ಒಡಲುಗೊಂಡು ನೋಡಾ ರಾಮನಾಥ

Update: 2017-11-17 18:48 GMT

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರ.
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
                                     - ಜೇಡರ ದಾಸಿಮಯ್ಯ

 ಈಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರಿನಲ್ಲಿದ್ದು ನೆಯ್ಗೆಯ ಕಾಯಕದೊಂದಿಗೆ ಆದ್ಯ ವಚನಕಾರರಾಗಿ ಪ್ರಸಿದ್ಧರಾದವರು ಜೇಡರ ದಾಸಿಮಯ್ಯ ನವರು. ಅವರ ಆರಾಧ್ಯದೈವ ರಾಮನಾಥನ ದೇವಾಲಯ ಮುದನೂರಿನಲ್ಲಿದೆ. ಕಾಮಯ್ಯ ಶಂಕರಿಯರ ಮಗ ದಾಸಿಮಯ್ಯನವರ ಅನುರೂಪದ ಪತ್ನಿ ದುಗ್ಗಳೆ. ಕಲ್ಯಾಣ ಚಳವಳಿಯ ಸೆಲೆಯನ್ನು ದಾಸಿಮಯ್ಯನವರ ಸರಳ ಸುಂದರ ಕಾವ್ಯಾತ್ಮಕ ವಚನಗಳಲ್ಲಿ ಕಾಣಬಹುದು. ಇವೆಲ್ಲವುಗಳಿಗಿಂತ ಹೆಚ್ಚಾಗಿ ಅವರ ವಚನಗಳು ಸಾಂಸಾರಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿವೆ. ದಾಂಪತ್ಯದ ಮಹತ್ವವನ್ನು ಸಾರುವ ಮತ್ತು ಬಡವರ ಪರವಾಗಿ ನಿಂತು ಆರಾಧ್ಯ ದೇವನನ್ನು ಎದುರಿಸುವ ಅವರ ವಚನಗಳಲ್ಲಿ ಮಾನವಸಂಬಂಧಗಳ ಸ್ಪಂದನವಿದೆ.

ದೇವರು ನಿರಾಕಾರನಾಗಿದ್ದಾನೆ. ಹಸಿವು ತೃಷೆಗಳು ಆತನ ಬಳಿ ಸುಳಿಯಲಾರವು. ಆದರೆ ಜನ ಲೌಕಿಕ ಜಗತ್ತಿನಲ್ಲಿದ್ದಾರೆ. ಅವರಿಗೆ ಹಸಿವು ನೀರಡಿಕೆಗಳಾಗುತ್ತವೆ. ಬಡವರಿಗಂತೂ ಹೊಟ್ಟೆ ತುಂಬಿಸಿಕೊಳ್ಳುವುದೇ ದೈನಂದಿನ ಸಮಸ್ಯೆಯಾಗಿರುತ್ತದೆ. ಹೊಟ್ಟೆಪಾಡಿಗಾಗಿ ಕೆಲವರು ಸುಳ್ಳು ಹೇಳುವುದು ಸಹಜವಾಗಿದೆ. ದಾಸಿಮಯ್ಯನವರು ಅಂಥ ನಿರ್ಗತಿಕರ ಪರವಾಗಿ ನಿಂತು ದೇವರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಆ ಕಡುಬಡವರ ಧ್ವನಿಯಾಗಿ ದೇವರನ್ನು ಪ್ರಶ್ನಿಸುತ್ತಾರೆ. ನಾನು ಹಸಿಯುವ ದೇಹವುಳ್ಳವ ನೆಂದು ಗದರಿಸಿ ಮಾತನಾಡಬೇಡ ಎಂದು ದೇವರಿಗೆ ಎಚ್ಚರಿಕೆ ನೀಡುತ್ತಾರೆ. ನೀನೂ ನನ್ನ ಹಾಗೆ ಒಂದುಸಲವಾದರೂ ದೇಹವನ್ನು ಧರಿಸಿ ನೋಡು. ಆಗ ನಿನಗೆ ಹಸಿವಿನ ಅನುಭವವಾಗುತ್ತದೆ. ನೀನು ಕೂಡ ಸುಳ್ಳು ಹೇಳುವ ಪ್ರಸಂಗ ಬರುತ್ತದೆ. ಆಗ ದೇಹ ಹೊಂದಿದವರ ಸಮಸ್ಯೆಗಳ ಅರಿವಾಗುತ್ತದೆ ಎಂದು ದಾಸಿಮಯ್ಯನವರು ದೇವರಿಗೆ ಸವಾಲು ಹಾಕುತ್ತಾರೆ. ಹೀಗೆ ಅವರು ಬಡವರ ಪಕ್ಷ ವಹಿಸುತ್ತಾರೆ. ಬಡವರ ಅಸಹಾಯಕ ಬದುಕಿನ ಬಗ್ಗೆ ಅವರು ಸ್ಪಂದಿಸಿದ ಕ್ರಮ ಹೃದಯಸ್ಪರ್ಶಿಯಾಗಿದೆ. ದೇವರ ಪಕ್ಷಪಾತಿಯಾಗದೆ ಬಡವರ ಪಕ್ಷಪಾತಿಯಾಗುವ ಅವರ ವ್ಯಕ್ತಿತ್ವ ಅನನ್ಯವಾಗಿದೆ.

ದೇವರ ಜೊತೆ ಇಷ್ಟೊಂದು ತಕರಾರು ಮಾಡುವ ಜೇಡರ ದಾಸಿಮಯ್ಯನವರು ‘‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ.’’ ಎಂದು ಇನ್ನೊಂದು ವಚನದಲ್ಲಿ ದೇವರನ್ನು ಕೊಂಡಾಡುತ್ತಾರೆ.

ಈ ಭೂಮಿಯು ವೈವಿಧ್ಯಮಯವಾದ ಸಂಪನ್ಮೂಲಗಳಿಂದ ಕೂಡಿದ್ದು ಪ್ರತಿಯೊಂದು ಜೀವದ ಆವಶ್ಯಕತೆಯನ್ನು ಪೂರೈಸುವ ಶಕ್ತಿಯನ್ನು ಹೊಂದಿದೆ. ಆದರೆ ಶೋಷಕರ ಸ್ವಾರ್ಥದಿಂದಾಗಿ ಶೋಷಿತರು ಸಹಸ್ರ ಸಹಸ್ರ ವರ್ಷಗಳಿಂದ ಊಟ ಬಟ್ಟೆ ಮತ್ತು ವಸತಿಯಂಥ ಜೀವನಾವಶ್ಯಕ ವಸ್ತುಗಳ ಕೊರತೆಯಿಂದ ನರಳುತ್ತಲೇ ಸಾಗಿದ್ದಾರೆ. ಸೂಕ್ಷ್ಮಮತಿಯಾದ ಜೇಡರ ದಾಸಿಮಯ್ಯನವರು ಬಡವರ ಈ ದಯನೀಯ ಸ್ಥಿತಿಯನ್ನು ಗಮನಿಸಿದರು. ಈ ಕಾಯಕ ಜೀವಿಗಳೇಕೆ ಬಳಲಬೇಕು ಎಂಬುದು ಅವರ ಪ್ರಶ್ನೆಯಾಗಿತ್ತು. ದುಡಿಯುವ ವರ್ಗ ಎಲ್ಲ ಕೊರತೆಗಳಿಂದ ಬಳಲುತ್ತಿದೆ. ದುಡಿಯದ ವರ್ಗ ಸಕಲ ಸೌಕರ್ಯಗಳಿಂದ ಬದುಕುತ್ತಿದೆ. ಹಸಿಯುವ ವರ್ಗ ಮತ್ತು ಹಸಿವು ಏನೆಂಬುದು ಗೊತ್ತೇ ಇರದ ವರ್ಗದ ಮಧ್ಯದ ಅಂತರವನ್ನು ಅವರು ಅರಿತರು. ಬ್ರಾಹ್ಮಣರು, ರಾಜರು ಮತ್ತು ಶ್ರೀಮಂತರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ಒಡಲಿಲ್ಲದವರು ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು. ಈ ಜನ ದೇವರ (ದೇವಸ್ಥಾನದ ವ್ಯವಸ್ಥೆ) ಜೊತೆ ಸದಾ ಸಲುಗೆಯಿಂದ ಇರುವವರಾಗಿದ್ದರು. ಬಡವರು ದೇವಸ್ಥಾನದಲ್ಲಿ ಬಿಟ್ಟಿ ಕೆಲಸ ಮಾಡುವ ಸ್ಥಿತಿ ಇತ್ತು. ಹಸಿವು ಎಂದರೆ ಮರ್ಯಾದೆಯುತವಾಗಿ ಜೀವನ ಸಾಗಿಸಲು ಬೇಕಾದ ವಸ್ತುಗಳ ಕೊರತೆಯಿಂದಾಗಿ ಅವರು ಬಳಲುವಂಥ ಸ್ಥಿತಿಯನ್ನು ಮೇಲ್ವರ್ಗ ಮತ್ತು ಮೇಲ್ಜಾತಿಯ ಜನ ನಿರ್ಮಿಸಿದ್ದರು.

ಬದುಕಬೇಕಾದರೆ ಕನಿಷ್ಠ ಆವಶ್ಯಕತೆಗಳನ್ನು ಪೂರೈಸುವುದು ಅನಿವಾರ್ಯ. ಈ ಕನಿಷ್ಠ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಇರುವವರೇ ಬಡವರು. ಇವರೇ ಈ ಭೂಮಿಯ ಮೇಲೆ ಬಹುಸಂಖ್ಯಾತರಾಗಿದ್ದಾರೆ. ಸಕಲ ಸೌಲಭ್ಯಗಳನ್ನು ಪಡೆದ ಉಳ್ಳವರು ಮತ್ತು ಪುರೋಹಿತಶಾಹಿಗಳು ಅಲ್ಪಸಂಖ್ಯಾತರಾಗಿದ್ದಾರೆ. ಬಡವರಿಗೆ ಇವರ ಬದುಕು ದೇವರ ಬದುಕಿನಂತೆಯೇ ಕಾಣುತ್ತಿದೆ. ಗುಡಿ ವ್ಯವಸ್ಥೆಯನ್ನು ರೂಪಿಸಿದವರೇ ಇವರು. ಈ ವ್ಯವಸ್ಥೆ ಶ್ರೀಮಂತರ ಮತ್ತು ವೈದಿಕರ ಪೋಷಣೆ ಮಾಡುತ್ತ ಬಡವರನ್ನು ನಿಯಂತ್ರಣದಲ್ಲಿಡುತ್ತ ಬಂದಿದೆ. ಅಂತೆಯೆ ಬಸವಣ್ಣನವರು ಉಳ್ಳವರು ಶಿವಾಲಯವ ಮಾಡಿಹರು ಎಂದು ತಿಳಿಸಿದ್ದಾರೆ.

 ದೇವರಿಗೇ ಸವಾಲು ಹಾಕುವ ದಾಸಿಮಯ್ಯನವರು ಶ್ರೀಮಂತರನ್ನು ಬಿಟ್ಟಾರೆಯೆ. ಹೀಗೆ ಅವರು ದೇವರಿಗೆ ಹಾಕಿದ ಸವಾಲು, ದೇವ ದೇವ ಎನ್ನುತ್ತಲೇ ಬಡವರ ಸುಲಿಗೆ ಮಾಡುವ ಮೇಲ್ಜಾತಿ, ಮೇಲ್ವರ್ಗದವರನ್ನು ಪರೋಕ್ಷವಾಗಿ ಪ್ರಶ್ನಿಸುವ ತೆರದಲ್ಲಿದೆ. ಇಡೀ ವಚನ ಚಳವಳಿಯ ಆಶಯದ ಮೂಲವನ್ನು ಜೇಡರ ದಾಸಿಮಯ್ಯನವರ ವಚನಗಳಲ್ಲಿ ಕಾಣಲು ಸಾಧ್ಯವಿದೆ. ದೀನದಲಿತರು ಮತ್ತು ಮಹಿಳೆಯರ ಪರವಾಗಿ ನಿಂತು ಸಾಮಾಜಿಕ ಸ್ವಾಸ್ಥ್ಯದೊಂದಿಗೆ ಕುಟುಂಬ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ದಾಸಿಮಯ್ಯ ಅವರ ಕ್ರಮ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ತ್ರಿಪದಿಯ ಅಂಶಗಳಿಂದ ಕೂಡಿದ ಅವರ ಅನೇಕ ವಚನಗಳು ಕುಟುಂಬ ಪರ, ಸ್ತ್ರೀಪರ ಮತ್ತು ದೀನದಲಿತರ ಪರ ನಿಲುವನ್ನು ಹೊಂದಿವೆ.

  ಬಸವಣ್ಣನವರ ಹಿರಿಯ ಸಮಕಾಲೀನರಾದ ಜೇಡರ ದಾಸಿಮಯ್ಯನವರು ವಚನ ಸಾಹಿತ್ಯದ ಅರುಣೋದಯ ಕಾಲದಲ್ಲಿ ರಚಿಸಿದ ವಚನಗಳು ಸಾರ್ವಕಾಲಿಕವಾಗಿ ಅಸ್ತಿತ್ವದಲ್ಲಿರುವ ಶಕ್ತಿಯನ್ನು ಹೊಂದಿವೆ. ಅವು ವ್ಯಷ್ಟಿ ಪ್ರಜ್ಞೆಯಿಂದ ಸಮಷ್ಟಿ ಪ್ರಜ್ಞೆಯ ಕಡೆಗೆ ನಿಧಾನವಾಗಿ ಸಾಗುವ ಕ್ರಮ ಕಾವ್ಯದ ಗಂಭೀರತೆಯ ದ್ಯೋತಕವಾಗಿದೆ. ವಚನ ಸಾಹಿತ್ಯಕ್ಕೆ ಜನಪದ ಜೀವನ ವಿಧಾನ ಮತ್ತು ಜನಪದ ಕಾವ್ಯ ಪ್ರಮುಖ ಹಿನ್ನೆಲೆಯಾಗಿವೆ. ಜನಪದ ಮೌಲ್ಯಗಳು ವಚನ ಸಾಹಿತ್ಯದ ಮೂಲಾಧಾರಗಳಾಗಿವೆ. ವಚನಕಾರರ ನಡೆ ನುಡಿ ಸಿದ್ಧಾಂತ ಕೂಡ ನಮ್ಮ ಹಳ್ಳಿಗಾಡಿನ ಸುಸಂಸ್ಕೃತ ಜನರ ಜೀವನಕ್ರಮಕ್ಕೆ ಅನುಗಣವಾಗಿಯೇ ಇದೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News