ಕಲ್ಲೆ ಶಿವೋತ್ತಮ ರಾವ್ ಅವರೊಂದಿಗೆ ಒಂದು ದಿನ....
ಇಂಥ ಅಪರೂಪದ ವ್ಯಕ್ತಿ ಕಲ್ಲೆ ಅವರು ಎಲ್ಲಿದ್ದಾರೆ ಎಂಬುದು ಗೊತ್ತೇ ಇರಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ರಾಜ್ಯೋತ್ಸವ ಪ್ರಶಸ್ತಿ ಕೂಡ ಅವರಿಗೆ ಬಂತು. ಕಲ್ಲೆ ಅವರು ತಾವೆಂದೂ ಅರ್ಜಿ ಹಾಕಿ, ಪ್ರಶಸ್ತಿ ಪಡೆಯುವವರಲ್ಲ. ಆದರೆ, ದಿನೇಶ್ ಅಮೀನ್‌ಮಟ್ಟು, ಸರಜೂ ಕಾಟ್ಕರ್ ಮುಂತಾದವರು ಕಲ್ಲೆ ಅವರ ಹೆಸರು ಹೇಳಿದಾಗ, ಅವರ ಬಗ್ಗೆ ಗೊತ್ತಿದ್ದ ಸಿದ್ದರಾಮಯ್ಯ ಅವರು ಆಸಕ್ತಿ ವಹಿಸಿ, ತಾವಾಗಿಯೇ ಫೋನ್ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿ, ಪ್ರಶಸ್ತಿ ಸ್ವೀಕರಿಸಲು ವಿನಂತಿಸಿದರು.
ಕಲ್ಲೆ ಶಿವೋತ್ತಮ ರಾವ್. ಈ ಹೆಸರು ಇಂದಿನ ಪೀಳಿಗೆಯ ಬಹುತೇಕ ಜನರಿಗೆ ಗೊತ್ತಿಲ್ಲ. ಹಿಂದಿನ ಪೀಳಿಗೆಯ ಅನೇಕರಿಗೆ ಈ ಹೆಸರು ಗೊತ್ತಿದ್ದರೂ ಅವರು ಹೇಗಿದ್ದಾರೆ ಮತ್ತು ಎಲ್ಲಿದ್ದಾರೆ ಎಂಬ ಮಾಹಿತಿ ಅನೇಕರಿಗೆ ತಿಳಿದಿಲ್ಲ. ದೈನಂದಿನ ಬದುಕಿನ ಜಂಜಾಟದಲ್ಲಿ ಗೊತ್ತು ಮಾಡಿಕೊಳ್ಳುವ ಉಸಾಬರಿಗೂ ಯಾರೂ ಹೋಗುವುದಿಲ್ಲ. ಅವರ ಹೆಸರನ್ನು ಚಲಾವಣೆಯಲ್ಲಿ ಇಡುವ ಶಿಷ್ಯ ಬಳಗವೂ ಅವರಿಗೆ ಇಲ್ಲ. ಇರುವ ಅಳಿದುಳಿದ ಶಿಷ್ಯ ಬಳಗಕ್ಕೆ ಅವರ ಒಡನಾಟವಿಲ್ಲ.
ಕಲ್ಲೆ ಶಿವೋತ್ತಮ ರಾವ್ ಅವರು ನಾಡಿನ ಹಿರಿಯ ಪತ್ರಕರ್ತರು. ಟಿ.ಎಸ್.ರಾಮಚಂದ್ರರಾವ್, ಪಾಟೀಲ ಪುಟ್ಟಪ್ಪ, ಖಾದ್ರಿ ಶಾಮಣ್ಣ ಮುಂತಾದವರ ಸಾಲಿನಲ್ಲಿ ನಿಲ್ಲುವ ಮಾಧ್ಯಮ ಲೋಕದ ದಿಗ್ಗಜರು. 60, 70 ಮತ್ತು 80ರ ದಶಕದಲ್ಲಿ ಅವರ ಹೆಸರು ಮನೆಮಾತಾಗಿತ್ತು. ಅವರ ಬರಹಗಳನ್ನು ಓದಿ, ಹೋರಾಟದ ಕ್ರಿಯಾರಂಗಕ್ಕೆ ಇಳಿದ ಕಾರ್ಯಕರ್ತರ ದೊಡ್ಡ ಪಡೆಯೇ ಅವಾಗ ಇತ್ತು. ಒಂದು ಸಮುದಾಯಕ್ಕೆ ಸೀಮಿತವಾದ ಪತ್ರಿಕಾ ಜಗತ್ತಿನಲ್ಲಿ ಪ್ರವೇಶಿಸಿ, ಸೆಣೆಸಿದವರು ಕಲ್ಲೆ ಶಿವೋತ್ತಮ ರಾವ್.
ಕಲ್ಲೆ ಶಿವೋತ್ತಮ ರಾಯರ ತಂದೆ ಕಲ್ಲೆ ನಾರಾಯಣ ರಾವ್ ಕೂಡ ಪತ್ರಕರ್ತರು. 30 ಮತ್ತು 40ರ ದಶಕದಲ್ಲಿ ತಮ್ಮ ಹುಟ್ಟೂರು ಕಾರ್ಕಳದಿಂದ ಹೊರಟು ಹುಬ್ಬಳ್ಳಿಗೆ ಬಂದು ತಲುಪಿದವರು. ಆಗ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ‘ಸಂಯುಕ್ತ ಕರ್ನಾಟಕ’ ನಾಡಿನ ಏಕೈಕ ದೊಡ್ಡ ಪತ್ರಿಕೆ. ಆದರೆ, ಅದು ಮಾಧ್ವರ ಅಗ್ರಹಾರ ಎಂಬ ಪ್ರಖ್ಯಾತಿ ಪಡೆದಿತ್ತು. ಇಂಥ ಅಗ್ರಹಾರದಲ್ಲಿ ಕಲ್ಲೆ ನಾರಾಯಣರಾವ್ ಪ್ರವೇಶ ಪಡೆದರು. ಅವರ ಹೆಸರನ್ನು ನೋಡಿ, ಅವರು ಬ್ರಾಹ್ಮಣರೆಂದು ಅನೇಕರು ತಿಳಿದಿದ್ದರು. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ ಅವರು ಸಂಯುಕ್ತ ಕರ್ನಾಟಕದ ಸಾರಥ್ಯ ವಹಿಸಿದ್ದ ಮೊಹರೆ ಹಣಮಂತರಾವ್, ರಂಗನಾಥ ದಿವಾಕರ ಅವರ ಮನಸ್ಸನ್ನು ಗೆಲ್ಲಲು ತಡವಾಗಲಿಲ್ಲ. ಸಂಯುಕ್ತ ಕರ್ನಾಟಕದಲ್ಲಿ ಸೇರಿ ಸೇವೆ ಸಲ್ಲಿಸಿದರು. ಆಗ ಕರ್ನಾಟಕ ಏಕೀಕರಣದ ದಿಗ್ಗಜರಾಗಿದ್ದ ಆಲೂರು ವೆಂಕಟರಾವ್, ಮುದವೀಡು ಕೃಷ್ಣರಾವ್ ಜೊತೆ ಕೆಲಸ ಮಾಡಿದರು. ಇಂಥ ಪ್ರತಿಭಾವಂತ ಪತ್ರಕರ್ತ ಕಲ್ಲೆ ನಾರಾಯಣ ರಾವ್ ಅವರ ಪುತ್ರ ಕಲ್ಲೆ ಶಿವೋತ್ತಮ ರಾವ್ ಅವರು ಕೂಡ ಬೆಳೆದಿದ್ದು-ಓದಿದ್ದು ಹುಬ್ಬಳ್ಳಿಯಲ್ಲಿ. ಹೀಗಾಗಿ ಅವರ ಕನ್ನಡದಲ್ಲಿ ದಕ್ಷಿಣ ಕನ್ನಡದ ಜೊತೆಗೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ಛಾಯೆಯು ಎದ್ದು ಕಾಣುತ್ತದೆ. ಅದರಲ್ಲೂ ಆ ಭಾಗದ ನಮ್ಮಂಥವರು ಸಿಕ್ಕರೆ, ಹಳೆಯ ನೆನಪುಗಳ ಸುರಳಿಯನ್ನು ಬಿಚ್ಚಿ ದಿನವಿಡೀ ಮಾತನಾಡುತ್ತಾರೆ. ತಂದೆಯಂತೆ ಕಲ್ಲೆ ಶಿವೋತ್ತಮ ರಾಯರು ಕೂಡ ಪ್ರಖಾಂಡ ಪಂಡಿತರು. ಐದಾರು ಭಾಷೆಗಳಲ್ಲಿ ಪಾರಂಗತರು. ಕಟ್ಟಾ ಲೋಹಿಯಾವಾದಿ. ಲೋಹಿಯಾ ಒಬ್ಬರೇ ಅಲ್ಲ, ಮಾರ್ಕ್ಸ್ ಮತ್ತು ಪೆರಿಯಾರ್ ವಿಚಾರಗಳನ್ನು ಅರೆದು ಕುಡಿದವರು. 70ರ ದಶಕದಲ್ಲಿ ಪೆರಿಯಾರ್‌ರನ್ನು ಬೆಂಗಳೂರಿಗೆ ಕರೆ ತಂದು ಭಾಷಣ ಮಾಡಿಸಿದವರು. ಇಂಥ ಕಲ್ಲೆಯವರನ್ನು ಭೇಟಿಯಾಗಬೇಕೆಂದು ತುಂಬಾ ದಿನದಿಂದ ಯೋಚಿಸುತ್ತಿದ್ದೆ. ಇತ್ತೀಚೆಗೆ ಅಂದ್ರೆ ಎರಡು ವಾರಗಳ ಹಿಂದೆ ಮೈಸೂರಿನ ‘ಬಾರುಕೋಲು’ ಪತ್ರಿಕೆಯ ರಂಗಸ್ವಾಮಿ ಮತ್ತು ಅವರ ಬದುಕಿನ ಸಂಗಾತಿ ಪದ್ಮಶ್ರೀ ಅವರು ಕಲ್ಲೆಯವರ ಬಳಿ ಹೋಗಬೇಕೆಂದು ಬಂದೇಬಿಟ್ಟರು. ಹೀಗಾಗಿ, ಅವರ ವಾಹನದಲ್ಲೇ ಯಲಹಂಕದಲ್ಲಿರುವ ಕಲ್ಲೆಯವರನ್ನು ಭೇಟಿ ಮಾಡಲು ಹೋದೆವು. ನನ್ನ ಫೋನ್ ನಂಬರ್‌ನ್ನು ಪತ್ತೆ ಹಚ್ಚಿದ್ದ ಕಲ್ಲೆ ಅವರು ಭೇಟಿಯಾಗಬೇಕೆಂದು ಒತ್ತಾಯಿಸುತ್ತಲೇ ಇದ್ದರು. ಈಗ ಆ ಅವಕಾಶ ಸಿಕ್ಕಿತು.
ನನ್ನ ಮತ್ತು ಕಲ್ಲೆಯವರ ಒಡನಾಟಕ್ಕೆ ಒಂದು ಹಿನ್ನೆಲೆಯಿದೆ. 70ರ ದಶಕದ ಏರುಜವ್ವನದಲ್ಲಿ ಕಮ್ಯೂನಿಸ್ಟ್ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ನಾಳೆಯೇ ಕ್ರಾಂತಿಯಾಗುವುದೆಂದು ಓಡಾಡುತ್ತಿದ್ದ ನಮಗೆಲ್ಲ ಆಗ, ಓದುವ-ತಿಳಿದುಕೊಳ್ಳುವ ಹಸಿವು ತುಂಬಾ ಇತ್ತು. ಆಗ ಈಗಿನಂತೆ ಇಂಟರ್ನೆಟ್, ಮೊಬೈಲ್ ಇರಲಿಲ್ಲ. ಟಿವಿ ಎಂಬುದು ಗೊತ್ತೇ ಇರಲಿಲ್ಲ. ಓದುವ ಸಾಹಿತ್ಯವೂ ಕೂಡ ತುಂಬಾ ಕಡಿಮೆ. ‘ನವಕರ್ನಾಟಕ’ ಪ್ರಕಾಶನದಲ್ಲಿ ಮಾತ್ರ ಓದಲು ಎಡಪಂಥೀಯ ಕೆಲ ಪುಸ್ತಕಗಳು ಸಿಗುತ್ತಿದ್ದವು. ಆಗ ವಿದ್ಯಾರ್ಥಿಯಾಗಿದ್ದ ಈಗ ವಿಧಾನಭಾಧ್ಯಕ್ಷ ರಮೇಶ್ ಕುಮಾರ್ ಕೂಡ ಪುಸ್ತಕ ಕೊಳ್ಳಲು ಅಲ್ಲಿಗೆ ಬರುತ್ತಿದ್ದರು. ಎಲ್ಲಕ್ಕಿಂತ ಗುಟ್ಟಿನ ಸಂಗತಿಯೆಂದರೆ, ಆ ಕಾಲದಲ್ಲಿ ಆ ಮಳಿಗೆಯಲ್ಲಿದ್ದ ರಾಮನ್ ಎಂಬವರು ನಕ್ಸಲ್ ಚಳವಳಿಯ ‘ಫ್ರಾಂಟಿಯರ್’ ಎಂಬ ಪತ್ರಿಕೆಯನ್ನು ಓದಲು ಕೊಡುತ್ತಿದ್ದರು. ಅದನ್ನು ಗುಟ್ಟಾಗಿ ಓದಿ, ಮತ್ತೆ ಅದನ್ನು ಕೊಟ್ಟು ಬರುತ್ತಿದ್ದೆವು. ಇಂಥ ದಿನಗಳಲ್ಲಿ ಕಲ್ಲೆ ಶಿವೋತ್ತಮ ರಾಯರ ಪರಿಚಯವಾಯಿತು. ಅವರು ಆಗ ‘ಜನಪ್ರಗತಿ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಆ ಕಾಲದಲ್ಲಿ ಜನಪ್ರಗತಿ ನಾಡಿನ ಅತೀ ಹೆಚ್ಚು ಪ್ರಸಾರದ ಪತ್ರಿಕೆ. ಅದನ್ನು ಬಿಟ್ಟರೆ, ‘ಪ್ರಜಾಮತ’ ಅತ್ಯಂತ ದೊಡ್ಡ ಪತ್ರಿಕೆ. ಈ ಜನಪ್ರಗತಿ ಪತ್ರಿಕೆಗೆ ದೂರದ ಬಿಜಾಪುರದಲ್ಲಿ ಇದ್ದ ನಾನು ಲೇಖನ ಮತ್ತು ಕಥೆಗಳನ್ನು ಬರೆದು ಕಳುಹಿಸುತ್ತಿದ್ದೆ. ಕಲ್ಲೆ ಅವರು ಅದನ್ನು ಪ್ರಕಟಿಸುತ್ತಿದ್ದರು. ಆಗ ಉತ್ತರ ಕರ್ನಾಟಕದಲ್ಲಿ ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ವಾರಪತ್ರಿಕೆಯೂ ಕೂಡ ಅತ್ಯಂತ ದೊಡ್ಡ ಪತ್ರಿಕೆಯಾಗಿತ್ತು. ಅದರಲ್ಲಿ ಅವರು ಬರೆಯುತ್ತಿದ್ದ ವ್ಯಕ್ತಿಚಿತ್ರಗಳು ತುಂಬಾ ಆಕರ್ಷಕವಾಗಿದ್ದವು. ಅದಕ್ಕೂ ನಾನು ಬರೆಯುತ್ತಿದ್ದೆ. ಬಿ.ಎನ್.ಗುಪ್ತಾ ಅವರ ಮಾಲಕತ್ವದ ಜನಪ್ರಗತಿ ಪತ್ರಿಕೆ ಸಾರಥ್ಯವನ್ನು ಕಲ್ಲೆ ಶಿವೋತ್ತಮ ರಾಯರು ವಹಿಸಿಕೊಂಡಿದ್ದರು. ಕೋಡಿಹೊಸಳ್ಳಿ ರಾಮಣ್ಣ ಆ ಪತ್ರಿಕೆ ಯಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ ರಾಮಣ್ಣ ಸಂಯುಕ್ತ ಕರ್ನಾಟಕ ಸೇರಿದರೂ ಕೂಡ ಜನಪ್ರಗತಿಗೆ ಆಗಾಗ ಅಂಕಣ ಬರೆಯುತ್ತಿದ್ದರು. ಇಂಥ ಪತ್ರಿಕೆಯಲ್ಲಿ ನನಗೆ ಬರೆಯಲು ಅವಕಾಶ ದೊರೆತಿದ್ದು ಮಾತ್ರವಲ್ಲ, ಅಲ್ಲಿ ಬರುತ್ತಿದ್ದ ಲೋಹಿಯಾ ಮತ್ತು ಪೆರಿಯಾರ್ ವಿಚಾರಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡೆ. ಮಾರ್ಕ್ಸ್‌ವಾದದ ಜೊತೆಗೆ ಈ ವಿಚಾರಗಳು ನನ್ನನ್ನು ಆಕರ್ಷಿಸಿದವು. 70ರ ದಶಕದ ಆ ದಿನಗಳಲ್ಲಿ ದೂರದ ಬಿಜಾಪುರದಲ್ಲಿ ಇದ್ದ ನನಗೆ ಕಲ್ಲೆ ಅವರನ್ನು ನೋಡಬೇಕೆಂದು ಆಸಕ್ತಿ ಮೂಡಿತು. ಆದರೆ, ಬರುವ ಸ್ಥಿತಿಯಲ್ಲಿ ಇರಲಿಲ್ಲ. ಈ ನಡುವೆ ಏಕಾಏಕಿ, 71ರಲ್ಲಿ ಬೆಂಗಳೂರಿನಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪಾಲಿಟ್‌ಬ್ಯೂರೊ ಸಭೆ ನಡೆಯುತ್ತೆಂದು, ಅಲ್ಲಿ ಇಎಂಎಸ್, ಎಕೆಜಿ, ಜ್ಯೋತಿಬಸು ಬರುತ್ತಾರೆಂದು ತಿಳಿಯಿತು. ಹೇಗಾದರೂ ಮಾಡಿ ಬೆಂಗಳೂರಿಗೆ ಹೋಗಿ ಅವರನ್ನು ನೋಡಬೇಕೆಂದು ಪರದಾಡುತ್ತಿದ್ದೆ. ಆಗ ಕಾಂಗ್ರೆಸ್‌ನಲ್ಲಿದ್ದ ನನ್ನ ಸಹೋದರ ಪಂಪಕವಿ ಬೆಂಗಳೂರಿಗೆ ಹೊರಟಿದ್ದರು. ಅವರಿಗೆ ದೇವರಾಜ ಅರಸು, ಬಸವಲಿಂಗಪ್ಪ, ರಂಗನಾಥ ಅವರ ಒಡನಾಟವಿತ್ತು. ಅವರ ಮುಂದೆ ನನ್ನ ಹಂಬಲವನ್ನು ವ್ಯಕ್ತಪಡಿಸಿದಾಗ, ನನ್ನನ್ನು ಕೆಂಪು ಬಸ್‌ನಲ್ಲಿ ಕರೆದುಕೊಂಡು ಬೆಂಗಳೂರಿಗೆ ಹೋದರು.
ಬೆಂಗಳೂರಿಗೆ ಹೋದ ದಿನವೇ ಶೇಷಾದ್ರಿಪುರ ಉದ್ಯಾನದ ಬಯಲಿನಲ್ಲಿ ಸಿಪಿಎಂ ಬಹಿರಂಗ ಸಭೆ ಇತ್ತು. ಈ ಸಭೆಯಲ್ಲಿ ಜ್ಯೋತಿ ಬಸು ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಬಸು ಆಗಿನ್ನೂ ಮುಖ್ಯಮಂತ್ರಿ ಆಗಿರಲಿಲ್ಲ. ಪಶ್ಚಿಮ ಬಂಗಾಳದ ಸಂಯುಕ್ತ ರಂಗ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಅವರ ಭಾಷಣ ಕೇಳಿ, ಸ್ಫೂರ್ತಿ ಪಡೆದೆವು. ಮರುದಿನ ಮಲ್ಲೇಶ್ವರದಲ್ಲಿದ್ದ ಜನಪ್ರಗತಿ ಪತ್ರಿಕೆಯ ಕಚೇರಿ ಹುಡುಕಿಕೊಂಡು ಹೊರಟೆ. ಅವರಿವರನ್ನು ಕೇಳಿ ಅದನ್ನು ಪತ್ತೆ ಹಚ್ಚಿದ್ದಾಯಿತು. ಕಲ್ಲೆ ಅವರ ಭೇಟಿಯೂ ಆಯಿತು. ಕಲ್ಲೆ ಅವರ ಎದುರಿಗೆ, ನಮ್ಮ ಜಮಖಂಡಿ ಸಾಹಿತಿ ರಾವ್‌ಬಹಾದ್ದೂರ್ ಬಂದು ಕೂತಿದ್ದರು. ಪರಸ್ಪರ ಪರಿಚಯವಾಯಿತು. ಹೀಗೆ ಬೆಳೆದ ಕಲ್ಲೆಯವರ ಒಡ ನಾಟ, ದಶಕಗಳ ಕಾಲ ಮುಂದುವರಿಯಿತು. ಅವರ ಕಚೇರಿಯಲ್ಲೇ ಕಾಳೇಗೌಡ ನಾಗವಾರ, ಬೆಸಗರಹಳ್ಳಿ ರಾಮಣ್ಣ ಮುಂತಾದವರ ಪರಿಚಯವಾಯಿತು.
ಮುಂದೆ, ನಾನು ಕೆಲಸಕ್ಕೆ ಸೇರಲು ಬೆಂಗಳೂರಿಗೆ ಬಂದೆ. ಮಲ್ಲೇಶ್ವರದ 11ನೇ ಕ್ರಾಸ್ ನಲ್ಲಿದ್ದ ರವೀಂದ್ರ ದೇಸಾಯಿಯವರ ಕೋಣೆಯಲ್ಲಿದ್ದೆ. ಅಲ್ಲಿಯೇ ಹತ್ತಿರದಲ್ಲಿದ್ದ ಜನಪ್ರಗತಿ ಕಚೇರಿಗೆ ನಿತ್ಯವೂ ಹೋಗಿ ಕಲ್ಲೆ ಅವರನ್ನು ಭೇಟಿಯಾಗುತ್ತಿದ್ದೆವು. ಹಂಪನಾ ಅವರು ಅಲ್ಲಿಗೆಬರುತ್ತಿದ್ದರು. ಕಲ್ಲೆ ಅವರ ಒಡನಾಟ ನನ್ನಲ್ಲಿ ಹೊಸ ವೈಚಾರಿಕ ಬೆಳಕನ್ನು ಮೂಡಿಸಿತು. ಭಾರತದಲ್ಲಿ ವರ್ಗಗಳು ಮಾತ್ರವಲ್ಲ, ಶ್ರೇಣೀಕೃತ ಜಾತಿ ವ್ಯವಸ್ಥೆಯೂ ಇದೆ ಎಂಬ ಅರಿವು ಮೂಡಿತು. ಆದರೆ, ಮಾರ್ಕ್ಸ್‌ವಾದಿ ವೈಚಾರಿಕ ದೃಷ್ಟಿಕೋನ ಬದಲಾಗಲಿಲ್ಲ. ಕಲ್ಲೆ ಶಿವೋತ್ತಮ ರಾವ್ ಅವರದ್ದು ಆ ಕಾಲದಲ್ಲಿ ದೊಡ್ಡ ಹೆಸರು. ಅಂದಿನ ಮುಖ್ಯ ಮಂತ್ರಿ ದೇವರಾಜ ಅರಸು, ಕಲ್ಲೆಯವರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು. ಅವರು ಕೈಗೊಂಡ ಹಲವಾರು ಕಾರ್ಯಕ್ರಮಗಳ ಹಿಂದೆ ಕಲ್ಲೆಯವರ ಪ್ರಭಾವವಿತ್ತು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಹಾವನೂರು ವರದಿಯ ಆಯೋಗದ ಹಿಂದೆ ಕಲ್ಲೆ ಅವರೂ ಇದ್ದರು. ಈಗ ದೊಡ್ಡ ನಾಯಕರಾಗಿರುವ ವೀರಪ್ಪಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಮುಂತಾದ ತಳ ಸಮುದಾಯದ ರಾಜಕಾರಣಿಗಳ ಬೆಳವಣಿಗೆಯಲ್ಲಿ ಅವರ ಪಾತ್ರವಿತ್ತು.
ಕಲ್ಲೆ ಅವರಿಗೆ ಬ್ರಾಹ್ಮಣ್ಯವನ್ನು ಕಂಡರೆ ಆಗುತ್ತಿರಲಿಲ್ಲ. ಆದರೆ, ಅವರ ವೈಯಕ್ತಿಕ ಸ್ನೇಹಿತರ ಬಳಗದಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಾವ್‌ಬಹಾದ್ದೂರ್, ಪ.ಸು.ಭಟ್ ಮುಂತಾದವರು ಅವರ ಸ್ನೇಹಿತರಾಗಿದ್ದರು. ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಅವರಿಗೆ ಬಂದಾಗಲೂ ಅವರು ಮನಸ್ಸು ಮಾಡಲಿಲ್ಲ. ಹುಬ್ಬಳ್ಳಿಯ ಸಮಾಜವಾದಿ ನಾಯಕ ಎನ್.ಎನ್.ಕಲ್ಲಣ್ಣವರ್ ವಿಧಾನ ಪರಿಷತ್ ಸದಸ್ಯರಾದರು.
ಇಂಥ ಅಪರೂಪದ ವ್ಯಕ್ತಿ ಕಲ್ಲೆ ಅವರು ಎಲ್ಲಿದ್ದಾರೆ ಎಂಬುದು ಗೊತ್ತೇ ಇರಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ರಾಜ್ಯೋತ್ಸವ ಪ್ರಶಸ್ತಿ ಕೂಡ ಅವರಿಗೆ ಬಂತು. ಕಲ್ಲೆ ಅವರು ತಾವೆಂದೂ ಅರ್ಜಿ ಹಾಕಿ, ಪ್ರಶಸ್ತಿ ಪಡೆಯುವವರಲ್ಲ. ಆದರೆ, ದಿನೇಶ್ ಅಮೀನ್‌ಮಟ್ಟು, ಸರಜೂ ಕಾಟ್ಕರ್ ಮುಂತಾದವರು ಕಲ್ಲೆ ಅವರ ಹೆಸರು ಹೇಳಿದಾಗ, ಅವರ ಬಗ್ಗೆ ಗೊತ್ತಿದ್ದ ಸಿದ್ದರಾಮಯ್ಯ ಅವರು ಆಸಕ್ತಿ ವಹಿಸಿ, ತಾವಾಗಿಯೇ ಫೋನ್ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿ, ಪ್ರಶಸ್ತಿ ಸ್ವೀಕರಿಸಲು ವಿನಂತಿಸಿದರು. ಇಂಥ ಕಲ್ಲೆಯವರನ್ನು ಎರಡು ವಾರದ ಹಿಂದೆ ಭೇಟಿಯಾದಾಗ, 88ರ ಈ ಪ್ರಾಯದಲ್ಲೂ ಅದೇ ಉತ್ಸಾಹದ ಸ್ಫೂರ್ತಿಯ ಮಾತುಗಳು ಕೇಳಿ ಬಂದವು. ಅವರ ನೆನಪಿನ ಶಕ್ತಿ ಇನ್ನೂ 20ರ ಯುವಕನಂತಿದೆ. ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುವಾಗಿನ 70 ವರ್ಷಗಳ ಹಿಂದಿನ ದಿನಗಳನ್ನು ಅವರು ನೆನಪಿಸಿಕೊಂಡರು. ಆಗ ಕವಿ ದ.ರಾ.ಬೇಂದ್ರೆ ಅವರು ಅವರಿಗೆ ಪಾಠ ಮಾಡುತ್ತಿದ್ದರು. ಬೇಂದ್ರೆ ಅವರು ಆಗ ಪ್ರತಿ ದಿನ ಧಾರವಾಡದಿಂದ ಹುಬ್ಬಳ್ಳಿಗೆ ಬಸ್‌ನಲ್ಲಿ ಬಂದು ಪಾಠ ಮಾಡಿ ಹೋಗುತ್ತಿದ್ದರು. ಒಂದು ದಿನ ಬೇಂದ್ರೆ ಬರುವುದು ತಡವಾಯಿತು. ಆಗ ತರಗತಿಯಲ್ಲಿದ್ದ ಹುಡುಗರು ಕಪ್ಪುಹಲಗೆಯ ಮೇಲೆ ಬೇಂದ್ರೆ ಅವರ ಪದ್ಯವನ್ನೇ ತಿರುಚಿ, ‘‘ಇನ್ನೂ ಯಾಕೆ ಬರಲಿಲ್ಲವ್ವಾ ಧಾರವಾಡದವಾ’’ ಎಂದು ಬರೆದರು. ಆಗ ನಂತರ ಬೇಂದ್ರೆ ಮಾಸ್ತರ್, ಇದನ್ನು ಯಾರು ಬರೆದದ್ದು ಎಂದು ಕೂಗಾಡಿದರು. ಬರೆದವರಿಗೆ ಎದ್ದು ನಿಲ್ಲುವಂತೆ ಹೇಳಿದರು. ಒಂದಿಬ್ಬರು ಹುಡುಗರು ಎದ್ದು ನಿಂತರು. ಬೇಂದ್ರೆ ಅವರನ್ನು ಅರ್ಧ ಗಂಟೆ ಹೊರಗೆ ಹಾಕಿ, ಮತ್ತೆ ಒಳಗೆ ಕರೆದರು. ಹೀಗೆ ನೆನಪಿನ ಸುರಳಿಯನ್ನು ಕಲ್ಲೆ ಬಿಚ್ಚುತ್ತ ಹೋದರು.
ಕಲ್ಲೆ ಅವರ ಮನೆಗೆ ಮುಂಜಾನೆ 11 ಗಂಟೆಗೆ ಹೋಗಿದ್ದೆವು. ಸಂಜೆ 6 ಗಂಟೆ ಯಾದರೂ ಎದ್ದು ಬರಲು ನಮಗೂ ಮನಸ್ಸಾಗುತ್ತಿಲ್ಲ. ಕಳುಹಿಸಲು ಅವರಿಗೂ ಮನಸ್ಸಾಗುತ್ತಿಲ್ಲ. ಈ ವಯಸ್ಸಿನಲ್ಲೂ ದಣಿವರಿಯದೇ ಮಾತನಾಡುತ್ತಲೇ ಇದ್ದರು. ಕೆಂಗಲ್ ಹನುಮಂತರಾಯ, ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡ, ಲೋಹಿಯಾ, ಕಡಿದಾಳ ಮಂಜಪ್ಪ, ಕರ್ನಾಟಕ ಏಕೀಕರಣ ಹೀಗೆ ಎಲ್ಲರೂ ಎಲ್ಲವೂ ಈ ಮಾತುಕತೆಯಲ್ಲಿ ಬಂದು ಹೋಯಿತು. ಮಾತು ಮುಗಿಯಲಿಲ್ಲ. ಹೊತ್ತು ಮುಳುಗಿತು. ಎದ್ದು ಬಂದೆವು. ಮಾತನಾಡಬೇಕೆನ್ನಿಸಿದಾಗ, ಮತ್ತೆ ಹೋಗದೇ ಇರಲು ಆಗುವುದಿಲ್ಲ.