ಶಿಕ್ಷಕ ಕಲಿತ ಧರ್ಮ ನಿರಪೇಕ್ಷತೆಯ ಪಾಠ !
ಪ್ರತಿಯೊಂದು ಮಗುವೂ ನಿರ್ದಿಷ್ಟ ಸಾಮಾಜಿಕ-ಆರ್ಥಿಕ ಮತ್ತು ಭಾವನಾತ್ಮಕ ವಾತಾವರಣದಲ್ಲಿ ಜನ್ಮ ತಳೆಯುವಾಗಲೇ ಕೆಲ ರಕ್ತಗತ ಗುಣವಿಶೇಷಗಳನ್ನು ಹೊಂದಿರುತ್ತದೆ ಮತ್ತು ನಿರ್ದಿಷ್ಟ ರೀತಿಯಲ್ಲಿ ತರಬೇತುಗೊಳ್ಳುತ್ತದೆ ಎಂದು ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್‌ಕಲಾಂ ಅವರು ತನ್ನ ಆತ್ಮಕಥೆ ‘ವಿಂಗ್ಸ್ ಆಫ್ ಫೈರ್’ನಲ್ಲಿ ಬರೆದಿದ್ದಾರೆ. ಅವರ ಪಾಲಿಗೆ ಧರ್ಮಗಳ ಸಂಗಮ ಜೀವನದ ಮಾರ್ಗವಾಗಿತ್ತು. ಡಾ.ಕಲಾಂ ಅವರ ವೈಯಕ್ತಿಕ ಅನುಭವವೊಂದನ್ನು ಅವರ ತಂದೆ ಮತ್ತು ಸ್ನೇಹಿತರು ಹೇಗೆ ನಿಭಾಯಿಸಿದ್ದರು ಎನ್ನುವುದು ಸಮಾಜದಲ್ಲಿಯ ಕಠಿಣ ಸ್ಥಿತಿಗಳನ್ನು ನಾವು ಹೇಗೆ ಎದುರಿಸಬೇಕು ಎನ್ನುವ ಬಗ್ಗೆ ತಿಳಿಹೇಳುತ್ತದೆ. ಈ ಅಧ್ಯಾಯವನ್ನು ಎಲ್ಲ ಹೆತ್ತವರು ಅಗತ್ಯವಾಗಿ ಓದಲೇಬೇಕು.
ಕಲಾಂ ತನ್ನ ಬಾಲ್ಯದಲ್ಲಿ ರಾಮನಾಥ ಶಾಸ್ತ್ರಿ, ಅರವಿಂದನ್ ಮತ್ತು ಶಿವಪ್ರಕಾಶನ್ ಎಂಬ ಮೂವರು ಆಪ್ತಸ್ನೇಹಿತರನ್ನು ಹೊಂದಿದ್ದರು. ಈ ಮೂವರೂ ಬಾಲಕರು ಕರ್ಮಠ ಬ್ರಾಹ್ಮಣ ಕುಟುಂಬಗಳಿಗೆ ಸೇರಿದವರಾಗಿದ್ದರು. ಮುಗ್ಧ ಮನಸ್ಸಿನ ಈ ಮಕ್ಕಳ ನಡುವೆ ತಮ್ಮ ವಿಭಿನ್ನ ಧರ್ಮಗಳು ಮತ್ತು ತಾವು ಬೆಳೆದು ಬಂದ ಸಂಸ್ಕೃತಿಗಳ ಕಾರಣದಿಂದ ಎಂದೂ ಭಿನ್ನಾಭಿಪ್ರಾಯ ಉಂಟಾಗಿರಲಿಲ್ಲ.
ರಾಮನಾಥ ಶಾಸ್ತ್ರಿಯ ತಂದೆ ರಾಮೇಶ್ವರಂ ದೇವಸ್ಥಾನದ ಮುಖ್ಯ ಅರ್ಚಕರಾಗಿದ್ದರು. ತಂದೆಯ ನಿಧನಾನಂತರ ರಾಮನಾಥ ಶಾಸ್ತ್ರಿ ಅದೇ ದೇವಸ್ಥಾನದಲ್ಲಿ ಅರ್ಚಕರಾದರು. ಅರವಿಂದನ್ ಯಾತ್ರಾ ಪ್ರವಾಸಗಳನ್ನು ಏರ್ಪಡಿಸುವ ವ್ಯವಹಾರ ಆರಂಭಿಸಿದರೆ, ಶಿವಪ್ರಕಾಶನ್ ದಕ್ಷಿಣ ರೈಲ್ವೆಯಲ್ಲಿ ಕೇಟರಿಂಗ್ ಕಂಟ್ರಾಕ್ಟರ್ ಆಗಿ ಬದುಕನ್ನು ಆರಂಭಿಸಿದ್ದರು.
ವಾರ್ಷಿಕ ಶ್ರೀ ಸೀತಾ ರಾಮ ಸ್ವಯಂವರಂ ಸಮಾರಂಭಕ್ಕಾಗಿ ನಮ್ಮ ಕುಟುಂಬವು ವಿಶೇಷ ವೇದಿಕೆಯನ್ನು ಅಳವಡಿಸಿದ ದೋಣಿಗಳನ್ನು ವ್ಯವಸ್ಥೆ ಮಾಡುತ್ತಿತ್ತು. ಇದೇ ದೋಣಿಗಳಲ್ಲಿ ದೇವರ ವಿಗ್ರಹಗಳನ್ನು ನಮ್ಮ ಮನೆಯ ಸಮೀಪವೇ ಇದ್ದ ರಾಮತೀರ್ಥ ಸರೋವರದ ಮಧ್ಯದಲ್ಲಿರುವ ವಿವಾಹ ತಾಣಕ್ಕೆ ಒಯ್ಯಲಾಗುತ್ತಿತ್ತು ಎಂದು ಡಾ.ಕಲಾಂ ಬರೆದಿದ್ದಾರೆ.
ರಾಮಾಯಣ ಮತ್ತು ಪ್ರವಾದಿ ಮುಹಮ್ಮದರ ಜೀವನದಲ್ಲಿಯ ಘಟನೆಗಳನ್ನು ಎಳೆಯ ಕಲಾಂ ಅವರ ತಾಯಿ ಮತ್ತು ಅಜ್ಜಿ ಕುಟುಂಬದಲ್ಲಿಯ ಮಕ್ಕಳು ರಾತ್ರಿ ನಿದ್ರೆಗೆ ಶರಣಾಗುವ ಮುನ್ನ ಕಥೆಗಳ ರೂಪದಲ್ಲಿ ಹೇಳುತ್ತಿದ್ದರು.
ಡಾ. ಕಲಾಂ ತನ್ನ ಪುಸ್ತಕದಲ್ಲಿ ಹೇಳಿರುವಂತೆ ಅವರು ರಾಮೇಶ್ವರಂ ಎಲಿಮೆಂಟರಿ ಶಾಲೆಯಲ್ಲಿ ಐದನೆ ತರಗತಿಯಲ್ಲಿ ಓದುತ್ತಿದ್ದಾಗ ಹೊಸದಾಗಿ ಶಿಕ್ಷಕರೋರ್ವರು ಬಂದಿದ್ದರು. ಕಲಾಂ ಧರಿಸುತ್ತಿದ್ದ ಟೊಪ್ಪಿ ಅವರು ಮುಸ್ಲಿಂ ಎನ್ನುವುದನ್ನು ಸಾರಿ ಹೇಳುತ್ತಿತ್ತು. ಕಲಾಂ ಸದಾ ತರಗತಿಯಲ್ಲಿ ಮುಂದಿನ ಸಾಲಿನಲ್ಲಿ ಜನಿವಾರಧಾರಿ ರಾಮನಾಥ ಶಾಸ್ತ್ರಿಯ ಜೊತೆಯಲ್ಲಿ ಕುಳಿತುಕೊಳ್ಳುತ್ತಿದ್ದರು.
ಹಿಂದೂ ಅರ್ಚಕರೋರ್ವರ ಪುತ್ರ ಮುಸ್ಲಿಂ ಬಾಲಕನ ಜೊತೆ ಕುಳಿತುಕೊಂಡಿದ್ದನ್ನು ಅರಗಿಸಿಕೊಳ್ಳಲು ಆ ಶಿಕ್ಷಕರಿಗೆ ಸಾಧ್ಯವಾಗಿರಲಿಲ್ಲ. ಆ ಶಿಕ್ಷಕರ ದೃಷ್ಟಿಯಲ್ಲಿ ನಮ್ಮ ಸಾಮಾಜಿಕ ಸ್ಥಾನಮಾನಗಳು ಬೇರೆಯೇ ಆಗಿದ್ದವು. ಮುಂದಿನ ಸಾಲಿನಿಂದ ಎದ್ದು ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವಂತೆ ಅವರು ನನಗೆ ಸೂಚಿಸಿದ್ದರು ಎಂದು ಡಾ.ಕಲಾಂ ಬರೆದಿದ್ದಾರೆ.
ಶಿಕ್ಷಕರ ಸೂಚನೆಯಿಂದ ಕಲಾಂ ದುಃಖಿತರಾಗಿದ್ದರು, ಆಪ್ತ ಸ್ನೇಹಿತ ರಾಮನಾಥ ಶಾಸ್ತ್ರಿಗೂ ಅಷ್ಟೇ ನೋವಾಗಿತ್ತು.
ನಾನು ಹಿಂದಿನ ಸಾಲಿಗೆ ತೆರಳಿದಾಗ ರಾಮನಾಥನ ಮುಖ ವಿವರ್ಣವಾಗಿತ್ತು. ಆಗ ಆತ ಅಳುತ್ತಿದ್ದ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ ಎಂದು ಮಾಜಿ ರಾಷ್ಟ್ರಪತಿಗಳು ಬರೆದಿದ್ದಾರೆ.
ಅಂದು ಶಾಲೆ ಮುಗಿದ ಬಳಿಕ ಮನೆಗೆ ತೆರಳಿದ ಈ ಮಕ್ಕಳು ತಮ್ಮ ಹೆತ್ತವರಿಗೆ ಈ ಬಗ್ಗೆ ವರದಿಯೊಪ್ಪಿಸಿದ್ದರು.
ಕಲಾಂ ತಂದೆಗೆ ಈ ವಿಷಯ ಗೊತ್ತಾದಾಗ ಸ್ನೇಹಿತ ಪಕ್ಷಿ ಲಕ್ಷ್ಮಣ ಶಾಸ್ತ್ರಿಗಳು ಮತ್ತು ಕ್ರೈಸ್ತ ಧರ್ಮಗುರುವೋರ್ವರೊಂದಿಗೆ ಸೇರಿಕೊಂಡು ಆ ಶಿಕ್ಷಕನನ್ನು ಕರೆಸಿದ್ದರು. ಧರ್ಮ ನಿರಪೇಕ್ಷತೆಯ ಬಗ್ಗೆ ಆತನಿಗೆ ತಿಳಿಹೇಳಿದ್ದ ಈ ಮೂವರೂ ವಿವೇಕಿಗಳು ಧರ್ಮದ ಹೆಸರಿನಲ್ಲಿ ತಮ್ಮ ಮಕ್ಕಳನ್ನು ಬೇರೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದಾಗ ಶಿಕ್ಷಕ ಪಶ್ಚಾತ್ತಾಪದಿಂದ ಬೆಂದು ಹೋಗಿದ್ದ ಎಂದು ಡಾ.ಕಲಾಂ ಬರೆದಿದ್ದಾರೆ.
ಓರ್ವ ಮುಸ್ಲಿಂ, ಓರ್ವ ಹಿಂದೂ ಮತ್ತು ಓರ್ವ ಕ್ರೈಸ್ತ ಸೇರಿಕೊಂಡು ಶಾಲಾಶಿಕ್ಷಕನಿಗೆ ಅರಿವು ಮೂಡಿಸಿದ್ದರು. ಇದು ಭಾರತದ ವಿಶಿಷ್ಟ ಗುಣ ಎಂದು ಅವರು ಪ್ರಶಂಸಿಸಿದ್ದಾರೆ.
ಅಮಾಯಕ ಮಕ್ಕಳ ಮನಸ್ಸುಗಳಲ್ಲಿ ಸಾಮಾಜಿಕ ಅಸಮಾನತೆ ಮತ್ತು ಕೋಮು ಅಸಹಿಷ್ಣುತೆಯ ವಿಷವನ್ನು ಹರಡದಂತೆ ಲಕ್ಷ್ಮಣ ಶಾಸ್ತ್ರಿಗಳು ಶಿಕ್ಷಕನಿಗೆ ಹೇಳಿದ್ದರು.
ಆ ಶಿಕ್ಷಕರು ತನ್ನ ನಡತೆಯ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡಿದ್ದು ಮಾತ್ರವಲ್ಲ, ಲಕ್ಷ್ಮಣ ಶಾಸ್ತ್ರಿಗಳ ಬೋಧನೆ ಅವರಲ್ಲಿ ಮಹತ್ವದ ಬದಲಾವಣೆಯನ್ನು ತಂದಿತ್ತು. ಒಟ್ಟಾರೆಯಾಗಿ ರಾಮೇಶ್ವರಂ ಎಂಬ ಪುಟ್ಟ ಊರಿನ ಪುಟ್ಟ ಸಮಾಜವು ವಿವಿಧ ಸಾಮಾಜಿಕ ಗುಂಪುಗಳ ಪ್ರತ್ಯೇಕತೆಯ ವಿರುದ್ಧ ದೃಢವಾದ ಮನೋಭಾವನೆಯನ್ನು ಹೊಂದಿತ್ತು ಎಂದು ಡಾ.ಕಲಾಂ ಬರೆದಿದ್ದಾರೆ.