ವಿಷ ತುಂಬಿಕೊಂಡಿರುವ ಹೊಲಗದ್ದೆಗಳು

Update: 2017-10-20 18:42 GMT

ಕಳೆದ 16 ವರ್ಷಗಳಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶವು ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿರುವುದು ಮಾತ್ರವಲ್ಲದೆ ಅತ್ಯಂತ ಗಂಭೀರವಾದ ಕೃಷಿ ಬಿಕ್ಕಟ್ಟನ್ನೂ ಎದುರಿಸುತ್ತಿದೆ. ಹೀಗಾಗಿ ಆ ಪ್ರಾಂತದ ಆರು ಜಿಲ್ಲೆಗಳಲ್ಲಿ 14,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಜುಲೈ ತಿಂಗಳಿಂದ ಯಾವತ್‌ಮಲ್ ಮತ್ತಿತರ ಪ್ರದೇಶಗಳಲ್ಲಿ ಒಂದು ಹೊಸ ಬಗೆಯ ಸಮಸ್ಯೆಯು ತಲೆದೋರಿದೆ. ಆ ಪ್ರದೇಶದ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರು ವಿಷಕಾರಿ ಕ್ರಿಮಿನಾಶಕಗಳ ಸೇವನೆಯ ಗುಣಲಕ್ಷಣದಿಂದಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಆದರೆ ಕಳೆದ ಆಗಸ್ಟ್‌ನಲ್ಲಿ ಇದೇ ಕಾರಣದಿಂದಾಗಿ 19 ಜನರು ಸತ್ತದ್ದು ವರದಿಯಾಗುವ ತನಕ ಈ ವಿದ್ಯಮಾನ ಸರಕಾರದ ಅಥವಾ ಮಾಧ್ಯಮಗಳ ಗಮನವನ್ನು ಸೆಳೆದಿರಲಿಲ್ಲ.

ರೈತರ ಆತ್ಮಹತ್ಯೆಗಳ ಬಗ್ಗೆ ಜನರಲ್ಲಿ ಹುಟ್ಟಿದ್ದ ಆಕ್ರೋಶ ಮತ್ತು ಆ ಪ್ರದೇಶದ ಕೃಷಿಯ ಪರಿಸ್ಥಿತಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಈ ಪ್ರದೇಶದ ಬಗ್ಗೆ ಇನ್ನೂ ಹೆಚ್ಚು ಜಾಗರೂಕರಾಗಿರುವಂತೆಯೂ ಮತ್ತು ಇಂತಹ ಘಟನೆಗಳು ನಡೆಯದಂತೆ ಎಚ್ಚರದಿಂದಿರುವಂತೆಯೂ ಮಾಡಬೇಕಿತ್ತು. ಕಳೆದ ಕೆಲವು ವರ್ಷಗಳ ಹಿಂದೆಯೇ ಈ ವಿಷಯುಕ್ತ ಕ್ರಿಮಿನಾಶಕಗಳ ಬಗ್ಗೆ ಸೂಚನೆಗಳು ದೊರೆತಿತ್ತು. ಆಗಲೇ ಸರಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಯಾವತ್‌ಮಲ್ಲಿನ 19 ರೈತರನ್ನು ಒಳಗೊಂಡಂತೆ ಒಟ್ಟಾರೆಯಾಗಿ 30 ರೈತರು ಈಗಾಗಲೇ ಇದರಿಂದ ಸಾವಿಗೀಡಾಗಿದ್ದಾರೆ. ಇದು ಕ್ರಿಮಿನಾಶಕಗಳ ನಿಯಂತ್ರಣದ ಬಗ್ಗೆ ಮತ್ತು ಅದರ ಬಳಕೆಯ ಬಗ್ಗೆ ನಿಕಟ ಉಸ್ತುವಾರಿ ಮಾಡುವ ಅಗತ್ಯವನ್ನು ಎತ್ತಿತೋರಿಸಿದೆ. 2002ರಿಂದ ಭಾರತದಲ್ಲಿ ಬಿಟಿ ಹತ್ತಿಯನ್ನು ಬೆಳೆಯಲು ಅನುಮತಿ ನೀಡಲಾಯಿತು. ಆದರೆ ಯಾವುದೇ ಮೇಲ್ಮೈ ನೀರಾವರಿ ವ್ಯವಸ್ಥೆ ಇಲ್ಲದ ಮತ್ತು ಸವಕಲಾದ ಮಣ್ಣಿರುವ ವಿದರ್ಭದಲ್ಲೂ ಈ ಬಿಟಿ ಹತ್ತಿಯನ್ನು ಬೆಳೆಯಲು ರೈತರು ಪ್ರಾರಂಭಿಸಿದರು.

ಕಳೆದ ವರ್ಷ ಒಳ್ಳೆಯ ಬೆಲೆ ದೊರೆತದ್ದನ್ನು ನೋಡಿ ಈ ವರ್ಷ ವಿದರ್ಭದ ರೈತರು 16ರಿಂದ 17 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿಟಿ ಹತ್ತಿಯನ್ನು ಬಿತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿದರ್ಭವನ್ನೂ ಒಳಗೊಂಡಂತೆ ಭಾರತದ ಹಲವಾರು ಭಾಗಗಳಲ್ಲಿ ಕೀಟ ಮತ್ತು ಕ್ರಿಮಿಗಳ ಬಾಧೆ ಹೆಚ್ಚಿದೆ ಹಾಗೂ ಹಸಿರು ಮತ್ತು ಗುಲಾಬಿ ಬೋಲ್ವರ್ಮ್ ಕೀಟಗಳು ಕೀಟನಾಶಕಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿವೆ. ಇದಲ್ಲದೆ ದ್ವಿತೀಯ ಹಂತದ ಕೀಟಗಳ ದಾಳಿಯೂ ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಟಿ ಹತ್ತಿಯ ಸಾಮರ್ಥ್ಯವು ಕುಗ್ಗಿದ್ದು ಕೀಟಗಳು ಮತ್ತು ಗುಲಾಬಿ ಬೋಲ್ವರ್ಮ್‌ಗಳು ಬೋಲ್ಗಾರ್ಡ್-2 ಹತ್ತಿ ಬೆಳೆಯನ್ನು ನಾಶಮಾಡಿವೆ. ಈ ಗುಲಾಬಿ ಬೋಲ್ವರ್ಮ್‌ಗಳು 2009ರಲ್ಲೇ ಬೋಲ್ಗಾರ್ಡ್ 1ಕ್ಕೆ ಪ್ರತಿರೋಧವನ್ನು ಬೆಳೆಸಿಕೊಂಡಿದ್ದವು.

2015ರಲ್ಲಿ ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಬೋಲ್ಗಾರ್ಡ್ 1ರ ಬದಲಿಗೆ ಬೋಲ್ಗಾರ್ಡ್ 2ನ್ನು ಬಳಸಿದರೂ ಹಾನಿಯನ್ನು ತಡೆಗಟ್ಟಲಾಗಲಿಲ್ಲ. 2015-16ರಲ್ಲಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಬಿಳಿಕೀಟಗಳ ದಾಳಿಯಿಂದಾಗಿ ಅಪಾರ ಬೆಳೆ ನಾಶ ಉಂಟಾಯಿತು. ಒಂದೆಡೆ ಬಿಟಿ ಹತ್ತಿಯ ಜೈವಿಕ ಸಾಮರ್ಥ್ಯ ಕುಗ್ಗಿದೆಯೆಂದು ಅನಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದರೂ ಸರಕಾರವು ಈ ವಿಧದ ಬೀಜದ ಪೂರೈಕೆಯನ್ನು ತಡೆಗಟ್ಟಿ ಅದರ ಬದಲಾಗಿ ಬೇರೆ ಬೀಜವನ್ನು ಪೂರೈಸುವಂಥ ಯಾವುದೇ ಮಹತ್ವದ ಹೆಜ್ಜೆಯನ್ನಿಟ್ಟಿಲ್ಲ. ಅದರ ಬದಲಿಗೆ ಕೀಟಗಳನ್ನು ತಡೆಗಟ್ಟುವಂಥ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ರೈತರ ಮೇಲೆಯೇ ಗೂಬೆ ಕೂರಿಸಲಾಗುತ್ತಿದೆ.

ಕಳೆದ ಜುಲೈ ತಿಂಗಳಲ್ಲಿ ಹತ್ತಿ ಬೆಳೆಗಳಿಗೆ ಏಕೆ ಅತೀ ಹೆಚ್ಚು ಕೀಟನಾಶಕವನ್ನು ಸಿಂಪಡಿಸಲಾಯಿತೆಂಬುದರ ಹಿಂದಿನ ಕಾರಣಗಳನ್ನು ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆಯ (ಸಿಸಿಆರ್‌ಐ) ಅಧ್ಯಯನ ವೊಂದು ಬಯಲಿಗೆ ತಂದಿದೆ. ಹತ್ತಿ ಬೆಳೆಯನ್ನು ಡಿಸೆಂಬರ್‌ನಲ್ಲೇ ಕಟಾವು ಮಾಡಬೇಕಿದ್ದರೂ ಕಳೆದ ಹಲವಾರು ವರ್ಷಗಳಿಂದ ಹತ್ತಿ ಬೆಳೆಯನ್ನು ಮಾರ್ಚ್‌ವರೆಗೆ ಜಮೀನಿನಲ್ಲೇ ಉಳಿಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಹತ್ತಿಯ ಬೀಜ ಮತ್ತು ತುಪ್ಪಟವನ್ನು ನಾಶಗೊಳಿಸುವ ಗುಲಾಬಿ ಬೋಲ್ವರ್ಮ್‌ನ ಜೈವಿಕ ಚಕ್ರಕ್ಕೆ ಭಂಗ ಬರುತ್ತಿರಲಿಲ್ಲ. ಹೀಗಾಗಿ ಸಾಮಾನ್ಯವಾಗಿ ನವೆಂಬರ್ ಮಧ್ಯಭಾಗದಲ್ಲಿ ಕಂಡುಬರುವ ಈ ಕೀಟವು, ಮುಂದಿನ ಬಿತ್ತನೆ ಋತುವಿನಲ್ಲಿ ಅದರಲ್ಲೂ ವಿಶೇಷವಾಗಿ ನೀರಾವರಿ ಪ್ರದೇಶಗಳಲ್ಲಿ ಇನ್ನೂ ಬೇಗನೆಯೇ ಕಾಣಿಸಿಕೊಂಡವು. ಇದರ ಜೊತೆಗೆ ಪೂರಕವಾದ ಹವಾಮಾನ ಮತ್ತು ಬೆಳವಣಿಗೆ ಪೂರಕ ಹಾರ್ಮೋನ್‌ಗಳ ಬಳಕೆಯಿಂದಾಗಿ ಹತ್ತಿ ಗಿಡಗಳಲ್ಲಿ ಸೊಂಪಾದ ಎಲೆಗುಚ್ಚಗಳು ಬೆಳೆದುಕೊಂಡವು.

ಕಳೆದ ವರ್ಷದಿಂದ ಮೊನ್ಸಾಂಟೋ ಕಂಪೆನಿಯು ರೌಂಡಪ್ ರೆಡಿ ಫ್ಲೆಕ್ಸ್ (ಆರ್‌ಆರ್‌ಆರ್) ಎಂಬ ಸಸ್ಯನಾಶಕವನ್ನು ತಾಳಿಕೊಳ್ಳುವ ಹತ್ತಿ ವಿಧವೊಂದನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವುದು ಮತ್ತೊಂದು ಸಮಸ್ಯೆಯನ್ನು ಹುಟ್ಟಿಹಾಕಿದೆ. ಈ ನಕಲಿ ಬೀಜಗಳ ಪಾಕೆಟ್ಟಿನ ಮೇಲೆ ಉತ್ಪನ್ನದ ಹೆಸರಾಗಲೀ, ತಾಂತ್ರಿಕ ವಿವರಗಳಾಗಲೀ, ಅದು ಹೈಬ್ರೀಡ್ ಬೀಜವೋ ಅಥವಾ ಬಿಟಿ ಜೀನ್‌ಗಳನ್ನು ಹೊಂದಿದೆಯೋ ಎಂಬ ಮಾಹಿತಿಯಾಗಲೀ ಇರುವುದಿಲ್ಲ. 2001ರಲ್ಲಿ ಗುಜರಾತಿನಲ್ಲಿ ಸಹ ಹೀಗೆ ಆಗಿತ್ತು. ನವಭಾರತ್ ಬೀಜ ಕಂಪೆನಿ ಸರಕಾರದಿಂದ ಪರವಾನಿಗೆ ಸಿಗುವ ಮುನ್ನವೇ ಬಿಟಿ ಹತ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟವನ್ನು ಮಾಡಿತ್ತು.

ಆಂಧ್ರಪ್ರದೇಶದಲ್ಲಿ ಬಿತ್ತಿದ ಹತ್ತಿ ಬೆಳೆಯಲ್ಲಿ ಶೇ. 15ರಷ್ಟು ಈ ಆರ್‌ಆರ್‌ಎಫ್‌ನ ನಕಲಿ ಬೀಜಗಳಾಗಿದ್ದು ಅದರ ಅಧ್ಯಯನಕ್ಕಾಗಿ ಆಂಧ್ರ ಸರಕಾರ ಒಂದು ತನಿಖಾ ತಂಡವನ್ನು ರಚಿಸಿದೆ. ಈ ಆರ್‌ಆರ್‌ಎಫ್ ಅನ್ನು ಅಭಿವೃದ್ಧಿ ಪಡಿಸಿದ್ದ ಮೊನ್ಸಾಂಟೋ ಕಂಪೆನಿ ಜೆನಿಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯಿಂದ ಪರವಾನಿಗೆ ಪಡೆದುಕೊಳ್ಳಲು 2007ರಲ್ಲಿ ಹಾಕಿಕೊಂಡಿದ್ದ ಅರ್ಜಿಯನ್ನು ಕಳೆದ ವರ್ಷ ಹಿಂಪಡೆದಿದೆ. ಸಿಐಸಿಆರ್ ಸಂಸ್ಥೆಯ ವಿಜ್ಞಾನಿಗಳು ಮಾಡಿರುವ ಒಂದು ಅಂದಾಜಿನ ಪ್ರಕಾರ 2006ರಲ್ಲಿ ದ್ವೀತೀಯ ಹಂತದ ಕೀಟನಾಶಕಗಳ ದಾಳಿ ಹೆಚ್ಚಾದ ಮೇಲೆ ಹತ್ತಿ ಬೆಳೆಗಾಗಿ ಕ್ರಿಮಿನಾಶಕಗಳ ಬಳಕೆ ಅಪಾರಪ್ರಮಾಣದಲ್ಲಿ ಹೆಚ್ಚಾಗಿದೆ. ಈಗ ಮಾರುಕಟ್ಟೆಯಲ್ಲಿ ಸರಿಸುಮಾರು 2000ದಷ್ಟು ಬಿಟಿ ಹತ್ತಿ ವಿಧಗಳಿವೆ.

2013ರಲ್ಲಿ ಬಿತ್ತನೆ ಮಾಡಿದ ಹತ್ತಿ ಬೀಜಗಳಲ್ಲಿ ಶೇ.95ರಷ್ಟು ಬೀಜಗಳು ಹೈಬ್ರಿಡ್ ಹತ್ತಿಬೀಜಗಳೇ ಆಗಿದ್ದವು ಮತ್ತು ಅದರಿಂದಾಗಿ ಕೀಟಗಳ ದಾಳಿಯೂ ಮತ್ತು ಅದರ ಪರಿಣಾಮವಾಗಿ ಕೀಟನಾಶಕಗಳ ಬಳಕೆಯೂ ಹೆಚ್ಚಾದವು. ಈ ಬಾರಿ ವಿದರ್ಭದಲ್ಲಿ ಹಲವಾರು ಬಗೆಯ ಕ್ರಿಮಿ ಮತ್ತು ಕೀಟಗಳು ಒಟ್ಟಾಗಿ ದಾಳಿ ಮಾಡಿದ್ದಾವೆ. ಅವುಗಳಲ್ಲಿ ಮುಖ್ಯವಾದವು ಹಸಿರು ಮತ್ತು ಗುಲಾಬಿ ಬೋಲ್ವರ್ಮ್‌ಗಳು ಹಾಗೂ ತಂಬಾಕು ಕಂಬಳಿಹುಳಗಳು. ಈ ಕೀಟಗಳ ಸತತ ದಾಳಿಯನ್ನು ತಡೆಗಟ್ಟಲು ರೈತರು ವಿವಿಧ ಬಗೆಯ ಅಪಾಯಕಾರಿ ರಾಸಾಯನಿಕಗಳ ಮಿಶ್ರಣವನ್ನು ಹತ್ತಿ ಗಿಡಗಳಿಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹತ್ತಿಸಸಿಗಳನ್ನು ಒತ್ತೊತ್ತಾಗಿ ಬೆಳಯಲಾಗುತ್ತಿದೆ ಮತ್ತು ಅವುಗಳ ಎತ್ತರ ಅಪರೂಪಕ್ಕೊಮ್ಮೆ ಮಾತ್ರ ಐದು ಅಡಿಯನ್ನು ಮೀರುತ್ತವೆ. ಹೀಗಾಗಿ ರೈತರು ಈ ರಾಸಾಯನಿಕಗಳನ್ನು ಗಿಡಗಳಿಗೆ ಹೊಡೆಯುವಾಗ ತಾವು ಸೇವಿಸಿಬಿಡುವ ಅಪಾಯವನ್ನು ಎದುರಿಸಲಾರಂಭಿಸಿದ್ದಾರೆ.

ಈ ಸಾವಿನಾಟದಲ್ಲಿ ಕ್ರಿಮಿನಾಶಕಗಳ ವರ್ತಕರು ಪ್ರಮುಖ ಪಾತ್ರ ವಹಿಸುತ್ತಿದ್ದು ಯಾವುದೇ ಲಜ್ಜೆಯಿಲ್ಲದೆ ಅನಕ್ಷರಸ್ಥ ರೈತಾಪಿಗೆ ಅತ್ಯಂತ ಅಪಾಯಕಾರಿ ಕ್ರಿಮಿನಾಶಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಹಳ ವರ್ಷಗಳಿಂದ ಪ್ರೊಫೆನ್‌ಪೋಸ್ ಮತ್ತು ಸೈಪರ್ಮೆತ್ರಿನ್ ಎಂಬ ಕೀಟನಾಶಕಗಳನ್ನು ರೈತರು ಬಳಸುತ್ತಿದ್ದಾರೆ. ಇವುಗಳ ಸೇವನೆಯಿಂದಲೇ ಸಾವು ಸಂಭವಿಸುತ್ತಿದೆಯೇ ಎಂಬ ಬಗ್ಗೆ ಸೂಕ್ತವಾದ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ. ವಿವಿಧ ಬಗೆಯ ಕ್ರಿಮಿ-ಕೀಟಗಳು ಒಟ್ಟಿಗೆ ದಾಳಿ ಮಾಡುತ್ತಿರುವುದರಿಂದ ರೈತರು ಮಾನೋಕ್ರೋಟೋಪೋಸ್, ಸೈಪರ್‌ಮೆತ್ರಿನ್ ಮತ್ತು ಸಿಂಥೆಟಿಕ್ ಪೈರೆಥ್ರಾಯ್ಡಾ ಎಂಬ ರಾಸಾಯನಿಕಗಳನ್ನು ಬೆರೆಕೆ ಮಾಡಿ ಬಳಸುತ್ತಿದ್ದಾರೆ. ಇದು ಅಪಾಯದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದೆ.

ಹಣವನ್ನು ಉಳಿಸುವ ಸಲುವಾಗಿ ಬಹಳಷ್ಟು ರೈತರು ರಾಸಾಯನಿಕವನ್ನು ಸಿಂಪಡಿಸಲು ದಿನಗೂಲಿಯ ಆಧಾರದ ಮೇಲೆ ರೈತಕೂಲಿಗಳನ್ನು ನೇಮಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಯಾವುದೇ ರಕ್ಷಣೆ ಅಥವಾ ಮುನ್ನೆಚ್ಚರಿಕಾ ದಿರಿಸುಗಳನ್ನು ನೀಡುವ ಪರಿಸ್ಥಿತಿಯಲ್ಲಿ ರೈತರೂ ಇರುವುದಿಲ್ಲ. ಹೀಗಾಗಿ ಇತ್ತೀಚೆಗೆ ಯಾವತ್‌ಮಲ್ ಮತ್ತು ಇತರೆಡೆ ಸಂಭವಿಸಿರುವ ಸಾವುಗಳು ಕೇವಲ ಅಂಕಿ ಅಂಶಗಳಾಗಿ ಮಾತ್ರ ಉಳಿದು ನಿಧಾನವಾಗಿ ಜನಮಾನಸದಿಂದ ಮರೆತುಹೋದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿರುವುದಿಲ್ಲ. ಹೀಗಾಗಿ ಸರಕಾರವು ಒಂದೆಡೆ ಕೂಲಿಗಳ ಸುರಕ್ಷತೆ, ಕ್ರಿಮಿನಾಶಕಗಳ ನಿಯಂತ್ರಣ ಮತ್ತು ಸಮರ್ಪಕ ಆರೋಗ್ಯ ರಕ್ಷಣೆ ವ್ಯವಸ್ಥೆ ಹಾಗೂ ಉತ್ತಮ ಗುಣಮಟ್ಟದ ಬೀಜಗಳ ಪೂರೈಕೆಯ ಬಗ್ಗೆ ಗಮನವಹಿಸಬೇಕು. ಮತ್ತೊಂದೆಡೆ ಹೇಗೆ ವಿವಿಧ ಶಕ್ತಿಗಳು ಮತ್ತು ಅಂಶಗಳು ಒಂದರೊಡನೆ ಬೆರೆತುಕೊಂಡು ಇಡೀ ಕೃಷಿ ವ್ಯವಸ್ಥೆಯನ್ನು ಹದಗೆಡಿಸಿದೆ ಎಂಬುದನ್ನು ಅರ್ಥಮಾಡಿಕೊಂಡು ಅದನ್ನು ಬಗೆಹರಿಸುವಂಥ ರಾಜಕೀಯ ಇಚ್ಛಾಶಕ್ತಿಯನ್ನು ತೋರಬೇಕು. 

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News