ಜಗದಗಲ ಮೆರೆಯಲಿ ಕನ್ನಡ ಸಂಭ್ರಮ

Update: 2017-10-31 18:44 GMT

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತೀ ವರ್ಷದ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಈ ದಿನಗಳಲ್ಲಿ ಕನ್ನಡ ಬಾವುಟ ಸರಕಾರದ ಪ್ರಮುಖ ಕಚೇರಿಗಳ ಮೇಲೆ ಎಲ್ಲೆಲ್ಲಿಯೂ ಹಾರಾಡುತ್ತಿರುತ್ತದೆ.

ಕರ್ಣಾಟಕ, ಕರ್ಣಾಟ ಮತ್ತು ಕನ್ನಡ ಶಬ್ದಗಳು, ದೇಶ, ಭಾಷೆ, ಜನ ಮತ್ತು ಕುಲವನ್ನು ನಿರ್ದೇಶಿಸುತ್ತದೆ. ಕವಿರಾಜಮಾರ್ಗದಲ್ಲಿಯೂ ಆಂಡಯ್ಯನ ಕಬ್ಬಿನರ ಕಾವ್ಯದಲ್ಲಿಯೂ ಕನ್ನಡ ದೇಶವಾಚಕವಾಗಿದೆ. ಚೆನ್ನ ಬಸವೇಶ್ವರ, ನಿಜಗುಣ ಶಿವಯೋಗಿಗಳ ಉಲ್ಲೇಖಗಳಲ್ಲಿ ಅದು ಕುಲವಾಚಕವಾಗಿ ಬಂದಿರುವಂತೆ ತೋರುತ್ತದೆ. ಮುಖ್ಯವಾಗಿ ಆ ಶಬ್ದಗಳು ದೇಶ ಮತ್ತು ಭಾಷಾ ವಾಚಕಗಳಾಗಿಯೇ ಪ್ರಯೋಗವಾಗುತ್ತದೆ.

ಕರ್ಣಾಟಕ ಏಕೀಕರಣ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕರ್ಣಾಟಕ ಪ್ರದೇಶ ಪ್ರಾಕೃತಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಮಾತ್ರವೇ ಅಲ್ಲದೆ ರಾಜಕೀಯವಾಗಿಯೂ ಅಖಂಡವಾದದ್ದು. ಕದಂಬ, ಗಂಗ, ಬಾದಾಮಿಯ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣದ ಚಾಲುಕ್ಯ, ಹೊಯ್ಸಳ, ಸೇವುಣ, ಕುಮ್ಮಟದುರ್ಗ, ಕಾಕತೀಯ, ವಿಜಯನಗರ, ಕೆಳದಿ, ಮೈಸೂರು ಮುಂತಾದ ರಾಜ್ಯಗಳನ್ನಾಡಿದವರು ಅಚ್ಚಕನ್ನಡ ದೊರೆಗಳು. ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರ ರಾಜ್ಯಗಳು ಬಹಳ ವಿಸ್ತಾರವಾಗಿಯೇ ಇದ್ದವು. ಹೊಯ್ಸಳರೂ ಸೇವುಣರೂ ಅನುಕ್ರಮವಾಗಿ ಕೃಷ್ಣಾನದಿಯ ಉತ್ತರದಲ್ಲಿಯೂ ದಕ್ಷಿಣದಲ್ಲಿಯೂ ರಾಜ್ಯವಾಳಿದರು. ವಿಜಯನಗರ ಸಾಮ್ರಾಜ್ಯ ಕೃಷ್ಣಾನದಿಯ ದಕ್ಷಿಣಕ್ಕೆ ಭಾರತದ ದಕ್ಷಿಣ ತುದಿಯವರೆಗೂ ವ್ಯಾಪಿಸಿತ್ತು. ಕಾಕತೀಯರು ರಾಯಚೂರು, ಗುಲ್ಬರ್ಗ ಮತ್ತು ಬೀದರ ಜಿಲ್ಲೆಗಳನ್ನು ಕೆಲವು ಕಾಲ ಆಳುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪತನವಾದ ಮೇಲೆ (1565) ಕರ್ಣಾಟಕದ ಅಖಂಡತೆಗೆ ನಷ್ಟ ಒದಗಿತು. ಆನಂತರ ತಲೆಯೆತ್ತಿಕೊಂಡ ಮೈಸೂರರಸರ ಕಾಲದಲ್ಲಿ ಕರ್ಣಾಟಕದ ಬಹುಭಾಗ ರಾಜಕೀಯವಾಗಿ ಒಂದಾಯಿತು. ನಾಲ್ಕನೆಯ ಮೈಸೂರು ಯುದ್ಧದಲ್ಲಿ (1799) ಟಿಪ್ಪುವಿನ ಪತನವಾಗಿ ಭಾರತದಲ್ಲಿ ಬ್ರಿಟಿಷರ ಆಡಳಿತ ಸ್ಥಿರಗೊಂಡಾಗ ಕರ್ಣಾಟಕವೂ ಛಿದ್ರವಾಯಿತು. 22 ಆಡಳಿತಗಳ ಅಡಿಯಲ್ಲಿ ಆಗಲೇ ಬಿಹಾರ, ಒರಿಸ್ಸ್ಸಾ, ಸಿಂಧ ಪ್ರಾಂತಗಳು ನಿರ್ಮಾಣವಾದದ್ದು. ಆ ಪ್ರಾಂತಗಳನ್ನು ನಿರ್ಮಿಸಿದಾಗಲೂ ಭಾಷೆಯೇ ಆಧಾರವಾಗಿತ್ತೆಂಬುದು ಕಂಡು ಬರುತ್ತದೆ. ಆದರೆ ಅದನ್ನು ಯಾರೂ ಒತ್ತಿ ಹೇಳಲಿಲ್ಲ.

ಕನ್ನಡದ ಕುಲಪುರೋಹಿತರಾದ ಆಲೂರು-ವೆಂಕಟರಾವ್, ಕರ್ನಾಟಕ ಏಕೀಕರಣ ಚಳವಳಿಯನ್ನು 1905ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.

1956ರ ನವೆಂಬರ್ 1ರಂದು, ಮದ್ರಾಸ್, ಮುಂಬೈ, ಹೈದರಾಬಾದ್ ಪ್ರಾಂತದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡ ಮುಂಚಿನ ರಾಜ್ಯದ ಹೆಸರು ಇರಲೆಂದು ಮೈಸೂರು ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ ರಾಜ್ಯದ ಹೆಸರು ನವೆಂಬರ್ 1, 1973 ರಂದು ‘ಕರ್ನಾಟಕ’ ಎಂದು ಬದಲಾಯಿತು.

ಈ ಸಂದರ್ಭದಲ್ಲಿ ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿ ದ್ದರು. ಕರ್ನಾಟಕ ಏಕೀಕರಣದ ಮುನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಠಯ್ಯ.

ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಗಳನ್ನು ವಿತರಿಸುತ್ತಾರೆ.

ಅಲ್ಲದೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ಸಾಗರೋತ್ತರದಲ್ಲಿ ಅಮೆರಿಕ, ಸಿಂಗಾಪುರ್, ದುಬೈ, ಮಸ್ಕತ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ. ಇದು ‘‘ಎಲ್ಲಾದರೂ ಇರು, ಎಂಥಾದರೂ ಇರು.... ಎಂದೆಂದಿಗೂ ನೀ ಕನ್ನಡವಾಗಿರು’’ ಎಂಬ ಕವಿವಾಣಿಯನ್ನು ಸಾರುತ್ತದೆ.

Writer - ಜಗದೀಶ ವಡ್ಡಿನ, ಕಾರವಾರ

contributor

Editor - ಜಗದೀಶ ವಡ್ಡಿನ, ಕಾರವಾರ

contributor

Similar News