ಸ್ಥಿರತೆಗಾಗಿ ನೀಡಿದ ಮತ?

Update: 2017-12-22 18:49 GMT

ಆಡಳಿತ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಜನರ ಕೈಗೆ ಸಾರ್ವಭೌಮಿ ಅಧಿಕಾರದ ಹಸ್ತಾಂತರದ ಭರವಸೆಗಳ ಕಾರಣದಿಂದಲೇ ನೇಪಾಳಿಗಳು ರಾಜಪ್ರಭುತ್ವವನ್ನು ಕೊನೆಗೊಳಿಸಿ ಗಣರಾಜ್ಯವಾಗಿ ಪರಿವರ್ತನೆಯಾಗುವ ಹೋರಾಟವನ್ನು ಬೆಂಬಲಿಸಿದರು. ಆದರೆ ರಾಜಕೀಯ ನಾಯಕತ್ವವು ಈವರೆಗೆ ಆ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಆದರೆ ನಿಜವಾದ ಪ್ರಜಾಸತ್ತೆಗಾಗಿ ನೇಪಾಳಿಗಳ ಉತ್ಸಾಹ ಈಗಲೂ ಬತ್ತಿಲ್ಲ. ಈಗ ಎಡ ಮೈತ್ರಿಕೂಟಕ್ಕೆ ಆ ಆಶಯಗಳನ್ನು ಈಡೇರಿಸುವ ಸಮಯ ಬಂದಿದೆ.


2015ರಲ್ಲಿ ಅಳವಡಿಸಿಕೊಂಡ ಹೊಸ ಸಂವಿಧಾನದಡಿಯಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ನೇಪಾಳಿ ಜನರು ನೇಪಾಳಿ ಕಾಂಗ್ರೆಸ್‌ನ ನೇತೃತ್ವದ ಮಿತ್ರಕೂಟವನ್ನು ತಿರಸ್ಕರಿಸಿ ಎಡ ಮೈತ್ರಿಕೂಟವನ್ನು ಆಯ್ಕೆಮಾಡಿದ್ದಾರೆ.

ಇದು 1990ರ ನಂತರದಲ್ಲಿ ಎಡಪಕ್ಷಗಳಿಗೆ ದೊರೆತಿರುವ ಅತೀ ದೊಡ್ಡ ಬಹುಮತವಾಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ (ಯೂನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) ಅಥವಾ ಯುಎಂಎಲ್ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ (ಮಾವೋಯಿಸ್ಟ್- ಸೆಂಟರ್) ಅಥವಾ ಸಿಪಿಎನ್ (ಎಂಸಿ)ಗಳ ಮೈತ್ರಿಕೂಟವು ಫರ್ಸ್ಟ್ ಪಾಸ್ಟ್ ದಿ ಫೋಲ್ ಸಿಸ್ಟಮ್-ಎಫ್‌ಪಿಟಿಪಿ (ಹಲವು ಪಕ್ಷಗಳಿಂದ ಸ್ಪರ್ಧಿಸಿದ ಉಮೇದುವಾರರಲ್ಲಿ ಚಲಾಯಿತ ಮತದಾನದಲ್ಲಿ ಯಾರಿಗೆ ಹೆಚ್ಚು ಮತಗಳು ಬಿದ್ದಿರುತ್ತೋ ಅವರು ಗೆಲ್ಲುವ ಪದ್ಧತಿ- ಅನು)ಪದ್ಧತಿಯಲ್ಲಿ 165 ಸೀಟುಗಳ ನೇಪಾಳ ಒಕ್ಕೂಟದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಶೇ.70ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿಕೊಂಡಿದೆ. ಹಾಗೆಯೇ ಪ್ರೋಪೋರ್ಷನೇಟ್ ವೋಟಿಂಗ್-ಪಾಲುವಾರು ಪ್ರಾತಿನಿಧ್ಯ (ಪಕ್ಷಗಳು ಒಟ್ಟಾರೆ ಎಷ್ಟು ಮತಗಳು ಪಡೆದಿರುತ್ತವೋ ಅದರ ಆಧಾರದಲ್ಲಿ ಇಂತಿಷ್ಟು ಮತಗಳಿಗೆ ಒಬ್ಬ ಪ್ರತಿನಿಧಿ ಎಂಬ ಪದ್ಧತಿಯಲ್ಲಿ ಆಯ್ಕೆ- ಅನು) ಪದ್ಧತಿಯಲ್ಲಿ ನಡೆದ ಮತದಾನದಲ್ಲೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ.

ನೇಪಾಳಿಗಳು ಯುಎಂಲ್-ಸಿಪಿಎನ್ ಮೈತ್ರಿಕೂಟವು ಒಂದಷ್ಟು ನಿರಂತರತೆೆಯನ್ನು ಮತ್ತು ಹೆಚ್ಚಿನ ಕಾಲ ಬಿಕ್ಕಟ್ಟಿಲ್ಲದ ಅಳ್ವಿಕೆಯನ್ನು ಕೊಟ್ಟು ಆ ಮೂಲಕ ದೇಶದ ಗಮನವನ್ನು ಆಡಳಿತದ ಮೇಲೆ ಹಾಗೂ ಜನರ ಜೀವನದ ಮೇಲೆ ಹರಿಸುವಂತೆ ಮಾಡಬಹುದೆಂದು ಭರವಸೆ ಇಟ್ಟಿದ್ದಾರೆ. ಹೀಗಾಗಿಯೇ ನೇಪಾಳಿ ಕಾಂಗ್ರೆಸ್ ಮತ್ತು ಅದರ ಜೊತೆ ರಾಜನಿಷ್ಟ ಪಕ್ಷಗಳು ಮತ್ತು ಮಾಧೇಶಿ ಪಕ್ಷಗಳು ಮಾಡಿಕೊಂಡ ತೇಪೆ ಹಾಕಿದಂಥ ಮೈತ್ರಿಕೂಟವು ಜನರಲ್ಲಿ ಭರವಸೆ ಹುಟ್ಟಿಸಲು ವಿಫಲವಾಯಿತು. ನೇಪಾಳಿ ಕಾಂಗ್ರೆಸ್‌ನ ಪ್ರಚಾರವು ನಕಾರಾತ್ಮಕವಾಗಿತ್ತು ಮತ್ತು ಜನರಲ್ಲಿ ಗಾಬರಿಯನ್ನು ಮಾತ್ರ ಕೆರಳಿಸುವಂತಿತ್ತು. ಸ್ಥಿರತೆಯ ಬಗೆಗಿನ ಭರವಸೆಯು ನೇಪಾಳಕ್ಕೆ ಅತ್ಯಂತ ಮುಖ್ಯವಾಗಿತ್ತು. ಏಕೆಂದರೆ 1990ರಲ್ಲಿ ನೇಪಾಳವು ಒಂದು ಪ್ರಜಾತಂತ್ರವಾಗಿ ಬದಲಾದಾಗಿನಿಂದ ರಾಜಕೀಯ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಒಳಜಗಳವು ನಡೆಯುತ್ತಲೇ ಬರುತ್ತಿತ್ತು ಮತ್ತು ನೇಪಾಳದ ರಾಜಕಾರಣದಲ್ಲಿ ಅನಿಶ್ಚಿತತೆಯೆಂಬುದು ಶಾಶ್ವತ ಗುಣಲಕ್ಷಣವಾಗಿಬಿಟ್ಟಿತ್ತು.

ಕಳೆದ 27 ವರ್ಷಗಳಲ್ಲಿ 23 ಅವಧಿಗಳಲ್ಲಿ 13 ಪ್ರಧಾನಿಗಳು ದೇಶವನ್ನಾಳಿದ್ದಾರೆ. ಈ ಕಾಲಾವಧಿಯಲ್ಲಿ ಒಂದು ದಶಕದಷ್ಟು ಕಾಲ ದೇಶವು ಅಂತರ್ಯುದ್ಧವನ್ನು ಅನುಭವಿಸಿತು. ಹಾಗೂ ಸ್ವಲ್ಪಕಾಲ ರಾಜಪ್ರಭುತ್ವದ ಹೇರಿಕೆಯನ್ನು ಕಂಡಿತು. ಆ ನಂತರದಲ್ಲಿ ಸಶಸ್ತ್ರ ಮಾವೋವಾದಿಗಳು ಮತ್ತು ಮುಖ್ಯವಾಹಿನಿ ಪಕ್ಷಗಳ ನಡುವೆ ಶಾಂತಿ ಪ್ರಕ್ರಿಯೆಗಳು ನಡೆದು ಹೊಸ ಸಾಂವಿಧಾನಿಕ ಸಭೆಯ ರಚನೆಗೂ, ರಾಜಪ್ರಭುತ್ವ ಕೊನೆಗೊಂಡು ಗಣರಾಜ್ಯದ ಸ್ಥಾಪನೆಗೂ ಕಾರಣವಾಯಿತು. ಕಳೆದ ದಶಕದುದ್ದಕ್ಕೂ ಸಂವಿಧಾನ ರಚನೆಯ ಬಗ್ಗೆ ಒಂದು ಬಗೆಯ ರಾಜಕೀಯ ಸ್ಥಗಿತತೆ ಉಂಟಾಗಿತ್ತು. ಆದರೆ ಇಡೀ ದೇಶವನ್ನೇ ಅಲುಗಾಡಿಸಿದ ಭೂಕಂಪ ಮತ್ತು ಅದರಿಂದ ದೇಶವು ಅಪಾರ ಹಾನಿ ಮತ್ತು ನಷ್ಟಗಳನ್ನು ಅನುಭವಿಸಿದ ತರುವಾಯ ರಾಜಕಾರಣಿಗಳು ತಮ್ಮಗಳ ನಡುವಿನ ಭಿನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಹೊಸ ಸಂವಿಧಾನವನ್ನು ರೂಪಿಸಿಕೊಂಡರು.

ಆದರೆ ಈಗಲೂ ಹೊಸ ಸಂವಿಧಾನದ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳು ಉಳಿದುಕೊಂಡಿವೆ; ಉದಾಹರಣೆಗೆ ಪ್ರಭುತ್ವದ ಅಮೂಲಾಗ್ರ ಪುನರ್‌ರಚನೆಯ ಬಗ್ಗೆ ಮಾದೆೇಶಿಗಳ ಮತ್ತು ಜನಜಾತಿಗಳ ಬೇಡಿಕೆಗಳು ಈಡೇರಿಲ್ಲ. 1990ರಲ್ಲಿ ಮದನ್ ಲಾಲ್ ಭಂಡಾರಿಯವರ ನಿಧನರಾದ ತರುವಾಯ ಯುಎಂಎಲ್ ಪಕ್ಷವು ತನ್ನ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಸ್ಥಾನಗಳನ್ನು ಗಳಿಸಿಕೊಂಡಿದೆ. ಆದರೆ ಅಂದಿನ ದಿನಗಳಿಗೆ ಹೋಲಿಸಿದಲ್ಲಿ ಯುಎಂಎಲ್ ಪಕ್ಷವೂ ಸಹ ಸಾಕಷ್ಟು ಹಾದಿಯನ್ನು ಕ್ರಮಿಸಿದೆ. ಅದು ಕಳೆದ ದಶಕದಲ್ಲಿ ಕೆ.ಪಿ. ಓಲಿಯವರ ನಾಯಕತ್ವದಲ್ಲಿ ರಾಜಕೀಯ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವ ರಾಜಕೀಯವನ್ನು ಪ್ರತಿಪಾದಿಸಿತ್ತು. ನೇಪಾಳಿ ರಾಷ್ಟ್ರೀಯವಾದದ ಪ್ರಮುಖ ವಕ್ತಾರನಾಗಿತ್ತು ಮತ್ತು ರಾಷ್ಟ್ರಪ್ರಭುತ್ವದ ವಿಕೇಂದ್ರೀಕರಣವನ್ನು ತಡೆಗಟ್ಟಿತ್ತು. ಅದರ ಆರ್ಥಿಕ ನೀತಿಗಳೂ ಸಹ ಜನರನ್ನು ಅವಲಂಬಿತರನ್ನಾಗಿ ಮಾಡುವ ವ್ಯವಸ್ಥೆಯ ಗಡಿಗಳನ್ನೇನೂ ದಾಟಿರಲಿಲ್ಲ.

ಇತ್ತೀಚಿನ ದಿನಗಳಲ್ಲಿ ನೇಪಾಳದ ಮಾಧೇಶಿ ಪ್ರಾಂತದಲ್ಲಿ ನಡೆದ ಮಾಧೇಶಿ ಚಳವಳಿಯಲ್ಲಿ ಭಾರತದ ವಿಭೇದಕಾರಿ ಹಸ್ತಕ್ಷೇಪದ ವಿರುದ್ಧ ಅದು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದ ನೇಪಾಳಿ ರಾಷ್ಟ್ರವಾದವು ಸ್ವತಂತ್ರ ಮನೋಭಾವದ ನೇಪಾಳಿಗಳ ಬೆಂಬಲವನ್ನು ಗಳಿಸಿಕೊಂಡಿತು. ಪುಷ್ಪಕಮಾಲ್ ದಹಾಲ್ ಪ್ರಚಂಡ ಅವರ ನೇತೃತ್ವದ ಸಿಪಿಎನ್ (ಎಂಸಿ) ಪಕ್ಷವೂ ಸಹ 1990 ಮತ್ತು 2000 ದಶಕದ ಪ್ರಜಾಯುದ್ಧದ ಅವಧಿಯಲ್ಲಿ ಬದ್ಧವಾಗಿದ್ದ ಗುರಿಗಳು ಮತ್ತು ಕ್ರಾಂತಿಕಾರಿ ಸ್ವರೂಪಗಳಿಗೂ ಹೋಲಿಸಿದಲ್ಲಿ ಸಾಕಷ್ಟು ರೂಪಾಂತರವಾಗಿದೆ. ಒಂದೆಡೆ ಆ ಪಕ್ಷವು ಜನರಿಂದ ಆಯ್ಕೆಯಾದ ಸಂವಿಧಾನ ರಚನೆ ಸಭೆಯನ್ನು ರಚಿಸುವ ತನ್ನ ಅಲ್ಪಕಾಲೀನ ಗುರಿಯನ್ನು ಸಾಧಿಸಲು ಸಾಕಷ್ಟು ಶ್ರಮಿಸಿತು. ಮತ್ತೊಂದೆಡೆ ಪ್ರಚಂಡ ಅವರು ತಮ್ಮ ಹಿಂದಿನ ಕ್ರಾಂತಿಕಾರಿ ಭರವಸೆಗಳಾದ ಭೂ ಸುಧಾರಣೆ ಮತ್ತು ಆಮೂಲಾಗ್ರ ವಿಕೇಂದ್ರೀಕರಣಗಳನ್ನು ಜಾರಿ ಮಾಡುವುದಕ್ಕಿಂತ ರಾಜಧಾನಿ ಕಠ್ಮಂಡುವಿನಲ್ಲಿ ಅಧಿಕಾರಕ್ಕೆ ಸಮೀಪವಾಗಿರುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಮಾವೋವಾದಿಗಳ ಈ ಬಗೆಯ ಮಾರ್ಪಾಡುಗಳು ಆ ಪಕ್ಷದಲ್ಲಿ ಒಡಕನ್ನುಂಟು ಮಾಡಿದರೂ ಪ್ರಚಂಡರವರು ಯುಎಂಎಲ್‌ನೊಂದಿಗೆ ಎಡ ಮೈತ್ರಿಕೂಟವನ್ನು ಮಾಡಿಕೊಳ್ಳುವುದರ ಮೂಲಕ ಪ್ರಸ್ತುತರಾಗುಳಿದರು.

ಎರಡು ಪಕ್ಷಗಳು ಪಡೆದ ಅಗಾಧ ಬಹುಮತ ಮತ್ತು ಬರಲಿರುವ ದಿನಗಳಲ್ಲಿ ಎರಡು ಪಕ್ಷಗಳು ವಿಲೀನವಾಗುವ ಬಗೆಗಿನ ಬದ್ಧತೆಗಳು ನಿಧಾನವಾಗಿ ಅ ಪಕ್ಷಗಳಲ್ಲಿ ಅಲ್ಪತೃಪ್ತಿಯನ್ನೂ ಉಂಟುಮಾಡಬಹುದು. ಎರಡು ಪಕ್ಷಗಳು ಇದರ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ಅದಕ್ಕೆ ಬದಲಾಗಿ ದೇಶವು ಸಾಕಷ್ಟು ಕಾಲದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವತ್ತ ಅವರು ಗಮನಹರಿಸಬೇಕು; ವಲಸೆ ಸಮಸ್ಯೆ, ಇನ್ನೂ ಪೂರ್ತಿಗೊಳ್ಳದಿರುವ ಭೂ ಕಂಪದ ಪರಿಹಾರ ಹಾಗೂ ಆರ್ಥಿಕತೆ ಎದುರಿಸುತ್ತಿರುವ ದೀರ್ಘಕಾಲೀನ ಅನಭಿವೃದ್ಧಿ. ನೇಪಾಳವು ವಲಸೆ ಸಮಸ್ಯೆಯನ್ನು ಎದುರಿಸುತ್ತಿರಲು ಕಾರಣವಾದ ಅಂಶಗಳೆಂದರೆ ಕೃಷಿ ಆರ್ಥಿಕತೆಯಲ್ಲಿ ಬಂದಿರುವ ಸ್ಥಗಿತತೆ ಹಾಗೂ ಒಟ್ಟಾರೆ ಆರ್ಥಿಕತೆಯು ವಿದೇಶಿ ಸಾಲ ಮತ್ತು ವಿದೇಶದಲ್ಲಿ ಕೆಲಸ ಮಾಡುವವರು ಕಳಿಸುವ ಹಣದ ಮೇಲೆ ಆಧಾರವಾಗಿದ್ದುಕೊಂಡು ಇತರ ಮಾರ್ಗಗಳನ್ನು ಕಂಡುಕೊಳ್ಳದಿರುವುದು. ನೇಪಾಳದ ಹಿಂದುಳಿದಿರುವಿಕೆಗೆ ಕಾರಣವಾಗಿರುವ ಈ ಅವಲಂಬನೆಯನ್ನು ಪೋಷಿಸುವ ಆರ್ಥಿಕ ನೀತಿಗಳನ್ನು ಈ ಎಡ ಮೈತ್ರಿಕೂಟ ಮುರಿದು ಹೊಸ ದಾರಿಯನ್ನು ತೋರುವುದೇ ಎಂಬುದನ್ನು ಕಾದುನೋಡಬೇಕಿದೆ. ಇದಾಗಬೇಕೆಂದರೆ ಯುಎಂಎಲ್ ಮತ್ತು ಸಿಪಿಎನ್ (ಎಂಸಿ) ಪಕ್ಷಗಳು ತಮ್ಮ ಮೂಲ ನಿಲುವುಗಳಾದ ಆಮೂಲಾಗ್ರ ಭೂ ಸುಧಾರಣೆ, ಜಲ ವಿದ್ಯುತ್‌ಗಳಂಥ ಉತ್ಪಾದಕ ಕ್ಷೇತ್ರಗಳಲ್ಲಿ ಸಾರ್ವಜನಿಕ ಬಂಡವಾಳವನ್ನು ತೊಡಗಿಸುವ ಮತ್ತು ವಿದೇಶಿ ಅವಲಂಬನೆಯನ್ನು ತಪ್ಪಿಸಲು ದೇಶೀಯ ಕೈಗಾರಿಕಾ ನೆಲೆಯನ್ನು ಬೆಳೆಸುವ ನೀತಿಗಳಿಗೆ ಮರಳಬೇಕು. ಇದಲ್ಲದೆ ಮಾಧೇಶಿಗಳನ್ನು ಮತ್ತು ಜನಜಾತಿಗಳನ್ನು ಅತೃಪ್ತರನ್ನಾಗಿಸಿರುವ ಪ್ರಭುತ್ವದ ಸಂಸ್ಥೆಗಳ ಪುನಾರಚನೆಯ ವಿಷಯವು ಇನ್ನೂ ಬಗೆಹರಿದಿಲ್ಲ.

ತೆರಾಯ್ ಪ್ರಾಂತದ ಜನರ ಈ ಜನಪ್ರಿಯ ಬೇಡಿಕೆಗಳನ್ನು ನಿರಾಕರಿಸಿದ ಕಾರಣದಿಂದಲೇ ಯುಎಂಎಲ್ ಪಕ್ಷಕ್ಕೆ ಗಿರಿಪ್ರಾಂತದಲ್ಲಿ ಹೆಚ್ಚಿನ ಬೆಂಬಲವು ದೊರಕಿದೆ. ಆದರೆ ಇದಕ್ಕೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳದಿದ್ದರೆ ನಿಧಾನವಾಗಿ ಆ ಪ್ರಾಂತದಲ್ಲಿ ಪ್ರತ್ಯೇಕತಾವಾದಿ ರಾಜಕೀಯಕ್ಕೆ ಹೆಚ್ಚಿನ ಮಾನ್ಯತೆ ಸಿಗುತ್ತಾ ಹೋಗಬಹುದು. ತಮಗೆ ಸಿಕ್ಕಿರುವ ಜನಮಾನ್ಯತೆಯನ್ನು ಎಡ ಒಕ್ಕೂಟವು ಪ್ರಭುತ್ವ ಹಾಗೂ ಒಕ್ಕೂಟ ಪುನಾರಚನೆಯ ವಿಷಯದಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಲು ಸಿಕ್ಕಿರುವ ಆದೇಶವೆಂದು ತಪ್ಪಾಗಿ ವ್ಯಾಖ್ಯಾನಿಸಿಕೊಳ್ಳಬಾರದು. ಆಡಳಿತ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಜನರ ಕೈಗೆ ಸಾರ್ವಭೌಮಿ ಅಧಿಕಾರದ ಹಸ್ತಾಂತರದ ಭರವಸೆಗಳ ಕಾರಣದಿಂದಲೇ ನೇಪಾಳಿಗಳು ರಾಜಪ್ರಭುತ್ವವನ್ನು ಕೊನೆಗೊಳಿಸಿ ಗಣರಾಜ್ಯವಾಗಿ ಪರಿವರ್ತನೆಯಾಗುವ ಹೋರಾಟವನ್ನು ಬೆಂಬಲಿಸಿದರು. ಆದರೆ ರಾಜಕೀಯ ನಾಯಕತ್ವವು ಈವರೆಗೆ ಆ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಆದರೆ ನಿಜವಾದ ಪ್ರಜಾಸತ್ತೆಗಾಗಿ ನೇಪಾಳಿಗಳ ಉತ್ಸಾಹ ಈಗಲೂ ಬತ್ತಿಲ್ಲ. ಈಗ ಎಡ ಮೈತ್ರಿಕೂಟಕ್ಕೆ ಆ ಆಶಯಗಳನ್ನು ಈಡೇರಿಸುವ ಸಮಯ ಬಂದಿದೆ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News