ಗಾಂಧಿ ಹತ್ಯೆ ಪ್ರಕರಣ; ಮರು ತನಿಖೆಯ ಮಸಲತ್ತು

Update: 2017-10-15 18:51 GMT

ಚುನಾವಣೆಯಲ್ಲಿ ಶೇ.31ರಷ್ಟು ಮತಗಳನ್ನು ಪಡೆದು ಕೇಂದ್ರದಲ್ಲಿ ದಕ್ಕಿಸಿಕೊಂಡಿರುವ ಅಧಿಕಾರವನ್ನು ತನ್ನ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ಸಾಧಿಸಲು ಸಂಘ ಪರಿವಾರ ಬಳಸಿಕೊಳ್ಳುತ್ತಿದೆ. ತನ್ನ ಈ ಗುರಿ ಸಾಧನೆಗಾಗಿ ಅತ್ಯಂತ ದುಸ್ಸಾಹಸಗಳಿಗೂ ಕೈ ಹಾಕುತ್ತಿದೆ. ತಮ್ಮ ಮೂರು ವರ್ಷದ ಆಡಳಿತ ಮತ್ತ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹೊಂಚು ಹಾಕುತ್ತಿರುವ ಇದೇ ಪರಿವಾರದ ಸ್ವಯಂ ಸೇವಕರಾದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಪ್ರತಿಪಕ್ಷ ಮುಕ್ತ ಭಾರತದ ಕನಸು ಕಾಣುತ್ತ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.

ಸಂಘ ಪರಿವಾರ ಈಗ ದೇಶದ ಚರಿತ್ರೆಯನ್ನೇ ತಿರುಚಿ ವಿಕೃತಗೊಳಿಸುವ ಮಸಲತ್ತನ್ನು ನಡೆಸಿದೆ. 70 ವರ್ಷಗಳ ಹಿಂದೆ ನಡೆದ ಮಹಾತ್ಮಾ ಗಾಂಧೀಜಿಯವರ ಹತ್ಯೆ ಪ್ರಕರಣ ವನ್ನು ನ್ಯಾಯಾಲಯದಲ್ಲಿ ಮರು ವಿಚಾರಣೆಗೆ ಒಳಪಡಿಸಿ ತನಗೆ ಅಂಟಿದ ರಕ್ತದ ಕಲೆಯನ್ನು ಇನ್ನೊಬ್ಬರಿಗೆ ಅಂಟಿಸಲು ಮುಂದಾಗಿದೆ. ಇದಕ್ಕಾಗಿ ನಾನಾ ಸುಳ್ಳುಗಳನ್ನು ಅದು ಸೃಷ್ಟಿಸುತ್ತಿದೆ. ಜರ್ಮನಿಯ ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಸರಕಾರದಲ್ಲಿ ಗೊಬೆಲ್ಸ್ ಎಂಬ ಪ್ರಚಾರ ಮಂತ್ರಿಯಿದ್ದ. ಈ ಗೊಬೆಲ್ಸ್ ಸುಳ್ಳುಗಳನ್ನು ಸತ್ಯವೆಂದು ನಂಬಿಸುವಲ್ಲಿ ಮಹಾಪ್ರಚಂಡ. ಒಂದು ಸುಳ್ಳನ್ನು ನೂರು ಬಾರಿ ನಿರಂತರವಾಗಿ ಹೇಳಿದರೆ ಜನರು ನಂಬುತ್ತಾರೆಂದು ಗೊಬೆಲ್ಸ್ ಹೇಳುತ್ತಿದ್ದ.

ಈಗ ಭಾರತದಲ್ಲಿ ಅದೇ ಗೊಬೆಲ್ಸ್ ಪ್ರಯೋಗ ಮತ್ತೆ ಚಲಾವಣೆಗೆ ಬಂದಿದೆ. ಸುಳ್ಳುಗಳ ಸೌಧ ಕಟ್ಟಿ ಕೇಂದ್ರದಲ್ಲಿ ಅಧಿಕಾರ ಪಡೆದು ಈಗ ಅದೇ ಸೌಧದ ಮೇಲೆ ಇನ್ನೊಂದು ಸುಳ್ಳಿನ ಕಳಶವಿಡುವ ಪ್ರಯತ್ನ ನಡೆದಿದೆ. ಇದಕ್ಕೆ ಇತ್ತೀಚಿನ ಉದಾ ಹರಣೆಯೆಂದರೆ, 7 ದಶಕಗಳ ಹಿಂದೆ ನಡೆದ ಗಾಂಧಿ ಹತ್ಯೆ ಪ್ರಕರಣದ ಮರು ವಿಚಾರಣೆಗೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿ. ಈ ಅರ್ಜಿ ಸಲ್ಲಿಸಿದ ವ್ಯಕ್ತಿ ಪಂಕಜ್ ಪಡ್ನವಿಸ್ ಎಂಬ ಅಭಿನವ ಭಾರತ ಸಂಘಟನೆಯ ಕಾರ್ಯಕರ್ತ. ಈ ಅಭಿನವ ಭಾರತ ಮಾಲೇಗಾಂವ್ ಬಾಂಬ್ ಸ್ಫೋಟ ಕುಖ್ಯಾತಿಯ ಕರ್ನಲ್ ಪುರೋಹಿತ್ ಅವರಿಗೆ ಸೇರಿದ ಸಂಸ್ಥೆ.

ಗುಜರಾತ್, ಹಿಮಾಚಲ ಪ್ರದೇಶ ಮುಂತಾದ ಕಡೆ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಸೋಲಿನ ದುಃಸ್ವಪ್ನದಿಂದ ಕಂಗಾಲು ಆಗಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಗೆ ಈಗ ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಷಯಗಳ ಆಸರೆ ಬೇಕಾಗಿದೆ. ಸದ್ಯಕ್ಕೆ ಯಾವುದೇ ವಿಷಯ ಇಲ್ಲದಿರುವಾಗ, ಚರಿತ್ರೆಯ ತಿಪ್ಪೆಯನ್ನು ಕೆದಕಿ ಈಗಾಗಲೇ ಇತ್ಯರ್ಥಗೊಂಡ ಗಾಂಧಿ ಹತ್ಯೆಗೆ ಬೇರೆ ಬಣ್ಣ ಕೊಡುವ ಹುನ್ನಾರ ನಡೆದಿದೆ. ಮಹಾತ್ಮಾ ಗಾಂಧಿ 1948ರ ಜನವರಿ 30ರಂದು ಮೃತಪಟ್ಟಿದ್ದು ನಾಥೂರಾಮ ಗೋಡ್ಸೆ ಗುಂಡಿನಿಂದಲ್ಲ. ಅಲ್ಲೇ ಇದ್ದ ಇನ್ನೊಬ್ಬ ವ್ಯಕ್ತಿಯ ನಾಲ್ಕನೆ ಗುಂಡಿನಿಂದ ಕೊಲ್ಲಲ್ಪಟ್ಟರು. ಕಾರಣ ಈ ಬಗ್ಗೆ ಮರು ವಿಚಾರಣೆ ನಡೆಯಬೇಕೆಂದು ಪಂಕಜ್ ಪಡ್ನವಿಸ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಗಾಂಧಿ ಹತ್ಯೆ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುವುದು, ಕಟ್ಟುಕತೆಗಳನ್ನು ಹರಡುವುದು, ಜನರಲ್ಲಿ ಗೊಂದಲ ಉಂಟು ಮಾಡುವುದು ಇದೇ ಮೊದಲ ಬಾರಿಯೇನಲ್ಲ. ಕಳೆದ 70 ವರ್ಷಗಳಲ್ಲಿ ಅನೇಕ ಬಾರಿ ಇಂಥ ಹುನ್ನಾರಗಳನ್ನು ಅವರು ಮಾಡುತ್ತಲೇ ಬಂದಿದ್ದಾರೆ ಎಂದು ಗಾಂಧೀಜಿಯವರ ಮರಿ ಮೊಮ್ಮಗ ತುಷಾರ ಗಾಂಧಿ ಹೇಳಿದ್ದಾರೆ.

ಗಾಂಧೀಜಿ ಹತ್ಯೆಯನ್ನು ನಾಥೂರಾಮ ಗೋಡ್ಸೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ತಾನೇ ಗಾಂಧಿಯನ್ನು ಕೊಂದಿದ್ದಾಗಿ ಆತ ನ್ಯಾಯಾಲಯದಲ್ಲಿ ಹೆಮ್ಮೆಯಿಂದ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಗಾಂಧಿ ಹತ್ಯೆ ಮತ್ತು ನಾನು ಎಂಬ ಪುಸ್ತಕವನ್ನು ಬರೆದಿದ್ದಾನೆ. ಈ ಪುಸ್ತಕ ರಾಷ್ಟ್ರೋತ್ಥಾನ ಮಳಿಗೆ ಸೇರಿದಂತೆ ಸಂಘ ಪರಿವಾರದ ಪುಸ್ತಕ ಮಳಿಗೆಗಳಲ್ಲಿ ಈಗಲೂ ಸಿಗುತ್ತದೆ. ವಾಸ್ತವಾಂಶ ಹೀಗಿರುವಾಗ, ಗಾಂಧೀಜಿ ಮೃತಪಟ್ಟಿದ್ದು ಗೋಡ್ಸೆ ಗುಂಡಿನಿಂದಲ್ಲ, ಇನ್ನೊಬ್ಬನ ಗುಂಡಿನಿಂದ ಎಂದು ಹೇಳಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದ ಅರ್ಥವೇನು?.

ಗಾಂಧಿ ಹತ್ಯೆ ಪ್ರಕರಣದ ಮರು ವಿಚಾರಣೆಗೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವುದರ ಹಿಂದೆ ಚರಿತ್ರೆಯನ್ನು ವಿರೂಪಗೊಳಿಸಿ ಈ ಆರೋಪವನ್ನು ಕಾಂಗ್ರೆಸ್ ತಲೆಗೆ ಕಟ್ಟುವ ಹುನ್ನಾರ ನಡೆದಿದೆ. ಸ್ವಾತಂತ್ರಾ ನಂತರ ಕಾಂಗ್ರೆಸ್ ಸಂಸ್ಥೆ ವಿಸರ್ಜನೆ ಮಾಡುವಂತೆ ಗಾಂಧೀಜಿ ಸಲಹೆ ನೀಡಿದ್ದರು. ಅದು ನೆಹರೂ ಅವರಿಗೆ ಇಷ್ಟ ಇರಲಿಲ್ಲ. ಅಂತೆಯೇ ಗಾಂಧೀಜಿ ಹತ್ಯೆಯಿಂದ ಕಾಂಗ್ರೆಸ್‌ಗೆ ಲಾಭವಾಗಿದೆ. ಬಿಜೆಪಿ ಹಿರಿಯ ನಾಯಕಿ ಮತ್ತು ಕೇಂದ್ರ ಸಚಿವೆ ಉಮಾಭಾರತಿ ಕೂಡ ಇದೇ ಮಾತನ್ನು ಹೇಳಿದ್ದಾರೆ.

ಕಳೆದ ವರ್ಷ ಮುಂಬೈ ಹೈಕೋರ್ಟ್‌ನಲ್ಲಿ ಗಾಂಧೀಜಿ ಹತ್ಯೆ ಪ್ರಕರಣದ ವಿಚಾರಣೆ ಕೋರಿ ಇದೇ ಹಿಂದೂ ಮಹಾಸಭಾ ಸದಸ್ಯ ಪಂಕಜ್ ಪಡ್ನವಿಸ್ ಅರ್ಜಿ ಸಲ್ಲಿಸಿದ್ದರು. ಗಾಂಧಿ ಮೃತಪಟ್ಟಿದ್ದು, ಗೋಡ್ಸೆ ಪಿಸ್ತೂಲಿನಿಂದ ಹಾರಿಸಿದ ಮೂರು ಗುಂಡುಗಳಿಂದಲ್ಲ. ಅಲ್ಲೇ ಇದ್ದ ವ್ಯಕ್ತಿಯೊಬ್ಬ ಹಾರಿಸಿದ ನಾಲ್ಕನೆ ಗುಂಡಿನಿಂದ ಹತ್ಯೆ ನಡೆದಿತ್ತು ಎಂದು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಅದರೆ ಹೈಕೋರ್ಟ್ ತಿರಸ್ಕರಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ. ಈ ಬಗ್ಗೆ ಪರಿಶೀಲನೆಗೆ ಅ್ಯಮಿಕಾಸ್‌ಕ್ಯೂರಿ ನೇಮಕ ಮಾಡಿದೆ. ಸುಪ್ರೀಂ ಕೋರ್ಟ್‌ನ ಈ ಕ್ರಮಕ್ಕೆ ತುಷಾರ ಗಾಂಧಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಗಾಂಧಿ ಹತ್ಯೆ ನಡೆದಾಗ, ಈ ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಕಪೂರ್ ಆಯೋಗ ಗಾಂಧೀಜಿ ಹತ್ಯೆಯಲ್ಲಿ ಸಾವರ್ಕರ್ ಕೈವಾಡ ಇರುವ ಬಗ್ಗೆ ಹಾಗೂ ಹತ್ಯೆಗೂ ಆರೆಸ್ಸೆಸ್‌ಗೂ ಸಂಬಂಧ ಇರುವುದರ ಬಗ್ಗೆ ವರದಿಯಲ್ಲಿ ದಾಖಲಿಸಿತ್ತು. ಆಗ ಆರೆಸ್ಸೆಸ್ ಸರಸಂಘ ಸಂಚಾಲಕರಾಗಿದ್ದ ಮಾಧವ ಸದಾಶಿವ ಗೋಲ್ವಾಳ್ಳರ್ ಅಂದಿನ ಗೃಹಸಚಿವರಾಗಿದ್ದ ವಲ್ಲಭ್ ಭಾಯ್ ಪಟೇಲ್ ಅವರಿಗೆ ಇನ್ನು ಮುಂದೆ ಸಂವು ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಮಾಣಪತ್ರ ನೀಡಿದ್ದರು. ಇದೆಲ್ಲವೂ ದೇಶಕ್ಕೆ ಗೊತ್ತಿರುವ ಇತಿಹಾಸ. ಆದರೆ ತಮ್ಮ ಮೂಗಿನ ನೇರಕ್ಕೆ ಹೊಸ ಇತಿಹಾಸ ಸೃಷ್ಟಿಸಲು ಹೊರಟವರಿಗೆ ಈ ಸತ್ಯದ ಮೇಲೆ ನಂಬಿಕೆ ಇಲ್ಲ. ತಮಗೆ ದೊರೆತ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಈ ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಹುನ್ನಾರ ನಡೆಸಿದ್ದಾರೆ.

ಗಾಂಧೀಜಿಯನ್ನು ಯಾರು ಕೊಂದರು ಎಂಬುದಕ್ಕಿಂತ ಯಾಕೆ ಕೊಂದರು ಎಂಬುದಕ್ಕೆ ಇಡೀ ದೇಶ ಉತ್ತರ ಕಂಡುಕೊಂಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಧರ್ಮದ ಆಧಾರದಲ್ಲಿ ರಾಷ್ಟ್ರವಿಭಜನೆಯನ್ನು ಗಾಂಧೀಜಿ ವಿರೋಧಿಸಿದ್ದರು. ಸಾವರ್ಕರ್ ಕಲ್ಪನೆಯ ಹಿಂದುತ್ವ ರಾಷ್ಟ್ರ ಹುನ್ನಾರವನ್ನು ಗಾಂಧೀಜಿ ವಿಫಲಗೊಳಿಸಿದ್ದರು. ಭಾರತದಲ್ಲಿ ಪ್ರಜಾಪ್ರಭುತ್ವದ ಭದ್ರ ಬುನಾದಿಯನ್ನು ಹಾಕಲು ಗಾಂಧೀಜಿ, ಅಂಬೇಡ್ಕರ್ ಮತ್ತು ನೆಹರೂ ಪ್ರಮುಖ ಪಾತ್ರವಹಿಸಿದ್ದರು. ನೌಕಾಲಿಯಲ್ಲಿ ಕೋಮು ರಕ್ತಪಾತ ನಡೆದರೆ, ಕಲ್ಲಿನ ಸುರಿಮಳೆಯಲ್ಲೂ ಗಾಂಧೀಜಿ ಅಲ್ಲಿ ಪಾದಯಾತ್ರೆ ಮಾಡಿದ್ದರು. ಅಂತೆಯೇ ಗಾಂಧೀಜಿಯವರನ್ನು ಮುಗಿಸುವುದು ಅವರಿಗೆ ಬೇಕಾಗಿತ್ತು.

ಇದು ಬರೀ ಮೋಹನದಾಸ ಕರಮಚಂದ್ ಗಾಂಧಿ ಎಂಬ ವ್ಯಕ್ತಿಯ ಹತ್ಯೆಯಲ್ಲ. ಈ ದೇಶಕ್ಕೆ ವಿವೇಕದ ಬೆಳಕನ್ನು ನೀಡಿದ ಅಹಿಂಸೆ, ಸಹನೆ ಮತ್ತು ಸರ್ವಧರ್ಮ ಸಮನ್ವಯತೆಯ ವಿಚಾರಧಾರೆ ಕೊನೆಗಾಣಿಸುವುದು ಉದ್ದೇಶವಾಗಿತ್ತು. ಆದರೆ ವ್ಯಕ್ತಿಯಾಗಿ ಗಾಂಧೀಜಿ ಸತ್ತರು. ಆದರೆ ಅವರು ನೀಡಿದ ಶಾಂತಿ ಮತ್ತು ಸಹನೆಯ ಬೆಳಕು ಈಗಲೂ ದೇಶವನ್ನು ಮುನ್ನಡೆಸುತ್ತಿದೆ.

ನಮ್ಮ ದೇಶದಲ್ಲಿ ಗಾಂಧಿ ಹಂತಕ ಪರಿವಾರ ಮತ್ತೆ ಬಾಲ ಬಿಚ್ಚಲು ಕಾರಣ ಜಾತ್ಯತೀತ ಶಕ್ತಿಗಳ ದೌರ್ಬಲ್ಯವಾಗಿದೆ. ನಮ್ಮ ಸಮಾಜದ ಒಂದು ವರ್ಗದ ಯುವಕರಿಗೆ ಗಾಂಧಿ, ನೆಹರೂ, ಸುಭಾಷ್ ಮತ್ತು ಅಂಬೇಡ್ಕರ್ ಬಗ್ಗೆ ಗೊತ್ತಿಲ್ಲ. ಅವರ ವಿಚಾರಧಾರೆಯನ್ನು ತಲುಪಿಸುವಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ಜಾತ್ಯತೀತ ಸಂಘಟನೆಗಳು ವಿಫಲಗೊಂಡಿವೆ. ಅಂತಲೇ 70 ವರ್ಷ ಅವರು ಲೂಟಿ ಮಾಡಿದರು. ಈ ಮೂರು ವರ್ಷಗಳಲ್ಲಿ ದೇಶವನ್ನು ಮೋದಿ ಉದ್ಧಾರ ಮಾಡಿದ್ದಾರೆ ಎಂಬ ಮಾತನ್ನು ಕೇಳುತ್ತಿದ್ದೇವೆ.

ಸುಪ್ರೀಂ ಕೋರ್ಟ್‌ನಲ್ಲಿ ಗಾಂಧಿ ಹತ್ಯೆ ಪ್ರಕರಣದ ಮರು ವಿಚಾರಣೆಗೆ ಅರ್ಜಿ ಸಲ್ಲಿಸಿದ ತಕ್ಷಣ ಗಾಂಧಿ ಹಂತಕ ಗೋಡ್ಸೆಯನ್ನು ಸೃಷ್ಟಿಸಿದ ಸಿದ್ಧಾಂತ ಆರೋಪಮುಕ್ತಗೊಳ್ಳುತ್ತದೆ ಎಂಬುದು ಅರ್ಥವಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆರೆಸ್ಸೆಸ್ ಮಾತ್ರವಲ್ಲಹಿಂದೂ ಮಹಾಸಭೆ, ಸನಾತನ ಸಂಸ್ಥೆ ಮುಂತಾದ ಉಗ್ರವಾದಿ ಸಂಘಟನೆಗಳು ಬಿಜೆಪಿ ಸರಕಾರದ ಛತ್ರಿಯ ಕೆಳಗೆ ರಕ್ಷಣೆ ಪಡೆಯುತ್ತಿವೆ. ಅಂತಲೇ ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿ ಹಂತಕರನ್ನು ಬಂಧಿಸಲು ಈವರೆಗೆ ಸಾಧ್ಯವಾಗಿಲ್ಲ.

ಮನುವಾದಿ ಹಿಂದುತ್ವ ಶಕ್ತಿಗಳ ಕೈಯಲ್ಲಿ ಸಿಕ್ಕು ಭಾರತದ ಪ್ರಜಾಪ್ರಭುತ್ವ ಈಗ ಗಂಡಾಂತರದಲ್ಲಿದೆ. ಈಗ ಬಿಜೆಪಿಯ ನಾಯಕತ್ವ ವಹಿಸಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅಂತಲೇ ಅವರು ಪ್ರತಿಪಕ್ಷ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವ ವಹಿಸಿದ್ದರಿಂದ ಅಂತಹ ಅನಾಹುತ ಸಂಭವಿಸಲಿಲ್ಲ. ಆದರೆ ಈಗ ಪಂಚಾಯತ್ ಮಟ್ಟದ ನಾಯಕರು ರಾಷ್ಟ್ರಮಟ್ಟದ ನಾಯಕರಾಗಿದ್ದಾರೆ. ಅಂತಲೇ ಇವರು ಕೇರಳದಲ್ಲಿ ಚುನಾಯಿತ ಸರಕಾರವನ್ನು ಉರುಳಿಸಲು ಹೊರಟಿದ್ದಾರೆ. ಕರ್ನಾಟಕವನ್ನು ಹೇಗಾದರೂ ಮಾಡಿ ಗೆಲ್ಲಬೇಕೆಂದು ಕೋಮು ಕಲಹದ ಕಿಡಿಯನ್ನು ಹೊತ್ತಿಸುತ್ತಿದ್ದಾರೆ. ಅಮಿತ್ ಶಾ ಅವರಿಗೆ ಗೆಲುವು ಮುಖ್ಯ. ಅದಕ್ಕಾಗಿ ಎಂಥ ದಾರಿಯನ್ನು ತುಳಿಯಲು ಅವರು ಸಿದ್ಧ.

ತಮ್ಮದೇ ಪಕ್ಷದ ಯಶವಂತ ಸಿನ್ಹಾ, ಅರುಣ್ ಶೌರಿಯವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ, ನಾನು ವಿಷಕಂಠ. ಬೋಲೆ ಭಗಾವನ್ ಆಶೀರ್ವಾದ ನನಗಿದೆ. ವಿಷ ಸೇವಿಸಿ ಜೀರ್ಣಿಸಿಕೊಳ್ಳುತ್ತೇನೆ ಎಂದು ಮನ ಬಂದಂತೆ ಮಾತನಾಡುತ್ತಿದ್ದಾರೆ.

ಇದು ದೇಶದ ಇಂದಿನ ಪರಿಸ್ಥಿತಿ. ಬಹಳ ಸಣ್ಣ ಮನುಷ್ಯರ ಕೈಯಲ್ಲಿ ಬಹಳ ದೊಡ್ಡ ಪ್ರಜಾಪ್ರಭುತ್ವ ಸಿಲುಕಿದೆ. ಆದರೂ ಕಾಲ ಮಿಂಚಿಲ್ಲ. ಇವರೆಷ್ಟೇ ಕಿತಾಪತಿ ಮಾಡಿದರೂ ಬಾಬಾ ಸಾಹೇಬರು ರೂಪಿಸಿದ ಸಂವಿಧಾನ ಪ್ರಜಾಪ್ರಭುತ್ವಕ್ಕೆ ರಕ್ಷಾಕವಚವಾಗಿದೆ. ಈ ರಕ್ಷಾ ಕವಚ ಕಾಪಾಡುವುದು ಎಲ್ಲ ದೇಶಪ್ರೇಮಿಗಳ ಕರ್ತವ್ಯವಾಗಿದೆ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News