ವಡಿವೇಲು: ದೈತ್ಯ ಪ್ರತಿಭೆಯೊಂದರ ದುರಂತ ಕಥನ

Update: 2017-10-26 09:18 GMT

ಮೊನ್ನೆ ‘ಮೆರ್ಸಾಲ್’ ಚಿತ್ರ ನೋಡಿದೆ. ಈ ಚಿತ್ರದಲ್ಲಿ ಅತ್ತ ಆಟಕ್ಕೂ ಇಲ್ಲದ ಇತ್ತ ಲೆಕ್ಕಕ್ಕೂ ಇಲ್ಲದ ‘ವಡಿವೇಲು’ವನ್ನು ಕಂಡೆ. ಮೂರು ದಶಕಗಳಿಗೂ ಹೆಚ್ಚುಕಾಲ ತಮಿಳರನ್ನು ನಗಿಸಿ ರಂಜಿಸಿದ ವಡಿವೇಲು ಎಂಬ ಈ ಜಗತ್ತು ಕಂಡ ಕೆಲವೇ ಕೆಲವು ಅತ್ಯದ್ಭುತ ಹಾಸ್ಯನಟರಲ್ಲಿ ಒಬ್ಬನಾದ ವಡಿವೇಲುವನ್ನು ಕಂಡೆ. ದುಃಖ ಒತ್ತರಿಸಿ ಬಂತು. ಕಳೆದ ಎರಡು ದಶಕಗಳಿಗೂ ಹೆಚ್ಚುಕಾಲ ನಾನು ವಡಿವೇಲು ಕಟ್ಟಿಕೊಟ್ಟ ನಗೆಲೋಕದಲ್ಲಿ ದಣಿವಿಲ್ಲದೆ ನಡೆದು ಬಂದಿದ್ದೇನೆ.

ಚಾಪ್ಲಿನ್, ಲಾರೆಲ್ ಅಂಡ್ ಹಾರ್ಡಿ, ಗೌಂಡುಮಣಿ ಮತ್ತು ಸೆಂದಿಲ್, ಜಾನಿ ಲೀವರ್, ನರಸಿಂಹರಾಜು ನಂತರ ನಾನು ತೀವ್ರವಾಗಿ ಹಾಸ್ಯನಟನೊಬ್ಬನನ್ನು ‘the healer and the therapist’ ತರಹ ಹಚ್ಚಿಕೊಂಡದ್ದು ಇದೇ ವಡಿವೇಲುವನ್ನು. ವಡಿವೇಲು ತಮಿಳು ಚಿತ್ರರಂಗಕ್ಕೆ ಕಾಲಿಡುವ ಹೊತ್ತಿಗೆ ಗೌಂಡುಮಣಿ ಮತ್ತು ಸೆಂದಿಲ್’ರ ಕೆಮಿಸ್ಟ್ರಿ ಕಾಲಿವುಡ್’ನಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲವದು.

ಜಗತ್ತಿನ ಬಹುತೇಕ ಪ್ರತಿಭಾವಂತರನ್ನು ಸೋಕಿ ಹಾದುಹೋಗುವ ‘ಕೀರ್ತಿಶನಿ’ ಮತ್ತು ‘ಇಗೋ’ ಎಂಬ ಎರಡಲಗಿನ ಕತ್ತಿ ಅವತ್ತೊಂದು ದಿನ ಗೌಂಡುಮಣಿ ಮತ್ತು ಸೆಂದಿಲ್’ರ ಬದುಕಿನಲ್ಲೂ ಪ್ರವೇಶಿಸಿತು. ಮೌನ, ಮುನಿಸು ಮತ್ತು ಮೊದಲೇ ಕುದಿಯುತ್ತಿದ್ದ ‘ಇಗೋ’ ಈ ಇಬ್ಬರು ನಟರನ್ನು ಸಾರ್ವಜನಿಕವಾಗಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ತಂದು ನಿಲ್ಲಿಸಿತು. ಮುಪ್ಪು, ಸುಕ್ಕುಗಟ್ಟಿದ ಚರ್ಮ, ನೆರೆತ ಕೂದಲು ಈ ಇಬ್ಬರು ನಟರನ್ನು ಪರಸ್ಪರ ದೂರ ಮಾಡುವ ಮುನ್ನ ‘ಇಗೋ’ ಎಂಬುದು ಇವರನ್ನು ಶಾಶ್ವತವಾಗಿ ತಮಿಳು ಚಿತ್ರರಂಗದಿಂದಲೇ ದೂರಮಾಡಿತು.

ಗೌಂಡುಮಣಿ ಮತ್ತು ಸೆಂದಿಲ್’ರ ಗೈರು ಹಾಜರಿಯನ್ನು ಸಮರ್ಥವಾಗಿ ರಿಪ್ಲೇಸ್ ಮಾಡಿದ್ದು ಇದೇ ವಡಿವೇಲು ಮತ್ತು ವಿವೇಕ್.

ದುರಂತಕ್ಕೂ ಮುನ್ನ ಕಾಣಿಸಿಕೊಂಡ ಬಿರುಕು…

21ನೇ ಸೆಪ್ಟೆಂಬರ್ 2008. ವಡಿವೇಲು ಬದುಕಿನ ಪತನಕಾಂಡದ ಮೊದಲ ಅಧ್ಯಾಯ ಪ್ರಾರಂಭವಾದ ದಿನ. ಜೀವದ ಗೆಳೆಯರಿಂತಿದ್ದ ವಿಜಯಕಾಂತ್ ಮತ್ತು ವಡಿವೇಲು ಒಬ್ಬರನ್ನೊಬ್ಬರು ಮುಗಿಸುವ ಹಂತಕ್ಕೆ ಬಂದ ದಿನವದು. 30 ಮಂದಿ ಗೂಂಡಾಗಳನ್ನು ಕಳಿಸಿ ವಡಿವೇಲುವನ್ನು ಮುಗಿಸಲು ವಿಜಯಕಾಂತ್ ಕೊಟ್ಟ ಸುಪಾರಿ ಹಾದಿತಪ್ಪಿ ವಡಿವೇಲು ಮನೆಯನ್ನು ಛಿದ್ರಗೊಳಿಸಿತು. ಬದುಕುಳಿದ ವಡಿವೇಲು ನೇರ ಓಡಿದ್ದು ನಟ ಶರತ್ ಕುಮಾರ್ ಮನೆಗೆ. ಆಗ ಶರತ್ ಕುಮಾರ್ ತಮಿಳು ಚಲನಚಿತ್ರ ಕಲಾವಿದರ ‘ನಡಿಗರ್ ಸಂಘಮ್’ ಅಧ್ಯಕ್ಷ ಜೊತೆಗೆ DMK ಕಟ್ಟಾಬೆಂಬಲಿಗ.

ಇದೇ ಶರತ್ ಕುಮಾರ್ ಅಮಾಯಕನಂತಿದ್ದ ವಡಿವೇಲುವನ್ನು ಕರೆದೊಯ್ದು ನಿಲ್ಲಿಸಿದ್ದು ಕರುಣಾನಿಧಿಯೆದುರು. ‘ವಿಜಯಕಾಂತ್ ಎದುರು ಬದುಕುಳಿಯಲು, ಸೇಡು ತೀರಿಸಿಕೊಳ್ಳಲು, ಹತ್ತಿಕ್ಕಲು ಮತ್ತು ಆಳಲು ನಿನಗುಳಿದಿರುವುದು ಇದೊಂದೇ ದಾರಿ: DMK. ಇದೊಂದು ಸಲ DMK ಜೊತೆಗಿರು, ವಿಜಯಕಾಂತ್ ನಿನ್ನ ಕಾಲ ಬಳಿ ಬಂದು ಬೀಳುವಂತೆ ಕರುಣಾನಿಧಿ ಮಾಡ್ತರೆ…’ ಶರತ್ ಕುಮಾರ್ ಮಾತಾಡುತ್ತಲೇ ಇದ್ದ.

ಇತ್ತ ವಡಿವೇಲು DMK ಪರ ಉಗ್ರ ಚುನಾವಣಾ ಪ್ರಚಾರಕ್ಕೆ ಬೀದಿಗಿಳಿದರೆ ಅತ್ತ ವಿಜಯಕಾಂತನ Desiya Murpokku Dravida Kazhagam(DMDK) ಜಯಲಲಿತಾರ AIADMK ಜತೆಗೂಡಿತ್ತು. ಸಿಟ್ಟಿಗೆ ಸಿಕ್ಕ ವಡಿವೇಲು ಚುನಾವಣಾ ಪ್ರಚಾರದಲ್ಲೂ ವಿಜಯಕಾಂತ್ ಮೇಲೆ ತೀರಾ ಸೊಂಟದ ಕೆಳಗಿನ ಅಸಹ್ಯಕರ ಭಾಷೆ ಬಳಸಿ ಮೊದಲೇ ವ್ಯಗ್ರರಾಗಿದ್ದ DMDK ಸದಸ್ಯರನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದ. ಜಯಲಲಿತಾ ಒಡೆತನದ TV ಚಾನೆಲ್’ಗಳಲ್ಲಿ ವಡಿವೇಲು ನಟಿಸಿದ ಸಿನಿಮಾಗಳು ಪ್ರಸಾರ ಕಂಡರೂ ವಡಿವೇಲುವಿನ ಹಾಸ್ಯದೃಶ್ಯಗಳಿಗೆ ಕತ್ತರಿ ಬೀಳಲು ಶುರುವಾಯಿತು.

ವಿಧಾನಸಭಾ ಚುನಾವಣಾ ಗೆಲುವು ಮತ್ತೆ ಜಯಲಲಿತಾರನ್ನು ತಮಿಳುನಾಡಿನ ಏಕೈಕ ದೊರೆಸಾನಿಯನ್ನಾಗಿಸಿತ್ತು. ಜತೆಗೆ ವಿಜಯಕಾಂತ್ ಕೂಡ ದೊಡ್ಡ ಗೆಲುವು ಪಡೆದಿದ್ದ. ಮುಂದೆ ಶರತ್ ಕುಮಾರ್ ತೆರವುಗೊಳಿಸಿದ ‘ನಡಿಗರ್ ಸಂಘಮ್’ ಅಧ್ಯಕ್ಷ ಸ್ಥಾನ ಅನಾಯಾಸವಾಗಿ ವಿಜಯಕಾಂತ್’ನನ್ನು ಹುಡುಕಿಕೊಂಡು ಬಂತು. ಹತಾಶ ವಡಿವೇಲು ಮಾತ್ರ ಅವಕಾಶ ಸಿಕ್ಕಾಗಲೆಲ್ಲ ವಿಜಯಕಾಂತ್ ವಿರುದ್ಧ ನಾಲಿಗೆ ಝಳಪಿಸುತ್ತಲೇ ಇದ್ದ.

DMK ಮತ್ತು AIADMK ಜೊತೆಗೆ ತಮಿಳು ಚಿತ್ರರಂಗ ಕೂಡ ಇಬ್ಭಾಗವಾಗಿ ಹೋಗಿತ್ತು. ಸೇಡಿಗಾಗಿ ಕುದಿಯುತ್ತಿದ್ದ ವಿಜಯಕಾಂತ್ ಮತ್ತೊಮ್ಮೆ ವಡಿವೇಲುವಿನ ಮಧುರೈ ಮನೆಯ ಮೇಲೆ ಭೀಕರ ದಾಳಿ ಮಾಡಿಸಿದ. ಹೇಗೋ ಸ್ಥಳೀಯರ ನೆರವಿನಿಂದ ವಡಿವೇಲು ಪ್ರಾಣ ಉಳಿಸಿಕೊಂಡು ಅಲ್ಲಿಂದ ಪಾರಾದರೆ ಅವನ ಮನೆ ಮಾತ್ರ ಪೂರ್ತಿ ಚಿಂದಿಯಾಗಿ ನೆಲಸಮವಾಗಿತ್ತು.

ಕ್ರಮೇಣ ಕರುಣಾನಿಧಿ ಚಾನೆಲ್’ಗಳು ಬಿಟ್ಟರೆ ಇನ್ನುಳಿದ TV ಚಾನೆಲ್’ಗಳು ವಡಿವೇಲು ನಟಿಸಿದ್ದ ಚಿತ್ರಗಳನ್ನು ಪ್ರಸಾರ ಮಾಡಲು ಹಿಂಜರಿದವು. ಇದೇ ವಡಿವೇಲು DMK ಪರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಜಯಕಾಂತ್ ವಿರುದ್ಧ ಸೊಂಟದ ಕೆಳಗಿನ ಭಾಷೆ ಬಳಸಿ ಮಾತಾಡಿದ ವಿಡಿಯೋ ತುಣುಕೊಂದು ಇಟ್ಟುಕೊಂಡು ತಮಿಳು ಚಾನೆಲೊಂದು ದಿನಪೂರ್ತಿ ವಡಿವೇಲುವನ್ನು ಇಂಚಿಂಚೆ ಬೆತ್ತಲು ಮಾಡತೊಡಗಿತು.

ಆ ವಿಡಿಯೋ ತುಣುಕನ್ನು ಇಟ್ಟುಕೊಂಡು ಇದೇ ವಿಜಯಕಾಂತ್, ವಡಿವೇಲುವಿನ ಮೇಲೆ ಐದು ವರ್ಷಗಳ ಕಾಲ ತಮಿಳು ಚಲನಚಿತ್ರಗಳಲ್ಲಿ ನಟಿಸದಂತೆ ನಿಷೇಧದ ಆದೇಶವೊಂದನ್ನು ಹೊರಡಿಸಿದ. ವಡಿವೇಲು ಬೆನ್ನಿಗಿದ್ದ ನಟರು ನಿಷೇಧ ತೆರವುಗೊಳಿಸಲು ನಡೆಸಿದ ಪ್ರಯತ್ನಗಳೆಲ್ಲವೂ ವಿಜಯಕಾಂತ್ ಮುಂದೆ ಮಂಡಿಯೂರಿ ನಿಂತವು. ಕಡೆಗೆ ನಿಷೇಧದ ಅವಧಿಯನ್ನು ಮೂರು ವರ್ಷಗಳಿಗೆ ಇಳಿಸಲಾಯಿತು.

2012 ರಿಂದ 2015ರ ಮೂರು ವರುಷಗಳ ಆ ಅಮಾನತಿನ ಅವಧಿಯೆಂಬುದು ವಡಿವೇಲು ಪಾಲಿನ ಪತನದ ಕಾಲವಾಯಿತು. ತಮಿಳರ ಜ್ಞಾಪಕಚಿತ್ರಶಾಲೆಯಿಂದ ವಡಿವೇಲು ಕಣ್ಮರೆಯಾದ ಅತ್ಯಂತ ಕ್ರೂರ ಕಾಲವದು. ಈ ಅವಧಿಯಲ್ಲಿ ವಡಿವೇಲು ನಟಿಸಿದ್ದ ಹಳೆಯ ಚಲನಚಿತ್ರಗಳು ಕೂಡ TVಯಲ್ಲಿ ಕಾಣಿಸಿಕೊಳ್ಳಲಿಲ್ಲ.

ಜೀವಭಯದಿಂದಿದ್ದ ವಡಿವೇಲುವಿಗೆ ಕನ್ನಡ ಚಿತ್ರರಂಗದ ನಿರ್ಮಾಪಕರೊಬ್ಬರು ಕೆಲಕಾಲ ಬೆಂಗಳೂರಿನ ಜಕ್ಕೂರಿನ ಬಳಿ ನೆಲೆಯೊದಗಿಸಿದ್ದರು. ಈಗಲೂ ಆ ನಿರ್ಮಾಪಕರ ಹೆಸರು ವಡಿವೇಲು ಕಿವಿಗೆ ಬಿದ್ದರೂ ಸಾಕು ಅವನು ಕಣ್ಣೀರಾಗುತ್ತಾನೆ.

ಅಮಾನತಿನ ಅವಧಿ ಮುಗಿದು ಮರಳಿ ವಡಿವೇಲು ಕಾಲಿವುಡ್ಡಿಗೆ ಬರುವಷ್ಟರಲ್ಲಿ ಸಂತಾನಂ, ಗಂಜಾ ಕರುಪ್ಪು, ಪರೋಟ್ಟಾ ಸೂರಿ… ಮೊದಲಾದವರು ವಡಿವೇಲು ಸ್ಥಾನಕ್ಕೆ ಬಂದುಕೂತಿದ್ದರು. ವಡಿವೇಲುವಿನ ಸಮಕಾಲೀನ ವಿವೇಕ್ ಕೂಡ ನೇಪಥ್ಯಕ್ಕೆ ಸರಿದು ಕೂತವನಂತೆ ಕಾಣುತ್ತಿದ್ದ. ಚಿಳ್ಳೆಪಿಳ್ಳೆ ನಾಯಕನಟರೇ ಹಾಸ್ಯಪಾತ್ರಗಳಲ್ಲೂ ಮಿಂಚುತ್ತಿದ್ದರು. ಮರಳಿ ಬಂದು ‘ಎಲಿ’, ‘ತೆನಾಲಿರಾಮನ್’ ಮೂಲಕ ಇನ್ನೊಂದು ಇನ್ನಿಂಗ್ಸ್ ಆರಂಭಿಸಿದ ವಡಿವೇಲು ಯಾಕೋ ಮೊದಲಿನ ಕಾಂತಿ ಕಳೆದುಕೊಂಡು ಮಂಕಾಗಿದ್ದ.

ಹಿಂದೆ ಎಸಗಿದ ತಪ್ಪುಗಳಿಂದೆಲ್ಲ ಪಾಠ ಕಲಿತವನಂತೆ ಕಾಣುತ್ತಿದ್ದ ವಡಿವೇಲು ‘ಮತ್ತಿನ್ನೆಂದೂ ಈ ದರಿದ್ರ ರಾಜಕೀಯದ ಅಂಗಳಕ್ಕೆ ಕಾಲಿಡಲಾರೆ; ಹಾಸ್ಯನಟನಾಗಿಯೇ ಸಾಯುತ್ತೇನೆ. ಜನ ಇವತ್ತಿಗೂ ನನ್ನನ್ನು ಗುರುತಿಸೋದು ನಟನೆಂದೇ’ ಎಂದು TVಮುಂದೆ ಬಿಕ್ಕಿಬಿಕ್ಕಿ ಅತ್ತು ಹೇಳಿದ್ದ. ಹಾಗೇ ವಡಿವೇಲು ಪಶ್ಚಾತ್ತಾಪದ ದನಿ ತೆಗೆಯುವ ಹೊತ್ತಿಗೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದು ಆಗಿತ್ತು. ಹಿಂದೆ ಇದೇ ವಡಿವೇಲು ನಡೆದಿದ್ದ ರಾಜಬೀದಿಯಲ್ಲಿ ಹತ್ತಾರು ಕಲಾವಿದರು ನಡೆದು ಆತನ ಹೆಜ್ಜೆಗುರುತುಗಳನ್ನೆಲ್ಲ ಮಾಸಿಹೋಗುವಂತೆ ಮಾಡಿಬಿಟ್ಟಿದ್ದರು.

‘ಅವನಾ ನೀ’, ‘ತುಪಾಕಿಯಾ’ ‘ಹಲೋ ಎಚ್ಚೂಜ್ಮೀ’, ‘ನಾ ವುಂಗಾ ಬೆಸ್ಟು ಪ್ರೆಂಡು’, ‘ಅಯ್ಯೋ ವಡೈ ಪೋಚೇ’, ‘ಬೀ ಕೇರ್ಪುಲ್’, ‘ಸ್ವಿಂಗ್ ಇನ್ ದ ರೈನ್ ಐ ಯಾಮ್ ಸ್ವೈನ್ ಇನ್ ದ ರೈನ್…’ ಎಂಬ ಪದಗಳನ್ನು ವಡಿವೇಲು ಬಾಯಿಂದ ಕೇಳಿಸಿಕೊಂಡವರು ನಗದೇ ಇರಲಾರರು. ನನ್ನ ಹತಾಶೆ, ದಿಗಿಲು, ಸಿಟ್ಟಿನ ಕ್ಷಣಗಳಲ್ಲೆಲ್ಲ ವಡಿವೇಲು ನಟಿಸಿರುವ ಹಾಸ್ಯದ ಸನ್ನಿವೇಶಗಳು ಜೀವದ್ರವ್ಯದಂತೆ, ತೀವ್ರವಾಗಿ ಬದುಕುವ ಆಸೆಹುಟ್ಟಿಸುವ ಟಾನಿಕ್ಕಿನಂತೆ ನೆರವಿಗೆ ಬಂದಿವೆ. ತಿರುನೆಲ್ವೇಲಿಯಿಂದ ನಮ್ಮೂರಿಗೆ ಮರಳುವಾಗ ವಡಿವೇಲುವಿನದೇ ಮೂವತ್ತು ಡಿವಿಡಿಗಳನ್ನು ಖರೀದಿಸಿ ಜೋಳಿಗೆ ತುಂಬಿಕೊಂಡಿದ್ದೇ. ಯೂಟ್ಯೂಬ್ ನೆರವಿನಿಂದ ವಡಿವೇಲುವಿನ ನೂರಾರು Comedy Videoಗಳನ್ನು ಡೌನ್ಲೋಡ್ ಮಾಡಿ ಇಟ್ಟುಕೊಂಡಿರುವೆ.

ವಡಿವೇಲು ಕಾಮಿಡಿಯಲ್ಲಿ ಚಿಕಿತ್ಸಕ ಗುಣಗಳಿವೆ. ಅದರ ಬಹುದೊಡ್ಡ ಫಲಾನುಭವಿ ನಾನು.

Writer - ಕೆ.ಎಲ್. ಚಂದ್ರಶೇಖರ್ ಐಜೂರು

contributor

Editor - ಕೆ.ಎಲ್. ಚಂದ್ರಶೇಖರ್ ಐಜೂರು

contributor

Similar News