ಅಭಿವೃದ್ಧಿಶೀಲ ಭಾರತದ ವಾಸ್ತವ

Update: 2017-12-19 18:33 GMT

ಸುರತ್ಕಲ್‌ನ ಶ್ರೀನಿವಾಸನಗರದಲ್ಲಿರುವ ಅಂದಿನ ಕೆಆರ್‌ಇಸಿ (ಕರ್ನಾಟಕ ರೀಜಿನಲ್ ಇಂಜಿನಿಯರಿಂಗ್ ಕಾಲೇಜು)ಯಲ್ಲಿ ಪ್ರಾಧ್ಯಾಪಕರಾಗಿದ್ದ ಪಾ.ದೇವರಾಜ್ ಮತ್ತು ಮೂಲ್ಕಿ ವಿಜಯಾ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅಡ್ಯನಡ್ಕ ಕೃಷ್ಣಭಟ್ಟರು ಜೊತೆ ಸೇರಿ ‘ವಿಜ್ಞಾನ ಲೋಕ’ ಎಂಬ ಪತ್ರಿಕೆ ಹೊರತರುತ್ತಿದ್ದರು. ನಾನು ಗಣಪತಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಪ್ರಾರಂಭದ ವರ್ಷಗಳಲ್ಲಿ ಮಂಗಳೂರಿನ ವಿಠೋಬಾ ರಸ್ತೆಯಲ್ಲಿರುವ ಶ್ರೀನಿವಾಸ ಒರಿಯಂಟಲ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯರಾಗಿದ್ದ ಮನೋರಮಾ ಪೈ (ಕಾಮ್ರೇಡ್ ಶಾಂತಾರಾಂ ಪೈಯವರ ಪತ್ನಿ) ಮತ್ತು ಅದೇ ಹೈಸ್ಕೂಲಿನ ಇನ್ನೊಬ್ಬ ಶಿಕ್ಷಕಿ ಇಂದಿರಾ ಜೋಡುಮಠ (ಸಾಹಿತಿ ಜೋಡುಮಠ ವಾಮನ ಭಟ್ ಇವರ ಮಗಳು) ಇವರು ನನಗೆ ಪರಿಚಿತರಾದರು. ಅವರು ಸಂಜೆಯ ವೇಳೆಗೆ ನಮ್ಮ ಹೈಸ್ಕೂಲಿನ ಕೊಠಡಿಯಲ್ಲಿ ಸೇರಿ ವಿಜ್ಞಾನದ ಇಂಗ್ಲಿಷ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸ ಮಾಡುತ್ತಿದ್ದರು.

ಈ ಅನುವಾದ ಕಾರ್ಯ ‘ವಿಜ್ಞಾನ ಲೋಕ’ ಪತ್ರಿಕೆಗಾಗಿ ನಡೆಯುತ್ತಿತ್ತು. ಅವರು ನನ್ನನ್ನೂ ತಮ್ಮ ಜೊತೆ ಸೇರಿಕೊಳ್ಳುವಂತೆ ಕೇಳಿಕೊಂಡಾಗ ನನ್ನ ಮರೆತು ಹೋದ ಆದರೆ ಆಸಕ್ತಿಯ ವಿಷಯವೂ ಆಗಿದ್ದ ವಿಜ್ಞಾನವನ್ನು ನೆನಪಿಸಿಕೊಳ್ಳುವುದಕ್ಕೊಂದು ಅವಕಾಶ ಹಾಗೆಯೇ ವಿಜ್ಞಾನದ ವರ್ತಮಾನದ ಬೆಳವಣಿಗೆ ಹಾಗೂ ವೈಜ್ಞಾನಿಕ ಮನೋಧರ್ಮಗಳ ಪ್ರಸ್ತುತತೆಯ ಅರಿವಿನ ಸಾಧ್ಯತೆಯನ್ನು ಮನಗಂಡು ಒಪ್ಪಿಕೊಂಡೆ. ಜೀವಶಾಸ್ತ್ರದ ಅದರಲ್ಲೂ ಸಸ್ಯಶಾಸ್ತ್ರದ ಲೇಖನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ನನ್ನ ನೆರವಿಗೆ ಮನೆಯಲ್ಲಿ ವಿಜ್ಞಾನದ ಅಧ್ಯಾಪಿಕೆಯಾಗಿದ್ದ ನನ್ನ ತಂಗಿಯೂ ಇದ್ದಳು. ನಾವು ಅನುವಾದಿಸಿದ ಲೇಖನಗಳನ್ನು ಒಯ್ಯಲು ಹೆಚ್ಚಾಗಿ ದೇವರಾವ್ ಅವರು ಬರುತ್ತಿದ್ದರು. ಹಾಗೆ ಬಂದಾಗ ಇನ್ನಷ್ಟು ಲೇಖನಗಳನ್ನು ಕೊಟ್ಟು ಹೋಗುತ್ತಿದ್ದರು. ಒಮ್ಮಿಮ್ಮೆ ಸಣ್ಣ ಸಭೆಯಂತೆ ಐದಾರು ಮಂದಿ ಸೇರಿದಾಗ ಅಡ್ಯನಡ್ಕ ಕೃಷ್ಣಭಟ್ಟರೂ ಬರುತ್ತಿದ್ದರು.

 ಒಮ್ಮಿಮ್ಮೆ ಈ ಸಭೆಯು ಅಂದಿನ ಸರಕಾರಿ ಕಾಲೇಜಿನ ಕೊಠಡಿಯಲ್ಲಿಯೂ ನಡೆಯುತ್ತಿತ್ತು. ವಿಜ್ಞಾನ ಲೋಕಕ್ಕೆ ಹೀಗೆ ಅನುವಾದಿಸಿ ಕೊಡುವ ಲೇಖಕರು ಇನ್ನೂ ಕೆಲವರು ಇದ್ದರು. ಅವರಲ್ಲಿ ಒಬ್ಬರು ವಾಮನ ನಂದಾವರರೂ ಎನ್ನುವುದು ನಮ್ಮ ಮದುವೆಯಾದ ಬಳಿಕವಷ್ಟೇ ತಿಳಿದುದು. ಆ ಬಳಿಕ ನಾವಿಬ್ಬರೂ ಜೊತೆಯಾಗಿ ದೇವರಾವ್‌ರ ಕೆಆರ್‌ಇಸಿ ಕ್ಯಾಂಪಸ್‌ನ ಮನೆಗೆ ರವಿವಾರದ ದಿನಗಳಲ್ಲಿ ಹೋಗಿ ಲೇಖನ ಕೊಟ್ಟು ತರುವುದನ್ನೂ ಮಾಡಿದುದೂ ಇದೆ. ಈಗ ಕೃಷ್ಣಾಪುರಕ್ಕೆ ಬಂದ ಮೇಲೆ ಕೆಆರ್‌ಇಸಿ ಇನ್ನೂ ಹತ್ತಿರವಾಯಿತು ತಾನೇ? ಇಲ್ಲಿಂದಲೂ ಹೋಗುತ್ತಿದ್ದ ನೆನಪು ಇದೆ. ಹಾಗೆಯೇ ನಿಧಾನವಾಗಿ ನಮ್ಮ ಸಾಹಿತ್ಯಿಕ ಒಲವು ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿನ ಪಾಲ್ಗೊಳ್ಳುವಿಕೆಯಿಂದ ‘ವಿಜ್ಞಾನ ಲೋಕ’ದ ಅನುವಾದ ಕಾರ್ಯದಿಂದ ದೂರವಾದೆವು. ಆದರೆ ‘ವಿಜ್ಞಾನ ಲೋಕ’ ಪತ್ರಿಕೆ ಇರುವ ವರೆಗೆ ನಮ್ಮಲ್ಲಿಗೆ ಬರುತ್ತಿತ್ತು.

ನಮ್ಮ ಕೃಷ್ಣಾಪುರದ ವಾಸ್ತವ್ಯದ ಆರೇಳು ವರ್ಷಗಳ ಬಳಿಕ ಪತ್ರಕರ್ತ ಕವಿ ಚಿದಂಬರ ಬೈಕಂಪಾಡಿಯವರು ಗೃಹಸ್ಥರಾಗಿ ನಮ್ಮ ಮನೆಯ ಸಮೀಪದ ರಸ್ತೆಯಲ್ಲಿಯೇ ಹೊಸ ಮನೆಯೊಂದಕ್ಕೆ ಬಿಡಾರ ಬಂದರು. ಸಮಾನ ಮನಸ್ಕರಾದ ಒಬ್ಬ ಕೌಟುಂಬಿಕ ಗೆಳೆಯರು ಸಿಕ್ಕ ಅನುಭವ ನಮ್ಮದಾಯಿತು. ನಮ್ಮ ಕೆಲವು ಎಳೆಯ ಗೆಳೆಯ ಗೆಳತಿಯರು ಅಂತರ್ಜಾತೀಯ, ಅಂತರ್ಮತೀಯ ವಿವಾಹವಾದಾಗ ನಮ್ಮಲ್ಲಿಗೆ ಬಂದವರು ಬೈಕಂಪಾಡಿಯವರ ಮನೆಗೂ ಭೇಟಿ ಕೊಡುತ್ತಿದ್ದುದು ಅಥವಾ ಅವರ ಮನೆಗೆ ಬಂದವರು ನಮ್ಮಲ್ಲಿಗೆ ಭೇಟಿ ಕೊಟ್ಟದ್ದು, ನಾವು ಅವರ ಬದುಕಿಗೆ ಶುಭಕೋರಿದ ನೆನಪುಗಳು ಈಗ ಹಳೆಯದಾದರೂ ಅಂದಿನ ದಿನಗಳಲ್ಲಿ ಅವರೆಲ್ಲರಿಗೆ ಒಂದು ರೀತಿಯ ನೈತಿಕ ಬೆಂಬಲವಾದರೆ ನಮ್ಮ ವೈಚಾರಿಕತೆಯ ನಿಲುವಿನ ಸಾಕ್ಷಿಗಳೆಂದರೂ ಸರಿಯೇ.

ನಮ್ಮ ಬಾರಗ ರಸ್ತೆಯಲ್ಲಿ ಮುಖ್ಯ ರಸ್ತೆಯಿಂದ ನಮ್ಮ ಮನೆ ಕಡೆಗೆ ಹೋಗುವ ದಾರಿಯಲ್ಲಿ ಎಡಬದಿಗೆ ಮುಖ್ಯ ರಸ್ತೆಯ ಉದ್ದಕ್ಕೆ ಸಾಕಷ್ಟು ಜಾಗ ವಿಶಾಲವಾಗಿ ಖಾಲಿಯಾಗಿತ್ತು. ಬಹುಶಃ ಪುನರ್ವಸತಿಯ ಯೋಜನೆಯಲ್ಲಿ ಪಾರ್ಕುಗಳಿಗೆ, ಅಂಗಡಿಗಳಿಗೆ ಎಂದು ಖಾಲಿ ಬಿಟ್ಟಿರಬಹುದು. ಉದ್ಯಾನದ ಕಲ್ಪನೆ ಹಳ್ಳಿಯ ಜೀವನ ಶೈಲಿಯಲ್ಲಿ ಇಲ್ಲದಿದ್ದರೂ ಸರಕಾರದ ಯೋಜನೆಯಲ್ಲಿದ್ದಿರಬಹುದು. ನಿಜವಾಗಿಯೂ ಆ ಸ್ಥಳ ಮಕ್ಕಳ ಉದ್ಯಾನಕ್ಕೆ ಯೋಗ್ಯವೇ ಆಗಿತ್ತು. ಆದರೆ ಒಮ್ಮೆ ಜನ ತಮ್ಮ ಪಾಡಿಗೆ ನೆಲೆನಿಂತ ಬಳಿಕ ಸರಕಾರವೂ ತಣ್ಣಗಾಗಿ ಯೋಜನೆಗಳೆಲ್ಲವೂ ಕಡತಗಳಲ್ಲಿ ಉಳಿಯುವುದು ನಮ್ಮ ದೇಶದ ರಾಜಕೀಯ ನೀತಿಯೂ ಹೌದು, ಸ್ಥಿತಿಯೂ ಹೌದು. ಅದಕ್ಕೇ ಅನ್ನುವುದು ಜನರ ಸಾಮಾಜಿಕ ಪ್ರಜ್ಞೆಯ ನೆನಪು ಶಕ್ತಿ ದುರ್ಬಲ ಎಂದು.

ಈ ಮಾತು ಯಾಕೆ ಹೇಳಿದೆ ಎಂದರೆ ಇಂತಹ ಜಾಗಗಳೇ ಸ್ವಂತಕ್ಕೆ ಸೂರಿಲ್ಲದವರು ಸಣ್ಣ ಜೋಪಡಿ ಹಾಕಿಕೊಂಡು ನಿಧಾನಕ್ಕೆ ಅವುಗಳು ಸಮಸ್ಯೆಗಳಾಗಿ ಆ ಸಮಸ್ಯೆಗಳನ್ನು ಪರಿಹಾರ ಮಾಡುವುದೇ ಅಂದರೆ ಅಕ್ರಮವನ್ನು ಸಕ್ರಮಗೊಳಿಸುವ ರಾಜ ನೀತಿ ಇದೆಯಲ್ಲಾ ಇದು ಪ್ರಾಮಾಣಿಕವಾದ ಪ್ರಜಾಪ್ರಭುತ್ವದ ನೀತಿಯಾಗಲಾರದು. ಇದರಿಂದಾಗಿಯೇ ಕೆರೆಗಳು ತಿಪ್ಪೆಗುಂಡಿಗಳಾಗಿವೆ. ನೀರು ಹರಿವ ಕಾಲುವೆಗಳ ಮೇಲೆ ಮಹಡಿಗಳೇ ಎದ್ದು ‘‘ನಾನೇರುವೆತ್ತರಕ್ಕೆ ನೀನೇರುವೆಯೋ ಎಲೆ ಮಾನವ’’ ಎಂದು ಪ್ರಶ್ನೆ ಕೇಳುವಂತಿವೆ. ಜನಪ್ರತಿನಿಧಿಗಳಿಗೆ ಇಂತಹ ಅಕ್ರಮಗಳನ್ನು ಸಕ್ರಮ ಮಾಡುವುದರಲ್ಲಿ ಇರುವ ಆಸಕ್ತಿ ನಿಜವಾದ ಸೌಲಭ್ಯಗಳನ್ನು ತಾವಾಗಿಯೇ ಒದಗಿಸುವುದು ಹೇಗೆ ಎನ್ನುವುದು ಅಂದೂ ಮರೆತ ವಿಷಯ.

ಇಂದೂ ಮರೆಯುತ್ತಿರುವ ವಿಷಯ. ಅಂದರೆ ಯಾವುದನ್ನೂ ಸರಿಯಾದ ಯೋಚನೆ ಹಾಕಿಕೊಳ್ಳದೆ ಇರುವುದು ಅವರ ರಾಜಕೀಯದ ಜಾಣನೀತಿ ಅನ್ನಿಸುತ್ತದೆ. ಇರಲಿ. ನಾನು ಹೇಳಿದ ಈ ಜಾಗದಲ್ಲಿ ಒಂದು ದಿನ ಸಣ್ಣ ಅಂಗಡಿ ಪ್ರಾರಂಭ ವಾಯಿತು. ಮಕ್ಕಳಿಗೆ ಬೇಕಾದ ಉಂಡೆ, ಚಕ್ಕುಲಿ, ಪೆಪ್ಪರ್‌ಮೆಂಟ್, ಹಣ್ಣು, ತರಕಾರಿ ಎಂದು ಶುರುವಾದ ಅಂಗಡಿ ನಮಗೂ ಪ್ರಯೋಜನವೇ. ನಾವೂ ಗ್ರಾಹಕರಾದೆವು. ಇನ್ನು ಸಾಲ ಮಾಡಿ ವ್ಯಾಪಾರ ಮಾಡುವವರಿಗೆ ಇನ್ನೊಂದು ಅಂಗಡಿ ಹೆಚ್ಚಾದರೆ ಒಳ್ಳೆಯದೇ ಅಲ್ಲವೇ? ಈ ಅಂಗಡಿಯನ್ನು ಶುರು ಮಾಡಿದವನು ಸಣ್ಣ ಪ್ರಾಯದ ಯುವಕ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಪುಟ್ಟಪ್ಪಯ್ಯನವರ ಅಂಗಡಿಯ ಪಕ್ಕದಲ್ಲೇ ಇದ್ದರೂ ಅವರಿಗೊಂದು ಎದುರಂಗಡಿ ಅಂದರೆ ಸಣ್ಣ ಮಟ್ಟಿನಲ್ಲಿ ಸ್ಪರ್ಧೆ ನೀಡುವ ಅಂಗಡಿಯಾದುದು ನಿಜ. ಆದರೆ ಪುಟ್ಟಪ್ಪಯ್ಯನವರು ಹೇಳಿದ ಮಾತು ‘‘ನನಗೆ ನೀಡಬೇಕಾದುದನ್ನು ದೇವರು ನನಗೆ ನೀಡುತ್ತಾನೆ. ಅವನಿಗೆ ಸಿಗಬೇಕಾದ್ದು ಅವನಿಗೆ ಸಿಗುತ್ತದೆ’’.

ಹೌದು ಈ ಮಾತಿನಲ್ಲಿ ನಂಬಿಕೆ ಇಡಬೇಕಾದುದೇ. ಇಲ್ಲದಿದ್ದರೆ ಪೇಟೆಯಲ್ಲಿ ಒಂದೇ ವಸ್ತುಗಳ ಸಾಲು ಸಾಲು ಅಂಗಡಿಗಳು ಹೇಗೆ ವರ್ಷಗಳಿಂದಲೂ ಉಳಿದುಕೊಂಡಿವೆಯಲ್ಲಾ? ಆದರೂ ಮನಸ್ಸಿನೊಳಗೆ ಹಳಬರಿಗೆ ಹೊಸಬರ ಬಗ್ಗೆ ಒಂದು ರೀತಿಯ ಅಸಮಾಧಾನ ಇದ್ದೇ ಇರಬಹುದಲ್ಲಾ? ಒಳಗೊಳಗೇ ಸ್ಪರ್ಧೆಯೂ ಇರಬಹುದಲ್ಲಾ? ಹೊಸಬರಿಗೆ ಹೊಸ ಹೊಸ ವಸ್ತುಗಳನ್ನು ತಂದಿಟ್ಟು ಗ್ರಾಹಕರನ್ನು ಆಕರ್ಷಿಸುವ ತಂತ್ರಗಾರಿಕೆ ಇಲ್ಲದಿದ್ದರೆ ಅವರೂ ಆ ಸ್ಥಳದಲ್ಲಿ ಉಳಿಯಲಾರರು ಎನ್ನುವುದೂ ನಿಜವೇ. ನಿಧಾನವಾಗಿ ಗ್ರಾಹಕರು ಧರ್ಮದ ರಾಜಕಾರಣದಿಂದ ವಿಭಜಿಸಲ್ಪಟ್ಟರು. ಆದರೆ ಅಬ್ರಾಹ್ಮಣರಿಗೆ ಅದರಲ್ಲೂ ಬಡವರಿಗೆ ಯಾರ ಅಂಗಡಿಯಾದರೂ ಸರಿ. ಸಾಲ ಕೊಡುವವರು ಒಳ್ಳೆಯವರೇ ಅಲ್ಲವೇ? ನಮ್ಮ ತಿಂಗಳ ಒಟ್ಟು ವ್ಯಾಪಾರ ಪುಟ್ಟಪ್ಪಯ್ಯನವರ ಅಂಗಡಿಯಿಂದಲೇ ಆದರೂ, ಆಗಾಗ ಇಲ್ಲಿಂದಲೂ ಬೇಕಾದ ವಸ್ತಗಳನ್ನು ಖರೀದಿಸುತ್ತಿದ್ದೆವು.

ಈ ಅಂಗಡಿಯ ಎದುರಿಗೆ ಅಂದರೆ ರಸ್ತೆಯ ಇನ್ನೊಂದು ಬದಿಯಲ್ಲಿ ನೀರು ಹರಿಯುವ ತೋಡು ಇದ್ದು, ಅದರ ಪಕ್ಕದಲ್ಲಿಯೂ ಸ್ವಲ್ಪ ಸ್ಥಳ ಇತ್ತು. ಅಲ್ಲಿ ಇನ್ನೊಬ್ಬ ಮುಸ್ಲಿಂ ವ್ಯಕ್ತಿ ಚಹಾದಂಗಡಿ ಇಟ್ಟರು. ಬೆಳಗ್ಗೆ ಮನೆಯಿಂದ ಇಡ್ಲಿ ಚಟ್ನಿ ತರುತ್ತಿದ್ದರೆ ಉಳಿದ ಹೊತ್ತು ಚಹಾದೊಟ್ಟಿಗೆ ಬ್ರೆಡ್ಡು, ಬನ್ನುಗಳು ಇನ್ನೇನೋ ಇರುತ್ತಿದ್ದವು. ಕೂಲಿ ಕೆಲಸಕ್ಕೆ ಬಂದವರಿಂದ ವ್ಯಾಪಾರವೂ ನಡೆಯುತ್ತಿತ್ತು. ಇವರಿಗೆ ಮುಸ್ಲಿಂ ಗ್ರಾಹಕರಿಗಿಂತ ಅಬ್ರಾಹ್ಮಣ ಕೂಲಿ ಕಾರ್ಮಿಕರೇ ಗ್ರಾಹಕರು. ನಾನು ಇಲ್ಲಿ ವ್ಯಾಪಾರ ಮಾಡುವ ಅಗತ್ಯವಿಲ್ಲದಿದ್ದರೂ ಬೆಳಗ್ಗೆ ಬಸ್ಸು ಬರುವ ವೇಳೆಗೆ ಕಾಯುವುದಕ್ಕೆ ನೆರಳಿಗೆ ಈ ಎರಡೂ ಅಂಗಡಿಗಳ ಬದಿಯಲ್ಲಿ ನಿಲ್ಲುತ್ತಿದ್ದುದರಿಂದ ಅವರಲ್ಲಿ ಮಾತಾಡುವ ಸಲುಗೆ ಬೆಳೆದಿತ್ತು. ಈ ಅಂಗಡಿಗಳು ಹುಟ್ಟಿಕೊಂಡ ಬಗ್ಗೆ ನನ್ನ ಆಸುಪಾಸಿನ ಜನರು ತಮ್ಮ ಅಗತ್ಯಗಳಿಗೆ ಈ ಅಂಗಡಿಗಳಿಗೆ ಹೋಗುತ್ತಿದ್ದರೂ ಈ ಮುಸ್ಲಿಮರೇ ಹೀಗೆ ಆಕ್ರಮಿಸುವಲ್ಲಿ ಮುಂದು ಎಂಬ ಮಾತುಗಳೂ ಕೇಳಿ ಬರುತ್ತಿತ್ತು.

ಹೀಗೆ ಎರಡೂ ಅಂಗಡಿಗಳ ಬಳಿಕ ಮುಖ್ಯ ರಸ್ತೆಯ ಬದಿಗೆ ಇದ್ದ ಎಡಮಗ್ಗುಲಿನ ಉದ್ದದ ಜಾಗದಲ್ಲಿ ನಾಲ್ಕೂರು ಕೊಠಡಿಗಳ ಕಟ್ಟಡ ಎದ್ದಿತು. ಆ ಕಟ್ಟಡದ ಮಾಲಕರು ಯಾರು ಎಂದು ತಿಳಿಯದಿದ್ದರೂ ಅದರ ಒಂದು ಕೊಠಡಿಯಲ್ಲಿ ‘ಆದರ್ಶ ಇಂಜಿನಿಯರಿಂಗ್ ವರ್ಕ್ಸ್’ ಎಂಬ ಕಪಾಟಿನ ಕಾರ್ಯಾಗಾರ ಇರುವ ಅಂಗಡಿ ಪ್ರಾರಂಭವಾಯಿತು. ಇವರಿಗೆ ನಿತ್ಯ ಗ್ರಾಹಕರಿಲ್ಲ ಎಂದಾದರೂ ಊರವರಿಗೆ ಈ ಅಂಗಡಿ ಕಂಡಾಗ ನಮ್ಮ ಮನೆಗೂ ಒಂದು ಕಪಾಟು ಬೇಕೆನ್ನಿಸಿದರೆ ಅತಿಶಯೋಕ್ತಿ ಅಲ್ಲ. ಆಸೆ ಎಂಬುದು ಹಾಗೆಯೇ. ಕಾಣದಿದ್ದಾಗ ಅದರ ಆವಶ್ಯಕತೆ ಇದ್ದರೂ ತರುವ ಮನಸ್ಥಿತಿ ಇರುವುದಿಲ್ಲ.

ಈಗ ದಿನಾ ಕಾಣುವಾಗ ನಾವು ಒಂದು ಕೊಂಡರೆ ಆದೀತಲ್ಲವೇ ಎನ್ನುವ ಮನಸ್ಥಿತಿ ದಿನವೂ ಹೆಚ್ಚಾಗಿ ಮನೆಯಲ್ಲಿ ಅದರ ಆವಶ್ಯಕತೆ ಅನಿವಾರ್ಯ ಎನ್ನಿಸಿಬಿಡುವುದು ಕೂಡಾ ಸಹಜ. ನಾವೂ ಇದಕ್ಕೆ ಹೊರತಾಗದೆ ಒಂದು ಕಪಾಟು ಖರೀದಿಸಿದೆವು. ನಿಲುಗನ್ನಡಿ ಸಹಿತವಾದುದು. ಈಗ ಊರವರಿಗೆ ಕೊಳ್ಳಲು ಸುಲಭವಾಗುವಂತೆ ತಿಂಗಳ ಕಂತುಗಳನ್ನು ನೀಡಿ, ಲಕ್ಕಿ ಡ್ರಾ ತೆಗೆದು, ಭಾಗ್ಯಶಾಲಿಗಳಿಗೆ ಕಡಿಮೆ ದರದಲ್ಲಿ ಸಿಗುವಂತೆ ಮಾಡಿದಾಗ ಅಂಗಡಿಯವರಿಗೂ ವ್ಯಾಪಾರ, ಕೊಳ್ಳುವ ಕೆಲವರಿಗೂ ಭಾಗ್ಯ ಬರುವಂತಾಯಿತು. ಇನ್ನು ಕೆಲವರ ಮನೆಗಳಿಗೆ ಮದುವೆ ಎಂಬ ನೆಪದಲ್ಲಿ ಕಪಾಟುಗಳು ಸೇರಿಕೊಂಡವು. ಹೀಗೆ ಊರಲ್ಲಿ ಈ ‘ಗೋದ್ರೆಜ್’ ಕೊಳ್ಳುವುದೆಂದರೆ ಒಂದು ಸಂಭ್ರಮವೇ ಆಗಿತ್ತು. ಆದರೆ ಅದು ಗೋದ್ರೆಜ್ ಕಂಪೆನಿಯ ಕಪಾಟು ಅಲ್ಲ. ಮೊದಲಿಗೆ ಉಕ್ಕಿನ ಕಪಾಟನ್ನು ಗೋದ್ರೆಜ್ ಕಂಪೆನಿಯವರು ನಿರ್ಮಿಸಿದ್ದರಿಂದ ಎಲ್ಲಾ ಉಕ್ಕಿನ ಅಂದರೆ ಸ್ಟೀಲಿನ ಕಪಾಟುಗಳಿಗೆ ಗೋದ್ರೆಜ್ ಎಂಬುದೇ ಜನಸಾಮಾನ್ಯರ ಭಾಷೆಯಾಗಿತ್ತು.

ಇಷ್ಟರಲ್ಲಿ ಈ ಅಂಗಡಿಗಳ ಎದುರಿನಲ್ಲಿದ್ದ ಖಾಲಿ ಜಾಗದಲ್ಲಿ ಮತ್ತೊಂದು ಕಟ್ಟಡ ಎದ್ದಿತು. ಅಲ್ಲಿ ಒಬ್ಬ ಮಹಿಳಾ ವೈದ್ಯೆ ತಮ್ಮ ಕ್ಲಿನಿಕನ್ನು ತೆರೆದರು. ಅದುವರೆಗೆ ಕಾಟಿಪಳ್ಳದ ಜನ ಶಂಸುದ್ದೀನ್ ಸರ್ಕಲ್ ಅಂದರೆ ಮಸೀದಿಯ ತಿರುವಿನಲ್ಲಿದ್ದ ಒಬ್ಬರೇ ಡಾಕ್ಟರರ ಕ್ಲಿನಿಕ್‌ಗೆ ಹೋಗಬೇಕಾಗಿತ್ತು. ಇಲ್ಲವಾದರೆ ಸುರತ್ಕಲ್‌ನಲ್ಲಿದ್ದ ಡಾ. ಸುರೇಶ್, ಡಾ.ವೇಣು ಗೋಪಾಲ್ ಅವರಲ್ಲಿಗೆ ಹೋಗುತ್ತಿದ್ದರು. ಹೀಗೆ ಕಾಟಿಪಳ್ಳ ಕೃಷ್ಣಾಪುರದ ಜನರ ಆವಶ್ಯಕತೆಗಳನ್ನು ಗ್ರಹಿಸಿದವರು ತಮ್ಮ ವೃತ್ತಿಗೆ ಇಲ್ಲಿ ಅವಕಾಶವಿದೆಯೆಂದು ಅರಿತು ಕಾಟಿಪಳ್ಳ ಕೃಷ್ಣಾಪುರವನ್ನು ಉದ್ಯೋಗ ಕೇಂದ್ರವಾಗಿಸಿಕೋಂಡು ಯಶಸ್ವಿಯಾದವರು ಹಲವರು.

ಊರಿಗೆ ದೊರೆತ ಸೇವೆಯೂ ಹೌದು. ಅವರವರ ಬದುಕೂ ಹೌದು. ಸಮಾಜವೆಂದರೆ ಹೀಗೆಯೇ ಬೆಳೆಯುವುದಲ್ಲವೇ? ಅದು ಆಧುನಿಕತೆಯ ಬೆಳವಣಿಗೆಯೇ ಹೌದಾದರೂ ಈಗ ಸಣ್ಣಪುಟ್ಟ ಶೀತ ನೆಗಡಿಯಾದರೂ ಮನೆ ಮದ್ದಿನ ಸಾಧ್ಯತೆ ಇದ್ದಲ್ಲಿಯೂ ಅದನ್ನು ಮರೆತು ಡಾಕ್ಟರರ ಬಳಿಗೆ ಹೋಗುವ ಸ್ವಭಾವ ರೂಢಿಯಾದಾಗಲೇ ಹಳ್ಳಿಯ ಸ್ವಾವಲಂಬಿತನ ಕಳೆದುಕೊಂಡು ಪೇಟೆಯ ಪರಾವಲಂಬಿತನವೂ ನಮಗೆ ತಿಳಿಯದೆ ನಮ್ಮನ್ನು ಆವರಿಸಿಕೊಳ್ಳುತ್ತಿದ್ದುದು ನಮಗೆ ಯಾರಿಗೂ ಅರಿವಾಗುತ್ತಿರಲಿಲ್ಲ ಎನ್ನುವುದು ವಾಸ್ತವ. ಕಾಟಿಪಳ್ಳದ ಈ ವಾಸ್ತವ್ಯ ವಿಕಾಸದ ಹೆಸರಿನ ಆಧುನಿಕತೆಯಲ್ಲಿ ಹಳ್ಳಿಗಳ ದೇಶ ಭಾರತ ಎನ್ನುವುದು ಮರೆಯಾಗಿ ಅಭಿವೃದ್ಧಿಶೀಲ ಭಾರತದ ಅನುಭವದೊಂದಿಗೆ ಇವುಗಳ ಸರಿ ತಪ್ಪುಗಳ ಅರಿವು ಅಂದು ನನಗೆ ಆಗಿರಲಿಲ್ಲ ಎನ್ನುವುದು ನನ್ನ ಇಂದಿನ ಅರಿವು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News