ವಿಷ ಬಿಡುವುದೇ ಅಯ್ಯ?

Update: 2017-11-27 18:41 GMT

ಭೇರುಂಡನ ಪಕ್ಷಿಗೆ ದೇಹ ಒಂದೇ,
ತಲೆಯೆರಡರ ನಡುವೆ ಕನ್ನವಡ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ, ವಿಷ ಬಿಡುವುದೇ ಅಯ್ಯ?
ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾ ಬೆಂದೆ ಕಾಣಾ, ಕೂಡಲಸಂಗಮದೇವಾ.
                                                         - ಬಸವಣ್ಣ

ಗಂಡಭೇರುಂಡವೆಂಬುದು ಒಂದು ದೇಹ ಮತ್ತು ಎರಡು ತಲೆಗಳುಳ್ಳ ಒಂದು ಕಾಲ್ಪನಿಕ ಪಕ್ಷಿ. ಕವಿಸಮಯದ ಈ ಪಕ್ಷಿಯ ಮೂಲಕ ಬಸವಣ್ಣನವರು ದೇವರ ಸ್ವರೂಪವನ್ನು ಕಲ್ಪಿಸಿದ ಕ್ರಮ ಅನುಪಮವಾಗಿದೆ. ಗಂಡಭೇರುಂಡ ಪಕ್ಷಿಯ ಎರಡೂ ತಲೆಗಳ ಮಧ್ಯೆ ಕನ್ನವಡ (ಪರದೆ) ಕಟ್ಟಿರಿ. ನಂತರ ಅದರ ಒಂದು ಬಾಯಿಗೆ ಹಾಲನ್ನು ಹಾಕಿರಿ. ಇನ್ನೊಂದು ಬಾಯಿಗೆ ವಿಷವನ್ನು ಹಾಕಿರಿ. ಆಗ ಹಾಲು ಮತ್ತು ವಿಷ ಆ ಪಕ್ಷಿಯ ಜಠರ ಸೇರಿದಾಗ ಎಲ್ಲವೂ ವಿಷಮಯವಾಗುವುದು. ಆ ಪಕ್ಷಿ ಇಂಥ ಪರಿಸ್ಥಿತಿಯಲ್ಲಿ ಬದುಕುಳಿಯಲು ಸಾಧ್ಯವೇ? ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಆ ಪಕ್ಷಿ ಸಾಯದೆ ಗತ್ಯಂತರವಿಲ್ಲ. ಒಂದುವೇಳೆ ಆ ಗಂಡಭೇರುಂಡ ಪಕ್ಷಿಯ ಎರಡೂ ಬಾಯಲ್ಲಿ ಹಾಲೇ ಎರೆದಿದ್ದರೆ ಅದು ಆರೋಗ್ಯಪೂರ್ಣವಾಗಿ ಲವಲವಿಕೆಯಿಂದ ಇರುತ್ತಿತ್ತು.

ಹೀಗೆ ಮಾನವನು ಆರೋಗ್ಯಪೂರ್ಣ ವ್ಯಕ್ತಿತ್ವಕ್ಕಾಗಿ ಲಿಂಗಭಕ್ತಿ ಮತ್ತು ಜಂಗಮಭಕ್ತಿಯನ್ನು ಒಟ್ಟಾಗಿಯೇ ಮಾಡುತ್ತಿರಬೇಕು. ಜಂಗಮಭಕ್ತಿ ಎಂದರೆ ಸಮಾಜಸೇವೆ. ಕಷ್ಟದಲ್ಲಿದ್ದವರಿಗೆ ಸಾಧ್ಯವಾದಷ್ಟು ನೆರವಾಗಬೇಕು. ದಯವೇ ಧರ್ಮದ ಮೂಲ ಎಂದು ತಿಳಿಯಬೇಕು. ಸಮಾಜವೇ ದೇವರು ಎಂದು ಭಾವಿಸಬೇಕು. ನೆರೆಹೊರೆಯ ಎಲ್ಲ ಜೀವಗಳು ಆನಂದಮಯವಾಗಿ ಇರುವಹಾಗೆ ನಮ್ಮ ನಡೆನುಡಿಗಳು ಮಾನವೀಯ ಸಂಸ್ಕಾರದಿಂದ ಕೂಡಿರಬೇಕು. ದಾಸೋಹಂ ಭಾವದಿಂದ ಸಹಾಯಹಸ್ತ ಚಾಚುವುದರಲ್ಲಿ ಉತ್ಸುಕರಾಗಿರಬೇಕು. ಈ ರೀತಿ ಇಡೀ ಜಗತ್ತು ತನ್ನಲ್ಲಿದೆ ಮತ್ತು ತಾನು ಇಡೀ ಜಗತ್ತಿನಲ್ಲಿ ಇದ್ದೇನೆ ಎಂಬ ಸಂವೇದನಾಶೀಲತೆಯನ್ನು ಪ್ರತಿಯೊಬ್ಬರಲ್ಲಿ ಉಂಟಾಗುವಂತೆ ಮಾಡುವುದೇ ಬಸವಣ್ಣನವರ ಉದ್ದೇಶವಾಗಿತ್ತು. ಆಗ ಮಾತ್ರ ಮಾನವನು ಒಳಲೋಕ ಮತ್ತು ಹೊರಲೋಕಗಳ ಕೂಡಲಸಂಗಮವಾಗಿ ತಾನೇ ಎಲ್ಲವೂ ಆಗುವ ಮತ್ತು ಎಲ್ಲವೂ ತಾನಾಗುವ ಪರಿಯನ್ನು ಅನುಭಾವಿಸಲು ಸಾಧ್ಯ. ಮಾನವನನ್ನು ಎತ್ತುತ್ತ ಹೀಗೆ ಉನ್ನತ ಮಟ್ಟಕ್ಕೆ ಏರಿಸುವುದೇ ಧರ್ಮದ ಕಾಯಕ ಎಂದು ಬಸವಣ್ಣನವರು ದೃಢವಾಗಿ ನಂಬಿದ್ದರು.

ಈ ವಚನವು ಬಸವದರ್ಶನವನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಬಸವಣ್ಣನವರು ಕೂಡ ಅದ್ವೈತವನ್ನೇ ಹೇಳಿದ್ದಾರೆ. ಆದರೆ ಅವರ ಅದ್ವೈತ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ದೇವರಿಂದ ಸೃಷ್ಟಿಯಾದ ಜಗತ್ತು ಅದು ಹೇಗೆ ಮಿಥ್ಯೆ (ಸುಳ್ಳು, ಭ್ರಮೆ) ಆಗುತ್ತದೆ? ಶಂಕರಾಚಾರ್ಯರು ಬ್ರಹ್ಮ ಸತ್ಯ ಎಂದು ಹೇಳಿದ್ದು ಸರಿ. ಆದರೆ ಸತ್ಯದಿಂದ ಹುಟ್ಟಿದ್ದು ಅಸತ್ಯ ಹೇಗೆ ಆಗುತ್ತದೆ? ಬ್ರಹ್ಮದಿಂದ ಹುಟ್ಟಿದ ಬ್ರಹ್ಮಾಂಡ ಸುಳ್ಳು ಹೇಗಾಗುತ್ತದೆ? ಈ ಪ್ರಶ್ನೆಗೆ ಬಸವದರ್ಶನದಲ್ಲಿ ಉತ್ತರವಿದೆ.

ಬ್ರಹ್ಮ (ದೇವರು) ಸತ್ಯ. ಆದರೆ ಬ್ರಹ್ಮಾಂಡವೆಂಬುದು ದೇವರ ರೂಪ. ಜಗತ್ತು ದೇವರ ರೂಪವಾದ ಮೇಲೆ ಅದು ಕೂಡ ಸತ್ಯವೇ ಆಗಿರುತ್ತದೆ. ಆದರೆ ಕಾಣುವ ಬ್ರಹ್ಮಾಂಡವೆಂಬ ಸತ್ಯಕ್ಕೆ ಕಾಲದ ಕಟ್ಟಳೆ ಇದೆ. ಕಾಲದ ಕಟ್ಟಳೆಯ ಸತ್ಯಕ್ಕೆ ವಾಸ್ತವ ಎನ್ನುತ್ತಾರೆ. ನಾವು ಈಗ ಇದ್ದೇವೆ ಇದು ವಾಸ್ತವ. ಕಾಲದ ಕಟ್ಟಳೆಯಿಂದ ಕೂಡಿದ ನಾವು ಇನ್ನು ನೂರು ವರ್ಷಗಳ ನಂತರ ಇರುವುದಿಲ್ಲ. ಇದು ಸತ್ಯ. ಆದ್ದರಿಂದ ‘ಬ್ರಹ್ಮ ಸತ್ಯ ಬ್ರಹ್ಮಾಂಡ ವಾಸ್ತವ’ ಎಂಬುದು ಬಸವದರ್ಶನ. ಬಸವಣ್ಣನವರ ಪ್ರಕಾರ ಬ್ರಹ್ಮನಿಂದ ಸೃಷ್ಟಿಯಾದ ಬ್ರಹ್ಮಾಂಡದಲ್ಲಿ ಬ್ರಹ್ಮನೇ ಇದ್ದಾನೆ. ಆ ಬ್ರಹ್ಮನೇ ಚೈತನ್ಯ. ಬ್ರಹ್ಮಾಂಡವೇ ವಸ್ತು. ಚೈತನ್ಯವಿಲ್ಲದೆ ವಸ್ತುವಿಲ್ಲ. ಬ್ರಹ್ಮ ಇಲ್ಲದೆ ಬ್ರಹ್ಮಾಂಡವಿಲ್ಲ. ಬ್ರಹ್ಮಾಂಡಕ್ಕೆ ಕಾಲಮಿತಿ ಇರುವುದರಿಂದ ಅದಕ್ಕೆ ಅಳಿವು ಉಂಟು. ಅಂದರೆ ಬ್ರಹ್ಮಾಂಡವು ಒಂದು ದಿನ ಬ್ರಹ್ಮನಲ್ಲಿ ಲೀನವಾಗುವುದು. ಅಂದರೆ ಚೈತನ್ಯದಿಂದ ಹುಟ್ಟಿದ ವಸ್ತು ತನ್ನೊಳಗೆ ಚೈತನ್ಯವನ್ನೇ ಇಟ್ಟುಕೊಂಡು ತನ್ನ ಅವಧಿ ಮುಗಿದನಂತರ ಆ ಚೈತನ್ಯದಲ್ಲೇ ಲೀನವಾಗುವುದು. ಇದಕ್ಕೆ ಸೂರ್ಯ, ಚಂದ್ರ, ನಕ್ಷತ್ರ ಮತ್ತು ನಾವು ಜೀವಿಸುವ ಪೃಥ್ವಿ ಕೂಡ ಹೊರತಲ್ಲ.

ಹೀಗೆಂದ ಮಾತ್ರಕ್ಕೆ ಬದುಕು ನಿರರ್ಥಕವಲ್ಲ. ಏಕೆಂದರೆ ಅದು ವಾಸ್ತವವಾಗಿದೆ. ಈ ವಾಸ್ತವ ಜಗತ್ತಿನಲ್ಲಿ ಸಕಲ ಜೀವಿಗಳು ವಾಸಿಸುತ್ತಿವೆ. ಈ ಜೀವಿಗಳು ಆನಂದದಿಂದ ಬದುಕುವುದಕ್ಕಾಗಿ ದೇವರು ಬೆಳೆಯುವ ಭೂಮಿಯನ್ನು, ಬೆಳಕು ಕೊಡುವ ಸೂರ್ಯನನ್ನು, ಬೆಳದಿಂಗಳು ಕೊಡುವ ಚಂದಿರನನ್ನು, ಜೀವರಕ್ಷಕ ವಾಯುವನ್ನು, ನಕ್ಷತ್ರಗಳಿಂದ ತುಂಬಿದ ಆಕಾಶವನ್ನು, ಅರಣ್ಯ, ನದಿ ಮತ್ತು ಸಾಗರಗಳನ್ನು ಕೊಟ್ಟಿದ್ದಾನೆ.

ಈ ಬದುಕನ್ನು ಸಾರ್ಥಕಗೊಳಿಸಬೇಕೆಂಬುದೇ ಬಸವಣ್ಣನವರ ಆಶಯವಾಗಿದೆ. ಅಂತೆಯೆ ಅವರು ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ಎಂದು ಹೇಳಿದ್ದಾರೆ. ಹೀಗೆ ದೇವರು ಮತ್ತು ಜಗತ್ತಿಗೆ ಸಂಬಂಧವಿರುವುದನ್ನು ತೋರಿಸಿಕೊಟ್ಟಿದ್ದಾರೆ.

 ಇಷ್ಟಲಿಂಗ ಮತ್ತು ಜಗತ್ತು, ದೇವರ ಎರಡು ಮುಖಗಳು. ಅಂದರೆ ಜಗತ್ತು ಎಂಬುದು ಇಷ್ಟಲಿಂಗದಷ್ಟೇ ಸತ್ಯ. ಜಗತ್ತು ಮಿಥ್ಯೆ ಎಂಬುದನ್ನು ಬಸವಣ್ಣನವರು ಒಪ್ಪಿಕೊಂಡಿದ್ದರೆ ಲಿಂಗ ಜಂಗಮ ಒಂದೇ ಎಂದು ಹೇಳುತ್ತಿರಲಿಲ್ಲ. ಜಗತ್ತು ಸತ್ಯವೆಂದಮೇಲೆ ಜಗತ್ತಿನಲ್ಲಿ ಬದುಕುತ್ತಿರುವ ನಾವೆಲ್ಲರೂ ಸತ್ಯ. ಆದರೆ ವಾಸ್ತವದಲ್ಲಿ ಜಗತ್ತು ಮತ್ತು ನಮ್ಮ ಅಸ್ತಿತ್ವ ಕಾಲದ ಮಿತಿಯಿಂದ ಕೂಡಿದ್ದು ಕಾಲಮೀರಿದ ಮೇಲೆ ಸತ್ಯದಲ್ಲೇ ಲೀನವಾಗಬೇಕಾಗುವುದು.

 ಆದರೆ ಹುಟ್ಟಿನಿಂದ ಸಾಯುವವರೆಗಿನ ಮಾನವರ ಬದುಕು ಹಸನಾಗಿರಬೇಕು ಎಂಬುದೇ ಈ ವಚನದ ಆಶಯವಾಗಿದೆ. ಪ್ರತಿಯೊಬ್ಬರ ಬದುಕು ನೆಮ್ಮದಿಯಿಂದ ಕೂಡಬೇಕಾದರೆ ಪ್ರತಿಯೊಬ್ಬರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚಬೇಕಾಗುತ್ತದೆ. ಹೀಗೆ ಬಸವಣ್ಣನವರ ದೃಷ್ಟಿಯಲ್ಲಿ ಸಾಮಾಜಿಕ ಕಳಕಳಿ ಎಂಬುದು ಇಷ್ಟಲಿಂಗ ಪೂಜೆಯಷ್ಟೇ ಮಹತ್ವವನ್ನು ಪಡೆದಿದೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News