಯಾಗಿರುತ್ತದೆ. ಏಕೆಂದರೆ ಇಂತಹ ಪ್ರಕರಣಗಳಲ್ಲಿ ಅಂತಿಮವಾಗಿ ಶಿಕ್ಷೆಯಾಗುತ್ತದೆಯೇ ಎಂಬುದಕ್ಕಿಂತ ದೇಶದ್ರೋಹದ ಪ್ರಕರಣವನ್ನು ಹೊತ್ತುಕೊಂಡು ಹೊಡೆದಾಡುವ ಪ್ರಕ್ರಿಯೆಯೇ ಶಿಕ್ಷೆಗಿಂತ ಹೆಚ್ಚಿನ ಶಿಕ್ಷೆಯಾಗಿರುತ್ತದೆ.
ಒಬ್ಬರು ಭಿನ್ನಮತೀಯ ಅಥವಾ ವಿರೋಧಿಯ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸುವುದು ಮುಂದೆ ಅಂಥ ದಾರಿಯನ್ನು ತುಳಿಯಲು ಬಯಸುವ ಇತರರು ಆ ದಾರಿಗೆ ಹೋಗುವ ಮುನ್ನ ಹಲವು ಬಾರಿ ಯೋಚಿಸುವಂತೆ ಮಾಡುತ್ತದೆ. ಇದೊಂದು ಬೆದರಿಕೆಯೊಡ್ಡುವ ತಂತ್ರವಾಗಿದ್ದು ಯಾರ ಮೇಲೆ ಅದನ್ನು ಪ್ರಯೋಗಿಸಿದರೆ ಗರಿಷ್ಠ ಪರಿಣಾಮ ಉಂಟಾಗಲು ಸಾಧ್ಯ ಎಂಬುದನ್ನು ಆಧರಿಸಿ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಅಂಥವರ ಮೇಲೆ ಅತ್ಯಂತ ವ್ಯೆಹಾತ್ಮಕವಾಗಿ ಈ ಬೆದರಿಕೆ ತಂತ್ರವನ್ನು ಪ್ರಯೋಗಿಸಲಾಗುತ್ತಿದೆ. ಈ ತಂತ್ರವು ಒಂದಷ್ಟು ಮಟ್ಟಿಗೆ ಕೆಲಸ ಮಾಡಿರಬಹುದು. ಆದರೂ ತಮ್ಮ ಮೇಲೆ ದೇಶದ್ರೋಹ ಮೊಕದ್ದಮೆ ಹೇರಲಾಗಿದ್ದರೂ ಅಳುಕದೆ ಅಂಜದೆ ಮುನ್ನಡೆದಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ವಿದ್ಯಾರ್ಥಿಗಳಂತೆ ವಿಚಾರಕ್ಕೆ ಬದ್ಧರಾದ ಹಲವರು ಬಹಿರಂಗ ಟೀಕೆಯನ್ನು ಮತ್ತು ವಿರೋಧವನ್ನೂ ಮುಂದುವರಿಸಿದ್ದಾರೆ.
ಅದೇನೇ ಇದ್ದರೂ ಭಿನ್ನಮತದ ಅಥವಾ ಅಭಿವಕ್ತಿಯ ಸ್ವಾತಂತ್ರ್ಯವನ್ನೇ ಗಮನದಲ್ಲಿಟ್ಟುಕೊಂಡು ಯಾವುದೇ ದೊಡ್ಡ ಜನಹೋರಾಟಗಳು ಈವರೆಗೆ ನಡೆದಿಲ್ಲ. ಇಂತಹ ವಿಷಯಗಳಲ್ಲಿ ಜನಸಾಮಾನ್ಯರು ಬೀದಿಗೆ ಬಂದು ಹೋರಾಡಬೇಕೆಂದು ನಿರೀಕ್ಷಿ ಸಲು ಸಾಧ್ಯವಿಲ್ಲ. ಏಕೆಂದರೆ ಇಂಥಾ ಹಕ್ಕುಗಳ ಉಲ್ಲಂಘನೆಯು ನೇರವಾಗಿ ಆಯಾ ವ್ಯಕ್ತಿಗಳ ಅನುಭವಕ್ಕೆ ಬರುವವರೆಗೆ ಆ ಹಕ್ಕುಗಳು ಅಬಾಧಿತವಾಗಿವೆ ಎಂದೇ ಭಾವಿಸಲಾಗಿರುತ್ತದೆ. ಹೀಗಾಗಿ ಅಭಿವ್ಯಕ್ತಿಯ ಸ್ವಾತಂತ್ರ್ಯದ ಹರಣದ ಬಗ್ಗೆ ವಿದ್ಯಾರ್ಥಿಗಳು, ಲೇಖಕರು, ಪತ್ರಕರ್ತರು ಮತ್ತು ಬುದ್ಧಿಜೀವಿಗಳಲ್ಲಿ ವಿಶೇಷವಾದ ಆತಂಕ ಮತ್ತು ಆಕ್ರೋಶಗಳು ಮನೆಮಾಡಿರುತ್ತವೆ. ಆದರೂ ಕಳೆದ ಜೂನ್‌ನಲ್ಲಿ ದಿಲ್ಲಿಯ ಬಳಿ ಜುನೈದ್ ಎಂಬ 16 ವರ್ಷದ ಬಾಲಕನೊಬ್ಬ ಗುಂಪುಹತ್ಯೆಗೆ ಬಲಿಯಾದ ನಂತರದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ದ್ವೇಷದ ವಾತಾವರಣದ ವಿರುದ್ಧ ದೇಶಾದ್ಯಂತ ಸ್ಫೋಟಗೊಂಡ ಪ್ರತಿಭಟನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಾಳಜಿ ಇರುವವರ ಸಂಖ್ಯೆ ಹೆಚ್ಚಾಗಿಯೇ ಇದೆಯೆಂಬುದನ್ನು ತೋರಿಸಿದೆ. ಅದೇರೀತಿ ಕಳೆದ ವಾರ ಗೌರಿ ಲಂಕೇಶರ ಹತ್ಯೆಯನ್ನು ಭಿನ್ನಮತದ ಸ್ವಾತಂತ್ರ್ಯದ ವಿರುದ್ಧ ನಡೆದ ನೇರ ದಾಳಿಯೆಂದೇ ಪರಿಗಣಿಸಿ ನೂರಾರು ಪತ್ರಕರ್ತರು ಮಾತ್ರವಲ್ಲದೆ ನಾಗರಿಕ ಸಮಾಜದ ಇತರ ಸಮುದಾಯಗಳು ಸಹ ಜೊತೆಗೂಡಿ ದೊಡ್ಡ ಪ್ರತಿಭಟನೆ ಮಾಡಿದ್ದಾರೆ.
ಒಂದೆಡೆ ಇಂತಹ ಈ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದರೂ, ಕರ್ನಾಟಕದಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿದೆ ಎಂಬುದು ತಿಳಿದಿದ್ದರೂ ಗುಹಾರಂತಹ ಪ್ರಖ್ಯಾತರೊಬ್ಬರ ಮೇಲೆ ಮೊಕದ್ದಮೆ ದಾಖಲಿಸಲು ಬಿಜೆಪಿಯು ತನ್ನ ಕರ್ನಾಟಕದ ಯುವ ಘಟಕಕ್ಕೆ ಏಕೆ ಅನುಮತಿ ನೀಡಿತು? ಅಥವಾ ಎಲ್ಲೋ ಕೆಲವು ನಗರ ಮತ್ತು ಪಟ್ಟಣಗಳಲ್ಲಿ ನಡೆದ ಪ್ರತಿಭಟನೆಗಳಿಂದ ತಮ್ಮ ಪಕ್ಷದ ಜನಪ್ರಿಯತೆಗೆ ಚುನಾವಣೆಯ ಸಮಯದಲ್ಲಿ ಯಾವರೀತಿಯಿಂದಲೂ ಧಕ್ಕೆಯಾಗಲಾರದೆಂದು ಎಣಿಸಿದ್ದಾರೆಯೇ? ಗುಹಾರಂತಹ ಪ್ರಖ್ಯಾತರ ಮೇಲೂ ಹಿಂದುಮುಂದೆ ನೋಡದೆ ಮೊಕದ್ದಮೆ ದಾಖಲಿಸಿರುವುದು ತಮ್ಮ ನಿಷ್ಠ ಬೆಂಬಲಿಗರನ್ನು ಮತ್ತಷ್ಟು ಸದೃಢೀಕರಿಸುತ್ತದೆಂದು ಅವರು ಆಲೋಚಿಸಿರಬಹುದು. ಅಷ್ಟೇ ಅಲ್ಲ. ಪ್ರಾಯಶಃ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಗಿರುವ ಕೋಪ-ತಾಪಗಳಿಗೆ ಬಿಜೆಪಿಯ ಚುನಾವಣಾತ್ಮಕ ಲೆಕ್ಕಾಚಾರಗಳಲ್ಲಿ ಯಾವ ಮಹತ್ವವೂ ಇರಲಾರದು. ಹೀಗಾಗಿ ಪ್ರಧಾನ ಮಂತ್ರಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರನ್ನು ನಿಷೇಧಿಸಬೇಕೆಂಬ ಒತ್ತಡವು ಟೆಲಿವಿಷನ್ ಚರ್ಚೆಗಳಲ್ಲಿ ಮುಖ್ಯವಾದರೂ ಬಿಜೆಪಿ ದೃಷ್ಟಿಯಲ್ಲಿ ಅದಕ್ಕೇನೂ ಮಹತ್ವವಿದ್ದಂತಿಲ್ಲ.
ಹಾಗೆ ನೋಡಿದರೆ ತಮ್ಮ ಟೀಕಾಕಾರರ ಮೇಲೆ ಸತತವಾಗಿ ಆಕ್ರಮಣ ನಡೆಸುತ್ತಾ ಅವರನ್ನು ಅಸಂಗತ ಗೊಳಿಸಿಬಿಡುವುದೂ ಸಹ ಬಿಜೆಪಿಯ ಸುಯೋಜಿತ ಕಾರ್ಯತಂತ್ರದ ಭಾಗವೇ ಆಗಿರಬಹುದು. ತುಂಬಾ ಹಿಂದೆ ಸ್ವಾತಂತ್ರ್ಯದ ಅರ್ಥವೇನು ಎಂಬ ಬಗ್ಗೆ ರೋಸಾ ಲಕ್ಸಂಬರ್ಗ್ ಅವರು ಆಡಿದ್ದ ಮಾತು ಸಮಕಾಲೀನ ಭಾರತಕ್ಕೆ ಇನ್ನೂ ಹೆಚ್ಚು ಅನ್ವಯವಾಗುತ್ತದೆ. ರೋಸಾ ಅವರ ಪ್ರಕಾರ: ‘‘ಸ್ವಾತಂತ್ರ್ಯವೆಂದರೆ ಯಾವಾಗಲೂ ಭಿನ್ನವಾಗಿ ಯೋಚಿಸುವವನ ಸ್ವಾತಂತ್ರ್ಯವೆಂದೇ ಅರ್ಥ. ಸ್ವಾತಂತ್ರ್ಯವನ್ನು ಹೀಗೆ ಅರ್ಥಮಾಡಿಕೊಳ್ಳುವುದಕ್ಕೆ ಕಾರಣ ನ್ಯಾಯದ ಬಗೆಗಿನ ಉನ್ಮಾದವಲ್ಲ. ಬದಲಿಗೆ ರಾಜಕೀಯ ಸ್ವಾತಂತ್ರ್ಯವೆಂಬ ಪರಿಕಲ್ಪನೆಯಲ್ಲಿ ಯಾವುದೆಲ್ಲ ಪರಿಶುದ್ಧವಾಗಿ, ಸಮಗ್ರವಾಗಿ ಮತ್ತು ಪರಿಣಾಮಕಾರಿಯಾಗಿ ದೊರೆಯಬಲ್ಲದೋ ಅದೆಲ್ಲವೂ ಈ ಸ್ವಾತಂತ್ರ್ಯದ ಮೇಲೆ ಆಧಾರಪಟ್ಟಿದೆ. ಆದರೆ ಸ್ವಾತಂತ್ರ್ಯವೆಂಬುದು ಒಂದು ವಿಶೇಷ ಸೌಲಭ್ಯವೆಂದಾದ ಕೂಡಲೇ ಅದರ ಪರಿಣಾಮಕತೆಯೆಲ್ಲಾ ನಾಶವಾಗಿ ಬಿಡುತ್ತದೆ.’’
ಇಂದು ಭಾರತದಲ್ಲಿ ಆಗುತ್ತಿರುವುದು ಇದೇ. ಅಭಿವ್ಯಕ್ತಿ ಸ್ವಾತಂತ್ರ್ಯವು ಕೆಲವರಿಗೆ ಮಾತ್ರ ದಕ್ಕುವ ಸೌಲಭ್ಯವಾಗಿಬಿಟ್ಟಿದ್ದು ಅದನ್ನು ಉಳಿದವರಿಗೆ ನಿರಾಕರಿಸಲಾಗುತ್ತಿದೆ. ಮತ್ತು ಯಾರು ಮುಕ್ತ ಅಭಿವ್ಯಕ್ತಿಯನ್ನು ತುಳಿಯುತ್ತಿದ್ದಾರೋ ಅವರೇ ಅತ್ಯಂತ ಲಜ್ಜೆಗೇಡಿಗಳಾಗಿ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರದ ಮಂತ್ರಗಳನ್ನು ಪಠಿಸುತ್ತಿದ್ದಾರೆ.
ಕೃಪೆ: Economic and Political Weekly