ಗುಜರಾತ್ ಭೂಕಂಪದಲ್ಲಿ ದೃಷ್ಟಿ ಕಳೆದುಕೊಂಡ ರೊನಾಲ್ಡ್ ಪ್ರಕಾಶ್
ಮಂಗಳೂರು, ಅ.16: ಹದಿನಾರು ವರ್ಷಗಳ ಹಿಂದೆ (2001ರಲ್ಲಿ) ದೇಶವನ್ನೇ ಬೆಚ್ಚಿ ಬೀಳಿಸಿದ ಗುಜರಾತ್ ಭೂಕಂಪದಲ್ಲಿ ಜೀವ ಉಳಿಸಿಕೊಳ್ಳುವ ಭರದಲ್ಲಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡು ಇದೀಗ ತಳ್ಳುಗಾಡಿಯಲ್ಲಿ ಜೀವನ ಸಾಗಿಸುತ್ತಿರುವ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಯುವಕನೊಬ್ಬನ ಕತೆ ಇದು.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಹಳ್ಳಿ ರೊನಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಗುಜರಾತ್‌ನ ಭುಜ್‌ಗೆ ತೆರಳಿ ಕಂಪೆನಿಯೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದರು.
‘2001ರ ಜನವರಿ 26ರಂದು ಬೆಳಗ್ಗೆ 8:30ರ ಸಮಯ. ಅಂದು ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿತ್ತು. ನಾವಂದು ಕಾರ್ಮಿಕರಿದ್ದ ಕಟ್ಟಡದಲ್ಲಿ ಟಿವಿ ನೋಡುತ್ತಾ ಕುಳಿತಿದ್ದೆವು. ಅಷ್ಟರಲ್ಲಿ ನಾವಿದ್ದ ಕಟ್ಟಡ ಅಲುಗಡತೊಡಗಿದಂತೆ ಭಾಸವಾಯಿತು. ಅಷ್ಟರಲ್ಲಿ ಹೊರಗೆ ಜನರ ಆರ್ತನಾದ ಕೇಳಿಬರತೊಡಗಿತು. ಕ್ಷಣಾರ್ಧದಲ್ಲಿ ನಾವಿದ್ದ ಕಟ್ಟಡ ಜೋಕಾಲಿಯಂತೆ ಓಲಾಡತೊಡಗಿತು. ಕೊಠಡಿಯಲ್ಲಿದ್ದ ಸಾಮಗ್ರಿಗಳು ಬೀಳತೊಡಗಿದವು. ದುರಂತದ ಮುನ್ಸೂಚನೆ ಅರಿತ ನಾವು ನಾಲ್ಕನೆ ಮಹಡಿಯಿಂದ ಎರಡನೆ ಮಹಡಿಗೆ ಓಡಿ ಬಂದೆವು. ಆದರೆ ಅಷ್ಟರಲ್ಲೇ ಕಟ್ಟಡ ಕುಸಿಯತೊಡಗಿತ್ತು. ಜೀವವುಳಿಸಿಕೊಳ್ಳಲು ನಾನು ಎರಡನೆ ಮಹಡಿಯಿಂದ ಜಿಗಿದೆ. ಕೆಳಗೆ ಬೀಳುವ ಸಂದರ್ಭ ಕಟ್ಟಡ ನಿರ್ಮಾಣ ಕಾಮಗಾರಿಗೆ ತಂದಿಟ್ಟಿದ್ದ ಕಬ್ಬಿಣದ ಸರಳೊಂದು ನನ್ನ ಕಣ್ಣಿನೊಳಗೆ ಹೊಕ್ಕಿತ್ತು. ಅಷ್ಟರಲ್ಲಿ ನನಗೆ ಪ್ರಜ್ಞೆ ನನಗೆ ತಪ್ಪಿತ್ತು’ ಎಂದು 13 ಸಾವಿರ ಜನರ ಬಲಿ ಪಡೆದ ಗುಜರಾತ್‌ನ ಭೀಕರ ಭೂಕಂಪದ ನೆನಪನ್ನು ರೊನಾಲ್ಡ್ ಪ್ರಕಾಶ್ ವಿವರಿಸುತ್ತಾರೆ. ‘ಪ್ರಜ್ಞೆ ಬಂದಾಗ ನಾನು ಆಸ್ಪತ್ರೆಯಲ್ಲಿ ಮಲಗಿದ್ದೆ. ಒಂದು ಕಣ್ಣಿನಲ್ಲಿ ನಾನು ನೋಡುತ್ತಿದ್ದರೆ ಇನ್ನೊಂದು ಕಣ್ಣಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಕಣ್ಣಿಗೆ ಆಳವಾದ ಗಾಯವಾಗಿದ್ದರಿಂದ ಆರು ತಿಂಗಳು ಗುಜರಾತ್‌ನ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಅಲ್ಲಿಂದ ಊರಿಗೆ ಮರಳಿದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರನ್ನು ಸಂದರ್ಶಿಸಿದಾಗ ಪರೀಕ್ಷಿಸಿದ ಅವರು ‘‘ದೃಷ್ಟಿ ಮರಳುವುದು ಕಷ್ಟ’’ ಎಂದರು. ಇದರಿಂದ ಇಂದಲ್ಲ ನಾಳೆ ದೃಷ್ಟಿ ಬರುತ್ತದೆ ಎಂಬ ಆಸೆ ಅಂದಿಗೆ ಕೊನೆ ಯಾಯಿತು’ ಎಂದು ರೊನಾಲ್ಡ್ ಪ್ರಕಾಶ್ ಕಣ್ಣಿನ ದೃಷ್ಟಿ ಕಳೆದು ಕೊಂಡ ಬಗ್ಗೆ ಹೇಳುತ್ತಾರೆ. ಗುಜರಾತಿನಲ್ಲಿದ್ದಾಗ ನನ್ನ ಚಿಕಿತ್ಸೆಗೆ ಕಂಪೆನಿ ಸಹಾಯ ಮಾಡಿತ್ತು. ಆದರೆ ದೃಷ್ಟಿ ಕಳೆದುಕೊಂಡಿದ್ದರಿಂದ ಕಂಪೆನಿ ಯಲ್ಲಿ ಕೆಲಸ ಕಳೆದುಕೊಂಡೆ. ಜೀವನ ನಿರ್ವಹಣೆಗಾಗಿ ಊರಿನಲ್ಲಿ ಕೆಲಸ ಹುಡುಕಾಡತೊಡಗಿದೆ. ಸರಕಾರಿ ಕಚೇರಿಗಳಿಗೂ ಹೋದೆ. ಎಲ್ಲೂ ಕೆಲಸ ದೊರೆಯಲಿಲ್ಲ. ಕೆಲವರ ಸಲಹೆಯಂತೆ ಸಲ್ಲಿಸಿದ ಅರ್ಜಿಗೆ ಅಂಗವಿಕಲರ ಇಲಾಖೆಯಿಂದ ಮಾಸಿಕ ಹಣ ಸಿಗುತ್ತಿತ್ತಾದರೂ ನನ್ನ, ಕುಟುಂಬ ನಿರ್ವಹಣೆಗೆ ಅದು ಸಾಕಾಗುತ್ತಿರಲಿಲ್ಲ ಎಂದು ಭೂಕಂಪದ ಬಳಿಕದ ತನ್ನ ಜೀವನದ ಬಗ್ಗೆ ಹೇಳುತ್ತಾರೆ.
ಕೊನೆಗೆ ಸ್ವಂತ ಉದ್ಯೋಗಕ್ಕಾಗಿ ಚಿಂತಿಸಿದ ನಾನು ಗುಜರಾತಿನ ಕಂಪೆನಿಯೊಂದರಲ್ಲಿ ಕುಕ್ ಆಗಿ ಕೆಲಸ ನಿರ್ವ ಹಿಸಿದ್ದರಿಂದ ಫಾಸ್ಟ್‌ಫುಡ್ ತಯಾರಿಸುವುದು ಗೊತ್ತಿತ್ತು. ಇದ್ದ ಅಲ್ಪಸ್ವಲ್ಪ ಹಣವನ್ನು ಕೂಡಿಸಿ ನಾಲ್ಕು ವರ್ಷಗಳ ಹಿಂದೆ ತಳ್ಳುಗಾಡಿಯೊಂದನ್ನು ಖರೀದಿಸಿದೆ. ತಳ್ಳುಗಾಡಿಗೆ ಪರವಾನಿಗೆಗಾಗಿ ಮಂಗಳೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಪಾಲಿಕೆ ಮಾತ್ರ ಇನ್ನೂ ಪರವಾನಿಗೆ ನೀಡಿಲ್ಲ ಎಂದು ಬೇಸರಿಸುತ್ತಾರೆ.
ನನ್ನ ಸಂಸಾರದ ಜೀವನ ನಿರ್ವಹಣೆಗೆ ಏನಾದ ರೊಂದು ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಕೆಲಸ ಎಲ್ಲೂ ಸಿಗುತ್ತಿಲ್ಲ. ತಳ್ಳುಗಾಡಿಗೆ ಪಾಲಿಕೆ ಪರ ವಾನಿಗೆ ಕೊಡುತ್ತಿಲ್ಲ. ಬೇರೆ ದಾರಿಯಿಲ್ಲದೆ ಕಂಕನಾಡಿ ವೆಲೆನ್ಸಿಯಾದ ರಸ್ತೆ ಬದಿ ಯಲ್ಲಿ ಫಾಸ್ಟ್‌ಫುಡ್ ಅಂಗಡಿ ಯನ್ನು ಆರಂಭಿಸಿದೆ. ಅಂಗಡಿಗೆ ಕೆಲಸ ಕೇಳುತ್ತಾ ಬಂದ ಚಿಕ್ಕಮಗಳೂರಿನ ಬಾಳೆಹೊನ್ನೂರಿನ ರಂಜಿತ್ ಎಂಬಾ ತನನ್ನು ನನಗೆ ಸಹಾಯಕನಾಗಿ ಸೇರಿಸಿಕೊಂಡೆ. ಇಬ್ಬರೂ ಸೇರಿ ಅಂಗಡಿ ನಡೆಸುತ್ತಿದ್ದೇವೆ ಎಂದು ಬದುಕು ಕಟ್ಟಿ ಕೊಂಡ ಪರಿಯನ್ನು ವಿವರಿಸುತ್ತಾರೆ.
ರಂಜಿತ್‌ಗೆ ಆಸರೆಯಾದ ರೊನಾಲ್ಡ್ ಪ್ರಕಾಶ್ ರೊನಾಲ್ಡ್ ಪ್ರಕಾಶ್
ಜೊತೆ ಕೆಲಸಕ್ಕಿರುವ ರಂಜಿತ್‌ರದ್ದು ಇನ್ನೊಂದು ಸಂಕಷ್ಟದ ಕತೆ. ರಂಜಿತ್ ತೀರ್ಥಹಳ್ಳಿಯಲ್ಲಿ ತನ್ನ ಅಜ್ಜಿ ಮನೆಗೆ ಹೋಗಿದ್ದ ಸಂದರ್ಭದಲ್ಲಿ ವಿಷ ಸರ್ಪವೊಂದು ಕಾಲಿಗೆ ಕಚ್ಚಿತ್ತು. ಆರಂಭದಲ್ಲಿ ನಾಟಿ ವೈದ್ಯರು ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಅವರ ಒಂದು ಕಾಲು ಬಲಹೀನಗೊಂಡಿತ್ತು. ನಡೆದಾಡಲು ಸಾಧ್ಯವಾಗದೆ ತೆವಳತೊಡಗಿದ ರಂಜಿತ್‌ಕುಂಟುತ್ತಾ ಇದ್ದರೂ ಯಾರ ಮುಂದೆಯೂ ಕೈ ಚಾಚದೆ ಸ್ವಂತ ದುಡಿದು ತಿನ್ನಬೇಕು ಎನ್ನುವ ಛಲ ಹೊಂದಿದ್ದರು.
‘ರಂಜಿತ್ ಒಂದು ದಿನ ಕುಟುಂತ್ತಾ ನನ್ನ ಬಳಿ ಕೆಲಸ ಕೇಳಿಕೊಂಡು ಬಂದ. ನನಗೂ ಒಬ್ಬ ಸಹಾ ಯಕನ ಅಗತ್ಯ ಇತ್ತು. ಹಾಗಾಗಿ ರಂಜಿತ್‌ನನ್ನು ಕೆಲಸಕ್ಕೆ ಸೇರಿಸಿಕೊಂಡೆ. ಕೆಲವು ದಿನಗಳಿಂದ ಆತನ ಕಾಲು ನೋವು ಮತ್ತೆ ಹೆಚ್ಚಾಗಿದೆ. ನಗರದ ಖಾಸಗಿ ಆಸ್ಪತ್ರೆಗೆ ಸೇರಿದ್ದಾನೆ. ಅಲ್ಲಿ ಕಾಲಿಗೆ ಶಸ್ತ್ರಚಿಕಿತ್ಸೆ ಆಗ ಬೇಕು ಎಂದು ವೈದ್ಯರು ತಿಳಿಸಿ ದ್ದಾರೆ’ ಎಂದು ರೊನಾಲ್ಡ್ ಪ್ರಕಾಶ್ ತನ್ನಂತೆಯೇ ವಿಕಲಚೇತನರಾದ ರಂಜಿತ್‌ರ ಕತೆಯನ್ನು ವಿವರಿಸುತ್ತಾರೆ.