ವಿಫಲ ಆರ್ಥಿಕ ನೀತಿಗಳು ಮೋದಿ ಸರಕಾರಕ್ಕೆ ಮುಳುವಾಗಲಿವೆಯೇ?

Update: 2017-10-13 06:20 GMT

ಭಾಗ 2

ವ್ಯಂಗ್ಯ ಏನೆಂದರೆ ನಾವು ಈಗ ಹಿಂದೆ ಭಾರತದೊಳಗೇ ಉತ್ಪಾದಿಸುತ್ತಿದ್ದಂತಹ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ವಿದೇಶಗಳ ಜಿಡಿಪಿ ಏರಿಕೆಗೆ ಸಹಾಯ ಮಾಡಿದಂತಾಗಿದೆ! ಉದಾಹರಣೆಗೆ ನಾವು ಜಪಾನ್ ಅಥವಾ ಚೀನಾ ಅಥವಾ ಅಮೆರಿಕದಲ್ಲಿ ತಯಾರಾದ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಖರೀದಿಸಿದಾಗ ಆ ದೇಶಗಳ ಮಟ್ಟಿಗೆ ಅದು ಅವರ ರಫ್ತು. ಹೀಗಾಗಿ ಅವುಗಳ ಜಿಡಿಪಿ ಏರುತ್ತದೆ. ಇಷ್ಟೇ ಅಲ್ಲ, ನಮ್ಮ ಆಮದುಗಳು ವಿದೇಶಗಳಲ್ಲಿ ಹೆಚ್ಚು ಉದ್ಯೋಗಗಳ ಸೃಷ್ಟಿಗೂ ಸಹಾಯಕವಾದಂತಾಗಿದೆ! ಇತ್ತ ಭಾರತದಲ್ಲಿ ಪ್ರತೀ ತಿಂಗಳು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಸುಮಾರು 10 ಲಕ್ಷ ಯುವಜನರು ನೌಕರಿಗಳಿಗಾಗಿ ಪರದಾಡುವಂತಾಗಿದೆ.

ಒಂದು ಸಂಕೀರ್ಣ ಆರ್ಥಿಕ ಕ್ರಮವಾದ ನೋಟು ರದ್ದತಿಯ ದುಷ್ಪರಿಣಾಮಗಳು ಇನ್ನೂ ಇವೆ. ನೋಟು ರದ್ದತಿಯಿಂದಾಗಿ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕರು ತಂತಮ್ಮ ಹಳ್ಳಿಗಳಿಗೆ ಮರಳಿರುವುದರಿಂದ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿ ಕೃಷಿ ವಲಯದಲ್ಲಿ ಬೆಲೆಗಳು ಕುಸಿದಿವೆ. ಆರ್ಥಿಕ ವ್ಯವಸ್ಥೆಯನ್ನು ಪರಿಶೀಲಿಸುವ ಸಂಸ್ಥೆ ಸಿಎಂಐಇ ಪ್ರಕಾರ 2016ರ ಡಿಸೆಂಬರ್‌ನಿಂದ 2017ರ ಎಪ್ರಿಲ್ ತನಕ 15 ಲಕ್ಷ ನೌಕರಿಗಳು ನಾಶವಾಗಿವೆ. ಈ ವರ್ಷ ಬ್ಯಾಂಕುಗಳು ಉದ್ದಿಮೆಗಳಿಗೆ ನೀಡುವ ಸಾಲದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿರುವುದು ಕಳೆದ 63 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ. ಇದು ಹೀಗಿದ್ದರೆ (1) ಶೇ. 73ರಷ್ಟು ಉದ್ದಿಮೆಗಳಲ್ಲಿ ಮುಂದಿನ 3 ತಿಂಗಳ ಕಾಲ ಕಾರ್ಮಿಕರ ನೇಮಕಾತಿ ನಡೆಯುವುದಿಲ್ಲ, (2) ದೇಶದ 46.6 ಕೋಟಿ ಕಾರ್ಮಿಕರ ಪೈಕಿ ಶೇ. 35ಕ್ಕೂ ಅಧಿಕ ಮಂದಿ ತಮ್ಮ ಸಾಮರ್ಥ್ಯಕ್ಕನುಗುಣವಾದ ನೌಕರಿಗಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (ಎಫ್‌ಐಸಿಸಿಐ) ಸಮೀಕ್ಷೆ ಹೇಳುತ್ತದೆ. ಕೈಬಿಟ್ಟ ಹೂಡಿಕೆಗಳ ಮೊತ್ತ 2013ರ ಮಾರ್ಚ್‌ನಲ್ಲಿ ರೂ. 8.6 ಲಕ್ಷ ಕೋಟಿಯಷ್ಟು ಇದ್ದುದು 2016ರಲ್ಲಿ ರೂ. 11.4 ಲಕ್ಷ ಕೋಟಿಗಳಿಗೆ ಏರಿದೆ. 40 ಅತ್ಯಂತ ದಿಟ್ಟ ವಾಣಿಜ್ಯೋದ್ಯಮಿಗಳು ಈಗ ದಿವಾಳಿಗೆ ಅರ್ಜಿ ಹಾಕಿದ್ದಾರೆ. ಕಳೆದ ವರ್ಷದ ವಿದೇಶಿ ನೇರ ಹೂಡಿಕೆಯ ಹೆಚ್ಚು ಕಡಿಮೆ ಅರ್ಧದಷ್ಟು ಹಣ ನಷ್ಟದಲ್ಲಿರುವ ಉದ್ದಿಮೆಗಳ ಖರೀದಿಗೆ ಹೋಗಿದೆ.


ಜಪಾನಿನಿಂದಲೂ ಟೀಕೆ ಮೋದಿಯವರ ಕನಸಿನ ಕೂಸಾದ ಬುಲೆಟ್ ರೈಲಿನ ಸಾಕ್ಷಾತ್ಕಾರಕ್ಕೆ ನೆರವಾಗಲಿರುವ ಜಪಾನ್‌ನಿಂದಲೇ ಈಗ ಮೋದಿಯ ಆರ್ಥಿಕ ನೀತಿಗಳ ಬಗ್ಗೆ ಟೀಕೆ ಕೇಳಿಬರತೊಡಗಿದೆ. ಜಪಾನಿನ ಪ್ರತಿಷ್ಠಿತ ನಿಯತಕಾಲಿಕ 'ನಿಕ್ಕೈ ಏಷ್ಯನ್ ರಿವ್ಯೆ'ನಲ್ಲಿ ಪ್ರಕಟವಾಗಿರುವ ಲೇಖನವೊಂದು ವಾಜಪೇಯಿ ಸರಕಾರದ 'ಭಾರತ ಪ್ರಕಾಶಿಸುತ್ತಿದೆ' ಆಂದೋಲನಕ್ಕಾದ ಗತಿಯೇ ಮೋದಿ ಸರಕಾರಕ್ಕೂ ಆಗಲಿದೆ ಎಂದು ಎಚ್ಚರಿಸಿದೆ. ಲೇಖನದ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
►ವಾಜಪೇಯಿ ಸರಕಾರದ 'ಪ್ರಕಾಶ' ಜನಸಾಮಾನ್ಯರ ಮಟ್ಟಿಗೆ ಕತ್ತಲಾಗಿ ಪರಿಣಮಿಸಿದಾಗ ಮುಂದಿನ ಚುನಾವಣೆಗಳಲ್ಲಿ ಸರಕಾರವನ್ನು ಜನ ಹೊರದಬ್ಬಿದರು.
► ಮೋದಿ ಸರಕಾರ ತಾನು ಹಿಂದೆ ಕೊಟ್ಟ ಮಾತುಗಳನ್ನು ಉಳಿಸಿಕೊಂಡಿಲ್ಲ. ಅದು ಕಾರ್ಮಿಕ ಕಾಯ್ದೆ, ಭೂಮಿಗೆ ಸಂಬಂಧಪಟ್ಟ ಕಾನೂನುಗಳು ಮತ್ತು ತೆರಿಗೆ ಕಾಯ್ದೆಗಳನ್ನು ಪರಿಷ್ಕರಣೆ ಮಾಡಲು ವಿಫಲವಾಗಿದೆ.
► 'ಮೇಕ್ ಇನ್ ಇಂಡಿಯ' ಕಾರ್ಯಕ್ರಮ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲಿದೆ ಎನ್ನಲಾಯಿತು. ಆದರೆ ಅದಾಗಲಿಲ್ಲ. ಮೂಲಸೌಕರ್ಯಗಳಲ್ಲಿ ಇನ್ನೂ ಸುಧಾರಣೆ ಆಗಿಲ್ಲ. ವಾಜಪೇಯಿಯಂತೆ ಮೋದಿ ಕೂಡಾ ಜಿಡಿಪಿ ಉಪಾಸನೆ ಎಂಬ ದುರಹಂಕಾರದ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ.
► ಬ್ಯಾಂಕುಗಳ ಅನುತ್ಪಾದಕ ಸಾಲಗಳು ಕಳೆದ 15 ವರ್ಷಗಳಲ್ಲಿ ಕಂಡಿರದಷ್ಟು ಹೆಚ್ಚಾಗಿವೆ. ಸರಕಾರ ಬಹಿರಂಗಪಡಿಸಿರುವ ಅಂಕಿಅಂಶಗಳ ಪ್ರಕಾರ ಅದರ ಮೊತ್ತ 200 ಬಿಲಿಯ ಡಾಲರುಗಳು. ಆದರೆ ವಾಸ್ತವದಲ್ಲಿ ಅದು ಇದಕ್ಕಿಂತ ಹಲವು ಪಟ್ಟು ಜಾಸ್ತಿ ಇರುವ ಸಾಧ್ಯತೆಯೇ ಹೆಚ್ಚು.

► ಮುಂದಿನ ಎರಡು ದಶಕಗಳಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ 88.5 ಕೋಟಿಗಳಿಂದ 108 ಕೋಟಿಗಳಿಗೆ ಏರಲಿದೆ. ಇದಕ್ಕೆ ತಕ್ಕಂತೆ ಉದ್ಯೋಗಗಳು ಸೃಷ್ಟಿಯಾಗದಿದ್ದರೆ ಲಕ್ಷಾಂತರ ನಿರುದ್ಯೋಗಿ ಯುವಜನತೆ ಆಕ್ರೋಶಗೊಂಡು ಬೀದಿಗಿಳಿಯಬಹುದು. ಭಾರತದ ವಾಣಿಜ್ಯೋದ್ಯಮಿಗಳಲ್ಲಿ ಹೆಚ್ಚಿನವರು ಸೋತು ಕೈಚೆಲ್ಲಿದ್ದಾರೆ. ಭಾರತ ಸ್ವಲ್ಪಸ್ವಲ್ಪವಾಗಿಯೇ ವಿದೇಶೀಯರಿಗೆ ಬಿಕರಿಯಾಗುತ್ತಿದೆ. ಸರಕಾರದ ಸುಧಾರಣಾ ಕ್ರಮಗಳು ದೂರಗಾಮಿಯಾಗಿವೆ; ಅವು ಪರಿಣಾಮ ಬೀರಲು ದೀರ್ಘ ಕಾಲ ಹಿಡಿಯಲಿದೆ ಎಂದು ಹೇಳುವುದರಿಂದ ಜನರ ಸಂಕಷ್ಟಗಳು ದೂರವಾಗಲಾರವು. ಭಾರತದ ಜನತೆಯಲ್ಲಿ, ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಮೋದಿ ಸರಕಾರದ ವಿರುದ್ಧ ಆಕ್ರೋಶದ ಮಟ್ಟ ಏರುತ್ತಿದೆ. ಒಂದು ಹಂತದಲ್ಲಿ ಒಡ್ಡು ಒಡೆದಾಗ ಭೋರ್ಗರೆಯುವ ಪ್ರವಾಹದಲ್ಲಿ ಎಲ್ಲವೂ ಕೊಚ್ಚಿ ಹೋಗಲಿದೆ.
*********
(ಆಧಾರ: ವೈರ್.ಕಾಮ್‌ನಲ್ಲಿ ಪ್ರೇಂ ಶಂಕರ್ ಝಾ, ಕ್ವಿಂಟ್‌ನಲ್ಲಿ ಆರತಿ ಜೇರತ್, ವಿವೇಕ್ ಕೌಲ್ ಡೈರಿ ಮತ್ತು ಸಬ್‌ರಂಗ್ ಇಂಡಿಯ ಲೇಖನಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News