​ ಕನಸು ಕಟ್ಟಿದ ಕವಿಗಳು

Update: 2017-10-11 18:56 GMT

ಕವಿಗಳು ಕನಸು ಕಟ್ಟುವುದು ಹೊಸತಲ್ಲ. ಜನಕ ರಾಜನಿಂದ ಮೊದಲ್ಗೊಂಡು ಇಂದಿನ ವರೆಗೆ ಕವಿಗಳು ಒಂದಲ್ಲ ಒಂದು ಕ್ಷಣದಲ್ಲಿ ಕನಸು ಕಟ್ಟುತ್ತಲೇ ಬಂದಿದ್ದಾರೆ. ಕನಸಿನ ಒಳಗೆ ಮತ್ತು ಹೊರಗೆ ಪಡೆದ ಅಪೂರ್ವ ಅನುಭವಗಳನ್ನು ಕಾವ್ಯವಾಗಿಸಿದ್ದಾರೆ. ಹೊಸಗನ್ನಡ ಮತ್ತು ಆಧುನಿಕ ಕನ್ನಡ ಕಾವ್ಯದ ಕೆಲವು ಉದಾಹರಣೆಗಳೊಂದಿಗೆ ಈ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ:

*

ಕುವೆಂಪು ರಷ್ಯಾ ಪ್ರವಾಸಕ್ಕೆ ಹೋದದ್ದೇ ಕನಸಿನಲ್ಲಿ. ಅವರ ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಕವಿತೆ ಆರಂಭವಾಗುವುದೇ ಸೋವಿಯಟ್ ರಷ್ಯಾಕ್ಕೆ ನಾನೊಮ್ಮೆ ಹೋಗಿದ್ದೆ, ಮನಸಿನಲ್ಲಿ; ಬಂದಿರಲು ಗಾಢನಿದ್ದೆ, ಕನಸಿನಲ್ಲಿ!-
 ಎಂಬ ಸಾಲುಗಳಿಂದ. ಈ ಕವಿತೆ ಎರಡನೆ ಮಹಾಯುದ್ಧಕ್ಕೂ ಮೊದಲೇ (22.01.1936) ಬರೆದದ್ದು. ಹಿಟ್ಲರನ ಅಬ್ಬರದ ಕಾಲವದು. ಸೋವಿಯಟ್ ಒಕ್ಕೂಟವು ಮಿತ್ರ ರಾಷ್ಟ್ರಗಳೊಂದಿಗೆ ಜರ್ಮನಿಯನ್ನು ವಿರೋಧಿಸುತ್ತಿದ್ದ ಕಾಲ. ಇನ್ನೂ ಯುದ್ಧ ಆರಂಭವಾಗಿರಲಿಲ್ಲ. ಈ ಸ್ಥಿತಿಯಲ್ಲಿ ಸಮಾಜವಾದದ ಅನುಕೂಲ ಮತ್ತು ಅನನುಕೂಲಗಳನ್ನು ತಿಳಿ ಹಾಸ್ಯ ಮತ್ತು ಸ್ವಲ್ಪ ವ್ಯಂಗ್ಯದ ಧಾಟಿಯಲ್ಲಿ ಕವಿತೆ ವಿವರಿಸುತ್ತದೆ. ಕಾವ್ಯನಾಯಕನು ಕವಿ ಮತ್ತು ಕನಸುಗಾರನೆಂಬುದು ಆರಂಭದಲ್ಲೇ ಸ್ಪಷ್ಟವಾಗಿದೆ. ಕವಿ ಕನಸಿನಲ್ಲೇ ವಿಹರಿಸುತ್ತಾರಾದರೂ ವಾಸ್ತವದ ಘಟನಾವಳಿಗಳಿಗೆ, ನೋಟಗಳಿಗೆ ಪ್ರತಿಕ್ರಿಯಿಸುತ್ತಾರೆ. ವಿಶೇಷವೆಂದರೆ ಕನಸಿನೊಳಗಿರುವ ಕವಿಯೇ ಕನಸೆಂದರಾಗದವರಿಗೆ:

‘ತಳ್ಳು! ಕನಸನಾಚೆಗೆ ದೂಡು!’’
ಆದರೂ ಮುಂದೆ ಸೊಗವಹುದೆಂಬ ಹೆಗ್ಗನಸಿನಡಿಗಳಲಿ
ಕನಸಿನಾ ಹಗೆಗಳೆಲ್ಲರು ಕುರಿಗಳಂತೆ ಬಲಿ!
 
ಎನ್ನುತ್ತಾನೆ. ಮುಂದೆ ಕೋಗಿಲೆಯ ಕೊರಳಿನ ಒರಲಿನ ಮೂಲಕ (ನನ್ನ ಮೊಟ್ಟೆಯ ಮೇಲೆ ನಾನೆ ಕಾವಿಗೆ ಕೂತು
ಮರಿಮಾಡಬೇಕೆಂದು ಸೋವಿಯಟ್ ತಾಕೀತು!
ಮರದ ಮೇಗಡೆ ಗೂಡು ಕಟ್ಟಿದರೆ ಸಾಮ್ಯವಾದಕೆ ಕುಂದು,)
ಸಾಮ್ಯವಾದದ ಪ್ರಚಾರವನ್ನು ಮಾಡುವ ವ್ಯಂಗ್ಯವನ್ನು ಪರಿಣಾಮಕಾರಿಯಾಗಿ ವಿಸ್ತರಿಸುತ್ತಾರೆ. ಕವಿತೆಯ ಕೊನೆಗೆ ಕವಿ ಕನಸಿನಿಂದ ಹೊರಬಂದನೆಂಬುದಕ್ಕೆ ಸಮರ್ಥನೆಯಿಲ್ಲ. ಕುವೆಂಪು ಕನಸನ್ನು ಗಾಂಭೀರ್ಯದ ಪ್ರತಿಮೆಯಾಗಿ ಮೂಡಿಸಿದ್ದು ‘ಕಲ್ಕಿ’ ಕವಿತೆಯಲ್ಲಿ. ಇಲ್ಲಿ ಬದುಕು, ಜಗತ್ತು ಎರಡೂ ತೀರ ವಾಸ್ತವದ್ದು. ಕನಸು ಭಯಾನಕ ನಿಜವನ್ನು ತೆರೆದಿಡುತ್ತದೆ. ಕವಿತೆ ಆರಂಭವಾಗುವುದೇ-
ನಿದ್ದೆಯ ಲೋಕದಿ ಕನಸಿನ ಬೀದಿ:
ಎಂಬ ಸಾಲಿನಿಂದ. ಮುಂದೆ ಕವಿತೆಯಲ್ಲಿ
ಆ ಕನಸಿನ ಹೆಗ್ಗಾಡಿನಲಿ
ಅಲ್ಲಿದ್ದುದು ಬೆಳಕೆಂಬುವುದಲ್ಲ
ಕತ್ತಲು ಅಲ್ಲ!
ಬೆಳಕೋ ಕತ್ತಲೋ ಶಿವನೇ ಬಲ್ಲ!

ಎಂಬ ಸಂಕ್ರಮಣ ಸ್ಥಿತಿಯ ವರ್ಣನೆಯಿದೆ. ಇಡೀ ಕವಿತೆಯು ವರ್ಗತಾರತಮ್ಯದ ವಿಷಣ್ಣತೆಯನ್ನು ಹೇಳುತ್ತದೆ. ಬಡವರ ಗಂಟಲು ಬೇಗೆಯ ದಾಹ! ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇವೆರಡನ್ನೂ ಕವಿ ಅನುಭವಿಸುತ್ತಾರೆ. ಇಂತಹ ಭಯಾನಕತೆಯ ನಡುವೆ ತಾನೇ ಕೆಟ್ಟು ಹೋದಂತಾದ ಆರ್ತಸ್ಥಿತಿಯಿಂದ ವಿಹ್ವಲಗೊಳ್ಳುವ ಕವಿಹೃದಯ ಶ್ರೀಸಾಮಾನ್ಯನ ಹೊಟ್ಟೆಯ ಬೆಂಕಿಯೇ ಕಲ್ಕಿಯ ಸ್ಥಿತಿಯೆಂಬುದನ್ನು ಮತ್ತು ಈ ಕಲಂಕಿತ ವ್ಯತ್ಯಸ್ತ ವ್ಯವಸ್ಥೆಯೇ ಬಡವನನ್ನು ಭಗವಂತನ ಕಲ್ಪಿತ ಕಲ್ಕಿಯ ಅವತಾರವಾಗಿ ಭೂಮಿಯಲ್ಲಿ ಪ್ರತ್ಯಕ್ಷವಾಗಿಸುತ್ತದೆಯೆಂದು ಹೇಳುತ್ತಾರೆ. ಕೊನೆಯ ಸಾಲುಗಳಲ್ಲಿ ಕವಿ
ಕಂಪಿಸಿ ಬಿದ್ದೆ ಕಲ್ಕಿ! ಕಲ್ಕಿ! ಎನ್ನುತ ಚೀರಿ
ಕನಸೊಡೆದೆದ್ದೆ!
ಇನ್ನೆಲ್ಲಿಯ ನಿದ್ದೆ?
ಎನ್ನುತ್ತಾರೆ.
ಕುವೆಂಪು ಕೂಸಿನ ಕನಸು ಎಂಬೊಂದು ಕವಿತೆಯನ್ನೂ ಬರೆದಿದ್ದಾರೆ. ಅದು ಮುಗ್ಧತೆಯ ವಿಹಾರ. ಬಾಲಕೃಷ್ಣನ ಬಾಯಲ್ಲಿ ಬ್ರಹ್ಮಾಂಡ ಕಂಡಂತೆ ಕವಿ ಇಲ್ಲಿ ಶಿಶುವಿನ ಮೂಲಕ ವಿಶ್ವಾತ್ಮಕತೆಯನ್ನು ತೋರುತ್ತಾರೆ. ಹೊರಗೆ ನಿಂತು- ಹಸುಗೂಸಿನ ಕನಸದು ಬಲು ಆಳ
ಅದಕಿಲ್ಲವು ಆದ್ಯಂತ್ಯದ ಕಾಲ!
ಎನ್ನುತ್ತಾರೆ.
ಕುವೆಂಪು ಹೇಳುವ ಸಾಮಾಜಿಕ ಸ್ಥಿತಿಯು ಭಾರತದ ಮಟ್ಟಿಗೆ ನಿತ್ಯ ಯಥಾರ್ಥದ ಕಾಲವಾಗಿದೆ. ಕಲ್ಕಿ ಎಂಬ ಕಲ್ಪನೆಯನ್ನು ಅರು ಒಪ್ಪಿದ್ದಾರೆಂದು ಕವಿತೆ ಓದುವಾಗ ಅನ್ನಿಸುವುದಿಲ್ಲ. ಆದರೆ ಅಂತಹ ಸ್ಥಿತಿಯೊಂದು ಅನಾವರಣವಾಗದ ಹೊರತು ಸಾಮಾಜಿಕ ಗೊಂದಲಗಳು ನಿವಾರಣೆಯಾಗಲಾರವೆಂದು ಅವರು ಖಚಿತವಾಗಿ ಹೇಳಿದ್ದು ಅದೊಂದು ರೀತಿಯಲ್ಲಿ ಪ್ರವಾದಿಯ ಕನಸಿನಂತಿದೆ.
ಕುವೆಂಪು ಬರೆದ ಅನೇಕ ಕವಿತೆಗಳಲ್ಲಿ, ನಾಟಕಗಳಲ್ಲಿ ಕನಸಿನ ಕುರಿತು ವಿವಿಧ ರೂಪಕಗಳು, ಪ್ರತಿಮೆಗಳಿವೆ.

*

ಇನ್ನೊಬ್ಬ ಮಹತ್ವದ ಕವಿ ಬೇಂದ್ರೆಯವರೂ ಕನಸಿನ ಒಳಹೊಕ್ಕು ಬಂದವರೇ. ಅವರ ‘ಕಲ್ಪವೃಕ್ಷ ವೃಂದಾವನಂಗಳಲಿ’ ಎಂಬ ಕವಿತೆ ಕನಸು ಮತ್ತು ವಾಸ್ತವದ ನಡುವೆ ಹರಿದಾಡುವ, ಸರಿದಾಡುವ, ಭೌತಿಕ/ಭೌದ್ಧಿಕ ಮತ್ತು ಆಧ್ಯಾತ್ಮಿಕ ತತ್ವಗಳನ್ನು ಮುಖಾಮುಖಿಯಾಗಿಸುತ್ತದೆ. ಇಲ್ಲಿ ಕವಿ ನಿದ್ರೆಯ ಭಂಗಿಯಲ್ಲಿರುವ, -ಅಲ್ಲ ಎಚ್ಚರವು ಅಲ್ಲ ನಿದ್ದೆಯೂ ಏನೊ ಯೋಗದಿಂದೆ ಎನ್ನುತ್ತಾರೆ. ಒಂದು ರೀತಿಯ ಮಂಪರಿನಲ್ಲಿ ಎಂದು ಲೌಕಿಕದ ಕಲ್ಪನೆಯನ್ನು ನಾವು ಮಾಡಬಹುದು. ಸ್ವಪ್ನ, ಸುಷುಪ್ತಿ, ಜಾಗೃತಿ ಈ ಮೂರು ಸ್ಥಿತ್ಯಂತರಗಳಲ್ಲಿ ಸ್ವಪ್ನದ ಸ್ಥಿತಿಯೇ ಇಲ್ಲಿನ ನಾಯಕನದ್ದು. ಕವಿ ಎಚ್ಚರವು ಅಲ್ಲ, ನಿದ್ದೆಯೂ ಅಲ್ಲ ಎಂದಿದ್ದರೂ ಆತನ ಅನುಭವ ವಿಕಾಸವು ವಾಸ್ತವದ ಪ್ರಪಂಚದ್ದಲ್ಲ. ಇದು ಸ್ಪಷ್ಟವಾಗಬೇಕಾದರೆ ಕವಿತೆಯ ಕೊನೆಯನ್ನು ಗಮನಿಸಬೇಕು:

ನೋಡುತಿರಲು ಒಳಗಣ್ಣಿನಿದಿರು ನೀ
ಹೇಗೊ ರಾಧೆಯಾದೆೇಳುತಿರಲು ಒಳಗಿವಿಯು ಕೊಳಲು ನ
ನ್ನೊಳಗೆ ಮಾಯವಾದೆ
ನಾನು ನೀನೊ ನೀ ನಾನೊ ಏನೊ ಎನು
ತೆನುತಲೆಚ್ಚರಾದೆ
ಎಚ್ಚರವಾಗಬೇಕಾದರೆ ನಿದ್ದೆಯಲ್ಲಿರಬೇಕು ತಾನೆ? ತಾನು ಅರೆನಿದ್ದೆಯಲ್ಲಿದ್ದೆ ಎಂಬುದಕ್ಕೆ ಕವಿ ಇಲ್ಲಿನ ಸ್ಥಿತಿಗತಿಗಳಲ್ಲಿ ನಾಯಕನ ನಿಯಂತ್ರಣವನ್ನು ಕಾಣಿಸುವುದಿಲ್ಲ. ಕಲ್ಪವೃಕ್ಷ ವೃಂದಾವನಗಳಲ್ಲಿ ಎಲ್ಲವೂ ಬೇರೆಯೇ.

ಸುಳಿದೆ ಅಲ್ಲಿಯೂ ನನ್ನ ಸಹಜ ಸಖಿ ನೀನು ಹಿಂದೆ ಮುಂದೆ ಎನ್ನುವಾಗಲೂ ಅದೊಂದು ಚಿತ್ರವೇ ಹೊರತು ಆ ಸಹಜ ಸಖಿಯು ಭಾಗವಹಿಸಿ ಪ್ರತಿಕ್ರಿಯಿಸಿದಳೆಂಬ, ಅಥವಾ ಕವಿಯ ಚಿತ್ರಗಳನ್ನು ಅನುಭವಿಸಿದಳೆಂಬ ವಿವರಗಳಿಲ್ಲ. ಕನಸುಗಾರ ತನ್ನ ಸಹಜಸಖಿಯೊಂದಿಗೆ ಸುತ್ತಾಡಿದ ಅನುಭವವನ್ನು ಪಡೆಯುತ್ತಾನಾದರೂ ಆಕೆ ಇವನಲ್ಲಿ ಒಂದಾಗುವಾಗ ಈತ ಎಚ್ಚರಾಗುತ್ತಾನೆ. ವಾಸ್ತವ ಇಬ್ಬರನ್ನೂ ಪ್ರತ್ಯೇಕವಾಗಿಡುತ್ತದೆ. ಬೇಂದ್ರೆಯವರ ‘ಕನಸಿನೊಳಗೊಂದು ಕಣಸು’ ತುಸು ಉದ್ದೇಶಪೂರ್ವಕವಾಗಿಯೇ ಗಂಭೀರವಾಗಿಸಿದ ಕವಿತೆ. ಕವಿತೆಯ ಅನುಭವವು ಕನಸಿನದ್ದು ಎಂಬುದು ಕವಿತೆಯ ಶೀರ್ಷಿಕೆಯಲ್ಲೇ ಗೊತ್ತಾಗುತ್ತದೆಯಾದರೂ ಕವಿತೆ ತನ್ನ ಆರಂಭದಲ್ಲಿ ಅಂತಹ ರಹಸ್ಯವನ್ನೇನೂ ಸೂಚಿಸುವುದಿಲ್ಲ. ಮನುಷ್ಯನೊಬ್ಬ ಯಾರನ್ನಾರೂ ವಿಚಾರಿಸುವಂತೆ ಒಬ್ಬ ಸ್ತ್ರೀಯನ್ನು ವಿಚಾರಿಸುವಲ್ಲಿ ಕವಿತೆ ಆರಂಭವಾಗುತ್ತದೆ.

ಯಾರು ನಿಂದವರಲ್ಲಿ ತಾಯೆ ಎಂಬೆ. (ನಾನು ಓದಿದ ಪ್ರತಿಯಲ್ಲಿ ಕೊನೆಯ ಪದ ಎಂಬೆ ಎಂದಿದೆ. ಎಂಬೆ ಎಂದಾಗಬೇಕೋ ಎಂದೆ ಎಂದಾಗಬೇಕೋ ಗೊತ್ತಾಗುವುದಿಲ್ಲ. ಎರಡೂ ಸರಿ. ಪ್ರಾಯಃ ಆಗಿರುವುದನ್ನು ವಿವರಿಸುವಾಗ ಎಂದೆ ಎಂಬುದು ಹೆಚ್ಚು ಪ್ರಮಾಣಿತವೆಂದು ಅನ್ನಿಸುತ್ತದೆ.)

ತಾಯಿಯೊಂದಿಗೆ ಮಗನು ನಡೆಸುವ ಈ ಸಂಭಾಷಣೆಯಲ್ಲಿ ಕವಿತೆ ಬೆಳೆಯುತ್ತ ಹೋದಂತೆ ಭಾವ ತೀವ್ರತೆ ಹೆಚ್ಚುತ್ತದೆ. ಇದು ಕನ್ನಡ ತಾಯಿ-ಮಕ್ಕಳ ಸಂವಾದವಿರಬಹುದು; ಭಾರತಮಾತೆ ಮತ್ತು ಭಾರತೀಯನ ನಡುವಣ ಸಂಬಾಷಣೆಯೂ ಇರಬಹುದು. ಕೊನೆಯ ಹಂತದಲ್ಲಿ ಈತ ಚಂಡಿ ಚಾಮುಂಡಿ ಪೇಳ್ ಬೇಕಾದುದೇನು? ಎಂದು ಕೇಳಿದರೆ ಗಂಡಸಾದರೆ ನಿನ್ನ ಬಲಿ ಕೊಡುವಿಯೇನು? 

ಎಂದು ತಾಯಿ ಸವಾಲೆಸೆಯುತ್ತಾಳೆ. ಈ ಹಂತದಲ್ಲಿ ಸಹಜವಾಗಿಯೇ ಎಚ್ಚರ ತಪ್ಪಿ ಬೀಳಬೇಕಾದ ಸ್ಥಿತಿ ಈತನದ್ದು. ಆದರೆ ಆತ ಕನಸಿನೊಳಗಿರುವವನು. ಭಯ ಬಹುಪಾಲು ಅಥವಾ ಸಾಮಾನ್ಯವಾಗಿ ಮನುಷ್ಯನನ್ನು ಎಚ್ಚರಿಸುತ್ತದೆ. ಇಲ್ಲೂ ಹಾಗೆಯೇ: ಮನವು ನಡುಗಿತು ತನವು ನವಿರಿಗೊಳಗಾಯ್ತು

ನೆನವು-ನುಗ್ಗಿತು-ಹೊರಗೆ ಕಂಡೆ-ಬೆಳಗಾಯ್ತು.
ಹೊರಗೆ ಕಂಡೆ ಎಂಬ ಪದವೇ ಆ ತನಕದ ಅಂತಃದೃಷ್ಟಿಯನ್ನು ನಿರೂಪಿಸುತ್ತದೆ. (ಅನೇಕ ಬಾರಿ ಎಚ್ಚರ ತಪ್ಪಿದಾಗಲೇ ಒಳನೋಟ ಹರಿತವಾಗಿರುತ್ತದೆ!) ಆಶಯಗಳು ಕನಸಿನಲ್ಲಿ, ಅಥವಾ ಕನಸಾಗಿ ನಿರೂಪಿತವಾಗುತ್ತವೆ ಎಂದು ಮನಶಾಃಸ್ತ್ರಜ್ಞರೂ ಹೇಳುತ್ತಾರೆ. (ಭ್ರಮರ ಕೀಟ ನ್ಯಾಯದಂತೆ!)

ಬೇಂದ್ರೆ ತಮ್ಮ ‘ಏಳು ಕನ್ನಿಕೆಯರು’ ಕವಿತೆಯಲ್ಲೂ ಇದೇ ಸ್ವಪ್ನತಂತ್ರವನ್ನು ಬಳಸುತ್ತಾರೆ. ನಿದ್ದೆಗಡಲಿನಲ್ಲಿ ನಾನು
ಎದ್ದೇಳುತಲಿದ್ದೆನಾಗ 
ಏಳುಕನ್ನಿಕೆಯರು ಬಂದು ಏಳು ಎಂದು ಎಂದರೋ- ಏಳು ಎಂದು ಎಂದರು.

ಪದಗಾರುಡಿಗರಾದ ಬೇಂದ್ರೆಯವರಿಗೆ ಏಳು, ಎಂದು ಎಂದರೋ ಎಂಬ ಪದಗಳ ವಿಸ್ತೃತ ಅರ್ಥ ಸ್ವಾರಸ್ಯ ಗೊತ್ತಿದೆ. ಅದನ್ನು ಅವರು ಓದುಗರೊಂದಿಗೆ ಹಂಚಿಕೊಳ್ಳುವ ಪರಿ ಇದು.

ಮುಂದಿನದ್ದೆಲ್ಲ ಈ ಕನಸಿನ ಉಯ್ಯೆಲೆಯಂತೆ. ಕವಿತೆ ಜೋಗುಳ ಹಾಡಿದಂತೆ ವಿವಿಧ ಸ್ತರಗಳಲ್ಲಿ ವಿಹರಿಸುತ್ತದೆ. ನಿದ್ದೆಯಿಂದ ಎಬ್ಬಿಸುವುದಿಲ್ಲ. ಏಳು ಕನ್ನಿಕೆಯರು ಬೀಳು ಎನ್ನದಿದ್ದರೂ ಕನಸುಗಾರ ಬೀಳುತ್ತಾನೆ. ರಸವು ವಿರಸವಾದರೂ ಹೊಸ ಸಮರಸ ಕೂಡಿಬರುತ್ತದೆ. ಜೀವವಳಿಯುವುದಿಲ್ಲ; ಉಳಿಯುತ್ತದೆ.

ಕನಸಿನ ಸಂಬಂಧವಾಗಿ ಕೆ.ಎಸ್.ನರಸಿಂಹಸ್ವಾಮಿ ಕೂಡಾ ರಾತ್ರಿಯಲಿ ದೂರದಲಿ ಎಲ್ಲೋ ಓಲಗ ಎಂಬ ಕವಿತೆಯನ್ನು ಬರೆದಿದ್ದಾರೆ. ಕನಸುಗಳ ಇತ್ಯಾತ್ಮಕತೆಯನ್ನು ಕವಿ ಆಪ್ತವಾಗಿ ಹೇಳುತ್ತಾರೆ. ದೂರದೋಲಗ ಹಾವಳಿಯಂತನ್ನಿಸಿರೂ ಅದು ಹೊಸ ಕನಸುಗಳನ್ನು ಅನೇಕ ಮನಸ್ಸುಗಳಲ್ಲಿ ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ. ಈ ಓಲಗ ಇನ್ನಷ್ಟು ಶಕ್ತವಾಗುವುದು ರಾತ್ರಿಯಲ್ಲಿ. ಅದಕ್ಕೊಂದು ಶೃಂಗಾರ ಲಹರಿ ಉದಿಸುತ್ತದೆ. ಕವಿ ಮನಸ್ಸು ಅದನ್ನು ಕೇಳಿ ಎಂದೊ ಏಳನೆಯ ಬೀದಿಯಲಿ ಸುಳಿದ ಬಂಗಾರದ ಹುಡುಗಿಯನ್ನು ನೆನಪಿಸುತ್ತಾರೆ. (ಇಲ್ಲೂ ಎಂದೊ ಮತ್ತು ಏಳನೆಯ ಎಂಬ ಪದಗಳು ಸೃಜಿಸುವ ನಾಟಕೀಯತೆಯನ್ನು ಗಮನಿಸಿ.)

ಕೊನೆಯ ಹಂತದಲ್ಲಿ ಕವಿತೆಯು ನನ್ನ ಕನವರಿಕೆಯನು ಕೇಳಿ ಹತ್ತಿರ ಬಂದು
ಯಾರ ಕರೆದಿರಿ ಎಂದು ಕೇಳಬಹುದಾದವಳೆ
ಕೇಳಿ ಎಚ್ಚರಗೊಳಿಸಿದಂತಾಗೆ ಕಣ್ ತೆರೆದೆ.
ಇಲ್ಲ ಅವಳೂ ಇಲ್ಲ; ಇಲ್ಲ ಇವಳೂ ಇಲ್ಲ!

ಮುಗಿದುದೋಲಗ. ಇನ್ನು ಮಲಗಬಹುದಲ್ಲ? ಎನ್ನುವಾಗ ಮಲಗದೆಯೇ ನಿದ್ದಿಸಿದ ಅಪೂರ್ವ ಅನುಭವ ಮತ್ತೊಮ್ಮೆ ಬಾಯಿಚಪ್ಪರಿಸುತ್ತದೆ. ಕನ್ನಡದಲ್ಲಿ ಇಂತಹ ಬೇಕಷ್ಟು ಉದಾಹರಣೆಗಳು ಸಿಗುತ್ತವೆ. ಇದು ದಿಕ್ಸೂಚಿ ಮಾತ್ರ. ಮುಗಿಸುವ ಮುನ್ನ ಕನ್ನಡದ ಪ್ರಸಿದ್ಧ ಕವಿ ವಿ.ಜಿ. ಭಟ್ಟ ಅವರ ಒಂದು ಕವಿತೆಯನ್ನು ಉದಾಹರಿಸುತ್ತೇನೆ: ಭಟ್ಟರು ಚುಟುಕು ಕವಿ, ಹಾಸ್ಯ ಕವಿ ಎಂದೇ ಪ್ರಸಿದ್ಧರಾದರೂ ನವ್ಯ ಸಂಪ್ರದಾಯದ ಅನೇಕ ಒಳ್ಳೆಯ ಕವಿತೆಗಳನ್ನು ಬರೆದ ಖ್ಯಾತಿ ಇವರದ್ದು! ಇವರು ‘ಅಂಬಿಕಾತನಯನ ಬೆಂಬತ್ತಿದೆ’ ಎಂಬ ಒಂದು ಸುಂದರ ಕವಿತೆಯನ್ನು ಬರೆದಿದ್ದಾರೆ. ಮೇಲ್ನೋಟಕ್ಕೆ ಕೀಟಲೆಯಂತೆ ಕಾಣುವ ಈ ಕವಿತೆಯು ಕನಸನ್ನೇ ಸ್ಥಾಯಿ ರೂಪವಾಗಿ ಪಡೆದು, ಹಿಡಿದು ಕಚಗುಳಿಯನ್ನಿಡುತ್ತದೆ. ಕೇವಲ ಹದಿನಾರು ಸಾಲುಗಳ ಈ ಕವಿತೆಯು ಬೇಂದ್ರೆಯವರನ್ನು ಅನುಕರಿಸುವುದೂ ಇಲ್ಲ, ಲೇವಡಿ ಮಾಡುವುದೂ ಇಲ್ಲ. ಆದರೆ ಕವಿತೆ ಹೇಗೆ ತನ್ನ ಕಾಲದ ಒಬ್ಬ ದೊಡ್ಡ ಕವಿಯ ಪ್ರಭಾವವನ್ನು ಸೃಜನಶೀಲವಾಗಿ ಬಳಸಿಕೊಳ್ಳುತ್ತದೆಯೆಂಬುದಕ್ಕೆ ಈ ಕವಿತೆಯೇ ಸಾಕ್ಷಿ. ಕವಿತೆಯು- ಅಂಬಿಕಾತನಯನ

ಪಾತರಗಿತ್ತಿಯ
ಬೆಂಬತ್ತಿ ಎಲ್ಲೆಲ್ಲೊ ಓಡಾಡಿದೆ
ಕಲ್ಪವೃಕ್ಷ ವೃಂದಾವನಂಗಳ
ಸುತ್ತಲು ಮೆಲ್ಲಗೆ ಸುಳಿದಾಡಿದೆ

ಎಂದು ಆರಂಭವಾಗಿ ಮುಂದೆ ಅವರ ಇತರ ಕವಿತೆಗಳ ಸಾಲುಗಳನ್ನೋ ಶೀರ್ಷಿಕೆಗಳನ್ನೋ ಉಲ್ಲೇಖಿಸುತ್ತ ಒಂದು ಲಲಿತ ವ್ಯೆಹವನ್ನು ಕಟ್ಟುತ್ತದೆ. ಕವಿತೆಯ ಶೀರ್ಷಿಕೆ ‘ಅಂಬಿಕಾತನಯನ ಬೆಂಬತ್ತಿದೆ’ ಎಂದಿದ್ದರೂ ಮೊದಲ ಸಾಲಿನಲ್ಲಿ ಅವರ ಕವಿತೆಗಳ ಬೆಂಬತ್ತಿದ (ಅಂಬಿಕಾತನಯನ ಪಾತರಗಿತ್ತಿಯ ಬೆಂಬತ್ತಿ..) ಹಾಗಿದೆ. ಜೋಗಿಯ ಸ್ಪರ್ಶವಿದೆ, ಸಖೀಗೀತದ ಆಪ್ತತೆಯಿದೆ; ನಾಕುತಂತಿಯ ನಾದವಿದೆ; ಗಂಗೆ ಇಳಿಯುತ್ತಾಳೆ.

ಕೊನೆಗೆ ಬೇಂದ್ರೆಯವರೇ ಸಾಧನಕೇರೀಯಿಂದ ಇಲ್ಲೀವರೆಗೂ ನೀನು
ಬೆನ್ ಹತ್ತಿ ಬಂದೆಯಾ ಎಲೆ ಭಟ್ಟನೆ?
ಎಂದು ಅವ ಜಬರಿಸಿದ ಸಿಡುಕಿನ ಸೋಗಿನಲಿ
ಕನಸು ಹರಿಯಿತು ಎದ್ದೆನಾ ಥಟ್ಟನೆ
ಭಟ್ಟರು ಕಂಡದ್ದು ಬೇಂದ್ರೆಯವರ ಸಿಡುಕಿನ ಸೋಗು. ಸಿಡುಕಲ್ಲ. ಹೀಗೆ ಕವಿತೆಯ ಮೂಲಕ ಕವಿಯ ವಿರಾಡ್‌ದರ್ಶನವನ್ನು ಈ ಕವಿತೆ ಮಾಡಿಕೊಡುತ್ತದೆ. ಬೇಂದ್ರೆಯವರ ಕನಸಿನ ಕವಿತೆಗಳ ಹಾಗೆಯೇ ಇಲ್ಲೂ ಕವಿಗೆ ಬೇಂದ್ರೆಯವರ ಕವಿವಾಣಿ ಸಿಡುಕಿನ ಸೋಗಿನಲ್ಲಿ ಆಡಿದ ಮಾತುಗಳನ್ನು ಕೇಳಿದಾಗ ಕನಸು ಹರಿಯುತ್ತದೆ.
ಈ ಮತ್ತು ಇಂತಹ ಕವಿತೆಗಳ ಮೂಲಕ ಕನಸುಗಳನ್ನು ಹೆಣೆದುಕೊಟ್ಟ ಕನ್ನಡ ಕವಿಗಳಿಗೆ ಶರಣು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News